ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಳೆ ಕೊರತೆ: ಮಸುಕಾದ ರೈತರ ನೆಮ್ಮದಿ, ಕೃಷಿ ಚಟುವಟಿಕೆ ಕುಂಠಿತ

ಹುಣಸೂರು ತಾಲ್ಲೂಕಿನಲ್ಲಿ ಶೇ 37ರಷ್ಟು ಮಳೆ ಕೊರತೆ; ಕೃಷಿ ಚಟುವಟಿಕೆ ಕುಂಠಿತ
Last Updated 17 ಆಗಸ್ಟ್ 2021, 2:16 IST
ಅಕ್ಷರ ಗಾತ್ರ

ಹುಣಸೂರು: ತಾಲ್ಲೂಕಿನಲ್ಲಿ ಈ ಬಾರಿ ವಾಡಿಕೆಯಷ್ಟು ಮಳೆಯಾಗದಿದ್ದರಿಂದ; ರೈತರು ಆಕಾಶದತ್ತ ಮುಖ ಮಾಡಿದ್ದಾರೆ.

ತಾಲ್ಲೂಕಿನಲ್ಲಿ ವಾಡಿಕೆ ಮಳೆ 41.90 ಸೆಂ.ಮೀ ಬೀಳಬೇಕಿತ್ತು. ಈವರೆಗೆ 26.20 ಸೆಂ.ಮೀ ಮಳೆಯಾಗಿದ್ದು, ಶೇ 37.5ರಷ್ಟು ಕೊರತೆ
ಎದುರಾಗಿದೆ.

ಅರೆ ಮಲೆನಾಡಿಗೆ ಸೇರಿದ, ಕ್ಷೇತ್ರದಲ್ಲಿ ಅತಿ ಹೆಚ್ಚು ಮಳೆ ಬೀಳುತ್ತಿದ್ದ ಹನಗೋಡು ಭಾಗದಲ್ಲಿ ಈ ಸಾಲಿನಲ್ಲಿ ಶೇ 58ರಷ್ಟು ಮಳೆ ಕೊರತೆ ಉಂಟಾಗಿದ್ದು, ಕೃಷಿ ಚಟುವಟಿಕೆಗಳು ಸ್ವಲ್ಪ ಮಟ್ಟಿಗೆ ಕುಂಠಿತಗೊಂಡಿವೆ.

ಮುಂಗಾರು ಆರಂಭದಲ್ಲಿ ಬಿಳಿಕೆರೆ ಭಾಗದಲ್ಲಿ ಶೇ 73ರಷ್ಟು ಮಳೆಯಾಗಿದ್ದರಿಂದ, ವಾಣಿಜ್ಯ ಬೆಳೆಯಾದ ಮುಸುಕಿನ ಜೋಳ ಬಿತ್ತನೆ ಚುರುಕುಗೊಂಡಿತ್ತು. ಜೂನ್ ನಂತರದಲ್ಲಿ ಮಳೆ ಏಕಾಏಕಿ ಕೈ ಕೊಟ್ಟಿದ್ದರಿಂದ ಮುಸುಕಿನ ಜೋಳ ಬೆಳೆ ಸೊರಗಿ, ಬೆಳವಣಿಗೆ ಕುಂಠಿತವಾಗಿ ಇಳುವರಿ ಇಲ್ಲದೆ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ.

ಕ್ಷೇತ್ರದಲ್ಲಿ 85 ಸಾವಿರ ಹೆಕ್ಟೇರ್ ಪ್ರದೇಶ ಕೃಷಿಗೆ ಯೋಗ್ಯವಾಗಿದ್ದು, ಈ ಪೈಕಿ ಪ್ರಸಕ್ತ ಸಾಲಿನಲ್ಲಿ ಕೇವಲ 49 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಕೃಷಿ ಚಟುವಟಿಕೆ ನಡೆದಿದೆ. ರಾಗಿ, ಭತ್ತ, ಹುರುಳಿ ಮತ್ತು ಅವರೆಕಾಯಿ ಬಿತ್ತನೆ ಕಾರ್ಯ ತಂಬಾಕು ಬೇಸಾಯ ಮುಗಿದ ಬಳಿಕ ಆರಂಭವಾಗಲಿದೆ. ಆಗಸ್ಟ್ ಅಂತ್ಯದೊಳಗೆ ವಾಡಿಕೆ ಮಳೆ ಬಂದರೆ ದ್ವಿದಳ ಧಾನ್ಯ ಬೇಸಾಯಕ್ಕೆ ರೈತರು ಮುಂದಾಗುವ ಸಾಧ್ಯತೆ ಇದೆ.

‘ಹುಣಸೂರು ತಾಲ್ಲೂಕಿನಲ್ಲಿ ತಂಬಾಕು ಬಳಿಕ ಮುಸುಕಿನ ಜೋಳವನ್ನು ಹೆಚ್ಚಾಗಿ ಬೆಳೆಯುತ್ತಾರೆ. ಈ ಸಾಲಿನಲ್ಲಿ 13 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಬೆಳೆದ ಜೋಳದ ಬೆಳೆ ತೆನೆ ಕಚ್ಚುವ ಸಮಯಕ್ಕೆ ಮಳೆ ಬಾರದೆ, ಇಳುವರಿ ಇಳಿಮುಖವಾಗುವ ಆತಂಕ ಎದುರಾಗಿದೆ. ಹನಗೋಡು ಮತ್ತು ಬಿಳಿಕೆರೆ ಭಾಗದಲ್ಲಿ ಮಳೆ ಕೊರತೆಯಿಂದ ರೈತರು ಸಮಸ್ಯೆ ಎದುರಿಸುತ್ತಿದ್ದಾರೆ’ ಎಂದು ಕೃಷಿ ಸಹಾಯಕ ನಿರ್ದೇಶಕ ವೆಂಕಟೇಶ್ ತಿಳಿಸಿದರು.

13 ಸಾವಿರ ಹೆಕ್ಟೇರ್‌ ಪ್ರದೇಶದಲ್ಲಿ ಭತ್ತ ನಾಟಿ

ಕ್ಷೇತ್ರದಲ್ಲಿ ಭತ್ತ ಬೇಸಾಯ ಹೆಚ್ಚಾಗಿ ಇಲ್ಲವಾದರೂ ಲಕ್ಷ್ಮಣತೀರ್ಥ ನದಿ ಪಾತ್ರದಲ್ಲಿ 13 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಭತ್ತ ಬೇಸಾಯ ನಡೆದಿದೆ. ಉದ್ದೂರು ನಾಲೆಯು ಅತಿ ಹೆಚ್ಚು ಅಚ್ಚುಕಟ್ಟು ಪ್ರದೇಶವನ್ನು ಹೊಂದಿದ್ದು, ಈ ಭಾಗದಲ್ಲಿ ರೈತರು ಭತ್ತದ ಪೈರು ನಾಟಿ ಕಾರ್ಯಕ್ಕೆ ಮುಂದಾಗಿದ್ದಾರೆ. ಗಾವಡಗೆರೆ ಹೋಬಳಿ ಭಾಗದಲ್ಲಿ ಹಾರಂಗಿ ನಾಲೆ ವ್ಯಾಪ್ತಿಯಲ್ಲಿ ಭತ್ತ ಬೇಸಾಯಕ್ಕೆ ಸಿದ್ಧತೆ ನಡೆದಿದೆ.

ಅಂಕಿ–ಅಂಶ

85 ಸಾವಿರ ಹೆಕ್ಟೇರ್

ಬೇಸಾಯ ಯೋಗ್ಯ ಭೂಮಿ

49 ಸಾವಿರ ಹೆಕ್ಟೇರ್

ಪ್ರಸಕ್ತ ಸಾಲಿನಲ್ಲಿ ಬೇಸಾಯ ಮಾಡಿರುವ ಪ್ರದೇಶ

41.90 ಸೆಂ.ಮೀ

ತಾಲ್ಲೂಕಿನಲ್ಲಿ ಬೀಳುವ ಸರಾಸರಿ ವಾಡಿಕೆ ಮಳೆ


26.20 ಸೆಂ.ಮೀ

ಪ್ರಸಕ್ತ ಸಾಲಿನಲ್ಲಿ ಬಿದ್ದ ಮಳೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT