ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೈಸೂರು: ಆ.9ಕ್ಕೆ ‘ಬಿ.ವಿ.ಕಾರಂತ ರಂಗ ಚಾವಡಿ’ ಉದ್ಘಾಟನೆ

₹8 ಲಕ್ಷ ವೆಚ್ಚದಲ್ಲಿ ನಿರ್ಮಾಣ; ಪ್ರತಿ ತಾಲ್ಲೂಕಿನಲ್ಲಿ ಚಾವಡಿ ನಿರ್ಮಿಸಲು ಆಗ್ರಹ
Last Updated 6 ಆಗಸ್ಟ್ 2021, 8:47 IST
ಅಕ್ಷರ ಗಾತ್ರ

ಮೈಸೂರು: ರಂಗಭೀಷ್ಮ ಬಿ.ವಿ.ಕಾರಂತ ಹೆಸರನ್ನು ಚಿರಸ್ಥಾಯಿಯಾಗಿ ಉಳಿಸುವ ಉದ್ದೇಶದಿಂದ ರಂಗಾಯಣದ ಆವರಣದಲ್ಲಿ ನಿರ್ಮಿಸಿರುವ ‘ಬಿ.ವಿ.ಕಾರಂತ ರಂಗ ಚಾವಡಿ’ ಆ.9ರಂದು ಬೆಳಿಗ್ಗೆ 11ಕ್ಕೆ ಉದ್ಘಾಟನೆಗೊಳ್ಳಲಿದೆ.

‘ಈ ಚಾವಡಿಯನ್ನು ಸಚಿವ ಎಸ್.ಟಿ.ಸೋಮಶೇಖರ್ ಉದ್ಘಾಟಿಸಲಿದ್ದು, ಮುಖ್ಯ ಅತಿಥಿಗಳಾಗಿ ಶಾಸಕ ಎಲ್.ನಾಗೇಂದ್ರ, ಮುಡಾ ಅಧ್ಯಕ್ಷ ಎಚ್.ವಿ.ರಾಜೀವ್ ಮತ್ತು ರಂಗಸಂಘಟಕ ಜಯರಾಂ ಪಾಟೀಲ ಭಾಗವಹಿಸಲಿದ್ದಾರೆ. ಅಂದು ಸಂಜೆ 6 ಗಂಟೆಗೆ ರಾಮಚಂದ್ರ ಹಡಪದ ನಿರ್ವಹಣೆಯಲ್ಲಿ ನಡೆಯುವ ‘ಚಾವಡಿ ಸಂಗೀತ’ ಕಾರ್ಯಕ್ರಮವನ್ನು ರಂಗಾಯಣದ ಕಲಾವಿದರು ಪ್ರಸ್ತುತಪಡಿಸಲಿದ್ದಾರೆ. 7.15ಕ್ಕೆ ‘ಭೀಷ್ಮಾರ್ಜುನ ಕಾಳಗ’ ತಾಳಮದ್ದಳೆ ಕಾರ್ಯಕ್ರಮವನ್ನು ಪುತ್ತೂರಿನ ಆಂಜನೇಯ ಮಹಿಳಾ ಯಕ್ಷಗಾನ ಸಂಘದವರು ನಡೆಸಿಕೊಡಲಿದ್ದಾರೆ. ಭಾಸ್ಕರ ಬಾರ್ಯ ನಿರ್ವಹಣೆ ಹೊಣೆ ಹೊತ್ತಿದ್ದಾರೆ’ ಎಂದು ರಂಗಾಯಣದ ನಿರ್ದೇಶಕ ಅಡ್ಡಂಡ ಸಿ.ಕಾರ್ಯಪ್ಪ ಸುದ್ದಿಗೋಷ್ಠಿಯಲ್ಲಿ ಶುಕ್ರವಾರ ತಿಳಿಸಿದರು.

ಬಿ.ವಿ.ಕಾರಂತ ರಂಗಚಾವಡಿಗೆ ಸರ್ಕಾರದ ಯಾವುದೇ ಅನುದಾನ ಬಳಸಿಲ್ಲ. ದಾನಿಗಳ ನೆರವು ಮತ್ತು ರಂಗಾಯಣದ ಸ್ವಂತ ಸಂಪನ್ಮೂಲದಿಂದ ₹8 ಲಕ್ಷ ವೆಚ್ಚದಲ್ಲಿ ನಿರ್ಮಿಸಲಾಗಿದೆ. ಭಾರತೀಯ ರಂಗಶಿಕ್ಷಣ ಸಂಸ್ಥೆಯ ವಿದ್ಯಾರ್ಥಿಗಳಿಗೆ ಯೋಗ, ಸಮರಕಲೆ, ಜನಪದ ಸೇರಿದಂತೆ ವಿವಿಧ ಕಲೆಗಳ ಕಲಿಕೆಗೆ ಬಳಸಲಾಗುತ್ತದೆ. ಸಾರ್ವಜನಿಕರ ಕಲೆ ಮತ್ತು ಸಾಹಿತ್ಯದ ಕಾರ್ಯಕ್ರಮಗಳಿಗೂ ಅವಕಾಶವಿದೆ. ರಂಗಚಾವಡಿಗೆ ಪ್ರೇಕ್ಷಕರ ಗ್ಯಾಲರಿ ನಿರ್ಮಿಸುವ ಉದ್ದೇಶವಿದೆ. ರಂಗಸಂಘಟಕ ಜಯರಾಂ ಪಾಟೀಲ ಅವರು ಆರ್ಥಿಕವಾಗಿ ಸಹಾಯ ಮಾಡಿದ್ದಾರೆ. ಇಂತಹ ಚಾವಡಿಗಳನ್ನು ಪ್ರತಿ ತಾಲ್ಲೂಕು ಕೇಂದ್ರಗಳಲ್ಲಿ ನಿರ್ಮಿಸಬೇಕು’ ಎಂದು ಆಗ್ರಹಿಸಿದರು.

ಸಾಮಾಜಿಕ ಅರಿವು– ಬೀದಿನಾಟಕ: ಕನ್ನಡ ಮತ್ತು ಸಂಸ್ಕೃತಿ ಇಲಾಖೆಯುವಿಶೇಷ ಘಟಕ ಯೋಜನೆಯಡಿ ರೂಪಿಸಿರುವ, ಸಂವಿಧಾನದ ಮುಖ್ಯ ಆಶಯಗಳ ಬಗ್ಗೆ ‘ಸಾಮಾಜಿಕ ಅರಿವು ಮೂಡಿಸುವ ಬೀದಿನಾಟಕ’ದ ಸಿದ್ಧತಾ ಶಿಬಿರವನ್ನು ಶುಕ್ರವಾರದಿಂದ ಆರಂಭಿಸಲಾಗುತ್ತಿದೆ. ಕಲಾವಿದೆ ಬಿ.ಜಿ.ಕಾತ್ಯಾಯಿನಿ ಅವರ ನಿರ್ದೇಶನದಲ್ಲಿ ನಡೆಯುತ್ತಿರುವ ಈ ಶಿಬಿರದಲ್ಲಿ ಪರಿಶಿಷ್ಟ ಜಾತಿ ಕಲಾವಿದರು ಪಾಲ್ಗೊಂಡಿದ್ದಾರೆ. 10 ದಿನಗಳವರೆಗೆ ತಾಲೀಮು ನಡೆಸಿ, ನಂತರ 10 ದಿನಗಳವರೆಗೆ ವಿವಿಧೆಡೆ ಸಂಚರಿಸಿ 20 ಪ್ರದರ್ಶನಗಳನ್ನು ನೀಡಲಿದ್ದಾರೆ ಎಂದು ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ರಂಗಾಯಣದ ಜಂಟಿ ನಿರ್ದೇಶಕ ವಿ.ಎನ್. ಮಲ್ಲಿಕಾರ್ಜುನಸ್ವಾಮಿ ಇದ್ದರು.

ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವದ ಕಾರ್ಯಕ್ರಮಗಳು

‘ಕದಡಿದ ನೀರು’: ಭಾರತೀಯ ರಂಗಶಿಕ್ಷಣ ಸಂಸ್ಥೆಯ ವಿದ್ಯಾರ್ಥಿಗಳ ಕಲಿಕೆಯ ಭಾಗವಾಗಿ 2ನೇ ನಾಟಕ‘ಕದಡಿದ ನೀರು’ ಆ.11ರಂದು ಸಂಜೆ 6.30ಕ್ಕೆ ಶ್ರೀರಂಗ ಆಪ್ತರಂಗದಲ್ಲಿ ಪ್ರದರ್ಶನಗೊಳ್ಳಲಿದೆ. ಜಿ.ಬಿ. ಜೋಶಿ ರಚನೆಯ ಈ ನಾಟಕವನ್ನು ಮಂಜು ಕಾಸರಗೋಡು ನಿರ್ದೇಶಿಸಿದ್ದಾರೆ.

ರಾಗ ರಂಗಾಯಣ: ಸ್ವಾತಂತ್ರ್ಯೋತ್ಸವ ಅಮೃತ ಮಹೋತ್ಸವದ ನೆನಪಿನಲ್ಲಿ ಆ.14ರಂದು ಸಂಜೆ 6.30ಕ್ಕೆ ಬಿ.ವಿ.ಕಾರಂತ ರಂಗಚಾವಡಿಯಲ್ಲಿ ರಂಗಾಯಣದ ಕಲಾವಿದರಿಂದ ದೇಶಭಕ್ತಿ ಗೀತ ಗಾಯನ ಕಾರ್ಯಕ್ರಮ ನಡೆಯಲಿದೆ.

ತಾಮ್ರಪತ್ರ: ಭಾರತೀಯ ರಂಗಶಿಕ್ಷಣ ಸಂಸ್ಥೆಯ ವಿದ್ಯಾರ್ಥಿಗಳ ಕಲಿಕೆಯ ಭಾಗವಾಗಿ 3ನೇ ನಾಟಕ ಆ.15ರಂದು ಸಂಜೆ 6.30ಕ್ಕೆ ಬಿ.ವಿ. ಕಾರಂತ ರಂಗಚಾವಡಿಯಲ್ಲಿ ದೇವಾಶಿಷ ಮುಜುಮದಾರ್ ರಚನೆಯ ಅಪೂರ್ವ ಆನಗಳ್ಳಿ ಅವರು ನಿರ್ದೇಶನದಲ್ಲಿ ‘ತಾಮ್ರಪತ್ರ’ ನಾಟಕ ಪ್ರದರ್ಶನಗೊಳ್ಳಲಿದೆ.

ಆನ್‌ಲೈನ್‌ನಲ್ಲಿ ಕಾರ್ಯಕ್ರಮಗಳ ಪ್ರಸಾರ

ಈ ಎಲ್ಲಾ ಕಾರ್ಯಕ್ರಮಗಳು ಫೇಸ್‌ಬುಕ್ ಲೈವ್ ಕಾರ್ಯಕ್ರಮಗಳಾಗಿವೆ. ಸಾರ್ವಜನಿಕರಿಗೆ ಪ್ರವೇಶವಿಲ್ಲ. ರಂಗಾಯಣದ ವೆಬ್‌ಸೈಟ್ ಮತ್ತು ಫೇಸ್‌ಬುಕ್ ಲೈವ್‌ನಲ್ಲಿ ಕಾರ್ಯಕ್ರಮಗಳು ಪ್ರಸಾರಗೊಳ್ಳಲಿವೆ.

‘ರಂಗಾಯಣಕ್ಕೆ ನೀಡಿದ್ದು ₹60 ಲಕ್ಷ’

‘ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಪ್ರತಿ ವರ್ಷ ಸುಮಾರು ₹4 ಕೋಟಿ ಅನುದಾನ ನೀಡುತ್ತಿತ್ತು. ಕೋವಿಡ್‌ ಕಾರಣದಿಂದ ಈ ವರ್ಷ ಕೇವಲ ₹60 ಲಕ್ಷ ನೀಡಿದೆ. ಇದರಿಂದ ತೀರಾ ಕಷ್ಟವಾಗಿದೆ. ನಿರ್ವಹಣೆ, ಸಿಬ್ಬಂದಿಯ ವೇತನ ಭರಿಸಲು ಸಾಧ್ಯವಾಗದ ಸ್ಥಿತಿ ಇದೆ. ಕಾರ್ಯಕ್ರಮಗಳನ್ನು ಉಚಿತವಾಗಿ ಪ್ರದರ್ಶಿಸಲು ತೊಡಕಾಗಿದೆ’ ಎಂದು ಅಡ್ಡಂಡ ಕಾರ್ಯಪ್ಪ ತಿಳಿಸಿದರು.

‘ಪರ್ವ ನಾಟಕ 7 ಪ್ರದರ್ಶನಗಳನ್ನು ಕಂಡಿದ್ದು, ₹9.25 ಲಕ್ಷ ಸಂಗ್ರಹವಾಗಿತ್ತು. ಈ ನಾಟಕವನ್ನು ಆ.21ರಿಂದ ಮರು ಪ್ರದರ್ಶಿಸಲು ಉದ್ದೇಶಿಸಲಾಗಿದೆ’ ಎಂದರು.

‘ಕೆ–ಸೆಟ್‌: ರಂಗಭೂಮಿ ನಿರ್ಲಕ್ಷ್ಯಕ್ಕೆ ಖಂಡನೆ’

‘ಮೈಸೂರು ವಿಶ್ವವಿದ್ಯಾನಿಲಯ ನಡೆಸಿದ ಕೆ–ಸೆಟ್‌ ಪರೀಕ್ಷೆಯಲ್ಲಿ ಪ್ರದರ್ಶಕ ಕಲೆಗಳ ವಿಷಯದಲ್ಲಿ ರಂಗಭೂಮಿ, ನಾಟಕ, ಸಂಗೀತ, ನೃತ್ಯಕ್ಕೆ ಸಂಬಂಧಿಸಿದ ಪ್ರಶ್ನೆಗಳನ್ನು ಕೇಳಬೇಕಿತ್ತು. ಆದರೆ, ಸಂಗೀತ ಮತ್ತು ನೃತ್ಯಕ್ಕೆ ಸಂಬಂಧಿಸಿದ ಶೇ 80ರಷ್ಟು ಪ್ರಶ್ನೆಗಳಿದ್ದವು. ರಂಗಭೂಮಿಯನ್ನು ನಿರ್ಲಕ್ಷಿಸಿರುವುದು ಖಂಡನೀಯ’ ಎಂದು ಅಡ್ಡಂಡ ಕಾರ್ಯಪ್ಪ ಅಸಮಾಧಾನ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT