ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಷ್ಟದಿಂದ ಮೇಲೆ ಬಂದಿರೋನು: ಸಂಸದ ಪ್ರತಾಪ ಸಿಂಹ

2022ರ ದಸರಾದೊಳಗೆ ಬೆಂಗಳೂರು–ಮೈಸೂರು ದಶಪಥ ರಾಷ್ಟ್ರೀಯ ಹೆದ್ದಾರಿ ಪೂರ್ಣ
Last Updated 22 ಜೂನ್ 2021, 5:17 IST
ಅಕ್ಷರ ಗಾತ್ರ

ಮೈಸೂರು: ‘ಹೋಟೆಲ್‌ಗೆ ಹಾಲು ಹಾಕಿ ಬೆಳೆದವನು. ಹಂತ ಹಂತವಾಗಿ ಮೇಲೆ ಬಂದವನು. ಜನರ ಕಷ್ಟ ನನಗೆ ಗೊತ್ತಿದೆ. ಮೈಸೂರಿನ ಅಭಿವೃದ್ಧಿಗಾಗಿಯಷ್ಟೇ ಶ್ರಮಿಸೋದು ನನಗೆ ಗೊತ್ತಿರೋದು’ ಎಂದು ಸಂಸದ ಪ್ರತಾಪ ಸಿಂಹ ತಮ್ಮ ಟೀಕಾಕಾರರಿಗೆ ಸೋಮವಾರ ಇಲ್ಲಿ ತಿರುಗೇಟು ನೀಡಿದರು.

ಮೈಸೂರು ವಿಶ್ವವಿದ್ಯಾನಿಲಯದ ಸೆನೆಟ್‌ ಭವನದಲ್ಲಿ ವಿ.ವಿ.ಯ ಸಿಬ್ಬಂದಿ ವರ್ಗ ಹಾಗೂ ವಿದ್ಯಾರ್ಥಿಗಳಿಗೆ ಕೋವಿಡ್‌ ಲಸಿಕೆ ಹಾಕುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ‘ನನ್ನದು ಯಾವುದೇ ಉದ್ಯಮ, ವ್ಯವಹಾರವಿಲ್ಲ. ಯಾವೊಬ್ಬ ಅಧಿಕಾರಿ, ಗುತ್ತಿಗೆದಾರನ ಬಳಿ ಕೈ ಚಾಚಿದವನಲ್ಲ. ನನಗೆ ಗೊತ್ತಿರುವ ವ್ಯವಹಾರ ಒಂದೇ. ಅದುವೇ ಮೈಸೂರಿನ ಅಭಿವೃದ್ಧಿ’ ಎಂದು ಟಾಂಗ್‌ ನೀಡಿದರು.

‘ಮೈಸೂರು ವಿಶ್ವವಿದ್ಯಾನಿಲಯದ ಸೆನೆಟ್‌ ಭವನದ ಮೇಲ್ಭಾಗದಲ್ಲಿ ಕೋಡಿ‌ಂಗ್‌ ಕೇಂದ್ರ, ಇನ್ಕ್ಯುಬೇಷನ್‌ ಕೇಂದ್ರವನ್ನು ಫ್ರೆಂಚ್‌ ಸಹಭಾಗಿತ್ವದಲ್ಲಿ ಆರಂಭಿಸಲಾಗುವುದು. ಮೈಸೂರಿನ ಯುವಕರಿಗೆ ಮನೆ ಬಾಗಿಲಲ್ಲೇ ಉದ್ಯೋಗ ಒದಗಿಸಲು 2014ರಿಂದಲೂ ಶ್ರಮಿಸುತ್ತಿರುವೆ’ ಎಂದು ಸಂಸದರು ಹೇಳಿದರು.

‘2022ರ ದಸರಾದೊಳಗೆ ಬೆಂಗಳೂರು–ಮೈಸೂರು ನಡುವಿನ ದಶಪಥ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಪೂರ್ಣಗೊಳ್ಳಲಿದೆ. ಆಗ ಮೈಸೂರಿನಲ್ಲಿ ಹೆಚ್ಚೆಚ್ಚು ಕೈಗಾರಿಕೆಗಳು, ಕಂಪನಿಗಳು ಆರಂಭವಾಗಲಿವೆ. ನಮ್ಮ ಭವಿಷ್ಯದ ತಲೆಮಾರಿಗೆ ಮನೆ ಬಾಗಿಲಲ್ಲೇ ಕೆಲಸ ಸಿಗಲಿದೆ’ ಎಂಬ ವಿಶ್ವಾಸವನ್ನು ಪ್ರತಾಪ ಸಿಂಹ ವ್ಯಕ್ತಪಡಿಸಿದರು.

ಆರನೇ ರ‍್ಯಾಂಕ್‌: ‘ಮೈಸೂರು ವಿಶ್ವವಿದ್ಯಾನಿಲಯ ರಾಜ್ಯದಲ್ಲಿ ಆರನೇ ರ‍್ಯಾಂಕ್‌ ಗಳಿಸಿದ್ದರೆ, ದೇಶದಲ್ಲಿ 38ನೇ ರ‍್ಯಾಂಕ್‌ ಗಳಿಸಿದೆ’ ಎಂದು ವಿ.ವಿ.ಯ ಕುಲಪತಿ ಪ್ರೊ.ಜಿ.ಹೇಮಂತ್‌ಕುಮಾರ್‌ ತಿಳಿಸಿದರು.

‘ಕೋಡಿಂಗ್‌ ಸೆಂಟರ್‌ ಹಾಗೂ ಇನ್ಕ್ಯುಬೇಷನ್‌ ಸೆಂಟರ್‌ಗಳು ಮುಂದಿನ ಆರು ತಿಂಗಳಲ್ಲಿ ಕಾರ್ಯಾರಂಭ ಮಾಡಲಿವೆ. ಇಲ್ಲಿ ತರಬೇತಿ ಸಿಗಲಿದೆ. ವಿದ್ಯಾರ್ಥಿಗಳಿಗೆ ಶಿಕ್ಷಣ ಕೊಡುವುದಷ್ಟೇ ನಮ್ಮ ಕೆಲಸವಲ್ಲ. ಅವರು ಬದುಕು ಕಟ್ಟಿಕೊಳ್ಳಲು ಅವಶ್ಯವಿರುವ ಉದ್ಯೋಗ ಒದಗಿಸಿಕೊಡಲು ವಿ.ವಿ. ಪ್ರಾಮಾಣಿಕ ಪ್ರಯತ್ನ ನಡೆಸಲಿದೆ’ ಎಂದು ಅವರು ಹೇಳಿದರು.

‘ತಿಂಗಳ ಹಿಂದೆಯೇ ಎಚ್ಚರಿಸಿದ್ದೆ’

‘ಮೈಸೂರಿನಲ್ಲಿ ಕೋವಿಡ್‌ ಕೆಟ್ಟ ಪರಿಸ್ಥಿತಿ ನಿರ್ಮಿಸಿದೆ ಎಂದು ಒಂದು ತಿಂಗಳ ಹಿಂದೆಯೇ ಎಚ್ಚರಿಸಿದ್ದೆ. ಸಕಾಲಕ್ಕೆ ವ್ಯವಸ್ಥಿತ ಯೋಜನೆ ರೂಪಿಸದಿದ್ದರಿಂದ ಸಾವು–ನೋವು ಸಂಭವಿಸಿದವು’ ಎಂದು ಸಂಸದ ಪ್ರತಾಪ ಸಿಂಹ, ಈ ಹಿಂದಿನ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ವಿರುದ್ಧ ಮಾಧ್ಯಮದವರ ಬಳಿ ಪರೋಕ್ಷವಾಗಿ ಹರಿಹಾಯ್ದರು.

‘ಮೇ ತಿಂಗಳಿನಲ್ಲಿ ಮೈಸೂರಿನ ಪಾಸಿಟಿವಿಟಿ ದರ ಶೇ 30ರ ಆಸುಪಾಸಿನಲ್ಲೇ ಇತ್ತು. ಒಂದು ಸಾವಿರಕ್ಕೂ ಹೆಚ್ಚು ಜನರು ತಿಂಗಳೊಂದರಲ್ಲೇ ಮೃತಪಟ್ಟಿರುವುದಾಗಿ ವರದಿಯಾಗಿದೆ’ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

‘ಜಿಲ್ಲಾಧಿಕಾರಿ ಬಗಾದಿ ಗೌತಮ್‌ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು 10 ದಿನಗಳಿಂದಲೂ ಕೋವಿಡ್‌ ನಿಯಂತ್ರಣಕ್ಕಾಗಿ ಶ್ರಮಿಸುತ್ತಿದ್ದಾರೆ. ಪ್ರಸ್ತುತವೂ ಪಾಸಿಟಿವಿಟಿ ದರ ಶೇ 10ರ ಆಸುಪಾಸಿನಲ್ಲೇ ಇರೋದರಿಂದ ಮೈಸೂರಿನಲ್ಲಿ ಲಾಕ್‌ಡೌನ್‌ ಮುಂದುವರೆದಿದೆ. ಇದರಿಂದ ಉದ್ಯಮಕ್ಕೆ, ಸಾಮಾನ್ಯ ಜನರ ಬದುಕಿಗೆ ಸಾಕಷ್ಟು ಹೊಡೆತ ಬೀಳುತ್ತಿದೆ. ಈ ಅವಧಿಯಲ್ಲೇ ಎಲ್ಲವನ್ನೂ ಸರಿಪಡಿಸುತ್ತೇವೆ’ ಎಂದು ಪತ್ರಕರ್ತರ ಪ್ರಶ್ನೆಯೊಂದಕ್ಕೆ ಪ್ರತಾಪ ಸಿಂಹ ಉತ್ತರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT