ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸುಗ್ಗಿಯ ಸಂಕ್ರಾಂತಿ: ಅಲಂಕೃತ ಜಾನುವಾರುಗಳ ಕಿಚ್ಚು ಹಾಯಿಸುವುದು...

Last Updated 14 ಜನವರಿ 2020, 10:00 IST
ಅಕ್ಷರ ಗಾತ್ರ

ಸೂರ್ಯನ ಪಥ ಬದಲಾವಣೆಯೊಂದಿಗೆ ತಳುಕು ಹಾಕಿಕೊಂಡಿರುವ ‘ಮಕರ ಸಂಕ್ರಾಂತಿ’ಗೆ ನೂರೆಂಟು ನಂಟು. ದೇಶದ ವಿವಿಧೆಡೆ ಪ್ರಮುಖವಾಗಿ ಆಚರಣೆಗೊಳ್ಳುವ ಸಂಕ್ರಾಂತಿ, ನಮ್ಮಲ್ಲೂ ಹಬ್ಬದ ಸಡಗರ ಸೃಷ್ಟಿಸಲಿದೆ.

ವರ್ಷಾರಂಭದ ಮೊದಲ ಹಬ್ಬವೆಂಬ ಹಿರಿಮೆ. ಸುಗ್ಗಿಯ ಸಂಭ್ರಮವೂ ಇದರೊಟ್ಟಿಗೆ ತನ್ನ ನಂಟು ಬೆಸೆದುಕೊಂಡಿದೆ. ಮಾಗಿ ಚಳಿ ತಗ್ಗಲಾರಂಭಿಸುವ ಸಮಯ ಆರಂಭದ ಹೊತ್ತಿದು. ನದಿಗಳಲ್ಲಿ ಉತ್ತರಾಯಣ ಪುಣ್ಯಕಾಲದ ಸ್ನಾನ ಮಾಡುವ ಸಮಯವೂ ಹೌದು.

ಹಿಂಗಾರು ಫಸಲು ರಾಶಿಯಾಗಿ ಮನೆ ಸೇರುವ ಹೊತ್ತಲ್ಲಿ ರೈತರು ಸಂಭ್ರಮದಿಂದ ಆಚರಿಸುವ ಹಬ್ಬವಿದು. ಗ್ರಾಮೀಣರಿಗೆ ಮೀಸಲಾಗದೆ ನಗರ ಪ್ರದೇಶದಲ್ಲೂ ತನ್ನ ಸೊಗಡನ್ನು ಜೀವಂತವಾಗಿಸಿಕೊಂಡಿದೆ ಎಂಬುದಕ್ಕೆ ಮೈಸೂರು ನಗರವೇ ಸಾಕ್ಷಿಯಾಗಿದೆ. ಸಂಕ್ರಾಂತಿ ಹಬ್ಬ ಅದ್ಧೂರಿಯಿಂದ ಆಚರಣೆಗೊಳ್ಳಲಿದೆ. ಎಲ್ಲ ಸಂಪ್ರದಾಯ ಪಾಲನೆಯಾಗಲಿವೆ ಎಂಬುದೇ ಇಲ್ಲಿನ ವಿಶೇಷ.

ಜಾನುವಾರು ಅಲಂಕಾರ: ಹಸು, ಹೋರಿ, ಎತ್ತುಗಳಿರುವ ಮನೆಯಲ್ಲಿ ಸಂಕ್ರಾಂತಿ ಸಂಭ್ರಮ ನೂರ್ಮಡಿಗೊಂಡಿರುತ್ತದೆ. ನಸುಕಿನಲ್ಲೇ ಮೈ ಕೊರೆವ ಚಳಿಯನ್ನು ಲೆಕ್ಕಿಸದೆ ಜಾನುವಾರು ಮೈ ತೊಳೆಯಲು ಕೆರೆ–ಕಟ್ಟೆ, ನಾಲೆ ಹಾಗೂ ನೀರಿರುವ ಬಳಿ ಹೊಡೆದುಕೊಂಡು ಹೋಗುವ ಕುಟುಂಬದ ಹಿರಿಯ ಪುರುಷರು, ಯುವಕರು ಸಂಭ್ರಮದಿಂದ ಸ್ವಚ್ಛಗೊಳಿಸುತ್ತಾರೆ. ಹಲವರು ಕುರಿ–ಆಡು ಮೈ ತೊಳೆಯುವುದುಂಟು.

ಮೈ ತೊಳೆವ ಜಾಗದಲ್ಲೇ ತಮ್ಮ ಜಾನುವಾರುಗಳ ಕೊಂಬನ್ನು ಹಸನುಗೊಳಿಸಿ, ಬಣ್ಣ ಬಳಿಯುತ್ತಾರೆ. ಕಾಲು–ಮೈಗೂ ಬಣ್ಣದ ಲೇಪನ ಮಾಡಿ ಅಲಂಕಾರಗೊಳಿಸಿ ಸಂಭ್ರಮಿಸುತ್ತಾರೆ. ಮರಳಿ ಮನೆ ಬಳಿ ಕರೆತಂದು ಕೊಂಬುಗಳಿಗೆ ಬಲೂನು ಕಟ್ಟಿ ಅಲಂಕಾರವನ್ನು ಮತ್ತಷ್ಟು ಹೆಚ್ಚಿಸುತ್ತಾರೆ. ಹೂವುಗಳನ್ನು ಬಳಸುತ್ತಾರೆ. ರಾಸುಗಳ ಅಲಂಕಾರ ಕಣ್ತುಂಬಿಕೊಳ್ಳುವುದೇ ಒಂದು ಆನಂದ.

ಜಾನುವಾರು ಇಲ್ಲದವರು ತಮ್ಮೂರಿನ ಬಸವನನ್ನೇ ಅಲಂಕರಿಸಿ ಮೆರವಣಿಗೆ ಮಾಡುತ್ತಾರೆ. ಇದಕ್ಕೆ ಕಿಚಡಿ, ಹಣ್ಣಿನ ನೈವೇದ್ಯ ಕೊಡುತ್ತಾರೆ. ಈ ಮೂಲಕ ತಮ್ಮ ಸುಗ್ಗಿಯ ಹಿಗ್ಗನ್ನು ರೈತ ಸಮೂಹ ನೂರ್ಮಡಿಗೊಳಿಸಿಕೊಳ್ಳುವುದನ್ನು ಗ್ರಾಮೀಣ ಪರಿಸರದಲ್ಲಿ ಇಂದಿಗೂ ಕಾಣಬಹುದು. ಮೈಸೂರಿನ ಹೊರ ವಲಯದಲ್ಲೂ ಇದು ಗೋಚರಿಸಲಿದೆ.

ಮನೆಗಳಲ್ಲೂ ಸಂಭ್ರಮ: ಸಂಕ್ರಾಂತಿ ಹಿಂದಿನ ದಿನವೇ ಮನೆಗಳಲ್ಲೂ ಸಂಭ್ರಮ ನೆಲೆಸಿರುತ್ತದೆ. ಮನೆಯನ್ನೆಲ್ಲಾ ಹಬ್ಬದ ಆಚರಣೆಗೆ ಸ್ವಚ್ಛಗೊಳಿಸುವುದು ಮಹಿಳೆಯರ ಮೊದಲ ಆದ್ಯತೆ. ಪುರುಷರು ಸಾಥ್ ನೀಡುತ್ತಾರೆ. ಮನೆ ಮುಂಭಾಗ ಚಿತ್ತಾಕರ್ಷಕ ರಂಗೋಲಿ ಬಿಡಿಸುತ್ತಾರೆ. ಅದಕ್ಕೆ ಬಣ್ಣ ತುಂಬುತ್ತಾರೆ. ಹಸಿರ ತೋರಣದಿಂದ ಸಿಂಗರಿಸಿ ಸಂಭ್ರಮಿಸುತ್ತಾರೆ.

ಕಬ್ಬು, ಎಳ್ಳು–ಬೆಲ್ಲ ಹಬ್ಬದ ವೈಶಿಷ್ಟ್ಯ. ಕಿಚಡಿ, ಹಸಿ ಅವರೆಕಾಯಿಯ ಸಾರು, ಪಲ್ಯ ವಿಶೇಷ ಅಡುಗೆ. ಗೆಣಸು, ಹೋಳಿಗೆಯ ಸವಿಯೂ ವಿವಿಧೆಡೆ ಇರಲಿದೆ.

ಸಂಕ್ರಾಂತಿಯ ಕಿಚ್ಚು: ಅಲಂಕೃತ ಜಾನುವಾರುಗಳನ್ನು ಮುಸ್ಸಂಜೆಯ ವೇಳೆ ಊರ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿದ ನಂತರ, ಒಂದೆಡೆ ಹುಲ್ಲು ಹರಡಿ, ಅದಕ್ಕೆ ಬೆಂಕಿ ಹಾಕಿ, ಅದರಿಂದ ಹೊರ ಬರುವ ಕಿಚ್ಚು ಹಾಯಿಸುವುದು ಮೈಸೂರು ಭಾಗದ ಸಂಕ್ರಾಂತಿಯ ಸಂಭ್ರಮ–ವೈಶಿಷ್ಟ್ಯದಲ್ಲೊಂದು. ಕುರಿ–ಮೇಕೆಯಿಂದಲೂ ಗ್ರಾಮೀಣ ಪ್ರದೇಶದಲ್ಲಿ ಕಿಚ್ಚು ಹಾಯಿಸುವುದು ತಲೆ ತಲಾಂತರದಿಂದಲೂ ನಡೆದು ಬಂದಿದೆ.

ಕಿಚ್ಚು ಹಾಯಿಸಿದ ಬಳಿಕ ಮನೆಗೆ ಮರಳುವ ರಾಸುಗಳಿಗೆ ಆರತಿ ಬೆಳಗುವ ನಾರಿಯರು, ಪೂಜೆ ಮಾಡಿ ಪ್ರಸಾದ ಕೊಡುತ್ತಾರೆ. ನಂತರ ಮನೆ ಮನೆಗೆ ತೆರಳುವ ಹೆಂಗೆಳೆಯರು ಪರಸ್ಪರ ಎಳ್ಳು–ಬೆಲ್ಲ ವಿನಿಮಯ ಮಾಡಿಕೊಂಡು ಶುಭಾಶಯ ಕೋರುವುದು ವಾಡಿಕೆ.

ಬಿರುಸುಗೊಂಡ ವ್ಯಾಪಾರ: ನಾಲ್ಕು ದಿನಗಳ ಹಿಂದೆಯೇ ವಿವಿಧ ಊರುಗಳಿಂದ ಕಬ್ಬಿನ ವ್ಯಾಪಾರಿಗಳು ಬಂದಿದ್ದಾರೆ. ದೇವರಾಜ ಮಾರುಕಟ್ಟೆ, ಅಗ್ರಹಾರ, ಎಂ.ಜಿ.ರಸ್ತೆ, ಕೆ.ಜಿ.ಕೊಪ್ಪಲು, ಜಯನಗರ, ಕುವೆಂಪುನಗರ, ಬಲ್ಲಾಳ ವೃತ್ತ ಸೇರಿದಂತೆ ಪ್ರಮುಖ ರಸ್ತೆಗಳಲ್ಲಿ ರಾಶಿರಾಶಿ ಕಬ್ಬು, ಬಾಳೆದಿಂಡು ಹಾಕಿಕೊಂಡು ವ್ಯಾಪಾರ ನಡೆಸುತ್ತಿರುವುದು ಸಾಮಾನ್ಯವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT