ಗುರುವಾರ , ಅಕ್ಟೋಬರ್ 29, 2020
21 °C
ನಾಡಿಗೆ ಬಂದ ಆನೆಗಳನ್ನು ಕಾಡಿಗಟ್ಟಲು ಅರಣ್ಯ ಇಲಾಖೆ ಕಾರ್ಯಾಚರಣೆ

ಕಾಡಾನೆಗಳ ದಾಂದಲೆ: ಬೆಳೆ ಹಾನಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹಂಪಾಪುರ: ನಾಡಿಗೆ ಬಂದ ನಾಲ್ಕು ಕಾಡಾನೆಗಳು ಸಮೀಪದ ಹೊಮ್ಮರಗಳ್ಳಿ, ಜಿನ್ನಹಳ್ಳಿ ಸೇರಿದಂತೆ ನಂಜನಗೂಡು ತಾಲ್ಲೂಕಿನ ಹರದನಹಳ್ಳಿ ಗ್ರಾಮದಲ್ಲಿನ ಜಮೀನುಗಳಿಗೆ ನುಗ್ಗಿ ಕಬ್ಬು, ಬಾಳೆ, ಭತ್ತ, ಮುಸುಕಿನ ಜೋಳ ಬೆಳೆಯನ್ನು ಹಾಳು ಮಾಡಿವೆ.

ಹೊಮ್ಮರಗಳ್ಳಿ ಸಮೀಪದ ಪೆಟ್ರೋಲ್ ಬಂಕ್ ಪಕ್ಕದಲ್ಲಿ ಭಾನುವಾರ ಬೆಳಿಗ್ಗೆ ಕಾಣಿಸಿಕೊಂಡಿವೆ. ಆಗ ಜನರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ.

ಆಗ ಎಸ್‌ಡಿಪಿಎಫ್‌ನ 14 ಸಿಬ್ಬಂದಿ, ಎಚ್.ಡಿ. ಕೋಟೆ ಸಾಮಾಜಿಕ ಅರಣ್ಯ ವಲಯದ 12 ಮಂದಿ ಹಾಗೂ ಸರಗೂರು ಸಾಮಾಜಿಕ ಅರಣ್ಯ ವಲಯದ 12 ಸಿಬ್ಬಂದಿ ಸ್ಥಳಕ್ಕೆ ಬಂದು ಕಾಡಾನೆಗಳ ಚಲನವಲಯ ಗಮನಿಸಿ ಕಾಡಿಗೆ ಓಡಿಸಲು ಪ್ರಯತ್ನಿಸಿದರು.

ಜಿನ್ನಹಳ್ಳಿ ಗ್ರಾಮದ ರವಿ ಎಂಬುವವರ ಕಬ್ಬಿನ ತೋಟಕ್ಕೆ ನುಗ್ಗಿದ ಆನೆಗಳು ಸಂಜೆವರೆಗೂ ಅಲ್ಲೇ ಬೀಡು ಬಿಟ್ಟಿದ್ದವು. ಸಂಜೆ 5 ಗಂಟೆಯ ಬಳಿಕ  ಪಟಾಕಿ ಹೊಡೆದಾಗ ಕಬ್ಬಿನ ತೋಟದಿಂದ ಹೊರಬಂದ ಆನೆಗಳು ಕಬಿನಿ ನದಿಯನ್ನು ದಾಟಿ ನಂಜನಗೂಡು ತಾಲ್ಲೂಕಿನ ಹರದನಹಳ್ಳಿ ಗ್ರಾಮದ ಬಾಳೆತೋಟಕ್ಕೆ ನುಗ್ಗಿದವು. ಅರ್ಧ ಗಂಟೆಗೂ ಹೆಚ್ಚು ಕಾಲ ಮನಸೋ ಇಚ್ಛೆ ಬಾಳೆ ಉರುಳಿಸಿದವು.  

ಕಾರ್ಯಾಚರಣೆ ನೇತೃತ್ವ ವಹಿಸಿದ್ದ ಆರ್‌ಎಫ್ಓ ಚಂದನ್ ಮಾತನಾಡಿ, ‘ಕಾಡಾನೆಗಳು ನಂಜನಗೂಡಿನಿಂದ ಅಥವಾ ಸರಗೂರು ಸಮೀಪದ ಚಿಕ್ಕದೇವಮ್ಮನ ಬೆಟ್ಟದಿಂದ ಇಲ್ಲಿಗೆ ಬಂದಿರಬಹುದು. ರಾತ್ರಿಯೆಲ್ಲಾ ರೈತರ ಜಮೀನಿನಲ್ಲಿ ಮೇದಿರುವ ಆನೆಗಳು ಬೆಳಕಾಗಿರುವುದರಿಂದ ಬೀಡು ಬಿಟ್ಟಿವೆ. ರೈತರು ಜಮೀನುಗಳಿಂದ ತೆರಳಿದ ಮೇಲೆ ಕಾರ್ಯಾಚರಣೆ ಆರಂಭಿಸಿ ಕಾಡಿ ಗಟ್ಟಲಾಗುವುದು.   ಜನರು ಸಹಕರಿಸಿ ದರೆ ಸಹಾಯವಾಗುತ್ತದೆ’ ಎಂದರು.

ಕಳೆದ ವರ್ಷ 3 ಕಾಡಾನೆಗಳು ಇದೇ ಗ್ರಾಮಗಳಿಗೆ ಬಂದು ಒಂದು ವಾರ ಕಾಡಿಗೆ ತೆರಳದೆ ಅರಣ್ಯ ಇಲಾಖೆಗೆ ತಲೆನೋವಾಗಿದ್ದವು.

ಜನಜಂಗುಳಿ: ಆನೆಗಳನ್ನು ಕಾಡಿಗಟ್ಟಲು ಕಾರ್ಯಾಚರಣೆ ಆರಂಭಿಸಿದ ಅರಣ್ಯ ಸಿಬ್ಬಂದಿಗೆ ಜನರನ್ನು ಹತೋಟಿಗೆ ತರುವುದೇ ಹರಸಾಹಸವಾಯಿತು. ಆನೆಗಳನ್ನು ಯಾವ ದಿಕ್ಕೆಗೆ ಕಳುಹಿಸಬೇಕೋ ಅದೇ ದಿಕ್ಕಿನಲ್ಲಿ ಜನ ಸೇರಿ ಕೂಗಾಡಿದ್ದರಿಂದ ದಾರಿತಪ್ಪಿ ಸಿಕ್ಕ ಸಿಕ್ಕ ಜಮೀನಿನಲ್ಲಿ ಓಡಾಡುತ್ತಿದ್ದವು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು