ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ರಂಗಾಯಣಕ್ಕೆ ಬಂದನು ಕಿಂದರಿ ಜೋಗಿ!’

‘ಕುಸುಮಬಾಲೆ’ಯ ನಂತರ ಆರಂಭವಾಯಿತು ಮತ್ತೊಂದು ವಾಚಿಕಾಭಿನಯ
Last Updated 7 ಸೆಪ್ಟೆಂಬರ್ 2020, 12:49 IST
ಅಕ್ಷರ ಗಾತ್ರ

ಮೈಸೂರು: ‘ಮಕ್ಕಳ ಸಂಗದೊಳೆಚ್ಚರಗೊಳ್ಳಲಿ ಆನಂದದ ಆ ದಿವ್ಯ ಶಿಶು; ಹಾಡಲಿ ಕುಣಿಯಲಿ; ಹಾರಲಿ, ಏರಲಿ ದಿವಿಜತ್ವಕೆ ಈ ಮನುಜಪಶು!’ ಎಂಬ ರಾಷ್ಟ್ರಕವಿ ಕುವೆಂಪು ಅವರ ಸಾಲುಗಳನ್ನು ರಂಗಾಯಣದ ಆವರಣದಲ್ಲಿ ಹಾಕಿದ್ದ ಫಲಕದಲ್ಲಿ ಓದುತ್ತಾ ‘ಭೂಮಿಗೀತ’ ರಂಗಮಂದಿರವನ್ನು ಪ್ರವೇಶಿಸುತ್ತಿದ್ದಂತೆ ಕೇಳಿಸಿತು ಇಲಿಗಳ ಕಿಚಿಪಿಚಿ ಸದ್ದು.

ಇಲ್ಲಿ ಸೋಮವಾರ ಆರಂಭವಾದ ‘ಬೊಮ್ಮನಹಳ್ಳಿಯ ಕಿಂದರಿಜೋಗಿ’ ವಾಚಿಕಾಭಿಯನದ ಆರಂಭದಲ್ಲೇ ಕೇಳಿ ಬಂದ ‘ತುಂಗಾತೀರದ ಬಲಗಡೆಯಲ್ಲಿ ಹಿಂದಲ್ಲಿದ್ದುದು ಬೊಮ್ಮನಹಳ್ಳಿ ಅಲ್ಲೇನಿಲಿಗಳ ಕಾಟವೆ ಕಾಟ, ಅಲ್ಲಿಯ ಜನಗಳಿಗತಿಗೋಳಾಟ’ ಎಂಬ ಸಾಲುಗಳು ಮಕ್ಕಳನ್ನು ಸೂಜಿಗಲ್ಲಿನಂತೆ ಸೆಳೆದವು.

ವಾಚಿಕಾಭಿನಯದ ಮೊದಲ 20 ನಿಮಿಷಗಳ ಪ್ರದರ್ಶನವನ್ನು ಇಲ್ಲಿ ನಡೆಸಲಾಯಿತು. ಅರಿವು ಶಾಲೆಯ ಮಕ್ಕಳು ಚಾಲನೆ ನೀಡಿದರು. ವಾಚಿಕಾಭಿನಯದ ಭಾಗಗಳನ್ನು ಸಂಜೆ 6.30ಕ್ಕೆ ಸೆ. 9ರವರೆಗೆ www.rangayana.org ನಲ್ಲಿ ವೀಕ್ಷಿಸಬಹುದು.

ಇದಕ್ಕೂ ಮುನ್ನ ಮಾತನಾಡಿದ ರಂಗಾಯಣದ ನಿರ್ದೇಶಕ ಅಡ್ಡಂಡ ಸಿ.ಕಾರ್ಯಪ್ಪ, ‘ದೇವನೂರ ಮಹಾದೇವ ಅವರ ‘ಕುಸುಮಬಾಲೆ’ಯ ವಾಚಿಕಾಭಿನಯದ ನಂತರ ಕುವೆಂಪು ಅವರ ‘ಬೊಮ್ಮನಹಳ್ಳಿಯ ಕಿಂದರಿಜೋಗಿ’ಯನ್ನು ವಾಚಿಕಾಭಿನಯಕ್ಕೆ ತರಲಾಗಿದೆ. ಇದರ ರಂಗರೂಪ ಬಿ.ವಿ.ಕಾರಂತ ಅವರದ್ದು. ಜತೆಗೆ, ಇವರು ವಿವಿಧ ನಾಟಕಗಳಿಗೆ ಸಂಯೋಜಿಸಿದ ‘ರಂಗಗೀತೆಗಳು’ ಇದೀಗ ತಾಲೀಮಿನ ಹಂತದಲ್ಲಿದ್ದು, ಸೆ. 15ರ ಒಳಗೆ ಚಿತ್ರೀಕರಣಗೊಂಡು ಪ್ರಸಾರಕ್ಕೆ ಸಿದ್ಧಗೊಳ್ಳಲಿದೆ’ ಎಂದು ಹೇಳಿದರು.

ಸೆ.15ರಿಂದ ಡಾ.ಎಸ್.ಎಲ್‌.ಭೈರಪ್ಪ ಅವರ ‘ಪರ್ವ’ ಕಾದಂಬರಿಯ ರಂಗರೂಪವನ್ನು ಪ್ರಕಾಶ್‌ ಬೆಳವಾಡಿ ಅವರ ನಿರ್ದೇಶನದಲ್ಲಿ ತಾಲೀಮು ಪ್ರಕ್ರಿಯೆ ಆರಂಭಿಸಲಾಗುವುದು ಎಂದು ಹೇಳಿದರು.‌

ಭಾರತೀಯ ರಂಗ ಶಿಕ್ಷಣ ಕೇಂದ್ರದ 2020–21ನೇ ಸಾಲಿನ ಡಿಪ್ಲೊಮಾ ತರಬೇತಿಗೆಂದು ಅರ್ಜಿ ಸಲ್ಲಿಸಿದ 150 ಮಂದಿಯ ಪೈಕಿ ಆಯ್ಕೆಯಾದ 20 ವಿದ್ಯಾರ್ಥಿಗಳ ಪಟ್ಟಿಯನ್ನು ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗಿದೆ. ಸದ್ಯದಲ್ಲೇ ‘ಸುಬ್ಬಯ್ಯನಾಯ್ಡು ಅಲ್ಪಾವಧಿ ರಂಗಶಿಕ್ಷಣ– ರಂಗಶಿಬಿರ’ ತರಗತಿಗಳು ಆರಂಭವಾಗಲಿದ್ದು, 25 ಮಂದಿ ಹವ್ಯಾಸಿ ಕಲಾವಿದರಿಗೆ ಪ್ರವೇಶ ಇರುತ್ತದೆ ಎಂದರು.‌

ಕಾರ್ಯಕ್ರಮದ ಆರಂಭಕ್ಕೂ ರಂಗಾಯಣದ ಆವರಣದಲ್ಲಿ ಕಿಂದರಿಜೋಗಿ ವೇಷಧಾರಿ ಆಕರ್ಷಣೆಯ ಕೇಂದ್ರ ಬಿಂದುವಾಗಿದ್ದರು. ಮಕ್ಕಳು ಅವರೊಂದಿಗೆ ಫೊಟೊ ತೆಗೆಸಿಕೊಂಡು ಖುಷಿಪಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT