ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಾಂಧೀಜಿ ಕನಸಿನ ಭಾರತದ ಸಂಕಲ್ಪ ಮಾಡಿ: ಎಚ್.ಎಸ್.ದೊರೆಸ್ವಾಮಿ

ಸದೃಢ ರಾಷ್ಟ್ರ ನಿರ್ಮಾಣ ಮತ್ತು ಸಮುದಾಯ ಸಬಲೀಕರಣ ಕುರಿತ ವಿಚಾರಗೋಷ್ಠಿಯಲ್ಲಿ ಎಚ್‌.ಎಸ್.ದೊರೆಸ್ವಾಮಿ
Last Updated 8 ಫೆಬ್ರುವರಿ 2021, 3:49 IST
ಅಕ್ಷರ ಗಾತ್ರ

ಕೆ.ಆರ್.ಪೇಟೆ: ಗಾಂಧೀಜಿ ಕನಸಿನ ಭಾರತದ ನಿರ್ಮಾಣಕ್ಕೆ ದೇಶದ ಯುವಕರು ಶ್ರಮಿಸದಿದ್ದರೆ ಪ್ರಜಾಪ್ರಭುತ್ವ ವ್ಯವಸ್ಥೆ ದಿಕ್ಕು ತಪ್ಪುವ ಸಂಭವ ಹೆಚ್ಚಾಗಿದೆ ಎಂದು ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್.ದೊರೆಸ್ವಾಮಿ ಆತಂಕ ವ್ಯಕ್ತಪಡಿಸಿದರು

ತಾಲ್ಲೂಕಿನ ಬಂಡಿಹೊಳೆ ಗ್ರಾಮದಲ್ಲಿ ಭಾನುವಾರ ಮೈಸೂರಿನ ಅನುಗ್ರಹ ಫೌಂಡೇಷನ್ ಆಯೋಜಿಸಿದ್ದ ಸದೃಢ ರಾಷ್ಟ್ರ ನಿರ್ಮಾಣ ಮತ್ತು ಸಮುದಾಯ ಸಬಲೀಕರಣ ಸಾಂಸ್ಕೃತಿಕ ಸ್ಥಿರತೆ ಹಾಗೂ ನೈತಿಕ ಮೌಲ್ಯಗಳ ಪಾತ್ರ ಕುರಿತು ಆಯೋಜಿಸಿದ್ದ ವಿಚಾರಗೋಷ್ಠಿ ಮತ್ತು ಗುರುವಂದನಾ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ದೇಶಕ್ಕೆ ಸ್ವಾತಂತ್ರ್ಯ ಬಂದು ಏಳು ದಶಕ ಕಳೆದರೂ ಗಾಂಧೀಜಿ ಮತ್ತು ಸ್ವಾತಂತ್ರಕ್ಕಾಗಿ ಜೀವ ತೆತ್ತವರ ಕನಸಿನ ಭಾರತ ಜನ್ಮ ತಳೆದಿಲ್ಲ. ಭ್ರಷ್ಟರು ಮತ್ತು ರಿಯಲ್‌ ಎಸ್ಟೇಟ್‌ ಉದ್ಯಮಿಗಳು ಈ ದೇಶವನ್ನು ಆಳುವ ಜನಪ್ರತಿ ನಿಧಿಗಳಾಗುತ್ತಿರುವುದು ರಾಜ ಕೀಯ ವ್ಯವಸ್ಥೆಯ ಅಧಃಪತನಕ್ಕೆ ಕಾರಣವಾಗುತ್ತಿದೆ ಎಂದು ಅವರು ಬೇಸರ ವ್ಯಕ್ತಪಡಿಸಿದರು.

ಜನಸಾಮಾನ್ಯರ ಸಮಸ್ಯೆಯನ್ನು ಬಗೆಹರಿಸಲು ಸಾಧ್ಯವಾಗದಂಥ ವಾತಾವರಣವನ್ನು ರಾಜಕೀಯ ಪಕ್ಷಗಳು ಮತ್ತು ಮುಖಂಡರು ಸೃಷ್ಟಿಸಿದ್ದಾರೆ. ರೈತರ ಸಮಸ್ಯೆಗಳನ್ನು ಪ್ರಧಾನಿ ನರೇಂದ್ರ ಮೋದಿ ಅವರು ತಾಯಿ ಹೃದಯದಿಂದ ಆಲಿಸಬೇಕು ಎಂದು ಮನವಿ ಮಾಡಿದ ಅವರು ರೈತರ ಬಗ್ಗೆ ಕಾಳಜಿ ಇದ್ದರೆ ಕೃಷಿ ಕಾಯ್ದೆಗಳನ್ನು ವಾಪಸ್ ಪಡೆಯಬೇಕು. ಈ ನೆಲದ ಸಂಸ್ಕೃತಿಗೆ ಪೂರಕವಾದ, ರೈತರ ಕಲ್ಯಾಣ ಹಾಗೂ ಪ್ರಗತಿಯನ್ನು ಗುರಿಯಾಗಿಸಿಕೊಂಡು ಕಾಯ್ದೆಗಳನ್ನು ರೂಪಿಸಿ ಎಂದು ಮನವಿ ಮಾಡಿದರು.

ಜನಸಾಮಾನ್ಯರ, ರೈತರ ಸಮಸ್ಯೆ ಆಲಿಸದೆ ತನಗಿಷ್ಟ ಬಂದಂತೆ ಕಾಯ್ದೆ ಮಾಡುವ, ಬೆಲೆ ಏರಿಕೆ ಮಾಡುವ ಸರ್ಕಾರಗಳ ವಿರುದ್ಧ ಸಂಘಟಿತ ಹೋರಾಟ ಮುಂದುವರಿಸುವ ಅಗತ್ಯ ವಿದೆ ಎಂದು ಅವರು ಪ್ರತಿಪಾದಿಸಿದರು.

ಜನಪದ ಸಂಸ್ಕೃತಿಯ ಅಳಿವು ಉಳಿವು ಕುರಿತು ಮಾತನಾಡಿದ ಜಾನಪದ ವಿದ್ವಾಂಸ ಡಾ.ಪಿ.ಕೆ.ರಾಜ ಶೇಖರ್, ಒಂದು ಕಾಲದಲ್ಲಿ ಜಾನಪದ ಸಂಸ್ಕೃತಿಯ ಭಂಡಾರವಾಗಿದ್ದ ಗ್ರಾಮಗಳಲ್ಲಿ ಇಂದು ಮೂಲ ಸಂಸ್ಕೃತಿ ಮರೆಯಾಗುತ್ತಿದೆ. ಜನತೆ ತಮ್ಮ ಸಾಂಸ್ಕೃತಿಕ ನೆಲೆಗಟ್ಟನ್ನು ಉಳಿಸಿ ಕೊಳ್ಳಲು ಶ್ರಮಿಸಬೇಕು ಎಂದರು.

ಮೈಸೂರಿನ ಕುವೆಂಪುನಗರ ಪ್ರಥಮದರ್ಜೆ ಕಾಲೇಜಿನ ರಾಜ್ಯಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕ ಪ್ರೊ.ಬಾಲಾಜಿ, ಸಮಗ್ರ ಅಭಿವೃದ್ಧಿ ರಾಷ್ಟ್ರ ಕಲ್ಪನೆಯ ಸಾಕ್ಷತ್ಕಾರದಲ್ಲಿ ಪಂಚಾಯತ್ ರಾಜ್ ವ್ಯವಸ್ಥೆಯ ಪಾತ್ರ ಹಾಗೂ ಮೌಲ್ಯಗಳ ಅಗತ್ಯ ಕುರಿತು ಮಾತನಾಡಿದರು.

ಕಾರ್ಯಕ್ರಮದ ನಂತರ ಗುರುವಂದನ ಕಾರ್ಯಕ್ರಮ ನಡೆಯಿತು.

ವಿಶ್ರಾಂತ ಪ್ರಾಂಶುಪಾಲ ಕೆ.ಆರ್.ಪುಟ್ಟಸ್ವಾಮಿ ಅಧ್ಯಕ್ಷತೆ ವಹಿಸಿದ್ದರು. ತಹಶೀಲ್ದಾರ್ ಎಂ.ಶಿವಮೂರ್ತಿ, ಸಿಪಿಐ ಎಂ.ಕೆ.ದೀಪಕ್, ಹಿರಿಯರಾದ ಕೆ.ಶ್ರೀನಿವಾಸರಾವ್, ಆರ್.ನಾಗೇಗೌಡ, ಬಿ.ಎಲ್.ರಂಗನಾಥೇಗೌಡ, ಬಿ.ಅಶೋಕ್, ಸಾಹಿತಿ ವಿರೂಪಾಕ್ಷ ರಾಜಯೋಗಿ ಶಿವಯೋಗಿ, ಅನುಗ್ರಹ ಫೌಂಡೇಷನ್ ಪದಾಧಿಕಾರಿಗಳಾದ ಅಣ್ಣೇಗೌಡ, ಬಿ.ಪಿ.ವಿಜಯರಾಜು, ಅಪ್ಸರ್ ಪಾಶ, ಪ್ರಮೋದ್ ಚಕ್ರವರ್ತಿ, ಹೇಮಗಿರಿ ಶಾಲೆಯಲ್ಲಿ ಕಲಿತ ನೂರಾರು ಹಿರಿಯ ವಿದ್ಯಾರ್ಥಿಗಳು ಮತ್ತು ಅಲ್ಲಿನ ಶಿಕ್ಷಕರು, ಗ್ರಾಮಸ್ಥರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT