ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಂಬೂಸವಾರಿ ಅಂತಿಮ ತಾಲೀಮು ಯಶಸ್ವಿ

21 ಬಾರಿ ಸಿಡಿದ ಕುಶಾಲತೋಪು, ಗುರಿಮುಟ್ಟಿದ ಗಜಪಡೆ
Last Updated 14 ಅಕ್ಟೋಬರ್ 2021, 3:26 IST
ಅಕ್ಷರ ಗಾತ್ರ

ಮೈಸೂರು: ವಿಶ್ವವಿಖ್ಯಾತ ಜಂಬೂಸವಾರಿಯ ಅಂತಿಮ ತಾಲೀಮು ಅರಮನೆಯಲ್ಲಿ ಬುಧವಾರ ಯಶಸ್ವಿಯಾಯಿತು.

ನಗರ ಪೊಲೀಸ್ ಕಮಿಷನರ್ ಡಾ.ಚಂದ್ರಗುಪ್ತ ಆನೆಗಳಿಗೆ ಪುಷ್ಪಾರ್ಚನೆ ಮಾಡಿ ತಾಲೀಮಿನ ಮೆರವಣಿಗೆಗೆ ಚಾಲನೆ ನೀಡಿದರು. ಅಭಿಮನ್ಯು ಆನೆಯು ಕಾವೇರಿ ಮತ್ತು ಚೈತ್ರಾ ಆನೆಗಳೊಂದಿಗೆ ರಾಜಗಾಂಭೀರ್ಯದಿಂದ ಹೆಜ್ಜೆ ಹಾಕಿತು.

ಅದಕ್ಕೂ ಮುನ್ನ ಅಂಬಾರಿ ಕಟ್ಟುವ ಅಟ್ಟಣಿಗೆಯ ಮಧ್ಯೆ ಆನೆ ನಿಲ್ಲಿಸಿ, ಅಂಬಾರಿ ಕಟ್ಟಿದಂತೆ, ಅತಿಥಿಗಳಿಗೆ ಆನೆಗಳು ಆಶೀರ್ವದಿಸಿದಂತೆ ಅಣಕು ಪ್ರದರ್ಶನವೂ ನಡೆಯಿತು. ಕರ್ನಾಟಕ ಪೊಲೀಸ್ ಬ್ಯಾಂಡಿನ ಸುಶ್ರಾವ್ಯ ಸಂಗೀತದೊಂದಿಗೆ ಅರಮನೆ ಮುಂಭಾಗಕ್ಕೆ ಗಜಪಡೆಗಳು ಬಂದವು. ಪುಷ್ಪಾರ್ಚನೆ ಮಾಡುವ ಅಟ್ಟಣಿಗೆಯ ಮುಂದೆ ಯಾವ ಜಾಗದಲ್ಲಿ ಆನೆಗಳನ್ನು ನಿಲ್ಲಿಸಬೇಕು ಎಂದು ಡಿಸಿಎಫ್ ವಿ.ಕರಿಕಾಳನ್ ಮಾವುತರಿಗೆ ಸ್ಪಷ್ಟ ಸೂಚನೆ ನೀಡಿದರು.

ಪುಷ್ಪಾರ್ಚನೆ ಮಾಡುತ್ತಿದ್ದಂತೆ ರಾಷ್ಟ್ರಗೀತೆ ಮೊಳಗಿತು. ರಾಷ್ಟ್ರಗೀತೆ ಕೇಳಿ ಬರುವ 56 ನಿಮಿಷಗಳಲ್ಲಿ 21 ಬಾರಿ ಕುಶಾಲತೋಪುಗಳನ್ನು ಅರಮನೆಯ ಹೊರ ಆವರಣದಲ್ಲಿ ನಗರ ಸಶಸ್ತ್ರ ಮೀಸಲು ಪಡೆಯ ಸಿಬ್ಬಂದಿ ಸಿಡಿಸಿದರು. ಅದಕ್ಕೆ ಆನೆಗಳು ಬೆದರದೇ ಗಜಗಾಂಭೀರ್ಯದಿಂದಲೇ ನಿಂತಿದ್ದು ಗಮನ ಸೆಳೆಯಿತು.

ನಂತರ, ಪೊಲೀಸ್ ಬ್ಯಾಂಡಿನ ಸಂಗೀತದೊಂದಿಗೆ ಧ್ವಜಗಳನ್ನು ಹಿಡಿದ ಅಶ್ವಾರೋಹಿ ಪಡೆ, ಕೆಎಸ್‌ಆರ್‌ಪಿಯ 2 ತುಕಡಿಗಳ ಪಥಸಂಚಲನವು ಬಲರಾಮ ದ್ವಾರದವರೆಗೂ ನಡೆಯಿತು. ನಿಗದಿತ ಸಮಯಕ್ಕೆ ಮೆರವಣಿಗೆ ಪೂರ್ಣಗೊಂಡಿತು. ಅದೇ ವೇಳೆ ಅರಮನೆಯ ಆವರಣದಲ್ಲಿನ ಸಿದ್ಧತಾ ಕಾರ್ಯಗಳನ್ನು ಚಂದ್ರಗುಪ್ತ ಪರಿಶೀಲಿಸಿದರು.

6 ಆನೆಗಳು: ‘ಕರೆ ತಂದಿರುವ 8 ಆನೆಗಳ ಪೈಕಿ ಜಂಬೂಸವಾರಿಯಲ್ಲಿ 6 ಆನೆಗಳನ್ನು ಮಾತ್ರ ಬಳಸಲು ನಿರ್ಧರಿಸಲಾಗಿದೆ’ ಎಂದು ಡಿಸಿಎಫ್ ವಿ.ಕರಿಕಾಳನ್ ತಿಳಿಸಿದರು.

‘ಅಭಿಮನ್ಯು ಅಂಬಾರಿ ಹೊತ್ತರೆ, ಅದರ ಅಕ್ಕ ಪಕ್ಕ ಕಾವೇರಿ ಹಾಗೂ ಚೈತ್ರಾ ಆನೆಗಳು ನಡೆಯಲಿವೆ. ನಿಶಾನೆ ಆನೆಯಾಗಿ ಧನಂಜಯ ಹಾಗೂ ನೌಫತ್ ಆನೆಯಾಗಿ ಗೋಪಾಲಸ್ವಾಮಿ ಇರಲಿವೆ. ಅಶ್ವತ್ತಾಮ ಆನೆಯೂ ಪಾಲ್ಗೊಳ್ಳಲಿದೆ’ ಎಂದರು.

‘ವಿಕ್ರಮ ಆನೆಗೆ ಮದ ಇನ್ನೂ ಕಡಿಮೆಯಾಗಿಲ್ಲ. ಇದರಿಂದ ಮೆರವಣಿಗೆಯಿಂದ ಆತನನ್ನು ಹಾಗೂ ಲಕ್ಷ್ಮೀ ಆನೆಯನ್ನೂ ಸಂಪೂರ್ಣವಾಗಿ ಹೊರಗಿಡಲಾಗುತ್ತದೆ’ ಎಂದು ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT