ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹುಣಸೂರು: ಕುಡಿಯುವ ನೀರಿಗೆ ತತ್ವಾರ

ನಗರಸಭೆಯಿಂದ ಟ್ಯಾಂಕರ್‌ ನೀರು ಪೂರೈಕೆ
Last Updated 3 ಮೇ 2019, 5:15 IST
ಅಕ್ಷರ ಗಾತ್ರ

ಹುಣಸೂರು: ಬಿಸಿಲ ಝಳವನ್ನೂ ಲೆಕ್ಕಿಸದೇ ಸಾಲು ಸಾಲು ಕೊಡಗಳನ್ನು ಇಟ್ಟು ಕಾಯುತ್ತಿದ್ದ ಮಹಿಳೆಯರ ಮೊಗದಲ್ಲಿ ಬೆವರ ಹನಿ ಕಂಡಿತ್ತು. ನೀರಿನ ಟ್ಯಾಂಕರ್‌ ಬರುತ್ತಿದ್ದಂತೆ ಖುಷಿಪಟ್ಟರು, ಒಂದು ಕೊಡ ‘ಜೀವಜಲ’ ಸಿಕ್ಕರೆ ಸಾಕು ಎಂದು ಮುಗಿಬಿದ್ದರು.

ಕುಡಿಯುವ ನೀರಿನ ಸಮಸ್ಯೆ ಪರಿಹರಿಸಲು ನಗರಸಭೆ ಹರಸಾಹಸ ಪಡುತ್ತಿದೆ. ಹೊಸದಾಗಿ ತಲೆ ಎತ್ತುತ್ತಿರುವ ಬಡಾವಣೆಗಳಿಗೂ ಇದರ ಬಿಸಿ ತಟ್ಟಿದೆ.

ನಗರಸಭೆಯ 27 ವಾರ್ಡ್‌ಗಳಲ್ಲಿ 55 ರಿಂದ 60 ಸಾವಿರ ಜನಸಂಖ್ಯೆ ಹೊಂದಿದೆ. ಕುಡಿಯುವ ನೀರಿಗಾಗಿ ಹಲವು ದಶಕಗಳ ಕಾಲ ನಗರದಲ್ಲಿ ಹರಿಯುವ ಲಕ್ಷ್ಮಣತೀರ್ಥ ನದಿಯನ್ನು ಅವಲಂಬಿಸಲಾಗಿತ್ತು. ಕಾಲ ಬದಲಾದಂತೆ ನದಿ ನೀರು ಕಲುಷಿತಗೊಂಡು ಸಂಪೂರ್ಣ ವಿಷಯುಕ್ತವಾಗಿ ಬಳಸಲು ಯೋಗ್ಯವಲ್ಲ ಎಂಬ ಪ್ರಮಾಣ ಪತ್ರವನ್ನು ಅಂಟಿಸಿಕೊಂಡಿದೆ.

ಹಲವು ಬಡಾವಣೆಗಳಲ್ಲಿ ಸಮಸ್ಯೆ: ನಗರದ ಶಬ್ಬೀರ್‌ ನಗರ, ಮಂಜುನಾಥನಗರ, ಮಾರುತಿನಗರ ಮತ್ತು ನ್ಯೂ ಮಾರುತಿ ಬಡಾವಣೆ, ನರಸಿಂಹಸ್ವಾಮಿ ತಿಟ್ಟು, ವಿ.ಪಿ.ಬೋರೆ, ವಿಜಯನಗರ ಬಡಾವಣೆಯ ಅಂದಾಜು 10 ಸಾವಿರ ನಿವಾಸಿಗರು
ನೀರಿನ ಕ್ಷಾಮ ಎದುರಿಸುತ್ತಿದ್ದಾರೆ. ಈ ಬಡಾವಣೆಗಳಿಗೆ ನಗರಸಭೆ ಟ್ಯಾಂಕರ್‌ನಿಂದ ನಿತ್ಯ ನೀರು ಸರಬರಾಜು ಮಾಡಿದರೂ ಜನರ ದಾಹ ತೀರಿಸಲು ಆಗದೆ ನಗರಸಭೆಗೆ ದೊಡ್ಡ ಸವಾಲಾಗಿದೆ.

ನಗರ ವ್ಯಾಪ್ತಿಯಲ್ಲಿ 90 ಕೊಳವೆ ಬಾವಿಗಳಿಂದ ಬಹುತೇಕ ಬಡಾವಣೆಗೆ ಕುಡಿಯುವ ನೀರಿನ ಸರಬರಾಜು ಮಾಡುವ ವ್ಯವಸ್ಥೆ ಮಾಡಿದ್ದರೂ ವಿದ್ಯುತ್ ಕಣ್ಣಾಮುಚ್ಚಾಲೆ ನಗರಸಭೆಯ ನಿದ್ರೆಗೆಡಿಸಿದೆ.

ಕೈಕೊಟ್ಟ ಯೋಜನೆ: ಜಿ.ಟಿ.ದೇವೇಗೌಡ ಅವರು ಶಾಸಕರಾಗಿದ್ದ ಅವಧಿಯಲ್ಲಿ ಕೆ.ಆರ್‌.ನಗರದಿಂದ ಮೊದಲ ಹಂತದ ಕಾವೇರಿ ಕುಡಿಯುವ ನೀರು ಯೋಜನೆ ತರಲಾಯಿತು. ಆರಂಭದಲ್ಲಿ ನಗರದ ಎಲ್ಲರ ನೀರಿನ ದಾಹ ನೀಗಿಸುವ ವಿಶ್ವಾಸ ಹೊತ್ತಿದ್ದ ಯೋಜನೆ ಕೆಲವೊಂದು ತಾಂತ್ರಿಕ ದೋಷದಿಂದ ಎಲ್ಲರ ಮನೆ ತಲುಪಲಿಲ್ಲ.

ಒಳಹರಿವು ಕುಸಿತ: ಕಾವೇರಿ ನೀರು ಪೈಪ್‌ಲೈನ್ ಮಾರ್ಗ ಮಧ್ಯೆ 6 ಗ್ರಾಮಗಳಿಗೆ ಈ ಯೋಜನೆಯಲ್ಲೇ ನೀರು ನೀಡಲಾಗಿದೆ. ಇದರಿಂದ ನೀರಿನ ಒತ್ತಡ ಅಲ್ಲಲ್ಲಿ ಕುಸಿದು ಹುಣಸೂರು ನಗರಕ್ಕೆ ಸೇರುವಷ್ಟರಲ್ಲಿ ನೀರಿನ ಒಳಹರಿವಿನ ಪ್ರಮಾಣ ಕಡಿಮೆ ಆಗಿದೆ. ಈ ಬಗ್ಗೆ ಜಿಲ್ಲಾಧಿಕಾರಿಗಳೊಂದಿಗೆ ಚರ್ಚಿಸಿದ ಬಳಿಕ ಪರ್ಯಾಯ ಯೋಚನೆ ಮಾಡಬೇಕಾಗಿದೆ ಎಂದು ನಗರಸಭೆ ಪೌರಾಯುಕ್ತರಾದ ವಾಣಿ ವಿ. ಆಳ್ವ ಹೇಳಿದರು.

ಹುಣಸೂರು ಜನಸಂಖ್ಯೆಗೆ ಪ್ರತಿ ದಿನವೂ 7.16 ಮಿಲಿಯನ್ ಲೀಟರ್‌ ಕಾವೇರಿ ನೀರು ಅವಶ್ಯಕವಿದ್ದು, ಪ್ರಸ್ತುತ 6.16 ಮಿಲಿಯನ್ ಲೀಟರ್‌ ಸರಬರಾಜಾಗುತ್ತಿದೆ.

ಇದರಿಂದಾಗಿ 1 ಮಿಲಿಯನ್ ಲೀಟರ್‌ ನೀರು ಕೊರತೆ ಎದುರಿಸುತ್ತಿದ್ದೇವೆ ಎಂದು ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗದ ಅಧಿಕಾರಿ ಅನುಪಮಾ ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT