ಶನಿವಾರ, ಮಾರ್ಚ್ 25, 2023
28 °C
ರಿಂಗ್ ರಸ್ತೆಯ 7 ಜಂಕ್ಷನ್‌ಗಳಲ್ಲಿಯೂ ಗ್ರೇಡ್‌ ಸಪರೇಟರ್‌ ನಿರ್ಮಾಣಕ್ಕೆ ಪ್ರಸ್ತಾವ

ಮೈಸೂರಿನಲ್ಲಿ ವಾಹನ ದಟ್ಟಣೆ ನಿಯಂತ್ರಣಕ್ಕೆ ಕ್ರಮ: ಸಂಸದ ಪ್ರತಾಪಸಿಂಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮೈಸೂರು: ಇಲ್ಲಿನ ರಿಂಗ್‌ರಸ್ತೆಯ ಎಲ್ಲ 7 ಜಂಕ್ಷನ್‌ಗಳಲ್ಲಿ ವಾಹನ ದಟ್ಟಣೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಇದನ್ನು ನಿಯಂತ್ರಿಸಲು ಎಲ್ಲಡೆಯೂ ಗ್ರೇಡ್‌ ಸಪರೇಟರ್ ನಿರ್ಮಿಸುವ ಪ್ರಸ್ತಾವ ಇದೆ ಎಂದು ಸಂಸದ ಪ್ರತಾಪಸಿಂಹ ತಿಳಿಸಿದರು.

ಇದಕ್ಕಾಗಿ ₹ 300ರಿಂದ ₹ 400 ಕೋಟಿ ವೆಚ್ಚವಾಗಬಹುದು ಎಂಬ ಅಂದಾಜು ಇದೆ. ಸದ್ಯ, ಕೆಆರ್‌ಎಸ್ ರಸ್ತೆಯ ರಾಯಲ್ ಇನ್ ಜಂಕ್ಷನ್ ಬಳಿ ಮೊದಲ ಹಂತದಲ್ಲಿ ನಿರ್ಮಿಸುವುದಕ್ಕೆ ಮಂಜೂರಾತಿ ದೊರೆತಿದೆ ಎಂದು ಅವರು ಇಲ್ಲಿ ಶುಕ್ರವಾರ ಸ್ಥಳ ಪರಿಶೀಲನೆ ನಡೆಸಿದ ಬಳಿಕ ಸುದ್ದಿಗಾರರಿಗೆ ತಿಳಿಸಿದರು.

ಇಲ್ಲಿ ರೈಲ್ವೆ ಹಳಿಯೂ ಇರುವುದರಿಂದ ರೈಲ್ವೆ ಇಲಾಖೆ ಮತ್ತು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಜಂಟಿಯಾಗಿ ₹ 50 ಕೋಟಿ ಮೊತ್ತಕ್ಕೆ ಟೆಂಡರ್ ಕರೆಯಲು ನಿರ್ಧರಿಸಲಾಗಿದೆ. ಒಂದು ವಾರದಲ್ಲಿ ಇದರ ಅಂತಿಮ ಸ್ವರೂಪದ ನಕ್ಷೆ ತಯಾರಾಗಲಿದ್ದು, ಆದಷ್ಟು ಬೇಗ ಕೆಲಸ ಪೂರ್ಣವಾಗಲಿದೆ. ಇದರಿಂದ ಕೆಆರ್‌ಎಸ್‌ಗೆ ಹೋಗುವವರು ಸರಾಗವಾಗಿ ಹೋಗಬಹುದು ಎಂದು ಅವರು ಮಾಹಿತಿ ನೀಡಿದರು.

2022 ಸೆಪ್ಟೆಂಬರ್‌ಗೆ ಮೈಸೂರು– ಬೆಂಗಳೂರು ದಶಪಥ ರಸ್ತೆ ಸಿದ್ಧ
ಮೈಸೂರು– ಬೆಂಗಳೂರು ದಶಪಥ ರಸ್ತೆ ಕಾಮಗಾರಿಯು 2022ರ ಸೆಪ್ಟೆಂಬರ್‌ ಒಳಗೆ ಪೂರ್ಣಗೊಳ್ಳಲಿದೆ. ಕೊಲಂಬಿಯಾ ಏಷಿಯಾ ಜಂಕ್ಷನ್‌ ಬಳಿಯ ‘ಕ್ಲೋವರ್ ಲೀಫ್’ ಮಾದರಿಯ ಯೋಜನೆಯೂ ಇದರಲ್ಲಿ ಸೇರಿದೆ ಎಂದು ಪ್ರತಾಪಸಿಂಹ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

ರಿಂಗ್‌ರಸ್ತೆಯ ಹಸಿರೀಕರಣ
ರಿಂಗ್‌ರಸ್ತೆಯಲ್ಲಿ ವಿವಿಧ ಅನುದಾನಗಳನ್ನು ಬಳಸಿ ಹಸಿರೀಕರಣ ಮಾಡಲು ಯೋಜನೆ ರೂಪಿಸಲಾಗಿದೆ. 2,450 ವಿದ್ಯುತ್ ದೀಪದ ಕಂಬಗಳ ವೈಯರ್‌ಗಳನ್ನು ಇಲಿಗಳು ಹಾನಿಗೊಳಿಸಿವೆ. ಇದರಿಂದ ವಿದ್ಯುತ್ ದೀಪಗಳು ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ. ಸದ್ಯದಲ್ಲೇ ಈ ವೈಯರ್‌ಗಳನ್ನು ಎಚ್‌ಡಿಪಿಇ ಅಥವಾ ಜಿಐ ಪೈಪ್‌ನೊಳಗೆ ಹಾಕಲಾಗುವುದು ಎಂದು ಹೇಳಿದರು.

ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಚ್.ವಿ.ರಾಜೀವ್, ಪಾಲಿಕೆ ಆಯುಕ್ತ ಲಕ್ಷ್ಮೀಕಾಂತರೆಡ್ಡಿ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಮುಖ್ಯ ಎಂಜಿನಿಯರ್ ವಿಜಯಕುಮಾರ್ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು