ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕನ್ನಂಬಾಡಿ ಬಿರುಕು ವಿಚಾರ; ಸಿಎಂ ಸ್ಪಷ್ಟಪಡಿಸಲಿ–ಎಚ್‌.ವಿಶ್ವನಾಥ್‌

Last Updated 9 ಜುಲೈ 2021, 7:24 IST
ಅಕ್ಷರ ಗಾತ್ರ

ಮೈಸೂರು: ಜನರ ನಡುವಿನ ಭಾವನಾತ್ಮಕ ಸಂಕೇತ ಹಾಗೂ ರಾಜಪ್ರಭುತ್ವದ, ಪ್ರಜೆಗಳ ನಡುವಿನ ಸಂಕೇತವಾಗಿ ಉಳಿದಿರುವುದು ಕನ್ನಂಬಾಡಿ (ಕೆಆರ್‌ಎಸ್‌) ಎಂದು ವಿಧಾನ ಪರಿಷತ್ ಸದಸ್ಯ ಎಚ್.ವಿಶ್ವನಾಥ್ ಹೇಳಿದರು.

ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಕನ್ನಂಬಾಡಿಗೆ ಸಂಬಂಧಿಸಿದಂತೆ ಮಾತನಾಡಿದ ಅವರು, 'ಅಂತರರಾಷ್ಟ್ರೀಯ ಪ್ರವಾಸಿ ತಾಣವಾಗಿರುವ ಕನ್ನಂಬಾಡಿ ನಿರ್ಮಾಣವಾಗುವ ವೇಳೆ ಬಹಳಷ್ಟು ತ್ಯಾಗ ನಡೆದಿದೆ. ಸಾಕಷ್ಟು ಗ್ರಾಮಗಳು ಮುಳುಗಡೆ ಆಗಿವೆ. ಕನ್ನಂಬಾಡಿ ನಮ್ಮ ಅಭಿಮಾನದ ಸಂಕೇತ. ರಾಜಮನೆತನದ ಹೆಣ್ಣುಮಕ್ಕಳು ತಮ್ಮ ಒಡವೆಗಳನ್ನು ಮಾರಿ, ಸುಮಾರು ₹ 70 ಲಕ್ಷ ಹಣವನ್ನು ಈ ಅಣೆಕಟ್ಟೆಯ ನಿರ್ಮಾಣಕ್ಕಾಗಿ ಕೊಟ್ಟಿದ್ದಾರೆ. ಇಂಗ್ಲೆಂಡ್ ಸೇರಿದಂತೆ ವಿವಿಧ ದೇಶಗಳಿಂದಲೂ ಡ್ಯಾಂ ನಿರ್ಮಾಣಕ್ಕೆ ವಸ್ತುಗಳು ಬಂದಿವೆ. ಸರ್‌.ಎಂ.ವಿಶ್ವೇಶ್ವರಯ್ಯ ಹಾಗೂ ಹಲವು ದೇಶಗಳ ಎಂಜಿನಿಯರ್‌ಗಳ ಬುದ್ಧಿಶಕ್ತಿ ಇಲ್ಲಿ ಬಳಕೆಯಾಗಿದೆ. ಕನ್ನಂಬಾಡಿ ಬಿರುಕು ಬಿಟ್ಟಿದೆ ಎಂಬುದು ಆತಂಕ ತಂದಿದೆ' ಎಂದರು.

ಬಹುಶಃ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಿರ್ಮಾಣವಾಗಿದ್ದರೆ, ಕಮಿಷನ್, ಕಿಕ್ ಬ್ಯಾಕ್ ತಗೊಂಡು ನಿರ್ಮಾಣ ಮಾಡುತ್ತಿದ್ದರು. ಆದರೆ, ಕನ್ನಂಬಾಡಿ ರಾಜ ಪ್ರಭುತ್ವದಲ್ಲಿ ನಿರ್ಮಾಣ ಆಗಿದ್ದರಿಂದ ಬಿರುಕು ಬಿಟ್ಟಿಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

'ಸಂಸದೆ ಬಿರುಕು ಬಿಟ್ಟಿದೆ ಎಂದು ಹೇಳುತ್ತಿದ್ದಾರೆ, ಮಾಜಿ ಸಿಎಂ ಕುಮಾರಸ್ವಾಮಿ ಬಿರುಕು ಬಿಟ್ಟಿಲ್ಲವೆಂದು ಹೇಳಿಕೆ ನೀಡಿದ್ದಾರೆ. ಮುಖ್ಯಮಂತ್ರಿಗಳು ತಕ್ಷಣ ಈ ವಿಚಾರವನ್ನು ಸ್ಪಷ್ಟಪಡಿಸಬೇಕು. ಜಿಲ್ಲಾ ಉಸ್ತುವಾರಿ ಸಚಿವರು ಸದ್ದಿಲ್ಲದೆ ಕುಳಿತಿರುವುದೇಕೆ. ಈಗಾಗಲೇ ಮುಖ್ಯಮಂತ್ರಿ, ತಾಂತ್ರಿಕ ತಂಡ, ಗಣಿ ತಜ್ಞರ ತಂಡ, ನೀರಾವರಿ ಇಲಾಖೆಯ ತಂಡಗಳು ಬಂದು ಬೀಡು ಬಿಡಬೇಕಾಗಿತ್ತು. ಜನರು ಆತಂಕದಲ್ಲಿದ್ದಾರೆ, ಸರ್ಕಾರವು ಜೀವಂತವಾಗಿದೆಯೋ ಸತ್ತಿದೆಯೋ' ಎಂದು ವಿಶ್ವನಾಥ್‌ ಪ್ರಶ್ನಿಸಿದರು.

'ಡ್ಯಾಂ ಬಿರುಕು ಬಿಟ್ಟಿದೆ ಅನ್ನೋದನ್ನ ಸುಮಲತಾ ಹೇಳೋದಲ್ಲ; ಕನ್ನಂಬಾಡಿ ಸುರಕ್ಷಿತ ಅಂತ ಕುಮಾರಸ್ವಾಮಿ ಹೇಳೋದಲ್ಲ. ಈ ಬಗ್ಗೆ ಶಾಸಕರು ಹೇಳಿಕೆ ನೀಡುವುದಲ್ಲ, ತಾಂತ್ರಿಕ ತಂಡ ತಿಳಿಸಬೇಕು. ಈ ಬಗ್ಗೆ ತಂಡವನ್ನು ರಚಿಸಿ ಸತ್ಯಾಸತ್ಯತೆಯನ್ನು ಜನರಿಗೆ ತಿಳಿಸಲಿ' ಎಂದು ಸಲಹೆ ಮಾಡಿದರು.

'ಕೆಆರ್‌ಎಸ್‌ ವಿಚಾರ ಹಾದಿ-ಬೀದಿ ರಂಪ ಆಗುತ್ತಿದೆ. ಆದರೂ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಏಕೆ ಪ್ರತಿಕ್ರಿಯಿಸುತ್ತಿಲ್ಲ. ಸಿದ್ದರಾಮಯ್ಯ ಮೈಸೂರಿನವರೇ ಆಗಿ ಏಕೆ ಮಾತನಾಡುತ್ತಿಲ್ಲ, ಅವರು ಮಾತನಾಡಬೇಕಿತ್ತು' ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT