ಮಂಗಳವಾರ, ನವೆಂಬರ್ 24, 2020
25 °C
ತಾರಕ ಎಡ ಹಾಗೂ ಬಲದಂಡೆ ನಾಲೆಯಿಂದ ನೀರು ಬಿಟ್ಟರೂ ಪ್ರಯೋಜನವಿಲ್ಲ: ಆರೋಪ

ಕಾಲುವೆ ಹೂಳು ತೆಗೆಯಲು ಒತ್ತಾಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಎಚ್.ಡಿ.ಕೋಟೆ: ‘ತಾಲ್ಲೂಕಿನ ತಾರಕ ಎಡದಂಡೆ ಮತ್ತು ಬಲದಂಡೆ ನಾಲೆಯಲ್ಲಿ ನೀರು ಬಿಟ್ಟರೂ ಕಿರು ಕಾಲುವೆಗಳಲ್ಲಿ ಹೂಳು ತುಂಬಿಕೊಂಡು ಸರಾಗವಾಗಿ ಹರಿಯುತ್ತಿಲ್ಲ’ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

‘ತಾಲ್ಲೂಕಿನ ದಾಸನಪುರ ಸೇರಿದಂತೆ ಬಹುತೇಕ ಹಳ್ಳಿಗಳ ರೈತರು ಕಿರು ಕಾಲುವೆ ನೀರನ್ನೇ ನಂಬಿ ಕೃಷಿ ಮಾಡುತ್ತಿದ್ದಾರೆ. ಕಾಲುವೆಯಲ್ಲಿ ಕಳೆ ಗಿಡಗಳು ಬೆಳೆದು, ಹೂಳು ತುಂಬಿ ಸರಿಯಾಗಿ ನೀರು ಹರಿಯದೇ ರೈತರ ಸ್ಥಿತಿ ಚಿಂತಾಜನಕವಾಗಿದೆ. ಸಂಬಂಧಪಟ್ಟ ಅಧಿಕಾರಿಗಳು ಸಮಸ್ಯೆ ಬಗೆಹರಿಸಬೇಕು’ ಎಂದು ರೈತ ಮುಖಂಡ ಬಾಲಚಂದ್ರ ಒತ್ತಾಯಿಸಿದ್ದಾರೆ.

‘ಪ್ರತಿ ವರ್ಷ ಜೂನ್‌ ತಿಂಗಳಲ್ಲಿ ನೀರು ಬಿಡುವ ಮುನ್ನ ಅಧಿಕಾರಿಗಳು ನಾಮಕಾವಸ್ಥೆಗೆ ಟೆಂಡರ್ ಕರೆದು ಕಾಮಗಾರಿ ಮಾಡಿಸುತ್ತಾರೆ. ಕಿರು ಕಾಲುವೆಗಳಲ್ಲಿ ಮಾತ್ರ ಹೂಳು ಎತ್ತುವುದೇ ಇಲ್ಲ. ಸರಿಯಾಗಿ ಕೆಲಸ ಮಾಡದೇ ಹಣ ಬಿಡುಗಡೆ ಮಾಡಿಕೊಂಡು ಸರ್ಕಾರದ ಅನುದಾನ ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ’ ಎಂದು ಅವರು
ದೂರಿದರು.

‘ಗುತ್ತಿಗೆದಾರರು ಪ್ರಮುಖ ಕಾಲುವೆಗಳಲ್ಲಿ ಕೆಲಸ ಮಾಡಿ ಹೋಗುತ್ತಾರೆ, ಈ ಬಗ್ಗೆ ರೈತರು ಕೇಳಿದರೆ ಬೇರೆಯವರಿಗೆ ಟೆಂಡರ್‌ ಆಗಿದೆ ಎಂದು ಸಬೂಬು ಹೇಳುತ್ತಾರೆ’ ಎಂದು ಗ್ರಾಮದ ನಿಂಗೇಗೌಡ ಆಕ್ರೋಶ ವ್ಯಕ್ತಪಡಿಸಿದರು.

‘ತಾರಕ ಜಲಾಶಯದಲ್ಲಿ ನೀರು ತುಂಬಿದಾಗ ತಮ್ಮ ಜಮೀನುಗಳಿಗೆ ನೀರು ಬರುತ್ತದೆ, ಉತ್ತಮ ಬೇಸಾಯ ಮಾಡಬಹುದು ಎಂದು ಆಸೆಯಿಂದ ಕಾಯುತ್ತಿದ್ದರೂ ಕೆಲ ಭಾಗಗಳಿಗೆ ನೀರು ಹರಿಯುವುದೇ ಇಲ್ಲ. ಇದರಿಂದಾಗಿ ಬೇಸಾಯ ಮಾಡಲು ಸಾಧ್ಯವಾಗದ ಸ್ಥಿತಿ ನಿರ್ಮಾಣ ಆಗಿದೆ’ ಎಂದು ನಾಗರಾಜು ಅಳಲು ತೋಡಿಕೊಂಡರು.

‘ಶೀಘ್ರದಲ್ಲೇ ಕಾಲುವೆಗಳ ಹೂಳು ಎತ್ತಿದರೆ ರೈತರು ಭತ್ತ ಸೇರಿದಂತೆ ಇತರೆ ಬೆಳೆಗಳನ್ನು ಬೆಳೆಯಲು ಸಹಕಾರವಾಗುತ್ತದೆ. ಇಲ್ಲದಿದ್ದರೆ  ಸಾಲ ಮಾಡಿ ಬಿತ್ತನೆ ಮಾಡಿರುವ ಫಸಲು ನಷ್ಟವಾಗುತ್ತದೆ’ ಎಂದು ರೈತ ಸಿದ್ದನಾಯಕ ಬೇಸರ ವ್ಯಕ್ತಪಡಿಸಿದರು.

ನಿಂಗೇಗೌಡ, ದೊಡ್ಡತಮ್ಮನಾಯಕ, ಚಿನ್ನಪ್ಪ ಸೇರಿದಂತೆ ಇತರೆ ರೈತರು ನೀರಾವರಿ ಇಲಾಖೆಯ ಅಧಿಕಾರಿಗಳ ವಿರುದ್ಧ ಹೋರಾಟ ಮಾಡುವ ಎಚ್ಚರಿಕೆ ನೀಡಿದ್ದಾರೆ.

‘ಯಾವ ಭಾಗಗಳಲ್ಲಿ ಸಮಸ್ಯೆ ಇದೆ ಎಂಬುದನ್ನು ರೈತರು ನಮ್ಮ ಗಮನಕ್ಕೆ ತಂದರೆ ಅಂತಹ ಕಡೆಗಳಲ್ಲಿ ಸಾಧ್ಯವಾದಷ್ಟೂ ಸರಿ ಮಾಡುತ್ತೇವೆ’ ಎಂದು ತಾರಕ ಜಲಾಶಯದ ಸಹಾಯಕ ಎಂಜಿನಿಯರ್‌ ಮಂಜುನಾಥ್‌ ತಿಳಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.