ಸೋಮವಾರ, ಆಗಸ್ಟ್ 15, 2022
20 °C
ಹಳೇಬೀಡು: ವಿದ್ಯಾವಂತರ ಸ್ಪರ್ಧೆಗಾಗಿ ಅಖಾಡದಿಂದ ಹಿಂದೆ ಸರಿದ ಹಳಬರು

ಗ್ರಾಮ ಪಂಚಾಯಿತಿ ಚುನಾವಣೆ: ಇಲ್ಲಿ ಯುವಕರು, ಹೊಸಬರಿಗೆ ಹಿರಿಯರ ಅವಕಾಶ

ಡಿ.ಬಿ.ನಾಗರಾಜ Updated:

ಅಕ್ಷರ ಗಾತ್ರ : | |

Prajavani

ಹಳೇಬೀಡು: ಹಿರಿಯರು–ಯುವ ಸಮೂಹದ ನಡುವಿನ ಹಣಾಹಣಿಗೆ ಹುಣಸೂರು ತಾಲ್ಲೂಕಿನ ಹಳೇಬೀಡು ಗ್ರಾಮ ಪಂಚಾಯಿತಿಯ ಚುನಾವಣೆ ವೇದಿಕೆಯಾಗಿದೆ.

ಯುವ ಸಮೂಹ, ವಿದ್ಯಾವಂತರು, ಹೊಸ ಮುಖಕ್ಕೂ ಅವಕಾಶ ಕೊಡಬೇಕು ಎಂದು ಸ್ವಯಂ ಪ್ರೇರಿತರಾಗಿ ಚುನಾವಣೆ ಅಖಾಡಕ್ಕಿಳಿಯದ ಮಾಜಿ ಉಪಾಧ್ಯಕ್ಷ, ಸದಸ್ಯರು ಇಲ್ಲಿದ್ದಾರೆ.

‘ಗ್ರಾಮ ಗದ್ದುಗೆ’ಯಲ್ಲಿ ತಮ್ಮ ಪಾರಮ್ಯ ಮುಂದುವರೆಸಲಿಕ್ಕಾಗಿ ನಾಲ್ಕನೇ ಬಾರಿಗೆ ಕಣಕ್ಕಿಳಿದಿರುವ ಗ್ರಾಮ ಪಂಚಾಯಿತಿಯ ಮಾಜಿ ಅಧ್ಯಕ್ಷರು, ಅವಿರೋಧವಾಗಿ ಈಗಾಗಲೇ ಸದಸ್ಯರಾಗಿ ಆಯ್ಕೆಯಾಗಿರುವ ಮಾಜಿ ಅಧ್ಯಕ್ಷರು ಸಹ ಇದೇ ಪಂಚಾಯಿತಿ ವ್ಯಾಪ್ತಿಯ ಹಳ್ಳಿ ಅಖಾಡದಲ್ಲಿದ್ದಾರೆ.

ಮೂವರು ಅವಿರೋಧ ಆಯ್ಕೆ

ಹಿಂದುಳಿದ ವರ್ಗ ಅ ಮಹಿಳಾ ಮೀಸಲಿನಡಿ ಹಳೇಬೀಡಿನಿಂದ ಗೌರಮ್ಮ, ಹಿಂದುಳಿದ ವರ್ಗ ಅ ಸಾಮಾನ್ಯ ಕ್ಷೇತ್ರದಲ್ಲಿ ಬೆಟ್ಟದೂರಿನ ಗ್ರಾಮ ಪಂಚಾಯಿತಿಯ ಮಾಜಿ ಅಧ್ಯಕ್ಷ ರವಿಕುಮಾರ್, ಮೈದನಹಳ್ಳಿಯ ಸಾಮಾನ್ಯ ಮಹಿಳಾ ಕ್ಷೇತ್ರದಿಂದ ಲಕ್ಷ್ಮೀ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಹನ್ನೆರಡು ಸದಸ್ಯ ಬಲದ ಗ್ರಾಮ ಪಂಚಾಯಿತಿ ಚುನಾವಣೆಗೆ 31 ಜನರು ನಾಮಪತ್ರ ಸಲ್ಲಿಸಿದ್ದರು. ಇವರಲ್ಲಿ ಐವರು ವಾಪಸ್ ಪಡೆದಿದ್ದಾರೆ. ಮೂವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಉಳಿದ ಒಂಬತ್ತು ಸ್ಥಾನಗಳಿಗೆ 23 ಜನರು ಅಖಾಡಕ್ಕಿಳಿದಿದ್ದು, ಚುನಾವಣಾ ಕಣ ರಂಗೇರಿದೆ.

ಹಳೇಬೀಡು, ಬೆಟ್ಟದೂರು, ಮೈದನಹಳ್ಳಿ, ಬೂಚಹಳ್ಳಿ, ಮೂಡಲಕೊಪ್ಪಲು, ಸಬ್ಬನಹಳ್ಳಿ, ವಡ್ಡರಹಳ್ಳಿ, ಹಳ್ಳದ ಕಲ್ಲಹಳ್ಳಿ ಒಳಗೊಂಡ ಹಳೇಬೀಡಿನ ಹಿಂದಿನ ಗ್ರಾಮ ಪಂಚಾಯಿತಿ 13 ಸದಸ್ಯರನ್ನು ಹೊಂದಿತ್ತು. ಈ ಬಾರಿ ಒಂದು ಸ್ಥಾನ ಕಡಿಮೆಯಾಗಿದೆ. 12 ಸದಸ್ಯರ ಆಯ್ಕೆಗಷ್ಟೇ ಅವಕಾಶವಿದೆ.

ನಾಲ್ಕನೇ ಬಾರಿಗೆ ಸ್ಪರ್ಧೆ: ಹಳೇಬೀಡಿನ ಎಚ್‌.ಆರ್‌.ಮಹೇಶ್‌, ಉಮೇಶ್‌ ನಾಲ್ಕನೇ ಬಾರಿಗೆ ಅಖಾಡಕ್ಕೆ ಧುಮುಕಿದ್ದಾರೆ. ಗ್ರಾಮದಿಂದಲೇ ಪಂಚಾಯಿತಿ ಚುನಾವಣೆಗೆ ಸ್ಪರ್ಧಿಸಿದ್ದಾರೆ.

ಮಹೇಶ್‌ ಸತತ ಮೂರು ಬಾರಿ ಸದಸ್ಯರಾಗಿ ಆಯ್ಕೆಯಾಗಿ, ಎರಡು ಬಾರಿ ಅಧ್ಯಕ್ಷ ಸ್ಥಾನವನ್ನು ಅಲಂಕರಿಸಿದವರು. ಇದೀಗ ಮತ್ತೊಮ್ಮೆ ಸ್ಪರ್ಧೆಗಿಳಿದಿದ್ದಾರೆ. ಉಮೇಶ್‌ ಮೂರು ಬಾರಿಯೂ ಪರಾಭವಗೊಂಡಿದ್ದರೂ, ನಾಲ್ಕನೇ ಬಾರಿಗೂ ಅದೃಷ್ಟ ಪರೀಕ್ಷೆಗಾಗಿ ಹಳ್ಳಿ ಅಖಾಡಕ್ಕಿಳಿದಿದ್ದಾರೆ. ಇವರಿಬ್ಬರ ಸ್ಪರ್ಧೆ ಸುತ್ತಮುತ್ತಲಿನ ಹಳ್ಳಿಗಳಲ್ಲೂ ಕುತೂಹಲ ಕೆರಳಿಸಿದೆ.

ಯುವ ಸಮೂಹಕ್ಕಾಗಿ ಸ್ಪರ್ಧೆಯಿಂದ ಹಿಂದಕ್ಕೆ

‘ಒಮ್ಮೆ ಸೋತಿದ್ದೆ. ನಂತರ ಗೆದ್ದು ಸದಸ್ಯನಾಗಿದ್ದೆ. ನಮ್ಮ ವಾರ್ಡ್‌ನ ಬಿಎಸ್‌ಸಿ ಪದವೀಧರ ಹರೀಶ್‌ ಈ ಬಾರಿ ನನಗೆ ಅವಕಾಶ ಕೊಡಿ ಎಂದು ಕೇಳಿಕೊಂಡರು. ಯುವಕರು, ವಿದ್ಯಾವಂತರು ಪಂಚಾಯಿತಿ ಪ್ರವೇಶಿಸಲಿ ಎಂಬ ಕಾರಣಕ್ಕೆ ಸ್ಪರ್ಧೆಯಿಂದ ಹಿಂದೆ ಸರಿದೆ’ ಎಂದು ನಿಕಟಪೂರ್ವ ಸದಸ್ಯ ವೀರೇಶ್ ‘ಪ್ರಜಾವಾಣಿ’ಗೆ ತಿಳಿಸಿದರು.

‘ಪತ್ನಿಯನ್ನು ಚುನಾವಣೆಗೆ ನಿಲ್ಲಿಸಲು ಸಕಲ ತಯಾರಿ ನಡೆಸಿದ್ದೆ. ನಮ್ಮದೇ ಹುಡುಗಿ, ಡಿ.ಇಡಿ ಓದಿರುವ ಮಣಿ ದೇವರಾಜು ಮನೆ ಬಾಗಿಲಿಗೆ ಬಂದು ಅವಕಾಶ ಕೊಡುವಂತೆ ಕೋರಿದರು. ನನ್ನ ಪತ್ನಿ ಮಣಿಯಷ್ಟು ಓದಿಲ್ಲ. ವಿದ್ಯಾವಂತರೇ ಪಂಚಾಯಿತಿ ಆಡಳಿತದ ಚುಕ್ಕಾಣಿ ಹಿಡಿಯಲಿ ಎಂಬ ಆಶಯದಿಂದ ಸ್ಪರ್ಧೆಯಿಂದಲೇ ಹಿಂದೆ ಸರಿದೆವು’ ಎಂದು ನಿಕಟಪೂರ್ವ ಉಪಾಧ್ಯಕ್ಷ ಶಿವರಾಜು ಹೇಳಿದರು.

ಗಲಾಟೆ–ಘರ್ಷಣೆ ಬೇಡ

‘ಚುನಾವಣೆ ಗ್ರಾಮದಲ್ಲಿನ ಸಾಮರಸ್ಯ ಹಾಳು ಮಾಡಬಾರದು. ಸಹಬಾಳ್ವೆ ನಮ್ಮದಾಗಿರಬೇಕು’ ಎಂಬ ಆಶಯ ವ್ಯಕ್ತಪಡಿಸಿದ್ದು ಹಳೇಬೀಡಿನ ಗ್ರಾಮಸ್ಥ ವೆಂಕಟನಾಯಕ.

‘ಹಿಂದಿನ ಅವಧಿಯಲ್ಲಿ ಅಧ್ಯಕ್ಷ–ಉಪಾಧ್ಯಕ್ಷರ ಚುನಾವಣೆ ನಡೆದಾಗ ಊರಲ್ಲಿ ಗಲಾಟೆ ನಡೆಯಿತು. ಇದರ ಪರಿಣಾಮ 35 ಜನರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದರು. 32 ದಿನ ಜೈಲು ವಾಸ ಅನುಭವಿಸಬೇಕಾಯಿತು. ಇಂದಿಗೂ ನ್ಯಾಯಾಲಯಕ್ಕೆ ಅಲೆಯುವುದು ತಪ್ಪಿಲ್ಲ. ಇದರ ಜೊತೆಗೆ ನಮ್ಮೂರು ಅತಿ ಸೂಕ್ಷ್ಮ ಮತಗಟ್ಟೆಯಾಗಿದೆ. ಆದ್ದರಿಂದ ಈ ಬಾರಿ ಸಣ್ಣ ಗಲಾಟೆಗೂ ಆಸ್ಪದ ನೀಡುತ್ತಿಲ್ಲ’ ಎಂದು ಅವರು ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು