ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

1ರಂದು ಔಪಚಾರಿಕ ಗಜಪಯಣ

ವೀರನಹೊಸಹಳ್ಳಿ ಗೇಟ್ ಆಂಜನೇಯ ಸ್ವಾಮಿಗೆ ಪೂಜೆ ಸಲ್ಲಿಸಿ ಮೈಸೂರಿಗೆ ಪಯಣ
Last Updated 30 ಸೆಪ್ಟೆಂಬರ್ 2020, 4:40 IST
ಅಕ್ಷರ ಗಾತ್ರ

ಹುಣಸೂರು: ನಾಡಹಬ್ಬ ಮೈಸೂರು ದಸರಾ ಗಜಪಯಣ ಕೋವಿಡ್ ಹಿನ್ನೆಲೆಯಲ್ಲಿ ಅ. 1ರಂದು ಔಪಚಾರಿಕವಾಗಿ ಚಾಲನೆ ಪಡೆದು ಮೈಸೂರು ಪ್ರವೇಶಿಸಲಿದೆ.

ಈ ಬಾರಿ ದಸರಾ ಮಹೋತ್ಸವವನ್ನು ಸರಳವಾಗಿ ಆಚರಿಸಲು ಸರ್ಕಾರ ತೀರ್ಮಾನಿಸಿದ ಹಿನ್ನೆಲೆಯಲ್ಲಿಅರಣ್ಯ ಮತ್ತು ಕಂದಾಯ ಇಲಾಖೆ ಗಜಪಯಣವನ್ನು ಔಪಚಾರಿಕವಾಗಿ ಹಮ್ಮಿಕೊಂಡಿವೆ ಎಂದು ವನ್ಯಜೀವಿ ವಿಭಾಗದ ಡಿಸಿಎಫ್‌ ಎಂ.ಜಿ.ಅಲೆಕ್ಸಾಂಡರ್ ತಿಳಿಸಿದರು.

1 ರ ಗುರುವಾರ ಬೆಳಿಗ್ಗೆ ಇಲಾಖೆ ಅಧಿಕಾರಿಗಳ ನೇತೃತ್ವದಲ್ಲಿ ವೀರನಹೊಸಹಳ್ಳಿ ಗೇಟ್ ಬಳಿಯ ಆಂಜನೇಯ ಸ್ವಾಮಿಗೆ ಪೂಜೆ ಸಲ್ಲಿಸಿ 5 ಆನೆಗಳು ಮೈಸೂರಿಗೆ ಪ್ರಯಾಣ ಬೆಳೆಸಲಿವೆ. ಈ ಕಾರ್ಯಕ್ರಮದಲ್ಲಿ ಸಾಂಸ್ಕೃತಿಕ ಚಟುವಟಿಕೆ ಮತ್ತು ಮೇಳಗಳು ಇರುವುದಿಲ್ಲ. ಜನಪ್ರತಿನಿಧಿಗಳು, ಗಣ್ಯರು, ಸಾರ್ವಜನಿಕರು ಸೇರಿದಂತೆ ಯಾರನ್ನೂಆಹ್ವಾನಿಸಿಲ್ಲ. ಸ್ಥಳೀಯ ವನ್ಯಜೀವಿ ಮತ್ತು ಕಂದಾಯ ಇಲಾಖೆ ಅಧಿಕಾರಿಗಳಷ್ಟೇ ಇರಲಿದ್ದಾರೆ.

ಯಾವಾವ ಆನೆ: ಮತ್ತಿಗೋಡು ಆನೆ ಕ್ಯಾಂಪಿನಲ್ಲಿರುವ ಅಂಬಾರಿ ಹೊರುವ ಆನೆ ಅಭಿಮನ್ಯು (54), ಕುಶಾಲನಗರ ಆನೆಕಾಡು ಕ್ಯಾಂಪ್‌ನ ವಿಕ್ರಂ (40) ಮತ್ತು ವಿಜಯ (61), ದುಬಾರೆ ಆನೆ ಕ್ಯಾಂಪಿನಿಂದ ಗೋಪಿ (39) ಮತ್ತು ಕಾವೇರಿ (50) ಆನೆಗಳು ವೀರನಹೊಸಹಳ್ಳಿ ಗೇಟ್ ಬಳಿಯಿಂದ ಪ್ರಯಾಣ ಬೆಳೆಸಲಿವೆ. ಅಂದು ಮೈಸೂರಿನ ಅರಣ್ಯ ಭವನಕ್ಕೆ ಕರೆತರಲಾಗುತ್ತದೆ. 2ರಂದು ಅರಮನೆಯ ಆವರಣದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರ ನೇತೃತ್ವದಲ್ಲಿ ಗಜಪಡೆಗೆ ಸ್ವಾಗತ ಕೋರಲಾಗುತ್ತದೆ.

ಅರಮನೆ ಆವರಣಕ್ಕೆ ಸೀಮಿತವಾಗಿ ನಡೆಯಲಿರುವ ಜಂಬೂಸವಾರಿಯಲ್ಲಿ ಪ್ರಥಮ ಬಾರಿ ಚಿನ್ನದ ಅಂಬಾರಿ ಹೊರಲಿರುವ 5,400 ರಿಂದ 5,600 ಕೆ.ಜಿ. ತೂಕದ ಅಭಿಮನ್ಯು ಆನೆಯನ್ನು, 1970ರಲ್ಲಿ ಹೆಬ್ಬಳ್ಳ ಅರಣ್ಯದಲ್ಲಿ ಕಾರ್ಯಾಚರಣೆ ನಡೆಸಿ ಇಲಾಖೆ ವಶಕ್ಕೆ ತೆಗೆದುಕೊಳ್ಳಲಾಗಿತ್ತು.

ಈ ಹಿಂದೆ ಶ್ರೀರಂಗಪಟ್ಟಣದಲ್ಲಿ ನಡೆದ ದಸರೆಯಲ್ಲಿ ಅಂಬಾರಿ ಹೊತ್ತ ಅನುಭವಿಗೆ ಚಿನ್ನದ ಅಂಬಾರಿ ಹೊರುವ ಜವಾಬ್ದಾರಿ ನೀಡಲಾಗಿದೆ.

ದಸರೆಯಲ್ಲಿ ಭಾಗವಹಿಸಲಿರುವ ಆನೆಗಳ ಯೋಗಕ್ಷೇಮ ಕಾದುಕೊಳ್ಳುವ ಜವಾಬ್ದಾರಿ ಮಾವುತ ಮತ್ತು ಕಾವಾಡಿಗಳ ಪಾಲು ಹೆಚ್ಚಿದ್ದು, ಅಭಿಮನ್ಯು ಮಾವುತ ವಸಂತ್ ಮತ್ತು ಕಾವಾಡಿ ರಾಜಣ್ಣ ವಹಿಸಿಕೊಳ್ಳಲಿದ್ದಾರೆ.

ಆನೆ ಗೋಪಿ ಮಾವುತ ನಾಗರಾಜು ಮತ್ತು ಕಾವಾಡಿ ಶಿವು, ವಿಕ್ರಮ್ ಆನೆಯ ಮಾವುತ ಜೆ.ಕೆ.ಪುಟ್ಟ, ಕಾವಾಡಿ ಹೇಮಂತ್ ಕುಮಾರ್, ಆನೆ ವಿಜಯ ಮಾವುತ ಬೋಜಪ್ಪ ಮತ್ತು ಕಾವಾಡಿ ಭರತ್ ಬಿ.ಪಿ, ಆನೆ ಕಾವೇರಿ ಮಾವುತರಾಗಿ ಡೋಬಿ ಮತ್ತು ಕಾವಾಡಿ ರಂಜನ್ ಕಾರ್ಯ ನಿರ್ವಹಿಸಲಿದ್ದಾರೆ ಎಂದು ನಾಗರಹೊಳೆ ವನ್ಯಜೀವಿ ಪಶುವೈದ್ಯಾಧಿಕಾರಿ ಡಾ.ಮುಜೀಬ್ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT