ಸೋಮವಾರ, ಅಕ್ಟೋಬರ್ 18, 2021
24 °C

ಕೊರೊನಾ ದೂರವಾದರೆ ಮುಂದಿನ ವರ್ಷ ಅದ್ಧೂರಿ ದಸರಾ: ಸಿ.ಎಂ ಬೊಮ್ಮಾಯಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೈಸೂರು: 'ದೇವಿ ಚಾಮುಂಡೇಶ್ವರಿ ಎಲ್ಲರಿಗೂ ಒಳಿತು ಮಾಡಿದರೆ, ಮಳೆ ಬೆಳೆ‌ ಪರಿಸ್ಥಿತಿ ಸುಧಾರಿಸಿದರೆ ಮುಂದಿನ ವರ್ಷ ಅದ್ಧೂರಿ ದಸರಾ ಹಮ್ಮಿಕೊಳ್ಳಲು ಸರ್ಕಾರ ಸಿದ್ಧವಿದೆ' ಎಂದು ಮುಖ್ಯಮಂತ್ರಿ‌ ಬಸವರಾಜ‌ ಬೊಮ್ಮಾಯಿ ಹೇಳಿದರು.

ಚಾಮುಂಡಿಬೆಟ್ಟದಲ್ಲಿ ಗುರುವಾರ
ದಸರಾ ಉತ್ಸವದ ಉದ್ಘಾಟನೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ' ದಸರಾ ಉತ್ಸವವನ್ನು ಅಂತರರಾಷ್ಟ್ರೀಯ ಮಟ್ಟಕ್ಕೆ ಏರಿಸಲು ಟೂರಿಸಂ ಸರ್ಕಿಟ್ ಮಾಡಲು ಪ್ರಯತ್ನಿಸಲಾಗುವುದು. ಆ ಕ್ಷೇತ್ರದ ಎಲ್ಲ‌ ಪರಿಣಿತರ ಸಹಕಾರ ಪಡೆಯಲಾಗುವುದು' ಎಂದರು.

'ನಾಡದೇವತೆ ಚಾಮುಂಡೇಶ್ವರಿಯ ಸೇವೆ ಮಾಡುವ ಸದವಕಾಶ ದೊರಕಿರುವುದು‌ ನನ್ನ ಪೂರ್ವ ಜನ್ಮದ ಪುಣ್ಯ. ನಾಡಿನ ಜನತೆಯನ್ನು ಎಲ್ಲ ಕಷ್ಟದಿಂದ ದೇವಿ ಕಾಪಾಡಲಿ ಎಂದು ಪ್ರಾರ್ಥಿಸಿರುವೆ.‌ ಕಷ್ಟ ಕೊಡುವುದಿದ್ದರೆ ನನಗೇ ಕೊಡಲಿ' ಎಂದು ಹೇಳಿದರು.

'ನಾಡಿಗೆ ತಮ್ಮದೇ ವಿಶಿಷ್ಟ ಕೊಡುಗೆ ನೀಡಿರುವ ಕೃಷ್ಣ ಅವರಿಂದಲೇ ನಾಡ ಹಬ್ಬವನ್ನು ಉದ್ಘಾಟಿಸಬೇಕು ಎಂದು‌, ದಸರೆ ಸಿದ್ಧತೆಯ ಮೊದಲ ಸಭೆಯ ಸಂದರ್ಭದಲ್ಲೇ ನಿರ್ಧರಿಸಿದ್ದೆ. ಆದರೆ ಸಮಯಾವಕಾಶ ಪಡೆದು ಅವರ ಹೆಸರು ಘೋಷಿಸಿದೆ' ಎಂದರು.

'ನಾಡಹಬ್ಬವನ್ನು ಉದ್ಘಾಟಿಸಿದವರೆಲ್ಲರೂ ಸರ್ವಶ್ರೇಷ್ಟರು. ಕೃಷ್ಣ ಅವರ ಆಯ್ಕೆಯನ್ನು ಕನ್ನಡ ಲೋಕ ಸ್ವಾಗತಿಸಿ, ಜನ ಒಪ್ಪಿಗೆಯ ಮುದ್ರೆ ನೀಡಿದ್ದು ಸಂತೋಷ ತಂದಿದೆ. ಇದು ನಮ್ಮ ಆಯ್ಕೆಯ ಹೆಗ್ಗಳಿಕೆ‌ ಅಲ್ಲ. ಬದಲಿಗೆ, ಕೃಷ್ಣ ಅವರ ವ್ಯಕ್ತಿತ್ವದ ಹೆಗ್ಗಳಿಕೆ' ಎಂದು‌ ಬಣ್ಣಿಸಿದರು.

'ಕೃಷ್ಣ ಅವರ ಅಧಿಕಾರದ ಅವಧಿಯಲ್ಲಿ ಜಾರಿಗೆ ಬಂದ ಯಶಸ್ವಿನಿ ಯೋಜನೆ ಸ್ಥಗಿತಗೊಂಡಿದ್ದು,
ಹಣಕಾಸು ಪರಿಸ್ಥಿತಿ ಸುಧಾರಣೆಯಾದರೆ ಮತ್ತೆ ಚಾಲನೆಗೊಳಿಸಲಾಗುವುದು. ಮಧ್ಯಾಹ್ನದ ಬಿಸಿಯೂಟ ಯೋಜನೆಯನ್ನು ಕೃಷ್ಣ ಅವರ ಅಧಿಕಾರದ ಅವಧಿಯಲ್ಲಿಯೇ ಜಾರಿಗೊಳಿಸಿ, ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಶಾಲೆಗೆ ಕರೆತರಲು ಉತ್ತೇಜನ ನೀಡಲಾಯಿತು. ಐಟಿ, ಬಿಟಿ‌ ಉದ್ಯಮ ಕ್ಷೇತ್ರದಲ್ಲೂ ಅವರ ಹೆಜ್ಜೆ ಗುರುತುಗಳಿವೆ' ಎಂದು ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು