ಸೇವಂತಿಗೆ ಬೆಳೆದು ಆರ್ಥಿಕ ಸಂತೃಪ್ತಿ

ಶನಿವಾರ, ಮೇ 25, 2019
26 °C
ಹೂವಿನ ಬೇಸಾಯದಿಂದ ಲಾಭ ಕಂಡುಕೊಂಡ ರೈತ

ಸೇವಂತಿಗೆ ಬೆಳೆದು ಆರ್ಥಿಕ ಸಂತೃಪ್ತಿ

Published:
Updated:
Prajavani

ಹುಣಸೂರು: ಹೂವಿನ ಬೇಸಾಯ ಇತ್ತೀಚಿನ ದಿನಗಳಲ್ಲಿ ತನ್ನದೇ ಛಾಪು ಮೂಡಿಸಿದ್ದು, ಕೃಷಿ ಕ್ಷೇತ್ರದಲ್ಲಿ ಈ ಬೇಸಾಯಕ್ಕೆ ಸಾಕಷ್ಟು ಪ್ರೋತ್ಸಾಹವೂ ಲಭಿಸುತ್ತಿದೆ. ಇತ್ತೀಚಿನ ದಿನಗಳಲ್ಲಿ ಪ್ರಗತಿಪರ ರೈತರು ಹೂವಿನ ಬೇಸಾಯಕ್ಕೆ ಒತ್ತು ನೀಡಿ ಆರ್ಥಿಕ ಸ್ಥಿರತೆ ಕಾಯ್ದುಕೊಳ್ಳಲು ಪ್ರಯತ್ನಿಸಿದ್ದಾರೆ.

ಹುಣಸೂರು ತಾಲ್ಲೂಕಿನ ಕಟ್ಟೆಮಳಲವಾಡಿ ಗ್ರಾಮದ ಪ್ರಗತಿಪರ ರೈತ ನಾಗರಾಜ್ ತಮ್ಮ ಭೂಮಿಯಲ್ಲಿ ವರ್ಷವಿಡೀ ಹೂವಿನ ಬೇಸಾಯ ಮಾಡಿ ನೆಮ್ಮದಿಯ ಬದುಕು ಕಟ್ಟಿಕೊಂಡಿದ್ದಾರೆ.

ಜಮೀನಿನ ಅಂಚಿನಲ್ಲಿ ತೇಗ, ಸಿಲ್ವರ್ ಮರಗಳನ್ನು ಬೆಳೆಸಿರುವ ಅವರು ಕಳೆದ ಮೂರು ವರ್ಷಗಳಿಂದ ಹೂವಿನ ಬೇಸಾಯ ಮಾಡುತ್ತಿದ್ದು, ಯಶಸ್ಸಿನ ಹಾದಿಯಲ್ಲಿ ಹೆಜ್ಜೆಯಿಟ್ಟಿದ್ದಾರೆ.

ಹಸಿರು ಮನೆ ನಿರ್ಮಿಸಿ ಬೆಳೆಯುವ ಪದ್ಧತಿಗೆ ಅಂಟಿಕೊಳ್ಳದೆ ಕೆಂಪು, ಹಳದಿ ಮಿಶ್ರಿತ ಸೇವಂತಿಗೆ ಒಂದು ಎಕರೆ ಪ್ರದೇಶದಲ್ಲಿ ಸಾಂಪ್ರದಾಯಿಕ ರೀತಿಯಲ್ಲಿ ಬೆಳೆದಿದ್ದಾರೆ. ಸಸಿ ಬೆಳೆಯುವುದರಿಂದ ಹಿಡಿದು ನಾಟಿ, ಕಟಾವು ಎಲ್ಲ ಕೆಲಸಗಳನ್ನು ಕುಟುಂಬದ ಸದಸ್ಯರೇ ನಿರ್ವಹಿಸುತ್ತಿದ್ದಾರೆ. ಇದರಿಂದ ಆಳುಗಳನ್ನು ಅವಲಂಬಿಸಬೇಕಿಲ್ಲ.

ಸೇವಂತಿಗೆ ನಾಟಿ ಮಾಡಿದ ಮೂರು ತಿಂಗಳಿಗೆ ಹೂವು ಬಿಡಲು ಆರಂಭವಾಗಿ ಒಂದು ವರ್ಷದವರೆಗೂ ಹೂವು ಬಿಡುತ್ತಲೇ ಇರುತ್ತದೆ. ದಿನ ಕಳೆದಂತೆ ಹೂವಿನ ಗುಣಮಟ್ಟ ಹಾಗೂ ಇಳುವರಿ ಕಡಿಮೆ ಆಗುವುದರಿಂದ ಗಿಡ ತೆಗೆಯುವುದು ಒಳ್ಳೆಯದು. ಆ ಬಳಿಕ ಹೊಸದಾಗಿ ನಾಟಿ ಮಾಡಬೇಕು.

ಒಂದು ಎಕರೆ ಪ್ರದೇಶವನ್ನು ನಾಲ್ಕು ಭಾಗವನ್ನಾಗಿ ವಿಂಗಡಿಸಿ ಹಂತ ಹಂತವಾಗಿ ಸೇವಂತಿಗೆ ಸಸಿ ನಾಟಿ ಮಾಡಿದ್ದಾರೆ. ಈ ವಿಧಾನ ಅನುಸರಿಸುವುದರಿಂದ ವರ್ಷದ ಎಲ್ಲಾ ದಿನ ಹೂವು ಕಟಾವಿಗೆ ಬರುತ್ತದೆ. ಹೂವಿನ ಮಾರಾಟದಿಂದ ನಿತ್ಯ ₹ 1 ಸಾವಿರ ಸಂಪಾದನೆ ಆಗುತ್ತಿದ್ದು, ಮನೆ ನಿರ್ವಹಣೆ ಹಾಗೂ ಇತರೆ ಖರ್ಚುಗಳಿಗೆ ಈ ಬೇಸಾಯ ಹೇಳಿ ಮಾಡಿಸಿದಂತಿದೆ ಎಂದು ನಾಗರಾಜ್‌ ಹೇಳುತ್ತಾರೆ.

ಹೂವಿನ ಬೇಸಾಯದೊಂದಿಗೆ ವಾಣಿಜ್ಯ ಬೆಳೆ ತಂಬಾಕು ಹಾಗೂ ಮುಸುಕಿನ ಜೋಳ ಬೆಳೆಯುವುದರಿಂದ ಹೆಚ್ಚಿನ ಲಾಭ ಗಳಿಸಬಹುದು ಎನ್ನವರು.

ಹೈನುಗಾರಿಕೆಗಿಂತಲೂ ಸುಲಭ: ಹೈನುಗಾರಿಕೆಗೆ ಹೋಲಿಸಿದರೆ ಹೂವಿನ ಬೇಸಾಯ ಬಲು ಸುಲಭ ಹಾಗೂ ಲಾಭದಾಯಕ. ಹೈನುಗಾರಿಕೆಯಲ್ಲಿ ಮಾನವ ಶಕ್ತಿ ಹೆಚ್ಚಾಗಿ ಬೇಕಿದ್ದು, ನಿತ್ಯ ಖರ್ಚು ಹೆಚ್ಚು. ಜಾನುವಾರುಗಳನ್ನು ಸಾಕಲು ಹೆಚ್ಚು ಬಂಡವಾಳ ಬೇಕಿದೆ. ಆದರೆ ಹೂವಿನ ಬೇಸಾಯಕ್ಕೆ ಹೆಚ್ಚಿನ ಮಾನವ ಶಕ್ತಿ ಬೇಕಿಲ್ಲ. ನಿತ್ಯ ಖರ್ಚು ಇಲ್ಲವೇ ಇಲ್ಲ ಎಂಬುದು ಅವರ ಅನುಭವದ ಮಾತು.

ನಾಟಿ ಮಾಡಿದ ಮೂರು ತಿಂಗಳು ಗೊಬ್ಬರ ಹಾಗೂ ನಿತ್ಯ ನೀರು ಹರಿಸುವುದು ಹೊರತುಪಡಿಸಿದರೆ ಯಾವುದೇ ಖರ್ಚಿಲ್ಲ. ಕಟಾವು ಹಂತದಲ್ಲಿ ಆಳುಗಳು ಬೇಕು. ಆದರೆ ಮನೆಮಂದಿ ಸೇರಿ ಹೂವು ಕಟಾವು ಮಾಡಿದರೆ ಆಳುಗಳನ್ನು ಹುಡುಕುವ ಕೆಲಸವೂ ಇಲ್ಲ. ಹಣವೂ ಉಳಿತಾಯ ಎನ್ನುವರು.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !