ಗುರುವಾರ , ಸೆಪ್ಟೆಂಬರ್ 23, 2021
26 °C

ವಿಶ್ವ ಅಪ್ಪಂದಿರ ದಿನ: ‘ಅಪ್ಪನಂತೆ ನಾನೂ ಒಳ್ಳೆಯ ಪುರೋಹಿತ ಆಗುವೆ’

ನಿರೂಪಣೆ: ರಮೇಶ ಕೆ. Updated:

ಅಕ್ಷರ ಗಾತ್ರ : | |

Prajavani

ನನ್ನಪ್ಪ ಮಾರುತಿ ಆಚಾರ್ಯ (52), ಪೌರೋಹಿತ್ಯ ಮಾಡಿಕೊಂಡು ಸಂಸಾರ ಸಾಗಿಸುತ್ತಿದ್ದರು. ನನ್ನನ್ನು ದೊಡ್ಡ ಪಂಡಿತನನ್ನಾಗಿ ಮಾಡಬೇಕು ಎಂಬ ಬಯಕೆಯಿಂದ ಮುಂಬೈನಲ್ಲಿರುವ ಸತ್ಯ ಧ್ಯಾನ ವಿದ್ಯಾಪೀಠಕ್ಕೆ ಜ್ಯೋತಿಷ್ಯ ಶಾಸ್ತ್ರ ಅಧ್ಯಯನ ಮಾಡಲು ಕಳುಹಿಸಿದ್ದರು. ಈ ಕೋವಿಡ್‌, ನನ್ನನ್ನು ಪಂಡಿತನನ್ನಾಗಿ ನೋಡುವ ಮೊದಲೇ ಅವರನ್ನು ನಮ್ಮಿಂದ ದೂರ ಮಾಡಿತು. 

ನಮ್ಮದು ಚಿಕ್ಕ ಕುಟುಂಬ. ಅಮ್ಮ, ಅಪ್ಪ; ನಾನು ಮತ್ತು ನನ್ನ ತಮ್ಮ ಅಷ್ಟೇ. ಯಾವುದಕ್ಕೂ ಕೊರತೆಯಾಗದಂತೆ ನೋಡಿಕೊಳ್ಳುತ್ತಿದ್ದರು. ನಾನು ಮುಂಬೈಗೆ ಹೋಗಿ ಆರು ವರ್ಷವಾಯಿತು. ಪುಸ್ತಕ ಖರೀದಿಸಲು ಹಣ ಬೇಕು ಎಂದು ಕೇಳಿದ ತಕ್ಷಣವೇ ಮರು ಮಾತಾಡದೇ ಕಳುಹಿಸುತ್ತಿದ್ದರು. ನನಗೊಂದು ಆಪರೇಷನ್‌ ಆಗಬೇಕಿತ್ತು. ಅದಕ್ಕಾಗಿ ನಾನು ಮೈಸೂರಿಗೆ ಬಂದೆ; ಮಾರ್ಚ್‌ನಲ್ಲಿ ಅಪ್ಪ ಕೋವಿಡ್‌ನಿಂದ ತೀರಿಕೊಂಡರು.

ಅಪ್ಪನಂತೆ ನಾನೂ ಒಳ್ಳೆಯ ಪುರೋಹಿತ ಆಗಬೇಕೆಂಬ ಗುರಿಯಿದೆ. ಇನ್ನೂ 9 ವರ್ಷ ಜೋತಿಷ್ಯ ಶಾಸ್ತ್ರ ಅಧ್ಯಯನ ಮಾಡಬೇಕಿದೆ. ತಮ್ಮ ಪಿಯು ಮುಗಿಸಿದ್ದಾನೆ. ಭವಿಷ್ಯದ ಜೀವನ ಕಷ್ಟಕರವಾಗಿದೆ. ನಮ್ಮ ಮುಂದಿನ ಬದುಕಿಗೆ ಅಮ್ಮನೇ ಹೆಗಲಾಗಬೇಕು.

ಬಿಡುವಿನ ವೇಳೆ ನನ್ನಪ್ಪ ನನಗೆ ಸ್ತ್ರೋತ್ರ–ಮಂತ್ರಗಳನ್ನು ಹೇಳಿಕೊಡುತ್ತಿದ್ದರು. ಎಲ್ಲಿಯಾದರೂ ಹೋಮ ಇದ್ದರೆ ಜೊತೆಗೆ ಕರೆದುಕೊಂಡು ಹೋಗುತ್ತಿದ್ದರು. ಮೂರನೇ ತರಗತಿವರೆಗೆ ಓದಿದ್ದ ಅಪ್ಪನಿಗೆ ಅಲ್ಲಸ್ವಲ್ಪ ಇಂಗ್ಲಿಷ್‌ ಜ್ಞಾನವೂ ಇತ್ತು. ನಮಗೆ ಹೊರಗಿನ ಪ್ರಪಂಚದಲ್ಲಿ ಹೇಗೆ ವ್ಯವಹರಿಸಬೇಕು ಎಂಬುದನ್ನೂ ಕಲಿಸಿದ ಗುರು ಅವರು.

ಪೌರೋಹಿತ್ಯ ವೃತ್ತಿಯಲ್ಲಿ ಅವರಿಗೆ ಒಳ್ಳೆಯ ಹೆಸರೂ ಇತ್ತು. 8ನೇ ತರಗತಿವರೆಗೆ ಓದಿರುವ ನನನ್ನು ಪಂಡಿತನನ್ನಾಗಿ ಮಾಡುವ ಆಸೆ ಅವರಲ್ಲಿತ್ತು. ಅದಕ್ಕಾಗಿ ಹಗಲಿರುಳು ದುಡಿಯುತ್ತಿದ್ದರು, ಏನೇ ಕಷ್ಟ ಬಂದರೂ ನಮ್ಮ ಬಳಿ ಹೇಳಿಕೊಳ್ಳುತ್ತಿರಲಿಲ್ಲ. ಮಿಸ್‌ ಯು ಅಪ್ಪ...

- ಪ್ರಭಂಜನಾಚಾರ್‌, ವಿ.ವಿ.ಮೊಹಲ್ಲಾ ನಿವಾಸಿ, ಮೈಸೂರು

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು