ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಷ್ಟ್ರೀಯ ಶಿಶಿಕ್ಷು ಮೇಳ: ಕೆಲಸ ಖಾಲಿ ಇದೆ ಅಭ್ಯರ್ಥಿಗಳಿಲ್ಲ!

ಉದ್ದಿಮೆದಾರರೊಂದಿಗೆ ಸಂವಾದ
Last Updated 5 ಅಕ್ಟೋಬರ್ 2021, 6:18 IST
ಅಕ್ಷರ ಗಾತ್ರ

ಮೈಸೂರು: ‘ಸೂಕ್ಷ್ಮ ಮತ್ತು ಸಣ್ಣ ಕೈಗಾರಿಕೆಗಳಲ್ಲಿ ಕೆಲಸಗಳು ಖಾಲಿ ಇವೆ. ಆದರೆ, ಸೂಕ್ತ ಅಭ್ಯರ್ಥಿಗಳೇ ಸಿಗುತ್ತಿಲ್ಲ’

–ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ಇಲಾಖೆಯು ನಗರದ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ಸೋಮವಾರ ಏರ್ಪಡಿಸಿದ್ದ ‘ರಾಷ್ಟ್ರೀಯ ಶಿಶಿಕ್ಷು ಮೇಳ ಹಾಗೂ ಉದ್ದಿಮೆದಾರರೊಂದಿಗೆ ಸಂವಾದದಲ್ಲಿ ಪಾಲ್ಗೊಂಡ ಹಲವು ಉದ್ದಿಮೆದಾರರು ಹೀಗೆ ಅಭ್ಯರ್ಥಿಗಳ ಕೊರತೆಯ ಕಡೆಗೆ ಗಮನ ಸೆಳೆದರು.

‘ಐಟಿಐ ಮುಗಿಸಿದ ಅಭ್ಯರ್ಥಿಗಳು ಎಲ್ಲಿಗೆ ಹೋಗುತ್ತಿದ್ದಾರೆ ಎಂಬುದೇ ಗೊತ್ತಾಗುತ್ತಿಲ್ಲ. ಹಲವರು ಡಿಪ್ಲೊಮಾ ನಂತರ ಎಂಜಿನಿಯರಿಂಗ್ ಕಡೆಗೆ ಆಸಕ್ತಿ ತೋರುತ್ತಿದ್ದಾರೆ. ಆದರೆ, ಸೂಕ್ಷ್ಮ ಮತ್ತು ಸಣ್ಣ ಕೈಗಾರಿಕೆಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಎಂಜಿನಿಯರ್‌ಗಳ ಅಗತ್ಯ ಇಲ್ಲ’ ಎಂದು ಉದ್ಯಮಿ ಎನ್.ಸತೀಶ್‌ಹೇಳಿದರು.

‘ಮಿಷನಿಸ್ಟ್, ಫಿಟ್ಟರ್‌ ಸೇರಿದಂತೆ ಐಟಿಐ ತರಬೇತಿ ಪಡೆದವರೇ ಹೆಚ್ಚು ಬೇಕಾಗಿದ್ದಾರೆ’ ಎಂಬ ಅವರ ಮಾತಿಗೆ ಮತ್ತೊಬ್ಬ ಉದ್ಯಮಿ ಮಂಜುನಾಥ್ ದನಿಗೂಡಿಸಿದರು.

ಅವರಿಗೆ ಪ್ರತಿಕ್ರಿಯಿಸಿದ, ಕೌಶಲ ಅಭಿವೃದ್ಧಿ ಸಚಿವ ಡಾ.ಸಿ.ಎನ್‌.ಅಶ್ವತ್ಥ ನಾರಾಯಣ, ’ಉದ್ಯೋಗದಾತರು ಮತ್ತು ಉದ್ಯೋಗಾಂಕ್ಷಿಗಳನ್ನು ಬೆಸೆಯ ಲೆಂದೇ ‘ಸ್ಕಿಲ್ ಕನೆಕ್ಟ್’ ವೆಬ್‌ಸೈಟ್ ಅನ್ನು ರೂಪಿಸಲಾಗಿದೆ. ಉದ್ಯಮಿಗಳು ಖಾಲಿ ಇರುವ ಉದ್ಯೋಗಗಳ ಕುರಿತ ಮಾಹಿತಿಯನ್ನು ನೀಡಿದರೆ ಅಭ್ಯರ್ಥಿ ಗಳು ಸಿಗುತ್ತಾರೆ’ ಎಂದು ಹೇಳಿದರು.

‘ಜಿಲ್ಲಾ ಕೌಶಲ ಅಭಿವೃದ್ಧಿ ಅಧಿಕಾರಿಗಳು ಸ್ಕಿಲ್ ಕನೆಕ್ಟ್ ವೆಬ್‌ಸೈಟ್‌ಗೆ ಉದ್ಯಮಿಗಳನ್ನು ನೋಂದಾಯಿಸಬೇಕು. ಅಭ್ಯರ್ಥಿಗಳೂ ವಿವರಗಳನ್ನು ದಾಖಲಿಸ ಬೇಕು. ಆ ಕುರಿತು ಹೆಚ್ಚಿನ ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸಬೇಕು’ ಎಂದು ತಿಳಿಸಿದರು.

ಸಂಸ್ಥೆಯ ತರಬೇತುದಾರ ಗೋವಿಂದರಾಜು ಮಾತನಾಡಿ, ‘ಟೂಲ್‌ಕಿಟ್‌ ಹಾಗೂ ಸಮವಸ್ತ್ರಗಳನ್ನು ಎಲ್ಲ ಜಾತಿಯ ಬಡವರಿಗೂ ನೀಡಬೇಕು’ ಎಂದು ಮನವಿ ಮಾಡಿದರು. ಬೇಡಿಕೆಯನ್ನು ಪರಿಶೀಲಿಸಲಾಗುವುದು ಎಂದು ಸಚಿವರು ಭರವಸೆ ನೀಡಿದರು.

ಮಣಿಸುಂದರ್ ಎಂಬುವವರು ಮಾತನಾಡಿ, ‘2018ರಲ್ಲಿ ಸ್ಕಿಲ್ ಡೆವಲಪ್‍ಮೆಂಟ್ ಕಾರ್ಯಕ್ರಮದಲ್ಲಿ ಗೇಮ್ ಆ್ಯಪ್ ಡೆವಲಪ್‍ಮೆಂಟ್ ಕುರಿತ ತರಬೇತಿಗೆ ನೋಂದಾಯಿಸಿಕೊಂಡಿದ್ದೆ. ಇದುವರೆವಿಗೂ ಪ್ರತಿಕ್ರಿಯೆ ದೊರೆತಿಲ್ಲ’ ಎಂದು ದೂರಿದರು.

‘ಜಿಲ್ಲೆಯಲ್ಲಿ ಐಟಿ, ಬಿಟಿ, ಸಂಶೋಧನಾ ಮತ್ತು ಅಭಿವೃದ್ಧಿ ಸಂಸ್ಥೆ ಹಾಗೂ ಭಾರತೀಯ ವಿಜ್ಞಾನ ಸಂಸ್ಥೆಯನ್ನು ಇಲ್ಲಿ ಸ್ಥಾಪಿಸಬೇಕು’ ಎಂಬಮೈಸೂರು ವಾಣಿಜ್ಯ ಮತ್ತು ಕೈಗಾರಿಕೆ ಸಂಸ್ಥೆಯ ಅಧ್ಯಕ್ಷ ಸತೀಶ್‌ ಮನವಿಗೆ ಸ್ಪಂದಿಸಿದ ಸಚಿವರು, ‘ಆ ನಿಟ್ಟಿನಲ್ಲಿ ಪ್ರಯತ್ನ ನಡೆದಿದೆ’ಎಂದರು.

ಅಂಪ್ರೆಟಿಷಿಪ್‌ಗೆ ಆಯ್ಕೆಯಾದವರಿಗೆ ಪ್ರಮಾಣಪತ್ರ ವಿತರಿಸಲಾಯಿತು. ಪಾಲಿಕೆ ಸದಸ್ಯ ಮಹಮ್ಮದ್ ‌ರಫೀಕ್, ವಸ್ತು ಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷ ಹೇಮಂತ್‍ಕುಮಾರ್‌ ಗೌಡ, ಮೈಸೂರು ಕೈಗಾರಿಕೆಗಳ ಸಂಘದ ಪ್ರಧಾನ ಕಾರ್ಯದರ್ಶಿ ಸುರೇಶ್‍ಕುಮಾರ್ ಜೈನ್, ಜಿಲ್ಲಾ ಕೌಶಲಾಭಿವೃದ್ಧಿ ಅಧಿಕಾರಿ ಎಸ್.ಜಗನ್ನಾಥ್, ಉದ್ಯೋಗಾಧಿಕಾರಿ ರಾಣಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT