ಶುಕ್ರವಾರ, ಸೆಪ್ಟೆಂಬರ್ 20, 2019
25 °C
ಪಾಲಿಕೆಗೆ ಸೆಸ್‌ ಪಾವತಿಸಿದರೂ ಸಾರ್ವಜನಿಕರಿಗೆ ಸೇವೆ ಸಿಗುತ್ತಿಲ್ಲ

41 ವಾರ್ಡ್‌ಗಳಲ್ಲಿ ಗ್ರಂಥಾಲಯವೇ ಇಲ್ಲ

Published:
Updated:
Prajavani

ಮೈಸೂರು: ಮೈಸೂರು ನಗರ ವಾಪ್ತಿಯ ಸಾರ್ವಜನಿಕರು ಪ್ರತಿ ವರ್ಷ ಮಹಾನಗರ ಪಾಲಿಕೆಗೆ ಸೆಸ್‌ ಪಾವತಿಸುತ್ತಿದ್ದರೂ 41 ವಾರ್ಡ್‌ಗಳಲ್ಲಿ ಗ್ರಂಥಾಲಯ ಸೌಲಭ್ಯವೇ ಇಲ್ಲ.

ಆಸ್ತಿ ತೆರಿಗೆ ಪಾವತಿಸುವಾಗ ‘ಗ್ರಂಥಾಲಯ ಸೆಸ್‌’ ರೂಪದಲ್ಲಿ ಇಂತಿಷ್ಟು ಹಣವನ್ನು ಪಾಲಿಕೆಗೆ ನೀಡ ಲಾಗುತ್ತಿದೆ. ಕೋಟ್ಯಂತರ ರೂಪಾಯಿ ಸಂಗ್ರಹವಾದರೂ ಪಾಲಿಕೆ ಮಾತ್ರ ಗ್ರಂಥಾಲಯ ಸೌಲಭ್ಯ ಕಲ್ಪಿಸಿಲ್ಲ. ಇದಕ್ಕೆ ಸಾರ್ವಜನಿಕರಿಂದ ಆಕ್ರೋಶ ವ್ಯಕ್ತವಾಗಿದೆ.

ಸದ್ಯ ನಗರ ವ್ಯಾಪ್ತಿಯ ವಿವಿಧ ವಾರ್ಡ್‌ಗಳಲ್ಲಿ 31 ಗ್ರಂಥಾಲಯಗಳಿವೆ. ಆಯಾ ವಾರ್ಡ್‌ಗಳ ಜನರು ನಿತ್ಯ ಸದುಪಯೋಗಪಡಿಸಿಕೊಳ್ಳುತ್ತಿದ್ದಾರೆ. ಕೆಲ ವಾರ್ಡ್‌ಗಳಲ್ಲಿ ಎರಡೆರಡು ಗ್ರಂಥಾಲಯ ನಿರ್ಮಿಸಲಾಗಿದೆ. ವಾರ್ಡ್‌ ಸಂಖ್ಯೆ 2ರಿಂದ 5, 7ರಿಂದ 18, 20, 22ರಿಂದ 25, 29ರಿಂದ 38, 40, 42ರಿಂದ 44, 49ರಿಂದ 51,
54ರಿಂದ 58, 60ರಿಂದ 62ರಲ್ಲಿ ಸೌಲಭ್ಯ ಇಲ್ಲ.

‘ಗ್ರಂಥಾಲಯ ನಿರ್ಮಿಸಿಕೊಡುವಂತೆ ಕಾರ್ಪೊರೇಟರ್‌ ಹಾಗೂ ನಾಗರಿಕರು ಒತ್ತಡ ಹೇರುತ್ತಿದ್ದಾರೆ. ಆದರೆ, ನಮಗೆ ಹಣ ಹಾಗೂ ಸಿಬ್ಬಂದಿ ಕೊರತೆ ಇದೆ. ಪಾಲಿಕೆಯಿಂದ ಸುಮಾರು ₹ 18 ಕೋಟಿ ಗ್ರಂಥಾಲಯ ಸೆಸ್‌ ಬರಬೇಕಿದೆ. ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ಸಂಗ್ರಹಿಸುತ್ತಿರುವ ಸೆಸ್‌ ಕೂಡ ಸರಿಯಾಗಿ ಲೆಕ್ಕಕ್ಕೆ ಸಿಗುತ್ತಿಲ್ಲ. ಸೆಸ್‌ ಪಾವತಿಸುವಂತೆ ಹಲವು ಬಾರಿ ಪತ್ರ ಬರೆಯಲಾಗಿದೆ’ ಎಂದು ನಗರ ಕೇಂದ್ರ ಗ್ರಂಥಾಲಯದ ಉಪನಿರ್ದೇಶಕ ಬಿ.ಮಂಜುನಾಥ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ಎರಡು ಗ್ರಂಥಾಲಯಗಳು ಬಾಡಿಗೆ ಕಟ್ಟಡದಲ್ಲಿ ನಡೆಯುತ್ತಿವೆ. ಜಯಲಕ್ಷ್ಮಿಪುರಂನಲ್ಲಿರುವ ಗ್ರಂಥಾಲಯ ಕಟ್ಟಡವೊಂದಕ್ಕೇ ಪ್ರತಿ ತಿಂಗಳು ₹ 14,500 ಬಾಡಿಗೆ ಪಾವತಿಸಲಾಗುತ್ತಿದೆ.

ಗ್ರಂಥಾಲಯಗಳು ಇಲ್ಲದ ಕೆಲ ವಾರ್ಡ್‌ಗಳಿಗೆ ಸಂಚಾರಿ ಗ್ರಂಥಾಲಯದ ಮೂಲಕ ಸೇವೆ ಒದಗಿಸಲಾಗುತ್ತಿದೆ.
ಪ್ರತಿ ವಾರ ಒಂದು ವಾರ್ಡ್‌ನಲ್ಲಿ40 ನಿಮಿಷ ಈ ಸೌಲಭ್ಯ ಕಲ್ಪಿಸಲಾಗುತ್ತಿದೆ.

‘ನಗರ ವ್ಯಾಪ್ತಿಯಲ್ಲಿ ಸದ್ಯ 31 ಶಾಖೆಗಳಿವೆ. ಸಿಬ್ಬಂದಿ ಕೊರತೆಯಿಂದ ಸಮಸ್ಯೆ ಉಂಟಾಗಿದೆ. ಸದ್ಯ 17 ಮಂದಿ ಕಾಯಂ ಹಾಗೂ 55 ಮಂದಿ ತಾತ್ಕಾಲಿಕ ಉದ್ಯೋಗಿಗಳು ಇದ್ದಾರೆ. ಕನಿಷ್ಠ 104 ಸಿಬ್ಬಂದಿ ಇರಬೇಕು’ ಎಂದು ಅವರು ಹೇಳಿದರು.

Post Comments (+)