ಗುರುವಾರ , ಮೇ 6, 2021
23 °C
ರಾಜ್ಯ ಮುಕ್ತ ವಿಶ್ವವಿದ್ಯಾಲಯ ಕುಲಪತಿ ಡಾ.ಎಸ್.ವಿದ್ಯಾಶಂಕರ್ ಮನವಿ

ಸಾಂಪ್ರದಾಯಿಕ ವಿ.ವಿ.ಗಳಲ್ಲಿ ದೂರಶಿಕ್ಷಣ ರದ್ದುಪಡಿಸಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೈಸೂರು: ಸಾಂಪ್ರದಾಯಿಕ ವಿಶ್ವವಿದ್ಯಾಲಯಗಳು ದೂರಶಿಕ್ಷಣ ಕೋರ್ಸ್ ಆರಂಭಿಸಲು ನೀಡಿರುವ ಅನುಮತಿಯನ್ನು ರದ್ದುಪಡಿಸಬೇಕು. ದೂರಶಿಕ್ಷಣ ನೀಡುವ ಅಧಿಕಾರವನ್ನು ರಾಜ್ಯ ಮುಕ್ತ ವಿಶ್ವವಿದ್ಯಾಲಯಕ್ಕೆ (ಕೆಎಸ್ಒಯು) ನೀಡಬೇಕು ಎಂದು ಕೆಎಸ್ಒಯು ಕುಲಪತಿ ಡಾ.ಎಸ್.ವಿದ್ಯಾಶಂಕರ್ ಮನವಿ ಮಾಡಿದರು.

ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ರಾಜ್ಯದ ಎಲ್ಲ ಸಾಂಪ್ರದಾಯಿಕ ವಿಶ್ವವಿದ್ಯಾಲಯಗಳು ದೂರಶಿಕ್ಷಣ ನೀಡಲು ರಾಜ್ಯ ಸರ್ಕಾರ ಅನುಮತಿ ನೀಡಿದೆ. ಇದರಿಂದ ಮುಕ್ತ ವಿ.ವಿ.ಗೆ ಹೊಡೆತ ಬಿದ್ದಿದೆ. ವಿದ್ಯಾರ್ಥಿಗಳ ನೋಂದಣಿ ಕಡಿಮೆ ಆಗುತ್ತಿದೆ. ಸಾಂಪ್ರದಾಯಿಕ ವಿ.ವಿ.ಗಳ ವ್ಯಾಪ್ತಿಗೆ ಒಂದೆರಡು ಜಿಲ್ಲೆಗಳು ಬರುತ್ತವೆ. ಆದರೆ, ಈ ವಿ.ವಿ.ಗಳು ರಾಜ್ಯದಲ್ಲಿ ಎಲ್ಲಿ ಬೇಕಾದರೂ ದೂರಶಿಕ್ಷಣ ನೀಡಬಹುದು. ಆದರೆ, ಆಯಾ ವ್ಯಾಪ್ತಿಯ ವಿಶ್ವವಿದ್ಯಾಲಯಗಳಿಂದ ನಿರಾಕ್ಷೇಪಣಾ ಪತ್ರವನ್ನು (ಎನ್‌ಒಸಿ) ಪಡೆಯಬೇಕಷ್ಟೆ. ಈಗಾಗಲೇ ಮೈಸೂರು ವಿ.ವಿ ದೂರಶಿಕ್ಷಣ ಕೋರ್ಸ್‌ಗಳನ್ನು ಆರಂಭಿಸಿದೆ’ ಎಂದು ತಿಳಿಸಿದರು.

ರಾಜ್ಯದ ಎಂಜಿನಿಯರಿಂಗ್ ಕಾಲೇಜುಗಳು ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ವ್ಯಾಪ್ತಿಗೆ ಒಳಪಟ್ಟಂತೆ, ವೈದ್ಯಕೀಯ ಕಾಲೇಜುಗಳು ಆರೋಗ್ಯ ವಿ.ವಿ. ವ್ಯಾಪ್ತಿಗೆ ಒಳಪಟ್ಟಿವೆ. ಅದೇ ರೀತಿ, ದೂರಶಿಕ್ಷಣ ನೀಡುವ ಎಲ್ಲ ವಿಶ್ವವಿದ್ಯಾಲಯಗಳು ಮುಕ್ತ ವಿ.ವಿ.ಯಿಂದ ಅನುಮತಿ ಪಡೆಯುವಂತಹ ನಿಯಮವನ್ನು ರೂಪಿಸಬೇಕು ಎಂದು ಆಗ್ರಹಿಸಿದರು.

ಮುಕ್ತ ವಿ.ವಿ.ಯಲ್ಲಿ ಪ್ರತಿ ಕೋರ್ಸ್‌ಗೆ ಇಷ್ಟೇ ಬೋಧಕ ವರ್ಗ ಇರಬೇಕು ಎಂದು ಯುಜಿಸಿ ಷರತ್ತು ವಿಧಿಸಿದೆ. ಆದರೆ, ಸಾಂಪ್ರದಾಯಿಕ ವಿ.ವಿ.ಗಳಲ್ಲಿ ಬೋಧಕ ವರ್ಗ ಇಲ್ಲದಿದ್ದರೂ ದೂರಶಿಕ್ಷಣವನ್ನು ಆರಂಭಿಸುತ್ತಿವೆ. ನಿಯಮ ಉಲ್ಲಂಘಿಸುತ್ತಿದ್ದರೂ ಯುಜಿಸಿ ಯಾವುದೇ ಕ್ರಮ ಕೈಗೊಂಡಿಲ್ಲ ಎಂದರು.

ಯಾವುದೇ ಹೊಸ ಕೋರ್ಸ್ ಆರಂಭಿಸಬೇಕಾದರೂ ಯುಜಿಸಿಯಿಂದ ಅನುಮತಿ ಪಡೆಯಬೇಕು. ಆದರೆ, ಸಾಂಪ್ರದಾಯಿಕ ವಿ.ವಿ.ಗಳು ಹೊಸ ಕೋರ್ಸ್ ಆರಂಭಿಸಿದ ಕುರಿತು ಯುಜಿಸಿಗೆ ಪತ್ರ ಬರೆಯುತ್ತವೆ. ಈ ಮಲತಾಯಿ ಧೋರಣೆಯನ್ನು ಕೈಬಿಡಬೇಕು. ಈ ವರ್ಷ 10 ಹೊಸ ಕೋರ್ಸ್‌ಗಳನ್ನು ಆರಂಭಿಸಲು ಉದ್ದೇಶಿಸಲಾಗಿತ್ತು. ಆದರೆ, ಯುಜಿಸಿಯು ಹೊಸ ಕೋರ್ಸ್‌ಗಳಿಗಾಗಿ ಅರ್ಜಿ ಆಹ್ವಾನಿಸಿಲ್ಲ ಎಂದು ಹೇಳಿದರು.

‘ಪ್ರಸಕ್ತ ಶೈಕ್ಷಣಿಕ ಸಾಲಿನಲ್ಲಿ ಪಿಯು, ಪದವಿ ಹಾಗೂ ಸ್ನಾತಕೋತ್ತರ ಪದವಿ ಕೋರ್ಸ್‌ಗಳಿಗೆ ಪ್ರವೇಶ ಪಡೆಯಲು ಆ.31 ಕೊನೆ ದಿನವಾಗಿತ್ತು. ಉತ್ತರ ಕರ್ನಾಟಕದಲ್ಲಿ ಪ್ರವಾಹ ಉಂಟಾಗಿದ್ದರಿಂದ ಪ್ರವೇಶದ ಕೊನೆಯ ದಿನಾಂಕವನ್ನು ಮುಂದೂಡುವಂತೆ ಯುಜಿಸಿಗೆ ಮನವಿ ಮಾಡಿದ್ದೆವು. ಆದರೆ, ಅದಕ್ಕೆ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಇದರಿಂದ ಸಾವಿರಾರು ವಿದ್ಯಾರ್ಥಿಗಳು ಪ್ರವೇಶ ಪಡೆಯಲು ಸಾಧ್ಯವಾಗಿಲ್ಲ. ಈ ವರ್ಷ 25 ಸಾವಿರ ವಿದ್ಯಾರ್ಥಿಗಳು ಪ್ರವೇಶ ಪಡೆಯುವ ನಿರೀಕ್ಷೆ ಇತ್ತು. ಆದರೆ, 8,870 ವಿದ್ಯಾರ್ಥಿಗಳು ಪ್ರವೇಶ ಪಡೆದಿದ್ದಾರೆ’ ಎಂದು ವಿವರಿಸಿದರು.

ಕುಲಸಚಿವ ಪ್ರೊ.ಬಿ.ರಮೇಶ್‌, ಹಣಕಾಸು ಅಧಿಕಾರಿ ಡಾ.ಎ.ಖಾದರ್‌ ಪಾಷಾ ಇದ್ದರು.

ಮುಕ್ತ ವಿವಿ ಕುಲಪತಿಗಳ ಸಮ್ಮೇಳನ ನಾಳೆ

ದೇಶದ ಮುಕ್ತ ವಿ.ವಿ.ಗಳು ಎದುರಿಸುತ್ತಿರುವ ಈ ಎಲ್ಲ ಸಮಸ್ಯೆಗಳ ಬಗ್ಗೆ ಚರ್ಚಿಸಿ ಯುಜಿಸಿ ಗಮನಕ್ಕೆ ತರುವ ಉದ್ದೇಶದಿಂದ ಸೆ.6ರಂದು ಬೆಳಿಗ್ಗೆ 11ಕ್ಕೆ ಮುಕ್ತ ವಿಶ್ವವಿದ್ಯಾಲಯ ಆವರಣದ ಘಟಿಕೋತ್ಸವ ಭವನದಲ್ಲಿ ಅಖಿಲ ಭಾರತ ಮುಕ್ತ ವಿಶ್ವವಿದ್ಯಾಲಯಗಳ ಕುಲಪತಿಗಳ ಸಮ್ಮೇಳನ ಹಮ್ಮಿಕೊಳ್ಳಲಾಗಿದೆ ಎಂದು ಡಾ.ಎಸ್.ವಿದ್ಯಾಶಂಕರ್ ತಿಳಿಸಿದರು.

ಮುಕ್ತ ವಿವಿ ವಿಶ್ರಾಂತ ಕುಲಪತಿ ಡಾ.ಎನ್.ಎಸ್.ರಾಮೇಗೌಡ ಸಮ್ಮೇಳನಾಧ್ಯಕ್ಷರಾಗಿದ್ದಾರೆ. ಉಪಮುಖ್ಯಮಂತ್ರಿ ಡಾ.ಅಶ್ವತ್ಥನಾರಾಯಣ ಕಾರ್ಯಕ್ರಮ ಉದ್ಘಾಟಿಸಲಿದ್ದು, ಸಂಸದ ಪ್ರತಾಪಸಿಂಹ, ಯುಜಿಸಿ ಜಂಟಿ ಕಾರ್ಯದರ್ಶಿ ಡಾ.ಅವಿಚಲ್ ಕಪೂರ್, ಪ್ರಾಥಮಿಕ ಶಿಕ್ಷಣ ಸಚಿವ ಸುರೇಶ್ ಕುಮಾರ್, ಶಾಸಕ ಎಲ್.ನಾಗೇಂದ್ರ, ವಿಧಾನ ಪರಿಷತ್ ಸದಸ್ಯರಾದ ಸಂದೇಶ್ ನಾಗರಾಜ್, ಪುಟ್ಟಣ್ಣ ಪಾಲ್ಗೊಳ್ಳಲಿದ್ದಾರೆ ಎಂದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು