ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್‌ನಿಂದ ಸತ್ತವರನ್ನು ಕೇಳುವವರಿಲ್ಲ. ಹೂಳಲು ಜಾಗವಿಲ್ಲ: ಎಚ್‌.ವಿಶ್ವನಾಥ್‌

Last Updated 20 ಏಪ್ರಿಲ್ 2021, 11:32 IST
ಅಕ್ಷರ ಗಾತ್ರ

ಮೈಸೂರು: ‘ಕೋವಿಡ್‌ನಿಂದ ಸತ್ತವರನ್ನು ಕೇಳುವವರಿಲ್ಲ. ಹೂಳಲು ಜಾಗವಿಲ್ಲ. ಆಸ್ಪತ್ರೆಗಳಲ್ಲಿ ಬೆಡ್‌, ವೆಂಟಿಲೇಟರ್‌ಗಳಿಲ್ಲ. ಈ ಸರ್ಕಾರ ಕೇಳುವವರಿಲ್ಲ, ಹೇಳುವವರಿಲ್ಲ ಎನ್ನುವಂತಾಗಿದೆ’ ಎಂದು ವಿಧಾನ ಪರಿಷತ್‌ ಸದಸ್ಯ ಎಚ್‌.ವಿಶ್ವನಾಥ್‌ ವಾಗ್ದಾಳಿ ನಡೆಸಿದರು.

‘ಕೋವಿಡ್ ನಿರ್ವಹಣೆಯಲ್ಲಿ ಸರ್ಕಾರ ಬೇಜವಾಬ್ದಾರಿಯಿಂದ ನಡೆದುಕೊಳ್ಳುತ್ತಿದೆ. ನಾನು ಆಡಳಿತ ಪಕ್ಷದಲ್ಲಿದ್ದೇನೆ ನಿಜ. ಆದರೆ ಇದನ್ನೆಲ್ಲ ಹೇಳದೇ ಇದ್ದರೆ, ನನಗೆ ನಾನೇ ಆತ್ಮವಂಚನೆ ಮಾಡಿಕೊಂಡಂತಾಗುತ್ತದೆ’ ಎಂದು ಮಂಗಳವಾರ ಇಲ್ಲಿ ಸುದ್ದಿಗಾರರಲ್ಲಿ ತಿಳಿಸಿದರು.

ಸರ್ಕಾರದಲ್ಲಿ ಯಾವ ಮಂತ್ರಿಗೂ ತೀರ್ಮಾನ ತೆಗೆದುಕೊಳ್ಳುವ ಜವಾಬ್ದಾರಿಯನ್ನು ಮುಖ್ಯಮಂತ್ರಿ ಕೊಟ್ಟಿಲ್ಲ. ಪ್ರತಿಯೊಂದು ಕೆಲಸಕ್ಕೂ ಮುಖ್ಯಮಂತ್ರಿ ಬಳಿ ಹೋಗುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಯಾವ ಐಎಎಸ್‌ ಅಧಿಕಾರಿಯೂ ಮಂತ್ರಿಗಳ ಮಾತನ್ನು ಕೇಳುತ್ತಿಲ್ಲ. ಸಚಿವರಲ್ಲಿ ಏನನ್ನಾದರೂ ಕೇಳಿದರೆ, ಮುಖ್ಯಮಂತ್ರಿ ಬಂದು ತೀರ್ಮಾನ ತೆಗೆದುಕೊಳ್ಳುವರು ಎನ್ನುವರು. ಹಾಗಾದಲ್ಲಿ ಸಚಿವ ಸಂಪುಟ ಏಕಿರಬೇಕು, ಸಚಿವರೆಲ್ಲ ಏನು ಮಾಡುತ್ತಿದ್ದಾರೆ ಎಂದು ಪ್ರಶ್ನಿಸಿದರು.

‘ರಾಜ್ಯಪಾಲರು ಕೋವಿಡ್‌ಗೆ ಸಂಬಂಧಿಸಿದಂತೆ ಸಭೆ ನಡೆಸುತ್ತಿದ್ದಾರೆ ಎಂಬುದನ್ನು ಪತ್ರಿಕೆಗಳಲ್ಲಿ ಓದಿದೆ. ಚುನಾಯಿತ ಸರ್ಕಾರ ವಿಫಲವಾದರೆ ಮಾತ್ರ ರಾಜ್ಯಪಾಲರು ಮಧ್ಯಪ್ರವೇಶಿಸುವರು. ಹಾಗಾದಲ್ಲಿ ಕೊರೊನಾ ಹಿಮ್ಮೆಟ್ಟಿಸುವಲ್ಲಿ ಸರ್ಕಾರ ವಿಫಲವಾಗಿದೆಯೇ’ ಎಂದು ಕೇಳಿದರು.

ಮುಖ್ಯಮಂತ್ರಿ ಅವರು ಕೋವಿಡ್‌ ದೃಢಪಟ್ಟು ಆಸ್ಪತ್ರೆಯಲ್ಲಿದ್ದಾರೆ ನಿಜ. ಇತರ ಮೂವರು ಉಪಮುಖ್ಯಮಂತ್ರಿಗಳು ಏನು ಮಾಡುತ್ತಿದ್ದಾರೆ? ಕೇವಲ ನಾಮ್‌ಕಾವಾಸ್ತೆಗೆ ಇದ್ದಾರೆಯೇ? ನಿಮಗೆ ಯಾವುದೇ ಅಧಿಕಾರ ಇಲ್ಲವೇ? ಮುಖ್ಯಮಂತ್ರಿ, ಉಪಮುಖ್ಯಮಂತ್ರಿಗಳು ಮತ್ತು ಸಚಿವರ ನಡುವೆ ಹೊಂದಾಣಿಕೆಯೇ ಇಲ್ಲ. ಆದ್ದರಿಂದ ರಾಜ್ಯಕ್ಕೆ ಈ ಪರಿಸ್ಥಿತಿ ಎದುರಾಗಿದೆ ಎಂದು ಟೀಕಿಸಿದರು.

ಕೋವಿಡ್ ಎರಡನೇ ಅಲೆ ಬೀಸುತ್ತದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಒಳಗೊಂಡಂತೆ ತಜ್ಞರು ಎಚ್ಚರಿಕೆ ಕೊಟ್ಟಿದ್ದರು. ಅದನ್ನು ಎದುರಿಸಲು ಏನು ತಯಾರಿ ಮಾಡಿಕೊಂಡಿರಿ? ಬರೀ ಬಿಲ್‌ ಮಾಡೋದ್ರಲ್ಲಿ ಬ್ಯುಸಿಯಾಗಿಬಿಟ್ಟರಿ. ನಿಮ್ಮ ಕೆಲಸವನ್ನು ಯಾರೂ ಮೆಚ್ಚಲಾರರು. ಜನರ ಆರೋಗ್ಯ ಕಾಪಾಡುವಲ್ಲಿ ನಾಯಕತ್ವ ಸೋತಿದೆ ಎಂದು ದೂರಿದರು.

‘ಮುಖ್ಯಮಂತ್ರಿಯ ಆರೋಗ್ಯಸ್ಥಿತಿ ಆರೋಗ್ಯ ಇಲಾಖೆಗೆ ಗೊತ್ತಾಬೇಕಿತ್ತು. ಕೋವಿಡ್‌ ಇದ್ದರೂ ನೀವು ಚುನಾವಣೆ ಪ್ರಚಾರಕ್ಕೆ ಹೋದಿರಿ. ನಿಮ್ಮನ್ನು ಯಾರೂ ಎಚ್ಚರಿಸಲಿಲ್ಲವೇ? ಕನಿಷ್ಠ ಮುಖ್ಯಮಂತ್ರಿಯ ಆರೋಗ್ಯ ಕಾಪಾಡಲು ಕೆಲಸವನ್ನೂ ಆರೋಗ್ಯ ಇಲಾಖೆಗೆ ಮಾಡಲು ಆಗಲಿಲ್ಲ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT