ಮೈಸೂರು: ದಸರೆ ಬಂದರೆ ಮನೆಯಲ್ಲೂ ಜಾತ್ರೆ. ಮೂವತ್ತರಿಂದ ನಲವತ್ತು ನೆಂಟರು ಸೇರುತ್ತಿದ್ದರು. ಬೆಂಗಳೂರು, ಮಂಡ್ಯ, ಚಾಮರಾಜನಗರವಲ್ಲದೇ ತಮಿಳುನಾಡಿನಿಂದಲೂ ಬರುತ್ತಿದ್ದರು. ವಾರಗಟ್ಟಲೆ ಇರುತ್ತಿದ್ದರಿಂದ ಮನೆಯಲ್ಲಿ ಸಂಭ್ರಮವೋ ಸಂಭ್ರಮ. ಮೈಸೂರು ನಗರದಲ್ಲಿ ಸುತ್ತಾಡುತ್ತಿದ್ದೆವು. ದಸರೆ ಬಳಿಕ ಚಾಮುಂಡಿಬೆಟ್ಟದಲ್ಲಿ ನಡೆಯುತ್ತಿದ್ದ ಚಾಮುಂಡೇಶ್ವರಿ ದೇವಿಯ ಉತ್ಸವವನ್ನೂ ನೋಡಿಕೊಂಡು ಹೋಗುತ್ತಿದ್ದರು ಎಂದುದಸರೆಯ ನೆನಪುಗಳನ್ನು ಚಾಮುಂಡೇಶ್ವರಿ ದೇಗುಲದ ಪ್ರಧಾನ ಅರ್ಚಕ ಶಶಿಶೇಖರ್ ದೀಕ್ಷಿತ್ ಪ್ರಜಾವಾಣಿ ಜೊತೆ ಹಂಚಿಕೊಂಡರು.
ನೆಂಟರಿಷ್ಟರು, ಕುಟುಂಬದ ವರೆಲ್ಲಾ ಜೊತೆಯಾಗಿ ಹಬ್ಬ ಆಚರಿಸುತ್ತಿದ್ದ ಆ ಕ್ಷಣಗಳನ್ನು ನೆನಪಿಸಿಕೊಂಡರೆ ಖುಷಿಯಾಗುತ್ತದೆ. ಆದರೆ, ಆಗಿನಷ್ಟು ನೆಂಟರ ಈಗ ಸೇರಲ್ಲ, ಹಿಂದಿನಷ್ಟು ಸಂಭ್ರಮವೂ ಇರಲ್ಲ.
ದಸರೆ ಎಂದಾಗ, ಕೊನೆಯ ಅರಸ ಜಯಚಾಮರಾಜೇಂದ್ರ ಒಡೆಯರ್ ಆನೆಯ ಮೇಲಿನ ಅಂಬಾರಿಯಲ್ಲಿ ಕುಳಿತು ಸಾಗುತ್ತಿದ್ದ ದೃಶ್ಯ ನೆನಪಾಗುತ್ತದೆ. ನಾವೆಲ್ಲಾ ಕುಟುಂಬ ಸಮೇತರಾಗಿ ಬಂದು ವೀಕ್ಷಿಸುತ್ತಿದ್ದೆವು. ಆಗಿನ ದಸರೆ ವೈಭವ, ಜಂಬೂಸವಾರಿ ಮೆರವಣಿಗೆ ನೋಡುವುದೇ ಕಣ್ಣಿಗೆ ಹಬ್ಬ. ನಾನಂತೂ ಅಂಬಾರಿ ಹಿಂದೆಯೇ ಹೋಗುತ್ತಿದ್ದೆ. ಆಗ ದಸರಾ ವಸ್ತುಪ್ರದರ್ಶನವು ಜೆ.ಕೆ.ಮೈದಾನದಲ್ಲಿ ನಡೆಯುತಿತ್ತು. ಆ ಕ್ಷಣಗಳು ಮತ್ತೆ ಮತ್ತೆ ನೆನಪಾಗುತ್ತವೆ.
ಈಗ ಆನೆಯ ಮೇಲಿನ ಅಂಬಾರಿಯಲ್ಲಿ ಚಾಮುಂಡೇಶ್ವರಿ ಉತ್ಸವ ಮೂರ್ತಿ ಇರಿಸಲಾಗುತ್ತಿದೆ. ಈ ಮೂರ್ತಿಗೆ ನಾನೇ ಪೂಜೆ ಸಲ್ಲಿಸುವುದರಿಂದ ಇದು ಕೂಡ ನನ್ನ ಪಾಲಿಗೆ ವಿಶೇಷ ಕ್ಷಣ. ಹಿಂದಿನ ಸಂಪ್ರದಾಯ, ಸೊಬಗು ಹಾಗೇ ಉಳಿದುಕೊಂಡಿದ್ದರೂ ಹಲವಾರು ಕಾರಣಗಳಿಂದ ಈಚೆಗೆ ಕಾರ್ಯಕ್ರಮಗಳು ಕಡಿಮೆಯಾಗಿವೆ. ನಟ ರಾಜಕುಮಾರ್ ಅಪಹರಣವಾದಾಗಲೂ ಸರಳವಾಗಿ ನಡೆಸಲಾಗಿತ್ತು. ಆಗ ವಿಜೃಂಭಣೆ ಮೈಮರೆಸುತ್ತಿತ್ತು. ಈಗ ಸರಳೆತೆಯೇ ಪ್ರಧಾನವಾಗಿದೆ. ಉತ್ಸವಕ್ಕೆ ಜನಸಮೂಹ ಸೇರಿದರೆ ವಿಶೇಷ ಮೆರುಗು. ಈಗ ಪದ್ಧತಿ ತಪ್ಪಬಾರದು ಎಂಬ ಕಾರಣಕ್ಕಷ್ಟೇ ನಡೆಯುತ್ತಿದೆ ಎಂದುಶಶಿಶೇಖರ್ ದೀಕ್ಷಿತ್ ವಿವರಿಸಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.