ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

10ನೇ ತರಗತಿಯವರೆಗೆ ಕನ್ನಡ ಪ್ರಥಮ ಭಾಷೆಯಾಗಲಿ: ವಸಂತರಾಜ್ ಅರಸ್

ಪಿರಿಯಾಪಟ್ಟಣ 3ನೇ ತಾಲ್ಲೂಕು ಸಾಹಿತ್ಯ ಸಮ್ಮೇಳನ
Last Updated 22 ಡಿಸೆಂಬರ್ 2019, 13:58 IST
ಅಕ್ಷರ ಗಾತ್ರ

ಬೆಟ್ಟದಪುರ (ಶರಣ ಹರಳಯ್ಯ ವೇದಿಕೆ): ‘ಒಂದನೇ ತರಗತಿಯಿಂದ ಹತ್ತನೇ ತರಗತಿಯವರೆಗೆ ಕಡ್ಡಾಯವಾಗಿ ಕನ್ನಡವನ್ನು ಪ್ರಥಮ ಭಾಷೆಯನ್ನಾಗಿ ಮಾಡುವ ದೃಢ ನಿರ್ಧಾರವನ್ನು ಸರ್ಕಾರ ಕೈಗೊಳ್ಳಬೇಕು’ ಎಂದು ಸಮ್ಮೇಳನಾಧ್ಯಕ್ಷ ಟಿ.ಸಿ.ವಸಂತರಾಜ್ ಅರಸ್ ಒತ್ತಾಯಿಸಿದರು.

ಪಿರಿಯಾಪಟ್ಟಣ ತಾಲ್ಲೂಕು ಬೆಟ್ಟದಪುರದಲ್ಲಿ ಭಾನುವಾರ ನಡೆದ 3ನೇ ತಾಲ್ಲೂಕು ಸಾಹಿತ್ಯ ಸಮ್ಮೇಳನದ ಅಧ್ಯಕ್ಷೀಯ ಭಾಷಣ ಮಾಡಿದ ಅವರು, ನಾವು ಎಲ್ಲಾ ಭಾಷೆಗಳನ್ನು ಪ್ರೀತಿಸೋಣ. ಆದರೆ, ಕನ್ನಡ ಭಾಷೆಯನ್ನು ಬೆಳೆಸೋಣ ಎಂದು ಹೇಳಿದರು.

‘ಸರ್ಕಾರಿ ಶಾಲೆಗಳಲ್ಲೂ ಆಂಗ್ಲ ಮಾಧ್ಯಮವನ್ನು ತೆರೆಯುತ್ತಿರುವುದು ಕನ್ನಡದ ಅಳಿವಿನ ಮುನ್ಸೂಚನೆಯಾಗಿದೆ ಎಂದು ಆತಂಕ ವ್ಯಕ್ತಪಡಿಸಿದಅರಸ್, ಶಿಕ್ಷಣ ಇಲಾಖೆ ನೀಡುತ್ತಿರುವ ಶಿಕ್ಷಣ ಕ್ರಮದಲ್ಲಿ ಬದಲಾವಣೆ ಅಗತ್ಯವಿದೆ’ ಎಂದರು.

‘ತಾಲ್ಲೂಕಿನ ಬೆಟ್ಟದಪುರ ಮಲ್ಲಯ್ಯನ ಬೆಟ್ಟದಕ್ಕೆ ರಸ್ತೆ ನಿರ್ಮಾಣ ಕಾರ್ಯಕ್ಕೆ ವೇಗ ದೊರೆಯಬೇಕು, ಬೆಟ್ಟಕ್ಕೆ ರೋಪ್ ವೇ ನಿರ್ಮಿಸಲು ಅಗತ್ಯವಾದ ವಿದ್ಯುತ್ ಪಡೆಯಲು ಗಾಳಿ ಯಂತ್ರಗಳನ್ನು ಅಳವಡಿಸಿದಲ್ಲಿ ಅಕ್ಕಪಕ್ಕ ಗ್ರಾಮಗಳ ವಿದ್ಯುತ್ ಕೊರತೆಯೂ ನೀಗಲಿದೆ’ ಎಂದರು.

‘ನಾನು ಶಿಕ್ಷಕ ವೃತ್ತಿಯಿಂದ ಬಂದವನು ಆದರೆ ಸಾಹಿತ್ಯ ಕೃಷಿ ಮಾಡಿದವನಲ್ಲ ಈ ತಾಲ್ಲೂಕಿನ ಜನತೆಗೆ ತಿಳಿದಿದ್ದರೂ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷನನ್ನಾಗಿಸಿ ಗೌರವಿಸಿರುವುದು ಸಂತಸ ತಂದಿದೆ’ ಎಂದು ಹೇಳಿದರು.

ಶಿಕ್ಷಣ ಕ್ಷೇತ್ರದಲ್ಲಿ 40 ವರ್ಷಗಳ ಸೇವೆಯಲ್ಲಿ ಅತಿ ಹೆಚ್ಚು ಕಾಲ ಪಿರಿಯಾಪಟ್ಟಣ ಮತ್ತು ಬೆಟ್ಟದಪುರದಲ್ಲಿ ನಿರ್ವಹಿಸಲು ಕಾರಣರಾದವರು ಹಿರಿಯ ರಾಜಕೀಯ ಮುತ್ಸದ್ಧಿ ಪಿ.ಕೆ.ಶಿವಪ್ಪ ಎಂದು ಸ್ಮರಿಸಿದರು. ಶಿಕ್ಷಕ ಸೇವಾ ವೃತ್ತಿಯಲ್ಲಿ ಯಾವುದೇ ಪದಕ ಪ್ರಶಸ್ತಿ ಪಡೆದವನಲ್ಲ ಆದರೆ ತಾಲ್ಲೂಕಿನ ಉದ್ದಗಲಕ್ಕೂ ನನ್ನನ್ನು ಗುರುತಿಸಿ ಮಾತನಾಡಿಸಿ ತೋರಿಸುವ ಆದರ ಮತ್ತು ಅಭಿಮಾನ ನೋಬೆಲ್ ಪಾರಿತೋಷಕ ಪಡೆದಷ್ಟು ಖುಷಿ ನೀಡುತ್ತದೆ ಎಂದು ಸಂತಸ ಹಂಚಿಕೊಂಡರು.

ಸಮ್ಮೇಳನ ಉದ್ಘಾಟಿಸಿದ ಹಿರಿಯ ಸಾಹಿತಿ ಸಿ.ಪಿ.ಕೃಷ್ಣಕುಮಾರ್‌, ‘ಕನ್ನಡ ಸಾಹಿತ್ಯ ಸಮ್ಮೇಳನದ ಪ್ರಯೋಜನವೇನು ಎಂಬ ಸಾರ್ವತ್ರಿಕ ಪ್ರಶ್ನೆಗೆ ಕನ್ನಡಿಗರೆಲ್ಲರೂ ಒಟ್ಟಿಗೆ ಸೇರಿ ಸಂಭ್ರಮಿಸುವ ನೆಪದಲ್ಲೇ ಒಟ್ಟಿಗೆ ಸೇರುವುದು ಒಂದು ಒಳ್ಳೆಯ ಉದ್ದೇಶ’ ಎಂದು ಸಂತೋಷದಿಂದ ಹೇಳಬಹುದು ಎಂದರು.

‘ಕನ್ನಡ ಅಸ್ಮಿತೆಯ ಪ್ರಜ್ವಲ ಪ್ರತಿಮೆ ಕುವೆಂಪು ಎಂದರೆ ತಪ್ಪಾಗಲಾರದು. ಕನ್ನಡಕ್ಕಾಗಿ ಕಿರುಬೆರಳನ್ನೂ ಎತ್ತಲಾರದ ದುರ್ಬಲರಾಗಿದ್ದೇವೆ ಎಂಬುದು ಶೋಚನೀಯ ವಿಷಯವಾಗಿದೆ. ವಿಷಾದ ಸಂಗತಿ ಎಂದರೆ ನಮ್ಮ ಕನ್ನಡಿಗರು ಇನ್ನೂ ಎದ್ದಿಲ್ಲ. ಆದ್ದರಿಂದ ಕುವೆಂಪು ಅವರು ‘ಸತ್ತಂತಿಹರನು ಬಡಿದೆಬ್ಬಿಸು’ ಎಂದಿದ್ದಾರೆ. ಕುವೆಂಪು ಅವರ ಜನ್ಮದಿನ ಸನ್ನಿಹಿತವಾಗುತ್ತಿರುವ ಸಂದರ್ಭದಲ್ಲಿ ಕುವೆಂಪು ಪ್ರತಿಮೆಯನ್ನು ಉದ್ಘಾಟಿಸುತ್ತಿರುವುದು ಸ್ವಾಗತಾರ್ಹ ಎಂದರು.

‘ಸಚಿವರು ಈ ಸಮ್ಮೇಳನ ಉದ್ಘಾಟಿಸಬೇಕಿತ್ತು ಅವರ ಗೈರುಹಾಜರಿಯಲ್ಲಿ ನಾನು ಉದ್ಘಾಟಿಸುತ್ತಿದ್ದೇನೆ ಅಂದರೆ ಸಾಹಿತಿಗಳು ಮತ್ತು ಕವಿಗಳು ಸಚಿವರಿಗೆ ಸರಿಸಮಾನರು ಎಂದು ಜನಸಾಮಾನ್ಯರು ತಿಳಿದು ನೀಡುತ್ತಿರುವ ಗೌರವ’ ಎಂದು ಹೇಳಿದರು.

ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಮತ್ತು ಹೋಬಳಿ ಮಟ್ಟದಲ್ಲಿ ನಡೆಯುವ ಸಮ್ಮೇಳನಗಳು ಸೇರಿದಂತೆ ಎಲ್ಲಾ ಸಮ್ಮೇಳನಗಳು ಮುಖ್ಯವೆನಿಸಲಿದೆ ಎಂದು ಅಭಿಪ್ರಾಯಪಟ್ಟರು.

‘ಪುಸ್ತಕ ಸಂಸ್ಕೃತಿ ಅಧೋತಿಗತಿಯಲ್ಲಿದೆ. ಪುಸ್ತಕಗಳನ್ನು ನಾವು ಕೈಹಿಡಿದರೆ, ಅವು ನಮ್ಮ ಕೈಹಿಡಿಯಲಿವೆ’ ಎಂದು ಅಭಿಪ್ರಾಯಪಟ್ಟರು. ದಕ್ಷಿಣದ ಸಾಹಿತಿಗಳನ್ನು ಉತ್ತರ ಕರ್ನಾಟಕದಲ್ಲಿ ನಡೆಯುತ್ತಿರುವ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿನ್ನಾಗಿಸುವುದನ್ನು ವಿರೋಧಿಸುವುದು ತರವಲ್ಲ. ಸಾಹಿತ್ಯ ಮುಖ್ಯವಾಗಿ ಸಾಮಾಜಿಕ ಅಸ್ತ್ರವಾಗಬೇಕು, ಅದು ಜಾತೀಯತೆ, ಮೌಢ್ಯ ತೊಲಗಿಸಲು ಪೂರಕವಾಗಿ ಸಾಹಿತ್ಯ ರಚನೆಯಾಗಬೇಕು ಎಂದರು.

ಅಧ್ಯಕ್ಷತೆ ವಹಿಸಿದ್ದ ಶಾಸಕ ಕೆ.ಮಹದೇವ್ ಮಾತನಾಡಿ ಜಿಲ್ಲಾ ಸಮ್ಮೇಳನದಷ್ಟೇ ಅಚ್ಚುಕಟ್ಟಾಗಿ ತಾಲ್ಲೂಕು ಸಮ್ಮೇಳನವನ್ನು ಆಯೋಜಿಸಿರುವುದು ಶ್ಲಾಘನೀಯ. ಮಲ್ಲಯ್ಯನ ಬೆಟ್ಟದ ಅಭಿವೃದ್ಧಿಗಾಗಿ ₹ 6 ಕೋಟಿ ಮೀಸಲಿಟ್ಟಿರುವುದಾಗಿ ತಿಳಿಸಿದರು.

ಸಮಾರಂಭದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ವೈ.ಡಿ.ರಾಜಣ್ಣ, ಮಾಜಿ ಅಧ್ಯಕ್ಷರಾದ ಮಡ್ಡಿಕೆರೆ ಗೋಪಾಲ್, ಎಂ.ಚಂದ್ರಶೇಖರ್, ಜಿ.ಪಂ. ಸದಸ್ಯ ಕೆ.ಎಸ್.ಮಂಜುನಾಥ್, ಮೈಮುಲ್ ನಿರ್ದೇಶಕ ಪಿ.ಎಂ.ಪ್ರಸನ್ನ, ತಾ.ಪಂ. ಅಧ್ಯಕ್ಷೆ ಕೆ.ಆರ್.ನಿರೂಪಾ, ಬೆಟ್ಟದಪುರದ ಸಲಿಲಾಖ್ಯ ಮಠದ ಚೆನ್ನಬಸವ ದೇಶಿ ಕೇಂದ್ರ ಸ್ವಾಮೀಜಿ, ಕನ್ನಡ ಸಾಹಿತ್ಯ ಪರಿಷತ್ ತಾಲ್ಲೂಕು ಘಟಕದ ಅಧ್ಯಕ್ಷ ಗೊರಳ್ಳಿ ಜಗದೀಶ್, ಸಾಹಿತಿಗಳಾದ ಬೇ.ಗೋ.ರಮೇಶ್, ಶ್ರೀಪತಿ ಜೋಯಿಸ್, ರಾಜಶೇಖರ್ ಕದಂಬ, ತಹಶೀಲ್ದಾರ್ ಶ್ವೇತಾ ಎನ್.ರವೀಂದ್ರ, ತಾ.ಪಂ. ಇಒ ಡಿ.ಸಿ.ಶ್ರುತಿ, ಸರ್ಕಾರಿ ನೌಕರರ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಶಿವಯೋಗ, ಬೆಟ್ಟದಪುರ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಯಶೋದಾ ಸೇರಿದಂತೆ ತಾ.ಪಂ. ಸದಸ್ಯರು, ಸ್ಥಳೀಯ ಜನಪ್ರತಿನಿಧಿಗಳು, ಸಂಘ– ಸಂಸ್ಥೆಗಳ ಪದಾಧಿಕಾರಿಗಳು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT