ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿ.ಟಿ.ದೇವೇಗೌಡ ವಿಚಾರದಲ್ಲಿ ಮಕ್ಕಳ ಮಾತು ಕೇಳಬೇಕಾಗುತ್ತದೆ–ಎಚ್‌ಡಿಕೆ

Last Updated 24 ಅಕ್ಟೋಬರ್ 2021, 13:36 IST
ಅಕ್ಷರ ಗಾತ್ರ

ಮೈಸೂರು: ‘ಶಾಸಕ ಜಿ.ಟಿ.ದೇವೇಗೌಡರು ಜೆಡಿಎಸ್‌ನಲ್ಲೇ ಮುಂದುವರಿಯುವ ಸಂಬಂಧ ನನ್ನ ಮಗ ನಿಖಿಲ್‌ ಹಾಗೂ ಜಿಟಿಡಿ ಮಗ ಜಿ.ಡಿ.ಹರೀಶ್‌ ಗೌಡ ಯಾವುದಾದರೂ ನಿರ್ಧಾರ ಕೈಗೊಂಡಿದ್ದರೆ ಅವರ ಮಾತನ್ನು ಕೇಳಬೇಕಾಗುತ್ತದೆ’ ಎಂದು ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ.ಕುಮಾರಸ್ವಾಮಿ ಹೇಳಿದರು.

ಮೈಸೂರು ಪತ್ರಕರ್ತರ ಸಂಘದಿಂದ ಪತ್ರಕರ್ತರ ಭವನದಲ್ಲಿ ಭಾನುವಾರ ನಡೆದ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಜಿ.ಟಿ.ದೇವೇಗೌಡರು ನನ್ನ ಸಂಪರ್ಕಕ್ಕೆ ಬಂದು ಎರಡೂವರೆ ವರ್ಷಗಳಾಗಿವೆ. ಅವರ ನಿಲುವೇನು ಎಂಬುದು ನನಗೆ ಗೊತ್ತಿಲ್ಲ. ನನ್ನ ಮಟ್ಟದಲ್ಲಿ ಈ ವಿಷಯ ಚರ್ಚೆಗೆ ಬಂದಾಗ ಈ ಬಗ್ಗೆ ಉತ್ತರ ನೀಡುತ್ತೇನೆ’ ಎಂದರು.

‘ಜಿ.ಟಿ.ದೇವೇಗೌಡರ ಮಗ ಜಿ.ಡಿ.ಹರೀಶ್‌ ಗೌಡ ಹಾಗೂ ನನ್ನ ಮಗ ನಿಖಿಲ್‌ ಒಳ್ಳೆಯ ಸ್ನೇಹಿತರು. ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದಿದ್ದಾರೆ. ಇಬ್ಬರೂ ಸಿನಿಮಾ ವಿಚಾರಕ್ಕಾಗಿ ಭೇಟಿಯಾಗಿದ್ದರು. ಅವರು ಏನು ಮಾತನಾಡಿಕೊಂಡಿದ್ದಾರೆ ಎಂಬುದು ಗೊತ್ತಿಲ್ಲ’ ಎಂದು ಸ್ಪಷ್ಟಪಡಿಸಿದರು.

‘2018ರಲ್ಲಿ ಕಾಂಗ್ರೆಸ್‌ನೊಂದಿಗೆ ಮೈತ್ರಿ ಮಾಡಿಕೊಂಡಿದ್ದೇ ಜೆಡಿಎಸ್‌ ನೆಲಕಚ್ಚಲು ಕಾರಣ. ಇದರಿಂದಲೇ ಕೆ.ಆರ್‌.ಪೇಟೆ, ಶಿರಾ, ಹುಣಸೂರು, ಯಶವಂತಪುರ ಕ್ಷೇತ್ರಗಳಲ್ಲಿ ಜೆಡಿಎಸ್‌ ಸೋಲಲು ಕಾರಣವಾಯಿತು. ಸಿಂದಗಿ, ಹಾನಗಲ್‌ ಉಪಚುನಾವಣೆಯನ್ನು ನಾನು ಲೆಕ್ಕಕ್ಕೆ ಇಟ್ಟಿಲ್ಲ. ಮುಂದಿನ 2023ರ ವೇಳೆಗೆ ಜೆಡಿಎಸ್‌ ಸ್ವತಂತ್ರವಾಗಿ ಅಧಿಕಾರಕ್ಕೆ ತರುವುದೇ ಮುಖ್ಯ ಗುರಿ. 226 ಕ್ಷೇತ್ರಗಳಿಗೂ ಅಭ್ಯರ್ಥಿಗಳನ್ನು ಸೂಚಿಸಿದ್ದು, ಸಂಘಟನೆಯ ಕೆಲಸವನ್ನು ಆರಂಭಿಸಲಾಗಿದೆ. ಹೊಸ ರೀತಿಯಲ್ಲಿ ಕಾರ್ಯತಂತ್ರ ರೂಪಿಸಲಾಗುತ್ತಿದೆ’ ಎಂದರು.

‌‘ನಾನು 1994ರಲ್ಲಿ ಮೈಸೂರಿನ ನಜರ್‌ಬಾದ್‌ನಲ್ಲಿ ಚಲನಚಿತ್ರ ವಿತರಕರ ಕಚೇರಿ ಸ್ಥಾಪಿಸಿ ಕೆಲಸ ಆರಂಭಿಸಿದ್ದೆ. ಬಡ್ಡಿಗೆ ದುಡ್ಡು ತಂದು ಸಿನಿಮಾ ವಿತರಣೆ ಮಾಡುತ್ತಿದ್ದೆ. ದೇವೇಗೌಡರ ಮಗನಾಗಿ ಎಂದೂ ಅವರ ಅಧಿಕಾರವನ್ನು ದುರುಪಯೋಗ ಪಡಿಸಿಕೊಂಡಿಲ್ಲ. ದುರುಪಯೋಗ ಪಡಿಸಿಕೊಂಡಿದ್ದಿದ್ದರೆ ಈಗಿನ ರಾಜಕಾರಣಿಗಳಿಗಿಂತ 100 ಪಟ್ಟು ಹಣ ಮಾಡುತ್ತಿದ್ದೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT