ಶುಕ್ರವಾರ, ಅಕ್ಟೋಬರ್ 22, 2021
29 °C
ವಿದ್ಯುತ್ ಬೆಳಕಿನಲ್ಲಿ ಅಶ್ವಾರೋಹಿ ಪಡೆಯ ತಾಲೀಮು ಆರಂಭ

ಮೈಸೂರು: ದಸರೆಗೂ ಮುನ್ನವೇ ನಗರದಲ್ಲಿ ಜನಜಾತ್ರೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮೈಸೂರು: ದಸರಾ ಮಹೋತ್ಸವಕ್ಕೂ ಮುನ್ನವೇ ಸಾವಿರಾರು ಸಂಖ್ಯೆಯಲ್ಲಿ ಪ್ರವಾಸಿಗರು ನಗರಕ್ಕೆ ಭೇಟಿ ನೀಡಿದ್ದಾರೆ. ಶನಿವಾರ ಮತ್ತು ಭಾನುವಾರ ನಗರದ ಹೃದಯ ಭಾಗದಲ್ಲಿ ವಾಹನ ಸಂಚಾರ ಹೆಚ್ಚಿತ್ತು. ಹಲವೆಡೆ ಸಂಚಾರ ದಟ್ಟಣೆಯೂ ಉಂಟಾಗಿತ್ತು.

ಭಾನುವಾರವಂತೂ ವಿದ್ಯುತ್ ದೀಪಗಳಿಂದ ಜಘಮಘಿಸುವ ಅರಮನೆಯ ಸೌಂದರ್ಯವನ್ನು ಕಣ್ತುಂಬಿಕೊಳ್ಳಲು ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಬಂದಿದ್ದರು. ಒಂದು ಗಂಟೆಗಳಷ್ಟು ಕಾಲ ಕಣ್ಣು ಕೋರೈಸುವ ವಿದ್ಯುತ್ ಬೆಳಕಿನಲ್ಲಿ ಅರಮನೆಯ ಅಂದವನ್ನು ಸವಿದರು.

ಈ ವೇಳೆ ಅಶ್ವಾರೋಹಿ ಪಡೆಯ ಸಿಬ್ಬಂದಿಯೂ ತಮ್ಮ ಅಶ್ವಗಳ ತಾಲೀಮಿಗೆ ಬಂದಿದ್ದರು. ‘ವಿದ್ಯುತ್ ಬೆಳಕಿಗೆ, ಹೆಚ್ಚಿನ ಜನಸಂದಣಿಗೆ ಅಶ್ವಗಳು ಹೊಂದಿಕೊಳ್ಳಲು ಈ ತಾಲೀಮು ಸಹಕಾರಿಯಾಗಲಿದೆ’ ಎಂದು ಸಿಬ್ಬಂದಿಯೊಬ್ಬರು ಹೇಳಿದರು.

ನಗರದ ಅಲ್ಲಲ್ಲಿ ದೀಪಾಲಂಕಾರದ ಪರೀಕ್ಷೆಗಳೂ ನಡೆಯುತ್ತಿದ್ದವು. ಉರಿಯದ ಬಲ್ಬ್‌ಗಳ ಬದಲಾವಣೆ, ಮರುಜೋಡಣೆ, ವಿನ್ಯಾಸ ಸರಿ ಹೋಗದಿದ್ದರೆ ಮತ್ತೆ ದೀಪಗಳ ಸರವನ್ನು ತೆಗೆದು ವಿನ್ಯಾಸವನ್ನು ಮರು ಜೋಡಿಸುವ ಕಾರ್ಯಗಳನ್ನು ಪ್ರವಾಸಿ ಗರು ಕುತೂಹಲದಿಂದ ವೀಕ್ಷಿಸಿದರು.ಅಂಗಡಿ ಮುಂಗಟ್ಟುಗಳು ಜನರಿಂದ ತುಂಬಿದ್ದವು. ಸಯ್ಯಾಜಿರಾವ್ ರಸ್ತೆ, ದೇವರಾಜ ಅರಸು ರಸ್ತೆ, ಅಶೋಕ ರಸ್ತೆ, ಇರ್ವಿನ್ ರಸ್ತೆ, ಬೆಂಗಳೂರು ನೀಲಗಿರಿ ರಸ್ತೆ ಸೇರಿದಂತೆ ನಗರದ ಕೇಂದ್ರ ಭಾಗದ ರಸ್ತೆಗಳಲ್ಲಿ ವಾಹನ ಸಂದಣಿ ಹೆಚ್ಚಿತ್ತು.

ಇಂದಿನಿಂದ ಆನೆಗಳಿಗೆ 600 ಕೆ.ಜಿಗೆ ಮರಳಿನ ಮೂಟೆ: ಮರದ ಅಂಬಾರಿಯಲ್ಲಿ ಇಡುತ್ತಿದ್ದ ಮರಳಿನ ಮೂಟೆಯ ತೂಕವನ್ನು 300 ಕೆ.ಜಿಯಿಂದ 600 ಕೆ.ಜಿಗೆ ಹೆಚ್ಚಿಸುವ ಕಾರ್ಯ ಸೋಮವಾರ ನಡೆಯಲಿದೆ. ಅಭಿಮನ್ಯು ಆನೆ ಮರದ ಅಂಬಾರಿಯಲ್ಲಿ ಇಷ್ಟು ಭಾರ ಹೊತ್ತು ಹೆಜ್ಜೆ ಹಾಕಲಿದ್ದಾನೆ. ನಂತರದ ದಿನಗಳಲ್ಲಿ ಕ್ರಮವಾಗಿ ಧನಂಜಯ ಹಾಗೂ ಗೋಪಾಲಸ್ವಾಮಿ ಆನೆಗಳು ಈ ಭಾರ ಹೊರಲಿವೆ.

ಅ. 5ರಂದು ಬೆಳಿಗ್ಗೆ 11 ಗಂಟೆಗೆ ಕುಶಾಲತೋಪಿನ 2ನೇ ತಾಲೀಮು ನಡೆಯಲಿದೆ. 6ರಂದು ವಿಶ್ವ ವನ್ಯಜೀವಿ ಸಪ್ತಾಹದ ಅಂಗವಾಗಿ ಮಕ್ಕಳಿಂದ ಜಾಗೃತಿ ಜಾಥಾ ನಡೆಸುವ ಚಿಂತನೆಯೂ ನಡೆದಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.