ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೈಸೂರು: ದಸರಾ ಆನೆಗಳಿಗೆ 2 ದಿನ ವಿಶ್ರಾಂತಿ, ಸೆ.19ರ ನಂತರ ವಿಶೇಷ ಆಹಾರ ಪೂರೈಕೆ

Last Updated 18 ಸೆಪ್ಟೆಂಬರ್ 2021, 1:58 IST
ಅಕ್ಷರ ಗಾತ್ರ

ಮೈಸೂರು: ದಸರಾ ಮಹೋತ್ಸವದಲ್ಲಿ ಪಾಲ್ಗೊಳ್ಳಲು ಅಂಬಾವಿಲಾಸ ಅರಮನೆಗೆ ಆಗಮಿಸಿರುವ ಗಜಪಡೆಗಳು ಈಗ ರಿಲ್ಯಾಕ್ಸ್‌ ಮೂಡ್‌ನಲ್ಲಿವೆ.

ಕಾಡಿನಿಂದ ಬಂದು ಅರಣ್ಯ ಭವನದಲ್ಲಿ ತಂಗಿದ್ದ ಆನೆಗಳನ್ನು ಗುರುವಾರ ಅರಮನೆ ಆವರಣಕ್ಕೆ ನಡಿಗೆ ಮೂಲಕ ಕರೆತರಲಾಗಿತ್ತು. ಅವುಗಳಿಗೆ ಎರಡು ದಿನ ಸಂಪೂರ್ಣ ವಿಶ್ರಾಂತಿ ನೀಡಲಾಗಿದೆ.

ಸದ್ಯ ಆನೆಗಳಿಗೆ ಹುಲ್ಲು, ಆಲದ ಸೊಪ್ಪು, ಭತ್ತ ಹಾಗೂ ಅದರ ಹುಲ್ಲು, ಕಬ್ಬಿನ ಜಲ್ಲೆ, ಬೆಲ್ಲ, ತೆಂಗಿನಕಾಯಿಯಂತಹ ಸಾತ್ವಿಕ ಆಹಾರ ನೀಡಲಾಗುತ್ತಿದೆ.

ಅರಮನೆ ಆವರಣದಲ್ಲಿರುವ ತೊಟ್ಟಿ ಬಳಿ ಆನೆಗಳನ್ನು ಕರೆತಂದು ಸ್ನಾನ ಮಾಡಿಸುವ ಕಾರ್ಯದಲ್ಲಿ ಮಾವುತರು, ಕಾವಾಡಿಗಳು ತೊಡಗಿದ್ದರು. ಆನೆಗಳ ಮೇಲೆ ನೀರು ಬಿಡುತ್ತಾ ಸ್ವಚ್ಛಗೊಳಿಸುವ ಕೆಲಸದಲ್ಲಿ ನಿರತರಾಗಿದ್ದರು. ಇದೇ ಸಂದರ್ಭದಲ್ಲಿ ಮಾವುತರು ಹಾಗೂ ಕಾವಾಡಿಗಳು ಸಹ ಸ್ನಾನ ಮಾಡುವುದರಲ್ಲಿ, ಬಟ್ಟೆ ಒಗೆಯುವುದರಲ್ಲಿ ನಿರತರಾಗಿದ್ದರು

‘ಆನೆಗಳಿಗೆ ಆಯಾಸ ಆಗಿರುವುದರಿಂದ ಅವುಗಳಿಗೆ ಎರಡು ದಿನ ಸಂಪೂರ್ಣ ವಿಶ್ರಾಂತಿ ನೀಡುತ್ತೇವೆ. ಎರಡ್ಮೂರು ಆನೆಗಳು ಚೆನ್ನಾಗಿ ನಿದ್ದೆ ಮಾಡಿವೆ. ಉಳಿದ ಆನೆಗಳು ಸಹ ನಿದ್ದೆ ಮಾಡಬೇಕು. ಸದ್ಯ ಅವುಗಳಿಗೆ ಸಾಧಾರಣ ಆಹಾರ ನೀಡಲಾಗುತ್ತಿದೆ. ಬೆಳಿಗ್ಗೆ, ಸಂಜೆ ಒಂದೂವರೆ ಕಿ.ಮೀ.ನಷ್ಟು ನಡಿಗೆ ಮಾಡಿಸಲಾಗುತ್ತಿದೆ. ಈಗಲೇ ವಿಶೇಷ ಆಹಾರ ನೀಡಿದರೆ ಅಜೀರ್ಣ ಸಮಸ್ಯೆ ಕಾಣಿಸಿಕೊಳ್ಳುವ ಸಾಧ್ಯತೆ ಇದೆ. ಹೀಗಾಗಿ, ಸೆ.19 ಅಥವಾ 20ರ ನಂತರ ವಿಶೇಷ ಆಹಾರ ನೀಡಲಾಗುವುದು. ಜತೆಗೆ ಹೆಚ್ಚುವರಿಯಾಗಿ ತಾಲೀಮು ನಡೆಸಲಾಗುವುದು’ ಎಂದು ಡಿಸಿಎಫ್‌ ಕರಿಕಾಳನ್‌ ‘ಪ್ರಜಾವಾಣಿ’ಗೆ ತಿಳಿಸಿದರು.

‘ಆನೆಗಳ ಆರೈಕೆಗಾಗಿ 50 ಸಿಬ್ಬಂದಿ ಇದ್ದಾರೆ. ಈ ಪೈಕಿ 40 ಜನರಿಗೆ ಕೋವಿಡ್‌ ಲಸಿಕೆಯ ಮೊದಲ ಡೋಸ್‌ ಆಗಿದೆ. 2ನೇ ಡೋಸ್‌ ಪಡೆಯುವವರ ಹಾಗೂ ಲಸಿಕೆ ಹಾಕಿಸಿಕೊಳ್ಳದವರ ಪಟ್ಟಿ ಸಿದ್ಧಪಡಿಸುತ್ತಿದ್ದೇವೆ. ಶೀಘ್ರದಲ್ಲೇ ಕೋವಿಡ್‌ ಲಸಿಕೆ ನೀಡಲಾಗುವುದು’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT