ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೈಯಕ್ತಿಕ ಬಿಡಿ, ಅಭಿವೃದ್ಧಿಗೆ ಸಹಕರಿಸಿ: ಮೈಸೂರು ಮೇಯರ್‌ ತಸ್ನಿಂ

ಜಿಲ್ಲಾಧಿಕಾರಿ, ಸಂಸದರ ವಿರುದ್ಧ ಮಹಾನಗರ ಪಾಲಿಕೆಯ ಮೇಯರ್‌ ತಸ್ನಿಂ ಕಿಡಿ
Last Updated 21 ಅಕ್ಟೋಬರ್ 2020, 13:04 IST
ಅಕ್ಷರ ಗಾತ್ರ

ಮೈಸೂರು: ಶಿಷ್ಟಾಚಾರ ಪಾಲಿಸಲಿಲ್ಲ ಎಂದು ಜಿಲ್ಲಾಧಿಕಾರಿ ವಿರುದ್ಧ ಹಾಗೂ ವೃತ್ತಕ್ಕೆ ಹೆಸರಿಟ್ಟಿದ್ದು ಕಾನೂನು ಬಾಹಿರ ಕ್ರಮ ಎಂದು ಪಾಲಿಕೆಯ ಆಯುಕ್ತರಿಗೆ ಪತ್ರ ಬರೆದ ಸಂಸದ ಪ್ರತಾಪಸಿಂಹ ವಿರುದ್ಧ ಮಹಾನಗರ ಪಾಲಿಕೆಯ ಮೇಯರ್ ತಸ್ನಿಂ ಬುಧವಾರ ಕಿಡಿಕಾರಿದ್ದಾರೆ.

ದಸರಾ ಉದ್ಘಾಟನೆಗೆ ಬಂದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸ್ವಾಗತಕ್ಕೆ ಅವಕಾಶ ಕೊಡದಿದ್ದಕ್ಕೆ ತಸ್ನಿಂ, ತಮ್ಮನ್ನು ಭೇಟಿಯಾದ ಮಾಧ್ಯಮದವರ ಬಳಿ ಜಿಲ್ಲಾಧಿಕಾರಿ ವಿರುದ್ಧ ಹರಿಹಾಯ್ದರು.

‘ಮುಖ್ಯಮಂತ್ರಿ ಸ್ವಾಗತಕ್ಕೆ ತೆರಳುತ್ತಿದ್ದ ನನ್ನನ್ನು ಜಿಲ್ಲಾಧಿಕಾರಿ ಸೂಚನೆಯಂತೆ ಪೊಲೀಸರು ತಡೆದರು. ದಸರಾ ಉದ್ಘಾಟನಾ ಸಮಾರಂಭದಲ್ಲೂ ಜಿಲ್ಲಾ ಉಸ್ತುವಾರಿ ಸಚಿವರ ಪಕ್ಕದಲ್ಲೇ ಆಸನ ವ್ಯವಸ್ಥೆ ಮಾಡದೆ ಕೊನೆಯಲ್ಲಿ ಕೂರಿಸುವ ಮೂಲಕ ಶಿಷ್ಟಾಚಾರ ಉಲ್ಲಂಘಿಸಲಾಗಿದೆ. ಮೈಸೂರಿನ ಪ್ರಥಮ ಪ್ರಜೆಗೆ ಸೂಕ್ತ ಗೌರವವನ್ನು ನೀಡಲಿಲ್ಲ. ಉಪ ಮೇಯರ್ ಹಾಗೂ ಜಿಲ್ಲಾ ಪಂಚಾಯಿತಿಯ ಉಪಾಧ್ಯಕ್ಷರ ಹೆಸರನ್ನೇ ಹೇಳಲಿಲ್ಲ’ ಎಂದು ತಸ್ನಿಂ ಅಸಮಾಧಾನ ವ್ಯಕ್ತಪಡಿಸಿದರು.

‘ಯಾರನ್ನು ಮೆಚ್ಚಿಸಲು ಈ ರೀತಿಯ ಕೆಲಸ ಮಾಡಿದ್ದೀರಿ. ಶಿಷ್ಟಾಚಾರ ಪಾಲಿಸಿ. ಜನರ ಸೇವೆ ಮಾಡಿ. ಮನವೊಲಿಸಲು ಮುಂದಾಗಬೇಡಿ’ ಎಂದು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಹೆಸರು ಪ್ರಸ್ತಾಪಿಸದೆ ಮೇಯರ್ ಚಾಟಿ ಬೀಸಿದರು.

ವೈಯಕ್ತಿಕ ಬಿಡಿ: ‘ಪಾಲಿಕೆ ಸದಸ್ಯರನ್ನು ಕಡೆಗಣಿಸಿ ಮಾತನಾಡುವುದು. ಹೀಗಳೆಯುವುದನ್ನು ಬಿಡಿ. ಕೌನ್ಸಿಲ್‌ನ ನಿರ್ಣಯ ಗೌರವಿಸಿ. ನಮಗೂ ಸುತ್ತೋಲೆಗಳ ಬಗ್ಗೆ ಅರಿವಿದೆ. ಕೇಂದ್ರ ಸರ್ಕಾರ ಹೊಸದಾಗಿ ಸುತ್ತೋಲೆ ಹೊರಡಿಸಿದ್ದರೆ ಕೊಡಿ’ ಎಂದು ಮೇಯರ್‌ ತಸ್ನಿಂ ಸಂಸದ ಪ್ರತಾಪಸಿಂಹಗೆ ತಿರುಗೇಟು ನೀಡಿದರು.

‘ಮೈಸೂರು–ತಿ.ನರಸೀಪುರ ರಾಷ್ಟ್ರೀಯ ಹೆದ್ದಾರಿ 766ರ ಲಲಿತ ಮಹಲ್‌ ಜಂಕ್ಷನ್‌ ಬಳಿಯ ವೃತ್ತಕ್ಕೆ ವೈದ್ಯರೊಬ್ಬರ ಹೆಸರನ್ನಿಡುವಂತೆ ನೀವೇ ಎರಡು ಬಾರಿ ಪಾಲಿಕೆಯ ಕೌನ್ಸಿಲ್‌ ಸಭೆಗಳಿಗೆ ಹಾಜರಾಗಿ ವಿಷಯ ಪ್ರಸ್ತಾಪಿಸಿದ್ದೀರಿ. ವೈದ್ಯರ ಹೆಸರಿಟ್ಟಿದ್ದರೆ ಕಾನೂನು ಬಾಹಿರ ಆಗುತ್ತಿರಲಿಲ್ಲವೇ ?’ ಎಂದು ಮೇಯರ್ ಚಾಟಿ ಬೀಸಿದರು.

‘ಪಾಲಿಕೆಯ ಕೌನ್ಸಿಲ್ ನಿರ್ಣಯ ಕಾನೂನು ಬಾಹಿರ ಎಂದಿದ್ದೀರಿ. ನೀವು ಸಂಸದರಾದ ಏಳು ವರ್ಷಗಳಲ್ಲಿ ಹಲವು ವೃತ್ತಗಳಿಗೆ ಪಾಲಿಕೆ ನಾಮಕರಣ ಮಾಡಿದೆ. ಇವೆಲ್ಲವನ್ನೂ ತಿರಸ್ಕರಿಸಬೇಕೆ. ಪಾಲಿಕೆ ಕೌನ್ಸಿಲ್‌ ಸಭೆಗೆ ಬನ್ನಿ. ಚರ್ಚೆ ಮಾಡೋಣ. ವಿನಾಃ ಕಾರಣ ಹೇಳಿಕೆ ಕೊಡುವುದು, ದ್ವೇಷ ಸಾಧಿಸುವುದು ನಿಮ್ಮ ಹುದ್ದೆಗೆ ಶೋಭೆಯಲ್ಲ’ ಎಂದು ತಸ್ನಿಂ ವಾಗ್ದಾಳಿ ನಡೆಸಿದರು.

‘ಎಲ್ಲರ ಸಹಮತದಿಂದ ವೃತ್ತಕ್ಕೆ ಮಾಜಿ ಸದಸ್ಯರ ಹೆಸರನ್ನಿಡಲು ನಿರ್ಣಯ ಅಂಗೀಕರಿಸಿದ್ದೇವೆ. ಪ್ರತಿ ಹಂತದಲ್ಲೂ ಸುತ್ತೋಲೆಯ ನಿಯಮಾವಳಿ ಪಾಲಿಸಿದ್ದೇವೆ. ಜಿಲ್ಲಾಧಿಕಾರಿ ಹಂತದಲ್ಲಿದೆ. ಇನ್ನಾದರೂ ನಿಮ್ಮ ವೈಯಕ್ತಿಕ ಹಿತಾಸಕ್ತಿ ಬಿಡಿ. ಮೈಸೂರಿನ ಅಭಿವೃದ್ಧಿಗಾಗಿ ಕೈ ಜೋಡಿಸಿ’ ಎಂದು ಹೇಳಿದರು.

ವೃತ್ತಕ್ಕೆ ಹೆಸರು: ಆಯುಕ್ತರಿಗೆ ಪತ್ರ

ರಾಷ್ಟ್ರೀಯ ಹೆದ್ದಾರಿ ವ್ಯಾಪ್ತಿಗೆ ಒಳಪಡುವ ವೃತ್ತ, ರಸ್ತೆಗಳಿಗೆ ಹೆಸರಿಡಲು ಪಾಲಿಕೆ, ಪ್ರಾಧಿಕಾರ, ಪುರಸಭೆ ಅಥವಾ ನಗರಸಭೆಗೆ ಅಧಿಕಾರವಿಲ್ಲ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅನುಮತಿಯಿಲ್ಲದೆ ಅಂತಹ ಪ್ರಯತ್ನಕ್ಕೆ ಕೈ ಹಾಕುವುದು ಕಾನೂನುಬಾಹಿರ.

ಮೈಸೂರು ಮಹಾನಗರ ಪಾಲಿಕೆ ಕೌನ್ಸಿಲ್‌ ಸಭೆಯಲ್ಲಿ ಮೈಸೂರು–ತಿ.ನರಸೀಪುರ ರಾಷ್ಟ್ರೀಯ ಹೆದ್ದಾರಿ 766ರ ಲಲಿತ ಮಹಲ್‌ ಜಂಕ್ಷನ್‌ ಬಳಿಯ ವೃತ್ತಕ್ಕೆ ನಾಮಕರಣ ಮಾಡಿರುವುದು ಕಾನೂನು ಬಾಹಿರವಾಗಿದೆ. ಕೂಡಲೇ ಈ ನಿರ್ಣಯವನ್ನು ಕೈಬಿಡಿ ಎಂದು ಸಂಸದ ಪ್ರತಾಪಸಿಂಹ ಪಾಲಿಕೆ ಆಯುಕ್ತ ಗುರುದತ್ತ ಹೆಗಡೆ ಅವರಿಗೆ ಪತ್ರ ಬರೆದಿದ್ದಾರೆ.

ವೃತ್ತಗಳಿಗೆ ಹೆಸರಿಡುವ ಮೊದಲು ಪೌರಾಡಳಿತ ಇಲಾಖೆ ಹೊರಡಿಸಿರುವ ಅಧಿಸೂಚನೆಯನ್ನು ಪಾಲಿಕೆ ಆಡಳಿತ ಮೇಲ್ಪಂಕ್ತಿಯಾಗಿಟ್ಟುಕೊಳ್ಳಬೇಕು ಎಂದು ಸಂಸದರು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT