ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೆಪಿಎನ್‌ ಸಮಾಜ ಸಂಘಟಕ: ಹೃದಯ ಶ್ರೀಮಂತ

ಜೆಪಿಎನ್‌ಪಿ ಪ್ರತಿಷ್ಠಾನದಿಂದ ಜೆ.ಪಿ.ನಾರಾಯಣಸ್ವಾಮಿ ಜನ್ಮ ದಿನಾಚರಣೆ: ಸೇವೆಯ ಬಣ್ಣನೆ
Last Updated 2 ಫೆಬ್ರುವರಿ 2021, 15:25 IST
ಅಕ್ಷರ ಗಾತ್ರ

ಮೈಸೂರು: ಜೆ.ಪಿ.ನಾರಾಯಣಸ್ವಾಮಿ ಪ್ರತಿಷ್ಠಾನದಿಂದ ಮಂಗಳವಾರ ಉದ್ಯಮಿ ದಿ.ಜೆ.ಪಿ.ನಾರಾಯಣಸ್ವಾಮಿ ಅವರ 69ನೇ ಜನ್ಮ ದಿನವನ್ನು ಆಚರಿಸಲಾಯಿತು.

ಮೈಸೂರು–ಚಾಮರಾಜನಗರ ಜಿಲ್ಲಾ ಆರ್ಯ ಈಡಿಗರ ಸಂಘ ಹಾಗೂ ನೂತನ ವಿದ್ಯಾರ್ಥಿ ನಿಲಯದ ಕಟ್ಟಡ ನಿರ್ಮಾಣ ಕಾರ್ಯಕಾರಿ ಸಮಿತಿಯೂ ಜೆಪಿಎನ್‌ ಜನ್ಮದಿನದ ಸಡಗರದಲ್ಲಿ ಭಾಗಿಯಾಯಿತು.

ಶ್ರವಣದೋಷವುಳ್ಳ ಹಾಗೂ ಅಂಧ ಮಕ್ಕಳ ಶಾಲೆಯ ಮಕ್ಕಳಿಗೆ ಜೆಪಿಎನ್‌ ಜನ್ಮದಿನದ ಅಂಗವಾಗಿ ಊಟದ ವ್ಯವಸ್ಥೆ ಮಾಡಲಾಗಿತ್ತು. ದಾನಿಗಳ ಸಹಕಾರದಿಂದ 40 ಸೊಳ್ಳೆ ಪರದೆ ಹಾಗೂ ಕೃಷಿ ಪರಿಕರಗಳನ್ನು ರೈತರಿಗೆ ವಿತರಿಸಿದ್ದು ವಿಶೇಷವಾಗಿತ್ತು.

ಜಿಲ್ಲಾ ಆರ್ಯ ಈಡಿಗ ವಿದ್ಯಾರ್ಥಿ ನಿಲಯದಲ್ಲಿ ಸಂಜೆ ನಡೆದ ಸಮಾರಂಭದಲ್ಲಿ ಮಾತನಾಡಿದ ಸಂಘದ ಅಧ್ಯಕ್ಷ ಡಾ.ಎಂ.ಕೆ.ಪೋತರಾಜ್, ‘ಸ್ವಾತಂತ್ರ್ಯ ಪೂರ್ವದಲ್ಲೇ ಈಡಿಗರ ಸಂಘ ಸ್ಥಾಪನೆಯಾಗಿದ್ದರೂ, ಅದಕ್ಕೊಂದು ಸ್ಪಷ್ಟ ರೂಪುರೇಷೆ ಸಿಕ್ಕಿದ್ದು ತೊಂಬತ್ತರ ದಶಕದ ಬಳಿಕ. ಅದೂ ಜೆ.ಪಿ.ನಾರಾಯಣಸ್ವಾಮಿ ಅಧ್ಯಕ್ಷರಾದ ನಂತರವಷ್ಟೇ’ ಎಂದರು.

‘ತಮ್ಮ ಸಾವು ಸಮೀಪಿಸುತ್ತಿರುವುದನ್ನು ಅರಿತ ಜೆಪಿಎನ್‌ ಸಮಾಜಕ್ಕಾಗಿ ಏನೇನು ಮಾಡಬೇಕು ಎಂಬ ರೂಪುರೇಷೆ ತಯಾರಿಸಿದರು. ಸಮುದಾಯದ ಹೆಣ್ಣು ಮಕ್ಕಳ ಶಿಕ್ಷಣಕ್ಕಾಗಿ ಅಹರ್ನಿಶಿ ದುಡಿದರು. ಸಮಾಜಕ್ಕೆ ಯಾವ ರೀತಿ ಸಹಕಾರ ನೀಡಬೇಕು ಎಂಬುದನ್ನು ಅವರಿಂದ ಕಲಿಯಬೇಕು. ಅವರಲ್ಲಿದ್ದ ಸಂಘಟನಾ ಚಾತುರ್ಯವನ್ನು ಯುವ ಸಮೂಹ ಮೈಗೂಡಿಸಿಕೊಳ್ಳಬೇಕು’ ಎಂದು ಹೇಳಿದರು.

ರಂಗಕರ್ಮಿ ರಾಜಶೇಖರ ಕದಂಬ ಮಾತನಾಡಿ ‘ಬಡತನ ಅನುಭವಿಸಿದ್ದ ಜೆಪಿಎನ್‌, ಬಡವರಿಗೆ ಸದಾ ಸ್ಪಂದಿಸುತ್ತಿದ್ದರು. ಅನಾರೋಗ್ಯ ಪೀಡಿತರನ್ನು ಎಂದೂ ಬರಿಗೈಲಿ ಕಳಿಸಿದ ನಿದರ್ಶನಗಳಿಲ್ಲ. ಈಡಿಗ ಸಮಾಜದ ಮಠ ಸ್ಥಾಪನೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಸಮುದಾಯದ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ವಿವಿಧೆಡೆ ಹಾಸ್ಟೆಲ್‌ ನಿರ್ಮಿಸುವ ಜೊತೆ, ತರಬೇತಿಯನ್ನು ಕೊಡಿಸಿದರು. ಅವರ ಈ ಎಲ್ಲ ಕೆಲಸಗಳನ್ನು ಇದೀಗ ಜೆಪಿಎನ್‌ಪಿ ಮುಂದುವರೆಸುತ್ತಿದೆ’ ಎಂದರು.

ವಿದ್ಯಾಸಾಗರ ಕದಂಬ ಮಾತನಾಡಿ ‘ಬಡವರ ಕಲ್ಯಾಣಕ್ಕಾಗಿ ಶ್ರಮಿಸಿದವರು ಜೆಪಿಎನ್. ಗ್ರಾಮೀಣ ಭಾಗದ ಬಡ ವಿದ್ಯಾರ್ಥಿಗಳಿಗಾಗಿ ಹಾಸ್ಟೆಲ್‌ ಸ್ಥಾಪಿಸಿದರು. ಈಡಿಗ ಸಮಾಜದ ಛಾಪನ್ನು ಬಿಂಬಿಸಿದವರು ನಾರಾಯಣಸ್ವಾಮಿ’ ಎಂದು ಬಣ್ಣಿಸಿದರು.

ಸೌಭಾಗ್ಯ ನಾಗರಾಜು ಮಾತನಾಡಿ ‘ಸರಳ, ಸಜ್ಜನಿಕೆಯನ್ನು ಮೈಗೂಡಿಸಿಕೊಂಡಿದ್ದ ಜೆಪಿಎನ್‌ ನಿಷ್ಠುರಿಯಾಗಿದ್ದರು. ದಾನದ ವಿಷಯದಲ್ಲಿ ಉದಾರಿಯಾಗಿದ್ದರು. ಈಡಿಗ ಸಮಾಜದ ಏಳ್ಗೆಗಾಗಿ ದುಡಿದರು’ ಎಂದರು.

ಪ್ರತಿಷ್ಠಾನದ ಮುಖ್ಯ ಸಂಚಾಲಕ ವಿ.ಜಯಣ್ಣ ಜೆಪಿಎನ್‌ ಬದುಕಿನ ಚಿತ್ರಣ ಬಿಂಬಿಸಿದರು. ಗೋವಿಂದರಾಜ್, ಶರತ್‌ ಕಾಳಪ್ಪ ಸೇರಿದಂತೆ ಜಿಲ್ಲೆಯ ವಿವಿಧೆಡೆಯಿರುವ ಸಮುದಾಯದ ಪ್ರಮುಖರು ಜನ್ಮದಿನಾಚರಣೆ ಸಮಾರಂಭದಲ್ಲಿದ್ದರು.‌‌‌‌‌

ಹಾಸ್ಟೆಲ್‌ ನಿರ್ಮಾಣ: ದೇಣಿಗೆಗೆ ಮನವಿ
ಗ್ರಾಮೀಣ ಬಡ ವಿದ್ಯಾರ್ಥಿಗಳಿಗಾಗಿ ಮೈಸೂರಿನ ವಿಜಯನಗರದ ಮೂರನೇ ಹಂತದಲ್ಲಿ ಈಡಿಗರ ಸಂಘದಿಂದ ₹ 4 ಕೋಟಿ ವೆಚ್ಚದಲ್ಲಿ ಹಾಸ್ಟೆಲ್‌ ನಿರ್ಮಿಸಲಾಗುತ್ತಿದೆ. ಶೇ 80ರಷ್ಟು ಕಾಮಗಾರಿ ಮುಗಿದಿದೆ. ಈ ವರ್ಷದೊಳಗೆ ಕಟ್ಟಡ ಉದ್ಘಾಟಿಸಬೇಕಿದ್ದು, ಸಮಾಜದ ಜನರು, ದಾನಿಗಳು ಹೆಚ್ಚಿನ ನೆರವು ನೀಡಬೇಕು ಎಂದು ಸಂಘದ ಅಧ್ಯಕ್ಷ ಪೋತರಾಜು ಸಭೆಯಲ್ಲೇ ಮನವಿ ಮಾಡಿದರು.

ಸಂಘದ ಸದಸ್ಯರು ನಿಮ್ಮ ಭಾಗಕ್ಕೆ ಬಂದಾಗ ಸಹಕಾರ ನೀಡಿ. ಹೆಚ್ಚಿನ ದೇಣಿಗೆ ಸಂಗ್ರಹಿಸಿಕೊಡಿ ಎಂದು ಸಮಾರಂಭದಲ್ಲಿ ನೆರೆದಿದ್ದ ವಿವಿಧ ಭಾಗದ ಮುಖಂಡರಲ್ಲಿ ಮನವಿ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT