ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೃಷಿ ಕೂಲಿ ಕಾರ್ಮಿಕರ ಕೊರತೆ

ಕೋವಿಡ್‌ನ ಭಯ: ಮನೆ ಮಂದಿಯಿಂದಲೇ ಕೃಷಿ ಕೆಲಸ
Last Updated 17 ಜೂನ್ 2021, 5:35 IST
ಅಕ್ಷರ ಗಾತ್ರ

ಮೈಸೂರು: ಜಿಲ್ಲೆಯಾದ್ಯಂತ ಮೂರ್ನಾಲ್ಕು ದಿನದಿಂದಲೂ ಚೆದುರಿದಂತೆ ಸೋನೆ ಮಳೆಯಾಗುತ್ತಿದೆ. ಕೆಲವೊಂದು ಕೃಷಿ ಚಟುವಟಿಕೆಗೆ ಇದೀಗ ಸುರಿಯುತ್ತಿರುವ ವರ್ಷಧಾರೆಯೂ ಪೂರಕವಾಗಿದೆ.

ಸೋನೆ ಮಳೆ ಬಿಡುವು ನೀಡಿದಾಗ ರೈತ ಸಮುದಾಯ ಹೊಲದಲ್ಲಿ ಬಿತ್ತುವುದು, ಗೇಯುವುದು, ಬೆಳೆಯೊಳಗಿನ ಕಳೆ ಕೀಳುವುದು, ರಸಗೊಬ್ಬರವನ್ನು ಬೆಳೆಗೆ ಚೆಲ್ಲುವ ಚಟುವಟಿಕೆಯಲ್ಲಿ ತಲ್ಲೀನವಾಗಿದೆ.

ಜಿಲ್ಲೆಯ ಗ್ರಾಮೀಣ ಭಾಗಕ್ಕೂ ಕೋವಿಡ್‌ ಸಾಂಕ್ರಾಮಿಕ ಪಸರಿಸಿದೆ. ಸಾವು–ನೋವಿನ ವರದಿ ನಿತ್ಯವೂ ದಾಖಲಾಗುತ್ತಿದೆ. ಇಂದಿಗೂ ನಿಯಂತ್ರಣಕ್ಕೆ ಬಾರದಾಗಿದೆ. ಇದೀಗ ನಡೆದಿರುವ ಕೃಷಿ ಚಟುವಟಿಕೆಗಳಿಗೂ ಕೋವಿಡ್‌ನ ಭಯ ಕಾಡಲಾರಂಭಿಸಿದೆ. ಇದರಿಂದ ಕೃಷಿ ಕೂಲಿ ಕಾರ್ಮಿಕರ ಕೊರತೆ ಹೆಚ್ಚಿದೆ.

ಬಹುತೇಕ ಹಳ್ಳಿಗಳನ್ನು ಕೋವಿಡ್‌ ಬಾಧಿಸಿದೆ. ಒಂದು ಊರಿನಿಂದ ಮತ್ತೊಂದು ಊರಿಗೆ ಕೃಷಿ ಕೂಲಿಗಾಗಿ ತೆರಳುತ್ತಿದ್ದ ಕೂಲಿ ಕಾರ್ಮಿಕರು ಮನೆಯಿಂದ ಹೊರಗೆ ಹೆಜ್ಜೆ ಇಡುತ್ತಿಲ್ಲ. ಇವರೆಲ್ಲರೂ ನ್ಯಾಯಬೆಲೆ ಅಂಗಡಿಯಲ್ಲಿ ಸಿಗುವ ಪಡಿತರವನ್ನೇ ನಂಬಿಕೊಂಡು ದಿನ ಕಳೆಯುತ್ತಿದ್ದಾರೆ. ಜೀವದ ಜೊತೆ ಜೀವನವೂ ಮುಖ್ಯ ಎಂದಾದರೂ; ಜೀವ ಉಳಿದಿದ್ದರಲ್ಲವೇ ಜೀವನ ನಡೆಸೋದು ಎಂಬುದು ಬಹುತೇಕರ ಮಾತಾಗಿದೆ.

ಹೊಲದಲ್ಲಿನ ಕೃಷಿ ಕೆಲಸಗಳಿಗೆ ಕಾಯಂ ಆಗಿ ಬರುತ್ತಿದ್ದ ಕೂಲಿ ಕಾರ್ಮಿಕರು ಕೋವಿಡ್‌ ಭಯದಿಂದ ಇದೀಗ ಬರುತ್ತಿಲ್ಲ. ಇದು ತರಕಾರಿ ಬೆಳೆಗಾರರಿಗೆ ತಲೆ ನೋವಾಗಿದೆ. ಕೊಯ್ಲು–ಕಟಾವಿಗೆ ಅಡಚಣೆಯಾಗಿದೆ. ಸಕಾಲಕ್ಕೆ ಕಳೆ ಕೀಳಲು ಆಗದಿದ್ದರಿಂದ, ಬೆಳೆಗಿಂತ ಕಳೆಯೇ ಹೆಚ್ಚಿ ಫಸಲು ನಷ್ಟವಾಗುತ್ತಿದೆ.

ನಾಟಿ ಮಾಡಲು, ಕೊಯ್ಲಿಗೆ, ಕಟಾವಿಗೆ, ಕಳೆ ಕೀಳಲು ಕೃಷಿ ಕೂಲಿ ಕಾರ್ಮಿಕರು ಅತ್ಯವಶ್ಯ. ಕೇಳಿದಷ್ಟು ಕೂಲಿ ಕೊಡುತ್ತೇವೆ ಎಂದರೂ ಯಾರೊಬ್ಬರೂ ಬರುತ್ತಿಲ್ಲ. ಇದು ಕೃಷಿಕರ ಪಾಲಿಗೆ ನುಂಗಲಾರದ ಬಿಸಿ ತುಪ್ಪವಾಗಿದೆ. ಕೆಲವರು ತಮ್ಮ ಕೃಷಿ ಚಟುವಟಿಕೆಯ ವ್ಯಾಪ್ತಿಯನ್ನೇ ತಗ್ಗಿಸಿಕೊಂಡಿದ್ದಾರೆ ಎನ್ನುತ್ತಾರೆ ನಂಜನಗೂಡು ತಾಲ್ಲೂಕಿನ ಹಿಮ್ಮಾವಿನ ರೈತ ರಘು ಹಿಮ್ಮಾವು.

‘ಮುಸುಕಿನ ಜೋಳ ಬಿತ್ತಲಿಕ್ಕಾಗಿಯೇ ನಾಲ್ಕು ಎಕರೆ ಹೊಲ ಸಿದ್ಧ ಮಾಡಿಕೊಂಡಿದ್ದೆ. ಮಂಗಳವಾರ ಬೆಳಿಗ್ಗೆ ಮಳೆ ಬಿಡುವು ನೀಡಿತ್ತು. ಕೂಲಿ ಆಳುಗಳು ಯಾರೊಬ್ಬರೂ ಸಿಗಲಿಲ್ಲ. ಬೇಸಾಯವೂ ದೊರಕಲಿಲ್ಲ. ನಮ್ಮ ಮನೆಯ ಎತ್ತುಗಳ ಜೊತೆ, ನಮ್ಮ ಮಾವನ ಹಟ್ಟಿಯ ಎತ್ತುಗಳು ಹಾಗೂ ನಮ್ಮ ಹುಡುಗನ ಎತ್ತುಗಳ ಬೇಸಾಯದಿಂದ ಬಿತ್ತನೆ ನಡೆಸಿದೆ’ ಎಂದು ಎಚ್‌.ಡಿ.ಕೋಟೆ ತಾಲ್ಲೂಕಿನ ಬೆಳಗನಹಳ್ಳಿಯ ರೈತ ಬಸವರಾಜು ‘ಪ್ರಜಾವಾಣಿ’ಗೆ ತಿಳಿಸಿದರು.

‘ಪಕ್ಕದ ಹಳ್ಳಿಗಳಿಂದ ಯಾರೊಬ್ಬರೂ ಕೂಲಿಗೆ ಬರುತ್ತಿಲ್ಲ. ವಿಧಿಯಿಲ್ಲದೇ ಮನೆಯವರೇ ಕೃಷಿ ಕೆಲಸ ಮಾಡಿಕೊಳ್ಳುತ್ತಿದ್ದೇವೆ.ನೆರೆ ಹೊರೆಯವರ ಜಮೀನಿಗೆ ಮುಯ್ಯಾಳಾಗಿ ಹೋಗುತ್ತೇವೆ. ನಮ್ಮ ಜಮೀನಿನಲ್ಲಿ ಕೆಲಸವಿದ್ದಾಗ ಅವರು ಬರುತ್ತಾರೆ’ ಎಂದು ಅವರು ಹೇಳಿದರು.

ಜೂನ್ 20ರವರೆಗೂ ಸಾಧಾರಣ ಮಳೆ

ಮೈಸೂರು ಜಿಲ್ಲೆಯಾದ್ಯಂತ ಜೂನ್‌ 20ರವರೆಗೂ ಮೋಡ ಕವಿದ ವಾತಾವರಣ ಇರಲಿದೆ. ಸಾಧಾರಣ ಮಳೆ ಬೀಳಲಿದೆ ಎಂದು ನಾಗನಹಳ್ಳಿಯ ಸಾವಯವ ಕೃಷಿ ಸಂಶೋಧನಾ ಕೇಂದ್ರದ ಹವಾಮಾನ ಮುನ್ಸೂಚನಾ ವಿಭಾಗ ತಿಳಿಸಿದೆ.

ಭತ್ತ, ರಾಗಿ, ಸೂರ್ಯಕಾಂತಿ, ಮುಸುಕಿನ ಜೋಳ, ಸಜ್ಜೆ, ನವಣೆ, ಕಬ್ಬು, ಟೊಮೆಟೊ, ಬದನೆ, ಮೆಣಸಿನಕಾಯಿ, ಎಲೆಕೋಸು, ಮೂಲಂಗಿ, ಈರುಳ್ಳಿ, ಹುರುಳಿಕಾಯಿ, ಬೆಂಡೆಕಾಯಿ ಕೃಷಿಗೆ ಸಂಬಂಧಿಸಿದಂತೆ ಬಿತ್ತನೆ ಹಾಗೂ ನಾಟಿ ಮಾಡಲು ಇದು ಸಕಾಲ ಎಂದು ಕೃಷಿ ಸಲಹೆಯನ್ನು ನೀಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT