ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಟುಂಬದ ರಬ್ಬರ್‌ ಸ್ಟ್ಯಾಂಪ್‌, ಧೃತರಾಷ್ಟ್ರ ಪ್ರೇಮದಲ್ಲಿ ಬಿಎಸ್‌ವೈ: ಶಾಸಕ ಟೀಕೆ

ವಿಜಯೇಂದ್ರ ನಿರ್ದೇಶನದಂತೆ ರಾಜ್ಯ ಬಿಜೆಪಿ ಸರ್ಕಾರ: ಮೋದಿ, ಅಮಿತ್‌ ಶಾ ಕಣ್ತಪ್ಪಿಸಿ ಲೂಟಿ–ಕಾಂಗ್ರೆಸ್‌ ಶಾಸಕರ ವಾಗ್ದಾಳಿ
Last Updated 4 ಏಪ್ರಿಲ್ 2021, 8:19 IST
ಅಕ್ಷರ ಗಾತ್ರ

ಮೈಸೂರು: ‘ಬಿ.ಎಸ್‌.ಯಡಿಯೂರಪ್ಪ ರಾಜ್ಯಕ್ಕೆ ಮುಖ್ಯಮಂತ್ರಿಯಾಗಿಲ್ಲ. ತಮ್ಮ ಕುಟುಂಬ ಹಾಗೂ ಸಂಬಂಧಿಕರಿಗಷ್ಟೇ ಸಿಎಂ ಆಗಿದ್ದಾರೆ. ರಾಜ್ಯದಲ್ಲಿ ಇರೋದು ಬಿಜೆಪಿ ನೇತೃತ್ವದ ಸರ್ಕಾರವಲ್ಲ. ಬಿಎಸ್‌ವೈ ಕುಟುಂಬ ಸರ್ಕಾರ’ ಎಂದು ಕಾಂಗ್ರೆಸ್‌ ಶಾಸಕರಾದ ಎಚ್‌.ಪಿ.ಮಂಜುನಾಥ್‌, ಯತೀಂದ್ರ ಸಿದ್ದರಾಮಯ್ಯ ಭಾನುವಾರ ಇಲ್ಲಿ ವಾಗ್ದಾಳಿ ನಡೆಸಿದರು.

‘ಅರುಳು–ಮರುಳಿನಲ್ಲಿರುವ ಯಡಿಯೂರಪ್ಪ ತಮ್ಮ ಕುಟುಂಬದ ರಬ್ಬರ್‌ ಸ್ಟ್ಯಾಂಪ್‌ ಆಗಿದ್ದಾರೆ. ಸಹಿ ಹಾಕಲಿಕ್ಕಷ್ಟೇ ಸೀಮಿತವಾಗಿದ್ದಾರೆ. ಡಮ್ಮಿ ಮುಖ್ಯಮಂತ್ರಿಯಾಗಿದ್ದು, ಧೃತರಾಷ್ಟ್ರ ಪ್ರೇಮದಿಂದ ತಮ್ಮ ಅಧಿಕಾರವನ್ನು ವಿಜಯೇಂದ್ರಗೆ ನೀಡಿದ್ದಾರೆ. ಆತ ಪ್ರಧಾನಿ ಮೋದಿ, ಅಮಿತ್‌ ಶಾ ಕಣ್ತಪ್ಪಿಸಿ ಸರ್ಕಾರದ ಹಣ ಲೂಟಿ ಹೊಡೆಯುತ್ತಿದ್ದಾರೆ’ ಎಂದು ಹುಣಸೂರಿನ ಶಾಸಕ ಎಚ್‌.ಪಿ.ಮಂಜುನಾಥ್‌ ನಗರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ದೂರಿದರು.

‘ಈ ಸರ್ಕಾರದಲ್ಲಿ ಯಾವೊಬ್ಬ ಸಚಿವ, ಉನ್ನತ ಅಧಿಕಾರಿ, ಸ್ವತಃ ಯಡಿಯೂರಪ್ಪ ಬಳಿಗೆ ಹೋದರೂ ಏನೊಂದು ಕೆಲಸ ಆಗಲ್ಲ. ಕುಟುಂಬದವರ ಮೂಲಕ ವಿಜಯೇಂದ್ರ ಬಳಿಗೆ ಹೋದರೆ ಮಾತ್ರ ಅನುದಾನ ಬಿಡುಗಡೆಯಾಗಲಿದೆ. ಇದಕ್ಕಾಗಿಯೇ ಅಧಿಕಾರಿಗಳು, ಸಚಿವರು, ಮುಖ್ಯಮಂತ್ರಿ ಗೃಹ ಕಚೇರಿ ಬದಲು; ವಿಜಯೇಂದ್ರ ಫ್ಲಾಟ್‌ ಮುಂಭಾಗ ಕೈಕಟ್ಟಿಕೊಂಡು ನಿಲ್ಲುತ್ತಿದ್ದಾರೆ. ಪೊಲೀಸರು ಅಲ್ಲಿಗೆ ಹೆಚ್ಚಿನ ರಕ್ಷಣೆ ನೀಡಿದ್ದಾರೆ’ ಎಂದು ಶಾಸಕರು ಹರಿಹಾಯ್ದರು.

ತಂಗಿ ಮಗನಿಗಾಗಿ ಅನುದಾನ

‘ಈ ಹಿಂದಿನ ಸರ್ಕಾರಗಳು ಹುಣಸೂರಿಗೆ ನೀಡಿದ್ದ ಅನುದಾನವನ್ನೇ ಮೌಖಿಕ ಆದೇಶದ ಮೂಲಕ ಮುಖ್ಯಮಂತ್ರಿ ತಡೆ ಹಿಡಿದಿದ್ದಾರೆ. ಕ್ಷೇತ್ರದ ಶಾಸಕನಾಗಿ ಹಲವು ಮನವಿ ಸಲ್ಲಿಸಿದ್ದರೂ, ಹೊಸದಾಗಿ ನಯಾಪೈಸೆ ನೀಡಿಲ್ಲ. ಲಕ್ಷ್ಮಣತೀರ್ಥ ನದಿಗೆ ಕಟ್ಟೆಮಳಲವಾಡಿ ಬಳಿ ನಿರ್ಮಿಸಿರುವ ಕಟ್ಟೆ ಶಿಥಿಲಾವಸ್ಥೆಯಲ್ಲಿದ್ದು, ತುರ್ತಾಗಿ ದುರಸ್ತಿಗೆ ಅನುದಾನ ಬಿಡುಗಡೆ ಮಾಡಿ ಎಂದು ಗೋಗರೆದರೂ ಸ್ಪಂದಿಸಿಲ್ಲ.’

‘ಆದರೆ ತಮ್ಮ ತಂಗಿ ಮಗ, ಮೈಮುಲ್‌ ನಾಮನಿರ್ದೇಶಿತ ಸದಸ್ಯ ಎಸ್‌.ಸಿ.ಅಶೋಕ್‌ ಧರ್ಮಪುರ ಬಳಿಯ ದೈತ್ಯನ ಕೆರೆ ಸನಿಹ ಹೊಂದಿರುವ 16 ಎಕರೆ ಒತ್ತುವರಿ ಜಮೀನಿಗೆ ತಡೆಗೋಡೆ ನಿರ್ಮಿಸಲು, ದಾರಿ ಮಾಡಿಕೊಡಲು ಕೆರೆ ಅಭಿವೃದ್ಧಿ ಹೆಸರಿನಲ್ಲಿ ₹ 3.26 ಕೋಟಿ ಅನುದಾನವನ್ನು ಯಡಿಯೂರಪ್ಪ ಬಿಡುಗಡೆ ಮಾಡಿದ್ದಾರೆ’ ಎಂದು ಶಾಸಕರು ಕಿಡಿಕಾರಿದರು.

‘ಸಂಸದ ಪ್ರತಾಪ ಸಿಂಹ, ಬಿಜೆಪಿ ಮೈಸೂರು ವಿಭಾಗದ ಪ್ರಭಾರಿ ಮೈ.ವಿ.ರವಿಶಂಕರ್‌ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಬಳಿ ಏಳು ತಿಂಗಳ ಹಿಂದೆ ₹ 5 ಕೋಟಿ ಅನುದಾನ ಬಿಡುಗಡೆ ಮಾಡಿಸಿಕೊಂಡು ಬಂದು, ಕಾಮಗಾರಿ ನಡೆಸುವಂತೆ ಬಿಜೆಪಿ ಕಾರ್ಯಕರ್ತರಿಗೆ ಸೂಚಿಸಿದ್ದರು. ಈ ಅನುದಾನವನ್ನು ಮುಖ್ಯಮಂತ್ರಿ ತಡೆ ಹಿಡಿದಿದ್ದಾರೆ. ಬಿಜೆಪಿ ಕಾರ್ಯಕರ್ತರೇ ಕೆಲಸ ಮಾಡಿಸುತ್ತಾರೆ ಎಂದರೂ ಬಿಡುಗಡೆ ಮಾಡುತ್ತಿಲ್ಲ. ಮುಖ್ಯಮಂತ್ರಿ ಕುಟುಂಬದವರು ಅಥವಾ ಯಾರಾದರೂ ಹುಣಸೂರು ತಾಲ್ಲೂಕಿಗೆ ಬಂದರೇ ಮಾತ್ರ ಅನುದಾನ ಸಿಗಬಹುದು’ ಎಂದು ಶಾಸಕ ಮಂಜುನಾಥ್‌ ಲೇವಡಿ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT