ಭಾನುವಾರ, ಸೆಪ್ಟೆಂಬರ್ 26, 2021
23 °C
112 ಸಂಖ್ಯೆಗೆ ಕರೆ ಮಾಡಿದರೆ 5ರಿಂದ 10 ನಿಮಿಷದಲ್ಲಿ ಸ್ಥಳಕ್ಕೆ ಪೊಲೀಸರು

ತುರ್ತು ಸ್ಪಂದನಾ ವ್ಯವಸ್ಥೆಯಿಂದ ತಪ್ಪಿತು ಬಾಲ್ಯವಿವಾಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೈಸೂರು: ನಗರದಲ್ಲಿ ಈಚೆಗಷ್ಟೇ ಕಾರ್ಯಾರಂಭ ಮಾಡಿದ್ದ ತುರ್ತು ಸ್ಪಂದನಾ ವ್ಯವಸ್ಥೆಯಿಂದ ಹಲವು ಅಪರಾಧ ಪ್ರಕರಣಗಳು ತಪ್ಪಿವೆ.

ಗೌಸಿಯಾನಗರದಲ್ಲಿ ನಿಶ್ಚಯವಾಗಿದ್ದ ಬಾಲ್ಯವಿವಾಹವನ್ನು ಡಿ.20ರಂದು ತಡೆಯಲಾಗಿದೆ. ವ್ಯಕ್ತಿಯೊಬ್ಬರು ನೀಡಿದ ಮಾಹಿತಿ ಆಧರಿಸಿ ತುರ್ತಾಗಿ ಸ್ಥಳಕ್ಕೆ ತೆರಳಿದ ಪೊಲೀಸರು ಬಾಲಕಿಯನ್ನು ರಕ್ಷಿಸಿದ್ದಾರೆ.

ಆರ್‌ಎಂಪಿ ಕ್ವಾರ್ಟರ್ಸ್‌ ಬಳಿ ಅನುಮಾನಾಸ್ಪದವಾಗಿ ಕೆಲವು ವ್ಯಕ್ತಿಗಳು ಸಂಚರಿಸುತ್ತಿರುವ ಮಾಹಿತಿ ಬಂದ ಕೆಲವೇ ನಿಮಿಷಗಳಲ್ಲಿ ಪೊಲೀಸ್ ವಾಹನವು ಸ್ಥಳವನ್ನು ತಲುಪಿದೆ. ಪೊಲೀಸರನ್ನು ನೋಡುತ್ತಲೇ ಗಂಧದ ಮರಗಳನ್ನು ಕಡಿಯುತ್ತಿದ್ದ ಕಳ್ಳರು ಪರಾರಿಯಾಗಿದ್ದಾರೆ. ಸ್ಥಳದಲ್ಲಿ ಮರ ಕತ್ತರಿಸಲು ಬಳಸುತ್ತಿದ್ದ ಉಪಕರಣಗಳು ಸಿಕ್ಕಿವೆ.

ಸಾರ್ವಜನಿಕರು ಅಪರಾಧ ಕೃತ್ಯಗಳಿಗೆ ಸಂಬಂಧಿಸಿದ ಮಾಹಿತಿಯನ್ನು 112 ಸಂಖ್ಯೆಗೆ ಕರೆ ಮಾಡಿ ತಿಳಿಸಿದರೆ, 5ರಿಂದ 10 ನಿಮಿಷಗಳಲ್ಲಿ ಪೊಲೀಸರು ಸ್ಥಳವನ್ನು ತಲುಪಿ ಅಪರಾಧ ಘಟನೆಗಳನ್ನು ತಡೆಯುತ್ತಾರೆ ಎಂದು ಪೊಲೀಸ್ ಕಮಿಷನರ್ ಕಚೇರಿಯ ಪ್ರಕಟಣೆ ತಿಳಿಸಿದೆ.

ವ್ಯಕ್ತಿ ಆತ್ಮಹತ್ಯೆ

ಮೈಸೂರು: ಗೆಳತಿ ದುಬೈಗೆ ತೆರಳಿದ್ದಕ್ಕೆ ಮನನೊಂದ, ಇಲ್ಲಿನ ಸಾತಗಳ್ಳಿಯ ನಿವಾಸಿ ಶಂಶೀರ್ (33) ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಇವರು ಮಹಿಳೆಯೊಬ್ಬರೊಂದಿಗೆ ಇಲ್ಲಿ ವಾಸಿಸುತ್ತಿದ್ದರು. ಆದರೆ, ಈಚೆಗೆ ಮಹಿಳೆಯು ವಿದೇಶಕ್ಕೆ ತೆರಳಿದ್ದರು. ಇದರಿಂದ ಇವರು ಖಿನ್ನತೆಗೆ ಜಾರಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಉದಯಗಿರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮನೆ ಕಳ್ಳತನ

ಮೈಸೂರು: ಇಲ್ಲಿನ ಲಷ್ಕರ್ ಮೊಹಲ್ಲಾದ ಕಬೀರ್‌ ರಸ್ತೆಯ ನಿವಾಸಿ ಮಹಮ್ಮದ್ ಅಯೂಬ್‌ ಅವರು ಸಮಾರಂಭ ವೊಂದಕ್ಕೆ ಮನೆಗೆ ಬೀಗ ಹಾಕಿಕೊಂಡು ಹೋಗಿದ್ದಾಗ ಬಾಗಿಲು ಒಡೆದ ಕಳ್ಳರು ನಗ, ನಾಣ್ಯ ದೋಚಿದ್ದಾರೆ.

300 ಗ್ರಾಂ ಚಿನ್ನಾಭರಣ, 50 ರೇಷ್ಮೆ ಸೀರೆಗಳು ಸೇರಿದಂತೆ ವಿವಿಧ ಉಡುಪುಗಳು, ಟಿ.ವಿ ಸೇರಿದಂತೆ ಅನೇಕ ವಸ್ತುಗಳನ್ನು ಕಳವು ಮಾಡಿ ದ್ದಾರೆ ಎಂದು ಮಂಡಿ ಠಾಣೆ ಪೊಲೀಸರು ತಿಳಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು