ಸೋಮವಾರ, ಸೆಪ್ಟೆಂಬರ್ 28, 2020
25 °C
ಹಲವು ಸೇತುವೆಗಳು, ಮನೆಗಳು ಜಲಾವೃತ

ಅಬ್ಬರಿಸಿದ ಕಪಿಲೆ; ಮುಳುಗಿದ ರಸ್ತೆಗಳು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮೈಸೂರು: ಜಿಲ್ಲೆಯಲ್ಲಿ ಕಪಿಲಾ ನದಿಯ ಅಬ್ಬರ ಶನಿವಾರ ಮತ್ತಷ್ಟು ಹೆಚ್ಚಾಗಿದೆ. ಮೈಸೂರು–ನಂಜನಗೂಡು ರಾಷ್ಟ್ರೀಯ ಹೆದ್ದಾರಿಗೆ ಮಲ್ಲನಮೂಲೆ ಬಳಿ ನೀರು ನುಗ್ಗಿದ್ದು, ವಾಹನ ಸಂಚಾರಕ್ಕೆ ಪರ್ಯಾಯ ವ್ಯವಸ್ಥೆ ಕಲ್ಪಿಸಲಾಗಿದೆ.

ಮಲ್ಲನಮೂಲೆ ಮಠ ಜಲಾವೃತಗೊಂಡಿದ್ದರೆ, ಸುತ್ತೂರಿನಲ್ಲಿ ಶ್ರೀಮಠದವರೆಗೂ ನೀರು ಬಂದಿದೆ. ಸರಗೂರು ತಾಲ್ಲೂಕಿನ ಹುಣಸಹಳ್ಳಿ ಗ್ರಾಮದ ಭಾಗ್ಯಮ್ಮ ಎಂಬುವವರು ಜಮೀನಿನಲ್ಲಿ ಕೆಲಸ ಮಾಡುತ್ತಿದ್ದಾಗ ವಿದ್ಯುತ್ ಕಂಬ ಬಿದ್ದು ಗಾಯಗೊಂಡಿದ್ದಾರೆ.

ಕಬಿನಿಯಿಂದ 70,600 ಹಾಗೂ ನುಗು ಜಲಾಶಯದಿಂದ 10,206 ಕ್ಯುಸೆಕ್‌ನಷ್ಟು ನೀರನ್ನು ಹೊರಬಿಡಲಾಗುತ್ತಿದೆ. ನಂಜನಗೂಡಿನಲ್ಲಿ 130 ಸಂತ್ರಸ್ತರನ್ನು ಪರಿಹಾರ ಕೇಂದ್ರಕ್ಕೆ ಸ್ಥಳಾಂತರಿಸಲಾಗಿದೆ. ಜಿಲ್ಲೆಯಲ್ಲಿ ಒಟ್ಟು 61 ಎಕರೆಯಷ್ಟು ಪ್ರದೇಶದಲ್ಲಿ ಬೆಳೆ ನಾಶವಾಗಿದೆ. 110 ಮನೆಗಳಿಗೆ ಹಾನಿಯಾಗಿದೆ.

ನಂಜನಗೂಡಿನಲ್ಲಿ 48 ಮನೆಗಳು ಜಲಾವೃತ

ನಂಜನಗೂಡು: ಇಲ್ಲಿನ ನದಿ ಪಾತ್ರದಲ್ಲಿರುವ ಹಳ್ಳದಕೇರಿ, ಸರಸ್ವತಿ ಕಾಲೊನಿ, ತೋಪಿನ ಬೀದಿಯಲ್ಲಿ 48 ಮನೆಗಳು ಶನಿವಾರ ಮುಳುಗಿವೆ. ಮೈಸೂರು– ನಂಜನಗೂಡು ಸಂಚಾರಕ್ಕೆ ಬಸವನಪುರ ಹಾಗೂ ಹೆಜ್ಜಿಗೆ ಸೇತುವೆ ಕಡೆಯಿಂದ ಹದಿನಾರು ಮಾರ್ಗವಾಗಿ ಪರ್ಯಾಯ ವ್ಯವಸ್ಥೆ ಕಲ್ಪಿಸಲಾಗಿದೆ.

ವೀರಶೈವ ರುದ್ರಭೂಮಿ, ಹದಿನಾರುಕಾಲು ಮಂಟಪ ಬಳಿಯ ಸ್ಮಶಾನ, ಲಿಂಗಾಭಟ್ಟರ ಗುಡಿ ಸಮೀಪದ ಸ್ಮಶಾನ ಹಾಗೂ ಪರಶುರಾಮ ದೇವಾಲಯದ ಬಳಿಯ ಸ್ಮಶಾನಗಳು ಜಲಾವೃತವಾಗಿವೆ.

ಉಪವಿಭಾಗಾಧಿಕಾರಿ ಡಾ.ವೆಂಕಟರಾಜು ತೊಂದರೆಗೆ ಒಳಗಾಗಿರುವ ಬೊಕ್ಕಳ್ಳಿ, ಮಲ್ಲನಮೂಲೆ ಮಠ ಹಾಗೂ ನಗರದ ಮುಡಿಕಟ್ಟೆ, ತೋಪಿನ ಬೀದಿ, ಹಳ್ಳದಕೇರಿ ಹಾಗೂ ಸಂತ್ರಸ್ತರ ಪರಿಹಾರ ಶಿಬಿರಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದರು.

ನಗರ ಸಭೆ ಆಯುಕ್ತ ಕರಿಬಸವಯ್ಯ ಸುದ್ದಿಗಾರರೊಂದಿಗೆ ಮಾತನಾಡಿ, ತಾಲ್ಲೂಕಿನ ದೇಬೂರು ನೀರು ಸರಬರಾಜು ಕೇಂದ್ರದಲ್ಲಿ ನದಿಯಿಂದ ನೀರೆತ್ತುವ ಪಂಪ್‌ಗಳು ನೀರಿನಲ್ಲಿ ಮುಳುಗಡೆಯಾಗಿರುವುದರಿಂದ ನೀರು ಸರಬರಾಜು ಮಾಡಲಾಗಿಲ್ಲ. ನೀರಿನ ತೊಂದರೆ ಇರುವ ಪ್ರದೇಶಗಳಿಗೆ ಟ್ಯಾಂಕರ್ ಮೂಲಕ ಸರಬರಾಜು ಮಾಡಲಾಗುವುದು ಎಂದು ಹೇಳಿದರು.

ವರುಣಾ ಭಾಗದಲ್ಲಿ ಗದ್ದೆಗಳು ಜಲಾವೃತ

ವರುಣಾ: ಹೋಬಳಿಯ ಸುತ್ತೂರು, ನಗರ್ಲೆ, ತುಮ್ಮನೇರಳೆ, ಹೊಸಕೋಟೆ, ಬಿಳುಗಲಿ, ಕುಪ್ಪೇಗಾಲ, ಕುಪ್ಪರವಳ್ಳಿ, ಆಲತ್ತೂರು, ಎಡಕೊಳ, ಹೆಜ್ಜಿಗೆ ತೊರೆಮಾವು ಗ್ರಾಮಗಳ ಇನ್ನಷ್ಟು ಗದ್ದೆಗಳು ನೀರಿನಿಂದ ಆವೃತ್ತವಾಗಿವೆ. ಸುತ್ತೂರು ಶ್ರೀ ಮಠದ ತೋಟದ ಮನೆ ಕೂಡ ನೀರಿನಿಂದ ಆವೃತವಾಗಿದ್ದರೆ, ಮಠದವರೆಗೂ ನೀರು ಬಂದಿದೆ.

ಬೊಕ್ಕಳ್ಳಿ ಗ್ರಾಮದ ಅಂಬೇಡ್ಕರ್ ಸಮುದಾಯ ಭವನ ಹಾಗೂ ಕೆಂಡನಾಯಕ ತೋಟದ ಮನೆ ಸುತ್ತ ನೀರು ಆವರಿಸಿಕೊಂಡಿದೆ. ಹೆಚ್ಚಿನ ನೀರು ಬಂದರೆ ರಾತ್ರಿ ವೇಳೆಗೆ ಹಳೆ ಬೊಕ್ಕಳ್ಳಿ ಗ್ರಾಮದ ಇನ್ನೂ ಅನೇಕ ಮನೆಗಳಿಗೆ ನೀರು ನುಗ್ಗುವ ಸಾಧ್ಯತೆ ಇದೆ.

ಶನಿವಾರ ಬೊಕ್ಕಳ್ಳಿ ಗ್ರಾಮಕ್ಕೆ ಉಪವಿಭಾಗಾಧಿಕಾರಿ ಡಾ.ವೆಂಕಟರಾಜು, ತಹಶೀಲ್ದಾರ್ ಮಹೇಶಕುಮಾರ್, ಉಪತಹಶೀಲ್ದಾರ್ ಬಾಲಸುಬ್ರಮಣ್ಯ ಭೇಟಿ ನೀಡಿ ಪರಿಶೀಲನೆ ನಡೆಸಿ, ಮಹದೇಶ್ವರ ದೇವಸ್ಥಾನ ಆವರಣದಲ್ಲಿ ಗೋಶಾಲೆ ಆರಂಭಿಸಲು ಸೂಚನೆ ನೀಡಿದರು.

ಸುತ್ತೂರು ಗ್ರಾಮಕ್ಕೆ ನಂಜನಗೂಡು ಡಿವೈಎಸ್ಪಿ ಪ್ರಭಾಕರ್ ಶಿಂಧೆ, ಬಿಳಿಗೆರೆ ಎಸ್.ಐ ಆಕಾಶ್ ಭೇಟಿ ನೀಡಿದರು. ನಗರ್ಲೆಯಲ್ಲಿ ವಾಸದ ಮನೆಗಳಿಗೆ ಪ್ರವಾಹದ ನೀರು ಆವರಿಸಿಕೊಳ್ಳಲು ಇನ್ನೂ ನಾಲ್ಕಾರು ಅಡಿ ಬಾಕಿ ಇದೆ. ಚಿಕ್ಕಯ್ಯನಛತ್ರ ಬಳಿ ಇರುವ ‌‌ಎಸ್ಐಪಿ ಕಾರ್ಖಾನೆಯ ನೀರೆತ್ತುವ ಪಂಪ್ ಹೌಸ್ ‌ಮುಳುಗಡೆಯಾಗಿದೆ.

ಜಯಪುರದಲ್ಲಿ ಬೆಳೆಹಾನಿ

ಜಯಪುರ: ಸತತವಾಗಿ ಸುರಿಯುತ್ತಿರುವ ಜಿಟಿಜಿಟಿ ಮಳೆಗೆ ಹೋಬಳಿಯಾದ್ಯಂತ ಹಲವು ಬೆಳೆಗಳು ನಾಶವಾಗಿವೆ. ಜಯಪುರ ಹೋಬಳಿ ಉದ್ಬೂರು ಗ್ರಾಮದಲ್ಲಿ ಶಂಕರನಾಯಕ ಎಂಬುವವರು ಬೆಳೆದಿದ್ದ ಎರಡು ಎಕರೆ ಬಾಳೆತೋಟವು ಬಿರುಗಾಳಿಗೆ ಸಿಲುಕಿ, ನೆಲೆಕಚ್ಚಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.