ಹೆಚ್ಚಾಗುತ್ತಿರುವ ಮಾವಿನ ಆವಕ

ಶನಿವಾರ, ಮೇ 25, 2019
32 °C
ಸೃಷ್ಟಿಯಾಗದ ಬೇಡಿಕೆ, ಹೆಚ್ಚಾಗುತ್ತಿರುವ ಆವಕ, ನಷ್ಟದ ಭೀತಿಯಲ್ಲಿ ವ್ಯಾಪಾರಸ್ಥರು

ಹೆಚ್ಚಾಗುತ್ತಿರುವ ಮಾವಿನ ಆವಕ

Published:
Updated:
Prajavani

ಮೈಸೂರು: ನಗರದಲ್ಲಿ ಒಂದು ಸುತ್ತಾಟ ನಡೆಸಿದರೆ ‘ಮನೆಯ ಹಿಂದಲ ಮಾವು, ನೆನೆತಾರೆ ಘಮ್ಮೆಂದೊ, ನೆನೆದ್ಹಂಗೆ ಬಂದ ನನ್ನ ಅಣ್ಣ, ಬಾಳೆಯ ಗೊನೆ ಹಂಗೆ ತೋಳ ತಿರುವೂತ...’ ಎಂಬ ಸಾಲುಗಳು ನೆನಪಿಗೆ ಬರುತ್ತವೆ.

ಏಪ್ರಿಲ್ ಮಾಸಾಂತ್ಯದಲ್ಲಿ ಮಾವಿನಹಣ್ಣುಗಳು ಮಾರುಕಟ್ಟೆಗೆ ಲಗ್ಗೆ ಇಟ್ಟಿವೆ. ಸಾಮಾನ್ಯವಾಗಿ ಆರಂಭದಲ್ಲಿ ಬೆಲೆ ದುಬಾರಿಯಾಗುವುದು ವಾಡಿಕೆ. ಆದರೆ, ಈ ಬಾರಿ ಕಳೆದ ಬಾರಿಯಷ್ಟು ಬೆಲೆ ದುಬಾರಿಯಾಗಿಲ್ಲ.‌ ಇನ್ನೊಂದು ವಾರ ಕಳೆದರೆ ಬೆಲೆ ಮತ್ತಷ್ಟು ಇಳಿಯುವ ಸಾಧ್ಯತೆ ಇದೆ ಎಂಬುದು ವರ್ತಕರ ವಲಯದ ಮಾತು.

ಅವಧಿಗೆ ಮುನ್ನ ಬಂದಿರುವ ಮಾವಿನಹಣ್ಣನ್ನು ರಾಸಾಯನಿಕ ಬಳಸಿ ಹಣ್ಣು ಮಾಡಲಾಗಿದೆ. ಇದು ಆರೋಗ್ಯಕ್ಕೆ ಅಪಾಯಕಾರಿ ಎಂಬ ಮಾತುಗಳು ಕೇಳಿ ಬರುತ್ತಿವೆ. ಇದರಿಂದಲೂ ಹೆಚ್ಚಿನ ಜನರು ಮಾವು ಖರೀದಿಸಲು ಮುಂದಾಗುತ್ತಿಲ್ಲ ಎಂದು ಮಾವು ವ್ಯಾಪಾರಿ ಅಬ್ದುಲ್ಲಾ ಹೇಳುತ್ತಾರೆ.‌

ಮಾವು ಹಣ್ಣು ಮಾಡುವುದು ಹೇಗೆ?

ಸಹಜವಾಗಿಯೇ ಮರದಲ್ಲಿಯೇ ಮಾವಿನಹಣ್ಣನ್ನು ಮಾಗಿಸಿ ತಂದು ಮಾರಾಟ ಮಾಡುವವರ ಸಂಖ್ಯೆ ತೀರಾ ಕಡಿಮೆ. ಸಾಂಪ್ರದಾಯಿಕ ವಿಧಾನವಾದ ಒಣಹುಲ್ಲಿನ ಮಧ್ಯೆ ಕಾಯಿಯನ್ನು ಇಟ್ಟು ಮಾಗಿಸುವ ಪ್ರಕ್ರಿಯೆ ಸಾಕಷ್ಟು ಸಮಯ ಹಿಡಿಯುತ್ತದೆ. ಹಾಗಾಗಿ, ಬಹುತೇಕ ಮಧ್ಯವರ್ತಿಗಳು ಕೃತಕ ರಾಸಾಯನಿಕ ಬಳಸಿ ಹಣ್ಣು ಮಾಡುತ್ತಾರೆ. ಇವರು ಯಾವ ರಾಸಾಯನಿಕ ಬಳಸುತ್ತಾರೆ ಎಂಬುದರ ಮೇಲೆ ಹಣ್ಣಿನ ಗುಣಮಟ್ಟ ಅವಲಂಬಿಸಿದೆ.

ರಾಸಾಯನಿಕಗಳಲ್ಲಿ ಕ್ಯಾಲ್ಸಿಯಂ ಕಾರ್ಬೈಡ್ ಮತ್ತು ಎಥಿಲೀನ್ ಎಂಬ ಎರಡು ಬಗೆಯ ರಾಸಾಯನಿಕಗಳನ್ನು ಬಳಸಲಾಗುತ್ತದೆ. ಇದರಲ್ಲಿ ಕ್ಯಾಲ್ಸಿಯಂ ಕಾರ್ಬೈಡ್ ಎಂಬುದು ಅತಿ ಅಗ್ಗವಾದ ಮತ್ತು ಅಪಾಯಕಾರಿಯಾದ ರಾಸಾಯನಿಕ. ಇದು ಬಿಳಿ ಪುಡಿಯ ರೂಪದಲ್ಲಿ ಸುಲಭವಾಗಿ ಸಿಗುತ್ತಿದೆ. ಕೆ.ಜಿ.ಗಟ್ಟಲೆ ಇದನ್ನು ಖರೀದಿಸುವ ಮಧ್ಯವರ್ತಿಗಳು ಕಾಯಿಯ ಮಧ್ಯದಲ್ಲಿ ಈ ಪುಡಿಯನ್ನು ಸಿಂಪಡಿಸುತ್ತಾರೆ. ಈ ಪುಡಿಯು ವಾತಾವರಣಕ್ಕೆ ತೆರೆದುಕೊಂಡಾಗ ರಾಸಾಯನಿಕ ಪ್ರಕ್ರಿಯೆ ಉಂಟಾಗಿ ಒಂದು ವಿಧವಾದ ಅನಿಲವನ್ನು ಬಿಡುಗಡೆಗೊಳಿಸುತ್ತದೆ. ಇದರ ಶಾಖಕ್ಕೆ ಕಾಯಿ ಬೇಗ ಮಾಗುತ್ತದೆ. ಆದರೆ, ಇದು ಕ್ಯಾನ್ಸರ್‌ಕಾರಕ ಎಂಬದು ಸಾಬೀತಾಗಿರುವುದರಿಂದ ಸರ್ಕಾರ ಇದರ ಬಳಕೆ ಮೇಲೆ ನಿಷೇಧ ಹೇರಿದೆ. ಕ್ಯಾಲ್ಸಿಯಂ ಕಾರ್ಬೈಡ್ ಬಳಸಿ ಹಣ್ಣು ಮಾಡಿದವರನ್ನು ಶಿಕ್ಷೆಗೆ ಗುರಿಪಡಿಸಲಾಗುತ್ತದೆ.

ಮತ್ತೊಂದು ರಾಸಾಯನಿಕವಾದ ಎಥಿಲೀನ್‌ ಕ್ಯಾನ್ಸರ್‌ಕಾರಕ ಅಲ್ಲ. ಹಾಗಾಗಿ, ಇದರ ಬಳಕೆಗೆ ಸರ್ಕಾರ ಅನುಮತಿ ನೀಡಿದೆ. ಇದು ಈಗ ಸುಲಭವಾಗಿ ಸ್ಯಾಚೆಗಳಲ್ಲಿ ಲಭ್ಯವಾಗುತ್ತಿದೆ. ಹೆಚ್ಚಿನ ಮಂದಿ ಇದನ್ನು ಬಳಸಿಯೇ ಹಣ್ಣು ಮಾಡುತ್ತಿದ್ದಾರೆ.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !