ಮಂಗಳವಾರ, ಸೆಪ್ಟೆಂಬರ್ 21, 2021
21 °C
ಕದಳಿಯ ಬೆರಗು ಕೃತಿ ಬಿಡುಗಡೆ

ಅಕ್ಕನ ತಂಗಿಯಂತೆ ಚ.ಸರ್ವಮಂಗಳ: ಹೋರಾಟಗಾರ ಪ.ಮಲ್ಲೇಶ್‌ ಬಣ್ಣನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮೈಸೂರು: ‘ಅಕ್ಕಮಹಾದೇವಿಯ ತಂಗಿಯಂತೆ ಚ.ಸರ್ವಮಂಗಳ. ಅಕ್ಕ ನಡೆಸಿದ ಜೀವನದಂತೆ ಸರ್ವಮಂಗಳ ಅವರ ಜೀವನಾನುಭವವೂ ದೊಡ್ಡದು’ ಎಂದು ಹೋರಾಟಗಾರ ಪ.ಮಲ್ಲೇಶ್‌ ಬಣ್ಣಿಸಿದರು.

ಮಂಗಳ ಬಳಗ ಹಾಗೂ ಮಹಾರಾಜ ಕಾಲೇಜು ವಿದ್ಯಾರ್ಥಿ ಬಳಗದ ವತಿಯಿಂದ ನಗರದ ರಮಾಗೋವಿಂದ ರಂಗಮಂದಿರದಲ್ಲಿ ಶನಿವಾರ ಆಯೋಜಿಸಿದ್ದ ಕವಯತ್ರಿ ಚ.ಸರ್ವಮಂಗಳ ಅವರಿಗೆ ಅಕ್ಷರ ಬಾಗಿನ ‘ಕದಳಿಯ ಬೆರಗು’ ಕೃತಿ ಸಮರ್ಪಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಅಕ್ಕಮಹಾದೇವಿಗೆ ಪ್ರಿಯವಾದ ಸ್ಥಳ ಕದಳಿ. ಅಲ್ಲಿಗೆ ಅಕ್ಕನನ್ನು ಅಲ್ಲಮಪ್ರಭು ಕಳುಹಿಸಿಕೊಡುತ್ತಾನೆ. ಅಕ್ಕನಂತೆ ಸರ್ವಮಂಗಳ ಸಹ ವಚನಗಳನ್ನು (ಕವನ) ಬರೆಯಬಹುದಿತ್ತು. ಒಳ್ಳೆಯ ಕೃತಿಗಳು ಮೂಡಿಬರುತ್ತಿದ್ದವು. ಆದರೆ, ಸರ್ವಮಂಗಳ ಹೆಚ್ಚು ವಾಚಾಳಿ, ವಾಗ್ಮಿ. ತಿಳಿದುಕೊಂಡ ವಿಷಯವನ್ನು ಮನಮುಟ್ಟುವಂತೆ ಹೇಳುವ ನೈಪುಣ್ಯತೆ ಸಿದ್ಧಿಸಿದೆ’ ಎಂದು ಶ್ಲಾಘಿಸಿದರು.

‘ನಮ್ಮ ಹೋರಾಟಗಳಿಗೆ ಸರ್ವಮಂಗಳ ಸಾಥ್‌ ನೀಡುತ್ತಿದ್ದರು. ಇಂದಿರಾಗಾಂಧಿಗೆ ಟಿಕೆಟ್‌ ನೀಡಬಾರದು ಎಂದು ಆಗ್ರಹಿಸಿ ಚಿಕ್ಕಮಗಳೂರಿಗೆ ನಾವೆಲ್ಲಾ ಹೋಗಿದ್ದೆವು. ಆಗ ಸರ್ವಮಂಗಳ ಸಹ ನಮ್ಮ ಜೊತೆಗಿದ್ದರು. ಅಂದಿನ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಯಾಗಿದ್ದ ಸಾಂಗ್ಲಿಯಾನ ನನ್ನನ್ನು ಬಂಧಿಸಿದ್ದರು’ ಎಂದು ನೆನಪಿಸಿಕೊಂಡರು.

‘ನಾವು ಕಟ್ಟಿಕೊಂಡಂತೆ, ಅಂದುಕೊಂಡಂತೆ ಬದುಕು ಇಲ್ಲ. ಇಂದಿನ ವ್ಯವಸ್ಥೆಯಲ್ಲಿ ಉಸಿರುಗಟ್ಟಿಸುವಂತಹ ವಾತಾವರಣ ಇದೆ. ಮತ್ತಷ್ಟು ಹಿಂದಕ್ಕೆ ಹೋದಂತೆ ಅನಿಸುತ್ತಿದೆ. ನಮ್ಮೆಲ್ಲ ಕೃತ್ಯಗಳಿಗೆ ಪ್ರಕೃತಿ ಎಚ್ಚರಿಕೆ ನೀಡುತ್ತಿದೆ’ ಎಂದರು.

ಕೃತಿಯ ಕುರಿತು ಮಾತನಾಡಿದ ಕವಯತ್ರಿ ಪ್ರತಿಭಾ ನಂದಕುಮಾರ್‌, ‘ಸರ್ವಮಂಗಳ ಅವರ ಬಗ್ಗೆ ಎಲ್ಲವೂ ಗೊತ್ತು ಎಂದುಕೊಂಡವರಿಗೆ ಕದಳಿಯ ಬೆರಗು ಕೃತಿ ಓದಿದಾಗ, ತಮಗೆ ಗೊತ್ತಿಲ್ಲದ ಅನೇಕ ಸಂಗತಿಗಳು ಸಿಗುತ್ತವೆ. ನುಡಿ ತೋರಣ, ಎಳೆಯರ ನಲ್ನುಡಿ, ಕುಟುಂಬ ವಾತ್ಸಲ್ಯ, ನುಡಿ ಚಂದನ, ಮಾಧ್ಯಮದವರು, ಸಂದರ್ಶನ ಎಂಬ ವಿಭಾಗದಡಿ ಸರ್ವಮಂಗಳ ಅವರ ಒಡನಾಡಿಗಳು, ಶಿಷ್ಯರು, ಮಾಧ್ಯಮ ಮಿತ್ರರು ಬರೆದ ಲೇಖನಗಳ ಸಂಗ್ರಹವಿದೆ. ಇದು ಚಾರಿತ್ರಿಕವಾಗಿ ಸಂಸ್ಕೃತಿಯ ದಾಖಲೆಯಾಗಿ ಉಳಿಯಬಲ್ಲ ಗ್ರಂಥ’ ಎಂದು ಬಣ್ಣಿಸಿದರು.

ಸರ್ವಮಂಗಳ ಅವರ ಕುರಿತ ಒಡನಾಟವನ್ನು ಡಾ.ಪರಶುರಾಮ, ಪ್ರೊ.ವಸಂತಮ್ಮ, ಡಾ.ಮೀರಾಮೂರ್ತಿ, ಪಟ್ಟಾಭಿರಾಮ ಸೋಮಯಾಜಿ, ಪಿ.ಎಸ್‌.ಸಂಧ್ಯಾ ಸ್ಮರಿಸಿದರು.

ಸಂಸ್ಕೃತ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಡಾ.ಪದ್ಮಾಶೇಖರ್‌ ಅಧ್ಯಕ್ಷತೆ ವಹಿಸಿದ್ದರು.

‘ಅಭಿನಂದನಾ ಗ್ರಂಥದ ವಿರೋಧಿ’

‘ಸರ್ವಮಂಗಳ ಸಮಾಧಾನಿ, ಮೆಲು ಮಾತಿನ ವ್ಯಕ್ತಿತ್ವ ಹೊಂದಿದವರು. ಅವರು ಎಲ್ಲವನ್ನೂ ತಾಳ್ಮೆಯಿಂದಲೇ ಸಂಭಾಳಿಸುತ್ತಾರೆ. ಅಭಿನಂದನಾ ಗ್ರಂಥ ತರುವ ವಿಚಾರ ತಿಳಿದ ಅವರು, ನನ್ನ ನಿಲುವಿಗೆ ವಿರುದ್ಧವಾಗಿ ನೀವು ಅಭಿನಂದನಾ ಗ್ರಂಥ ತರಲು ಹೊರಟಿದ್ದೀರಿ ಎಂದು ಕೋಪಿಸಿಕೊಂಡಿದ್ದರು. ಹೀಗಾಗಿ, ಅಭಿನಂದನಾ ಗ್ರಂಥದ ಬದಲಿಗೆ ಅಕ್ಷರ ಬಾಗಿನ ಅರ್ಪಿಸುತ್ತಿದ್ದೇವೆ’ ಎಂದು ಕದಳಿಯ ಬೆರಗು ಕೃತಿಯ ಸಂಪಾದಕಿ ಮೀರಾ ಮೈಸೂರು ತಿಳಿಸಿದರು.

‘ಸರ್ವಮಂಗಳ ಹೆಚ್ಚು ಬರೆಯಲಿಲ್ಲ. ಅವರು ಬಹಳ ಸೋಮಾರಿ. ಬರವಣಿಗೆ ಮಾಡುವಂತೆ ಒತ್ತಾಯ ಹೇರಿ ಕೆಲಸ ಮಾಡಿಸಿಕೊಳ್ಳುತ್ತಿದ್ದೆವು’ ಎಂದು ಸ್ಮರಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು