ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಮ್ಮ ಆಸ್ತಿ ಸಂರಕ್ಷಿಸುವುದು ಗುರಿ: ಪ್ರಮೋದಾದೇವಿ ಒಡೆಯರ್

ಹೆಲಿಪ್ಯಾಡ್ ಸುತ್ತ ಬೇಲಿ– ದುರುದ್ದೇಶ ಇಲ್ಲ
Last Updated 3 ಜನವರಿ 2021, 3:07 IST
ಅಕ್ಷರ ಗಾತ್ರ

ಮೈಸೂರು: ‘ಲಲಿತ್‌ಮಹಲ್‌ ಹೆಲಿಪ್ಯಾಡ್‌ ಸುತ್ತಮುತ್ತಲಿನ ಜಮೀನಿನ ಮಾಲೀಕತ್ವಕ್ಕೆ ಸಂಬಂಧಿಸಿದಂತೆ ಹೈಕೋರ್ಟ್‌ ನೀಡಿರುವ ತೀರ್ಪಿನ ಅನ್ವಯ ನಾವು ಬೇಲಿ ಹಾಕಿಕೊಂಡಿದ್ದೇವೆ. ಇದರ ಹಿಂದೆ ಯಾವುದೇ ದುರುದ್ದೇಶ ಇಲ್ಲ’ ಎಂದು ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್‌ ಹೇಳಿದರು.

‘ಬೇಲಿ ಹಾಕಿರುವುದಕ್ಕೆ ಸಂಬಂಧಿಸಿದಂತೆ ಕೆಲವರು ಸಾರ್ವಜನಿಕರಿಗೆ ತಪ್ಪು ಮಾಹಿತಿ ನೀಡುತ್ತಿದ್ದಾರೆ. ಯಾರಿಗೂ ತೊಂದರೆ ಕೊಡುವುದು ನಮ್ಮ ಉದ್ದೇಶ ಅಲ್ಲ’ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಸ್ಪಷ್ಟಪಡಿಸಿದರು.

ಕುರುಬಾರಹಳ್ಳಿ ಸರ್ವೇ ನಂ. 4, ಆಲನಹಳ್ಳಿ ಸರ್ವೇ ನಂ. 41 ಮತ್ತು ಚೌಡನಹಳ್ಳಿ ಸರ್ವೇ ನಂ 39ರ ಜಮೀನಿಗೆ ಸಂಬಂಧಿಸಿದಂತೆ 2020ರ ಜೂನ್‌ 19 ರಂದು ನ್ಯಾಯಾಲಯದ ತೀರ್ಪು ಹೊರಬಿದ್ದಿದೆ. ಈ ಆಸ್ತಿ ರಾಜವಂಶಸ್ಥರಿಗೆ ಸೇರಿದ್ದು ಎಂದು ತೀರ್ಪಿನಲ್ಲಿ ತಿಳಿಸಿದೆ ಎಂದರು.

‘ತೀರ್ಪು ಹೊರಬಿದ್ದು ಆರು ತಿಂಗಳವರೆಗೆ ನಾವು ಬೇಲಿ ಹಾಕಿರಲಿಲ್ಲ. ಆದರೆ ಕೆಲವರು ಈ ಜಮೀನು ನಮಗೆ ಸೇರಿದ್ದು ಎಂದು ಬೇಲಿ ಹಾಗೂ ಫಲಕಗಳನ್ನು ಹಾಕಿ ಜಾಗ ಅತಿಕ್ರಮಿಸಲು ಮುಂದಾಗಿದ್ದಾರೆ. ಆದ್ದರಿಂದ ನಮ್ಮ ಜಾಗವನ್ನು ರಕ್ಷಿಸುವ ಉದ್ದೇಶದಿಂದ ಬೇಲಿ ಹಾಕಿದ್ದೇವೆ’ ಎಂದು ಹೇಳಿದರು.

ಹೆಲಿಪ್ಯಾಡ್‌ ಬಳಕೆಗೆ ಅಡ್ಡಿಪಡಿಸಲ್ಲ: ‘ನಮಗೆ ಸೇರಿರುವ ಜಾಗದ ಪ್ರವೇಶದ್ವಾರ ಹೆಲಿಪ್ಯಾಡ್‌ ಬಳಿಯಿದೆ. ಆದ್ದರಿಂದ ಅಲ್ಲಿ ಗೇಟ್‌ ನಿರ್ಮಿಸಲಾಗಿದೆ. ಹೆಲಿಪ್ಯಾಡ್‌ಗೆ ಯಾರನ್ನೂ ಬಿಡುತ್ತಿಲ್ಲ, ಬೀಗ ಹಾಕಲಾಗಿದೆ ಎಂಬುದೆಲ್ಲ ಸುಳ್ಳು. ಹೆಲಿಪ್ಯಾಡ್‌ ಬಳಸುವುದನ್ನು ತಡೆಯಬೇಕೆಂಬ ಉದ್ದೇಶ ಇಲ್ಲ. ದುರುದ್ದೇಶ ಇದ್ದಿದ್ದರೆ ಜೆಸಿಬಿ ತೆಗೆದುಕೊಂಡು ಹೋಗಿ ಹೆಲಿಪ್ಯಾಡ್‌ಅನ್ನು ಅಗೆಯಬಹುದಿತ್ತು’ ಎಂದು ತಿಳಿಸಿದರು.

‘ನಮ್ಮ ಆಸ್ತಿಗೆ ಸಂಬಂಧಿಸಿದಂತೆ ಯಾರೇ ಖಾತೆ ಮಾಡಿಕೊಡಲು ಅರ್ಜಿ ಸಲ್ಲಿಸಿದರೂ ಆ ಬಗ್ಗೆ ಚರ್ಚಿಸಿ ಕ್ರಮವಹಿಸಲು ಪ್ರತ್ಯೇಕ ಕೋಶ ರಚಿಸಬೇಕು. ಇಲ್ಲದಿದ್ದರೆ ಕಾನೂನು ತಜ್ಞರ ಸಲಹೆಯಂತೆ ಕ್ರಮಕೈಗೊಳ್ಳಲಾಗುವುದು’ ಎಂದರು.

ಸುದ್ದಿಗೋಷ್ಠಿಯಲ್ಲಿ ಆಪ್ತ ಕಾರ್ಯದರ್ಶಿ ಲಕ್ಷ್ಮೀನಾರಾಯಣ ಇದ್ದರು.

‘ಒಟ್ಟು 1,500 ಎಕರೆ ಇತ್ತು’
‘ಕೇಂದ್ರ ಸರ್ಕಾರ ಮತ್ತುಮೈಸೂರು ರಾಜವಂಶಸ್ಥರ ನಡುವೆ 1950 ರಲ್ಲಿ ಒಪ್ಪಂದ ಆಗಿದ್ದಾಗ ಈ ಮೂರು ಸರ್ವೇ ನಂಬರ್‌ಗಳಲ್ಲಿ ಒಟ್ಟು 1,500 ಎಕರೆ ಜಮೀನು ಇತ್ತು. ಅದು ನಮಗೆ ಸೇರಿದ್ದಾಗಿದೆ. ಆದರೆ ಈಗ ಎಷ್ಟು ಜಮೀನು ಬೇರೆಯವರು ಅತಿಕ್ರಮಿಸಿಕೊಂಡಿದ್ದಾರೆ ಎಂಬುದನ್ನು ನೋಡಬೇಕು’ ಎಂದು ಪ್ರಮೋದಾದೇವಿ ತಿಳಿಸಿದರು.

‘ಕೆಲವರು ಮನೆ, ಕಟ್ಟಡ ನಿರ್ಮಿಸಿದ್ದಾರೆ. ಅವರಿಗೆ ದಾಖಲಾತಿ ಕೊಟ್ಟದ್ದು ಯಾರು ಎಂಬುದನ್ನು ತಿಳಿಯಬೇಕು. ನಮಗೆ ಸೇರಿದ ಆಸ್ತಿಗೆ ಸಂಬಂಧಿಸಿದಂತೆ ಕಂದಾಯ ಇಲಾಖೆ ಅಧಿಕಾರಿಗಳು ಸರ್ವೇ ಮಾಡಿ ನಮ್ಮ ಜಾಗ ನಿಗದಿಪಡಿಸಿಕೊಡಬೇಕು. ನಮಗೆ ಸೇರಿದ ಇತರ ಜಮೀನಿಗೆ ಸಂಬಂಧಿಸಿದಂತೆ ನ್ಯಾಯಾಲಯದ ತೀರ್ಪು ನಮ್ಮ ಪರವಾಗಿ ಬಂದಿದೆಯಾದರೂ, ಅಧಿಕಾರಿಗಳು ಖಾತೆ ಮಾಡಿಕೊಟ್ಟಿಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

‘ನನಗೆ ರಾಜಕೀಯ ಒಗ್ಗಲ್ಲ’
ರಾಜಕೀಯ ಪ್ರವೇಶಿಸುವಿರಾ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಪ್ರಮೋದಾದೇವಿ, ‘ಆಡಳಿತ ನಡೆಸುವುದು ನನಗೆ ತುಂಬಾ ಸುಲಭದ ಕೆಲಸ. ಆದರೆ ರಾಜಕೀಯಕ್ಕೆ ನಾನು ಒಗ್ಗುವುದಿಲ್ಲ. ಅಲ್ಲಿ ಹೋಗಿ ಬೇರೆಯವರಿಗೆ ಏಕೆ ತೊಂದರೆ ಕೊಡಬೇಕು ಎಂದು ನಾನು ರಾಜಕೀಯಕ್ಕೆ ಹೋಗುವುದಿಲ್ಲ’ ಎಂದು ಉತ್ತರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT