ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಧಕ ಅಥ್ಲೀಟ್‌ಗಳಿಗೆ ಸನ್ಮಾನ

ಮೈಸೂರು ಜಿಲ್ಲಾ ಅಥ್ಲೆಟಿಕ್‌ ಸಂಸ್ಥೆಯಿಂದ ಸಾಧಕರಿಗೆ ‘ನಂದಿ’ ಪ್ರಶಸ್ತಿ ಪ್ರದಾನ
Last Updated 9 ಮೇ 2019, 20:01 IST
ಅಕ್ಷರ ಗಾತ್ರ

ಮೈಸೂರು: ಆಥ್ಲೆಟಿಕ್ಸ್‌ನಲ್ಲಿ ವಿವಿಧ ವಿಭಾಗಗಳಲ್ಲಿ ಗಮನಾರ್ಹ ಸಾಧನೆ ಮಾಡಿದ ಸ್ಪರ್ಧಿಗಳಿಗೆ ಮೈಸೂರು ಜಿಲ್ಲಾ ಅಥ್ಲೆಟಿಕ್‌ ಸಂಸ್ಥೆ (ಎಂಡಿಎಎ) ವತಿಯಿಂದ ‘ನಂದಿ ಪ್ರಶಸ್ತಿ’ ನೀಡಿ ಗೌರವಿಸಲಾಯಿತು.

ಗುರುವಾರ ಸಂಜೆ ಆಯೋಜಿಸಿದ್ದ ಸಮಾರಂಭದಲ್ಲಿ ಅಥ್ಲೆಟಿಕ್ ಕೋಚ್ ವಿ.ಆರ್‌.ಬೀಡು ಅವರು ಕ್ರೀಡಾಪಟುಗಳಿಗೆ ಪ್ರಶಸ್ತಿ ಪ್ರದಾನ ಮಾಡಿದರು.

ಅಥ್ಲೀಟ್‌ಗಳಾದ ಸುಹಾಸ್‌ ಎಸ್‌. ಗೌಡ (ಪುರುಷರ ವಿಭಾಗ), ಅಪ್ಸಾನಾ ಬೇಗಂ (ಮಹಿಳೆಯರ ವಿಭಾಗ), ಬಿ.ಮನುಷ್‌ (ಜೂನಿಯರ್‌ ಪುರುಷರು), ಎಸ್‌.ರಾಹುಲ್‌ ಕಶ್ಯಪ್ (18 ವರ್ಷದೊಳಗಿನ ಬಾಲಕರು), ಎನ್‌.ರಾಹುಲ್‌ ನಾಯಕ (16 ವರ್ಷದೊಳಗಿನ ಬಾಲಕರು), ಲಿಖಿತಾ ಯೋಗೇಶ್ (16 ವರ್ಷದೊಳಗಿನ ಬಾಲಕಿಯರು) ಮತ್ತು ಎಚ್‌.ಎಸ್‌.ಹರ್ಷಿತಾ (14 ವರ್ಷದೊಳಗಿನ ಬಾಲಕಿಯರು) ಅಲ್ಲದೆ ‘ಪ್ರಜಾವಾಣಿ’ ಹಿರಿಯ ವರದಿಗಾರ ಮಹಮ್ಮದ್‌ ನೂಮಾನ್, ಪತ್ರಿಕಾ ಛಾಯಾಗ್ರಾಹಕ ನಾಗೇಶ್‌ ಪಾಣತ್ತಲೆ ಅವರಿಗೆ ‘ನಂದಿ ಪ್ರಶಸ್ತಿ’ ಪ್ರದಾನ ಮಾಡಲಾಯಿತು.

‘ಅತ್ಯುತ್ತಮ ಕ್ರೀಡಾ ಪೋಷಕ ಸಂಸ್ಥೆ’ ಗೌರವ ಪಡೆದ ವಿದ್ಯಾವಿಕಾಸ ಶಿಕ್ಷಣ ಸಂಸ್ಥೆಯ ಪರವಾಗಿ ಪ್ರಾಂಶುಪಾಲರು ಪ್ರಶಸ್ತಿ ಸ್ವೀಕರಿಸಿದರು. ಮೈಸೂರು ವಿಶ್ವವಿದ್ಯಾನಿಲಯ ವತಿಯಿಂದ ಆಯೋಜಿಸಿದ್ದ ಬೇಸಿಗೆ ಶಿಬಿರದಲ್ಲಿ ಪಾಲ್ಗೊಂಡಿದ್ದ ಮಕ್ಕಳಿಗೆ ಸ್ಮರಣಿಕೆ ನೀಡಲಾಯಿತು.

ಅಧ್ಯಕ್ಷತೆ ವಹಿಸಿದ್ದ ಎಂಡಿಎಎ ಮುಖ್ಯಸ್ಥ ವಾಸು ಮಾತನಾಡಿ, ‘ಮೈಸೂರಿನಲ್ಲಿ ಹಲವಾರು ಪ್ರತಿಭಾನ್ವಿತ ಕ್ರೀಡಾಪಟುಗಳಿದ್ದು, ಅವರಿಗೆ ಸೂಕ್ತ ಮಾರ್ಗದರ್ಶನ ಹಾಗೂ ಪ್ರೋತ್ಸಾಹ ಸಿಗಬೇಕಿದೆ. ನಾನು ಶಾಸಕನಾಗಿದ್ದ ಅವಧಿಯಲ್ಲಿ ಮೈಸೂರಿನಲ್ಲಿ ಕ್ರೀಡಾ ವಿಶ್ವವಿದ್ಯಾಲಯ ಸ್ಥಾಪಿಸಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದ್ದೆ. ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಮನವಿ ಮಾಡಿದ್ದೆ. ಆದರೆ ನನ್ನ ಕನಸು ಈಡೇರಲಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.

ಕ್ರೀಡಾ ವಿ.ವಿ ಸ್ಥಾಪಿಸಲು ವಿದ್ಯಾರ್ಥಿಗಳು ಮತ್ತು ಪೋಷಕರು ಸೇರಿ ಸರ್ಕಾರದ ಮೇಲೆ ಒತ್ತಡ ಹೇರಬೇಕು. ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡ ನಮ್ಮವರೇ ಆಗಿದ್ದು, ವಿ.ವಿ ಸ್ಥಾಪಿಸುವಂತೆ ಮನವಿ ಮಾಡಬೇಕು ಎಂದು ಹೇಳಿದರು.

ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಕೆ.ಸುರೇಶ್‌, ಮೈಸೂರು ವಿಶ್ವವಿದ್ಯಾಲಯ ದೈಹಿಕ ಶಿಕ್ಷಣ ನಿರ್ದೇಶಕ ಡಾ.ಪಿ.ಕೃಷ್ಣಯ್ಯ, ಎಂಡಿಎಎ ಅಧ್ಯಕ್ಷ ಎಸ್‌.ಸೋಮಶೇಖರ್, ಕಾರ್ಯದರ್ಶಿ ಬಿ.ಶ್ರೀಕಾಂತ್‌, ಉ‍ಪಾಧ್ಯಕ್ಷರಾದ ಮಹೇಶ್‌ ಬಲ್ಲಾಳ್, ಬಿ.ಎಲ್‌.ಜಗದೀಶ್, ಅಭಿಲಾಷ್‌ ನಾಯರ್‌ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT