ಮಂಗಳವಾರ, ಡಿಸೆಂಬರ್ 1, 2020
22 °C
ಕನ್ನಡ ಪರ ಹೋರಾಟಗಾರರಿಗೆ ‘ಕನ್ನಡದ ಹೆಮ್ಮೆಯ ಸೈನಿಕ’ ಪ್ರಶಸ್ತಿ ಪ್ರದಾನ

ಕನ್ನಡದ ಕಡೆಗಣನೆ: ನಿವೃತ್ತ ಬಿಇಒ ನಿಂಗಪ್ಪ ಅಸಮಾಧಾನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮೈಸೂರು: ‘ಸಹಸ್ರ, ಸಹಸ್ರ ವರ್ಷಗಳ ಇತಿಹಾಸ ಹೊಂದಿರುವ ಭಾಷೆ ಕನ್ನಡ. ಆದರೆ ಈಚೆಗಿನ ದಿನಗಳಲ್ಲಿ ಪೋಷಕರು ತಮ್ಮ ಮಕ್ಕಳನ್ನು ಆಂಗ್ಲ ಮಾಧ್ಯಮಕ್ಕೆ ದೂಡುವ ಮೂಲಕ ಕನ್ನಡವನ್ನು ಕಡೆಗಣಿಸುತ್ತಿದ್ದಾರೆ’ ಎಂದು ನಿವೃತ್ತ ಬಿಇಒ ನಿಂಗಪ್ಪ ಅಸಮಾಧಾನ ವ್ಯಕ್ತಪಡಿಸಿದರು.

ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ ಶ್ರೀ ಮಹದೇಶ್ವರ ಇನ್ಫ್ರಾಟೆಕ್ ಮತ್ತು ಹೌಸಿಂಗ್ ಡೆವಲಪರ್ಸ್‌ ವತಿಯಿಂದ ಭಾನುವಾರ ನಗರದ ಖಾಸಗಿ ಹೋಟೆಲ್‌ನಲ್ಲಿ ಹಮ್ಮಿಕೊಳ್ಳಲಾಗಿದ್ದ ‘ಕನ್ನಡದ ಹೆಮ್ಮೆಯ ಸೈನಿಕ’ ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ‘ಕನ್ನಡ ನಮ್ಮ ಅಮ್ಮನ ಭಾಷೆ ಎಂದು ಹೇಳುವ ಅನೇಕರು, ತಮ್ಮ ಮಕ್ಕಳನ್ನು ಮಾತ್ರ ಇಂಗ್ಲಿಷ್ ಮಾಧ್ಯಮದ ಕಾನ್ವೆಂಟ್‌ಗಳಲ್ಲಿ ಓದಿಸುತ್ತಿದ್ದಾರೆ’ ಎಂದು ಕಿಡಿಕಾರಿದರು.

‘ಆಡು ಮಾತಿನಲ್ಲೇ ಕಾವ್ಯ ಕಟ್ಟುವಷ್ಟು ಸರಳ ಮತ್ತು ಸಮೃದ್ದವಾಗಿದೆ ಕನ್ನಡ ಭಾಷೆ. ಪಂಪ, ರನ್ನ, ಪೊನ್ನನಿಂದ ಹಿಡಿದು ಸಾಕಷ್ಟು ಸಾಹಿತಿಗಳು ಕನ್ನಡ ಭಾಷೆಯ ಬೆಳವಣಿಗೆಗೆ ಅಪಾರ ಕೊಡುಗೆ ನೀಡಿದ್ದಾರೆ. ಕನ್ನಡದಲ್ಲೇ ಕಲಿತ ಶಿವರಾಂ, ಕೆಂಪಯ್ಯ ಐಎಎಸ್, ಐಪಿಎಸ್ ಅಧಿಕಾರಿಗಳಾಗಿದ್ದರು. ಹೀಗಿರುವಾಗ ನಾವು ಕನ್ನಡವನ್ನು ಕಡೆಗಣಿಸುವುದು ಸರಿಯಲ್ಲ’ ಎಂದು ಅವರು ಹೇಳಿದರು.

ಅಧ್ಯಾಪಕರ ಹಾಗೂ ಶಾಲಾ ಶಿಕ್ಷಕರ ಗೃಹ ನಿರ್ಮಾಣ ಸಹಕಾರ ಸಂಘದ ರಾಜ್ಯ ಅಧ್ಯಕ್ಷ ಡಾ.ಎಂ.ಎಸ್.ಮಹದೇವಸ್ವಾಮಿ ಮಾತನಾಡಿ, ‘ರಾಜ್ಯೋತ್ಸವ ಹಬ್ಬವಾಗಿ ಆಚರಣೆಯಾದರೆ ಸಾಲದು. ಕನ್ನಡ ಭಾಷೆಯನ್ನು ಹೆಚ್ಚು ಬಳಸುವ ಮೂಲಕ ಕನ್ನಡದ ಕಂಪನ್ನು ಮತ್ತಷ್ಟು ಹೆಚ್ಚಿಸಲು ಪ್ರತಿಯೊಬ್ಬರೂ ಮುಂದಾಗಬೇಕು’ ಎಂದರು.

ವಕೀಲ ಶಿವಣ್ಣ, ಜಿಲ್ಲಾ ಕಸಾಪ ಮಾಜಿ ಅಧ್ಯಕ್ಷ ಮಡ್ಡೀಕೆರೆ ಗೋಪಾಲ್ ಸೇರಿದಂತೆ ಕನ್ನಡ ಪರ ಹೋರಾಟ ನಡೆಸಿದ 25 ಜನರಿಗೆ ‘ಕನ್ನಡದ ಹೆಮ್ಮೆಯ ಸೈನಿಕ’ ಎಂಬ ಪ್ರಶಸ್ತಿ ಪ್ರದಾನ ಮಾಡಲಾಯಿತು. ನಂತರ ಸಾಂಸ್ಕೃತಿಕ ಕಾರ್ಯಕ್ರಮ ನಡೆದವು.

ಉದ್ಯಮಿಗಳಾದ ದೊಡ್ಡಮನಿ, ಉಮೇಶ್, ಹೋಟೆಲ್ ಮಾಲೀಕ ಕುಮಾರ್, ಸಹಾಯಕ ಪ್ರಾಧ್ಯಾಪಕರಾದ ಮಣಿ, ಚಂದ್ರೇಗೌಡ, ಸಂಪತ್ ಕುಮಾರ್ ಉಪಸ್ಥಿತರಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.