ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಂಜನಗೂಡಿನಲ್ಲಿ ಕೈಗಾರಿಕಾ ಪ್ರದೇಶ ಸ್ಥಾಪನೆ: ನಿರಾಣಿ ಹೇಳಿಕೆ

ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಮುರುಗೇಶ್ ಆರ್ ನಿರಾಣಿ ಹೇಳಿಕೆ
Last Updated 5 ಫೆಬ್ರುವರಿ 2022, 3:06 IST
ಅಕ್ಷರ ಗಾತ್ರ

ನಂಜನಗೂಡು: ‘ತಾಲ್ಲೂಕಿನ ಗ್ರಾಮೀಣ ಪ್ರದೇಶದಲ್ಲಿ ಉದ್ಯೋಗ ಸೃಷ್ಟಿಸುವ ಸಲುವಾಗಿ ಹೊಸ ಕೈಗಾರಿಕಾ ಪ್ರದೇಶವನ್ನು ಸ್ಥಾಪಿಸಲಾಗುವುದು’ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಮುರುಗೇಶ್ ಆರ್ ನಿರಾಣಿ ತಿಳಿಸಿದರು.

ತಾಲ್ಲೂಕಿನ ಇಮ್ಮಾವು ಹಾಗೂ ನಂಜನಗೂಡು ಕೈಗಾರಿಕಾ ಪ್ರದೇಶಗಳಿಗೆ ಶುಕ್ರವಾರ ಭೇಟಿ ನೀಡಿ ಪರಿಶೀಲನೆ ನಡೆಸಿದ ನಂತರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.

‘ತಾಲ್ಲೂಕಿನ ಕೈಗಾರಿಕಾ ಪ್ರದೇಶದ ಸ್ಥಿತಿಗತಿ ಅರಿಯುವ ಉದ್ದೇಶದಿಂದ ಪ್ರವಾಸ ಕೈಗೊಂಡಿದ್ದೇನೆ. ನಂಜನಗೂಡು ಹಾಗೂ ತಾಂಡ್ಯ ಕೈಗಾರಿಕಾ ಪ್ರದೇಶಗಳಿಗೆ ಭೇಟಿ ನೀಡಿ ರಸ್ತೆ, ಮೂಲಸೌಕರ್ಯ, ಕಾರ್ಮಿಕರ ಸಮಸ್ಯೆಗಳನ್ನು ಆಲಿಸಿದ್ದೇನೆ. ರೈತರಿಂದ ಕೈಗಾರಿಕೆ ಸ್ಥಾಪಿಸಲು ಜಮೀನು ಪಡೆದ ಕಾರ್ಖಾನೆಗಳು ಸ್ಥಳೀಯರಿಗೆ ಉದ್ಯೋಗ ನೀಡಿಲ್ಲ ಎಂಬ ದೂರುಗಳು ಬಂದಿವೆ. ಸಮಸ್ಯೆ ಇತ್ಯರ್ಥಪಡಿಸುವ ಸಲುವಾಗಿ ಮೈಸೂರಿನಲ್ಲಿ ಜಿಲ್ಲಾಧಿಕಾರಿ ಒಳಗೊಂಡಂತೆ ಸಂಬಂಧಪಟ್ಟ ಹಿರಿಯ ಅಧಿಕಾರಿಗಳ ಸಭೆ ಕರೆಯಲಾಗಿದೆ. ಸಭೆಯಲ್ಲಿ ಕಾರ್ಮಿಕರ ಸಮಸ್ಯೆಯನ್ನು ಚರ್ಚಿಸಿ ಬಗೆಹರಿಸಲಾಗುವುದು’ ಎಂದರು.

‘ಸರೋಜಿನಿ ಮಹಿಷಿ ವರದಿ ಅನುಸಾರ ಶೇ 85 ರಷ್ಟು ಸ್ಥಳೀಯರಿಗೆ ಉದ್ಯೋಗ ನೀಡಬೇಕು. ಒಂದು ವೇಳೆ ನಿಯಮ ಉಲ್ಲಂಘನೆ ದೂರು ನೀಡಿದಲ್ಲಿ ಕ್ರಮ ಕೈಗೊಳ್ಳಲಾಗುವುದು’ ಎಂದು ಹೇಳಿದರು.

‘ತಾಲ್ಲೂಕಿನಲ್ಲಿ ಹೊಸದಾಗಿ ಭೂಮಿ ಗುರ್ತಿಸಿ ಕೈಗಾರಿಕಾ ಪ್ರದೇಶ ಸ್ಥಾಪಿಸಲಾಗುವುದು. ನಾವು ರೈತರಿಂದ ಬಲವಂತವಾಗಿ ಭೂಮಿ ವಶಪಡಿಸಿಕೊಳ್ಳುವುದಿಲ್ಲ. ಭೂಮಿ ಕಳೆದುಕೊಂಡವರಿಗೆ ಕೆಲಸ ನೀಡುವ ಭರವಸೆ ನೀಡಿ ರೈತರ ಒಪ್ಪಿಗೆಯೊಂದಿಗೆ ವಶಪಡಿಸಿಕೊಂಡು ಕೈಗಾರಿಕಾ ಪ್ರದೇಶ ನಿರ್ಮಿಸಲಾಗುವುದು. ಒಂದು ವೇಳೆ ಭೂಮಿ ಕಳೆದುಕೊಂಡ ರೈತರೇ ಕೈಗಾರಿಕೆ ಸ್ಥಾಪನೆಗೆ ಮುಂದಾದರೆ ಶೇ 35 ರಷ್ಟು ಹಣದಲ್ಲಿ ನಿವೇಶನ ನೀಡಲಾಗುವುದು. ನವೆಂಬರ್ ತಿಂಗಳಲ್ಲಿ ಜಾಗತಿಕ ಬಂಡವಾಳ ಹೂಡಿಕೆ ಸಮಾವೇಶವನ್ನು ಏರ್ಪಡಿಸಲಾಗಿದ್ದು, ವಿದೇಶಗಳಿಂದ ಸುಮಾರು 500ಕ್ಕೂ ಹೆಚ್ಚಿನ ಕಂಪನಿಗಳು ಭಾಗಿಯಾಗಲಿವೆ. ಅಂದಾಜು 10 ಲಕ್ಷ ಕೋಟಿ ಬಂಡವಾಳ ಹೂಡಿಕೆ ಹರಿದು ಬರುವ ನಿರೀಕ್ಷೆ ಇದ್ದು, 8 ರಿಂದ 10 ಲಕ್ಷ ಉದ್ಯೋಗ ಸೃಷ್ಟಿಯಾಗಲಿದೆ’ ಎಂದು ಮಾಹಿತಿ ನೀಡಿದರು.

ಶಾಸಕ ಬಿ.ಹರ್ಷವರ್ಧನ್, ನಗರಸಭೆ ಅಧ್ಯಕ್ಷ ಎಚ್.ಎಸ್.ಮಹದೇವಸ್ವಾಮಿ, ಉಪಾಧ್ಯಕ್ಷೆ ನಾಗಮಣಿ ಶಂಕರಪ್ಪ, ಸದಸ್ಯರಾದ ಮಹದೇವಮ್ಮ ವಿಜಯಲಕ್ಷ್ಮಿ, ಬಾಲರಾಜು, ಮುಖಂಡರಾದ ಕುಂಬ್ರಳ್ಳಿ ಸುಬ್ಬಣ್ಣ, ಬಿ.ಎಸ್.ಮಹದೇವಪ್ಪ, ಚಂದ್ರು, ಅರುಣ್ ಗೌಡ, ಶ್ರೀಕಂಠ, ಡಿವೈಎಸ್ಪಿ ಗೋವಿಂದರಾಜು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT