ಗುರುವಾರ , ಜನವರಿ 21, 2021
27 °C
ಐವರಿಗೆ ಡಾ.ಎಚ್‌.ಕೆ.ಆರ್‌. ರಂಗಪ್ರಶಸ್ತಿ ಪ್ರದಾನ

‘ರಾಮನಾಥ್ ರಂಗಭೂಮಿಯ ಮೇಸ್ಟ್ರು’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮೈಸೂರು: ‘ಹಿರಿಯ ರಂಗಕರ್ಮಿ ಎಚ್‌.ಕೆ.ರಾಮನಾಥ್ ರಂಗಭೂಮಿಯ ಮೇಷ್ಟ್ರು. ನಮಗೆ ಪಠ್ಯವಿದ್ದಂತೆ’ ಎಂದು ಜನಾರ್ದನ್‌ (ಜನ್ನಿ) ಹೇಳಿದರು.

ಕುವೆಂಪು ನಗರದ ಕಲಾಸುರುಚಿ ರಂಗಮನೆಯಲ್ಲಿ ಭಾನುವಾರ ರಂಗಭೂಮಿಯ ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡಿರುವ ಬಿ.ಆರ್.ರವೀಶ್ (ರಂಗ ಸಂಗೀತ), ಬಿ.ಎಂ.ರಾಮಚಂದ್ರ (ವಸ್ತ್ರಾಲಂಕಾರ), ಡಿ.ಅಶ್ವಥ್ ಕದಂಬ (ಪ್ರಸಾದನ), ಎಚ್.ಎಸ್.ಸುರೇಶ್ ಬಾಬು (ಸಂಘಟನೆ), ರಮೇಶ್ ಬಾಬು (ರಂಗ ನಿರ್ವಹಣೆ) ಅವರಿಗೆ ಡಾ.ಎಚ್‌.ಕೆ.ಆರ್‌. ರಂಗಪ್ರಶಸ್ತಿ ಪ್ರದಾನ ಮಾಡಿದ ಅವರು ಮಾತನಾಡಿದರು.

‘ಮರ್ಯಾದಸ್ತರಿಗೆ ಲಾಬಿ, ಪ್ರಭಾವಗಳ ಪ್ರಶಸ್ತಿ ಬೇಡ. ಈಚೆಗೆ ಸರ್ಕಾರದ ಪ್ರಶಸ್ತಿಗಳಲ್ಲಿ ಭ್ರಷ್ಟಾಚಾರವೂ ನುಸುಳಿದೆ. ಸಮೃದ್ಧವಾಗಿ ಸಮರ್ಪಕ ಹಾದಿಯಲ್ಲಿ ಸಾಗುತ್ತಿರುವ ಮೈಸೂರು ರಂಗಭೂಮಿ ನೀಡುವ ಪ್ರಶಸ್ತಿ ತನ್ನದೇ ಆದ ಮಹತ್ವ ಹೊಂದಿದೆ’ ಎಂದು ಅವರು ಹೇಳಿದರು.

‘ನ್ಯಾಯಯುತವಾಗಿ ತಮ್ಮ ತನ ಉಳಿಸಿಕೊಂಡು ಬೆಂಗಳೂರಿನಲ್ಲಿ ಬದುಕಲು ಸಾಧ್ಯವಿಲ್ಲ ಎಂದೇ ನಾನು ಮೈಸೂರಿಗೆ ಬಂದಿದ್ದು. ಅಲ್ಲಿನ ಸಾಮಾಜಿಕ ವ್ಯವಸ್ಥೆಯೇ ಹಾಳಾಗಿದೆ. ಮನುಷ್ಯ ರೂಪವೇ ರಾಕ್ಷಸಿತನವಾಗಿದೆ. ಮೈಸೂರಿನಲ್ಲಿ ಎಲ್ಲವೂ ಉಳಿಸಿದೆ. ಸತ್ಯ, ಮಾನವೀಯತೆಯೇ ರಂಗಭೂಮಿಯ ಅಂತಿಮ ಧ್ಯೇಯವಾಗಬೇಕು’ ಎಂದರು.

ಪ್ರಶಸ್ತಿ ಪ್ರದಾನ ಮಾಡಿದ ಚಿಂತಕ ಡಾ.ಕಾಳೇಗೌಡ ನಾಗವಾರ ಮಾತನಾಡಿ ‘ಮೈಸೂರು ಸಾಹಿತ್ಯ, ಕಲೆ, ಸಂಸ್ಕೃತಿಗೆ ಪೂರಕವಾದ ನಗರ. ಸಂಸ್ಕೃತಿಗೆ ಇಲ್ಲಿ ಅಪಚಾರವಾಗುತ್ತಿಲ್ಲ. ಎಂದೆಂದಿಗೂ ಮೈಸೂರು ಹಲವು ಕ್ಷೇತ್ರಗಳಲ್ಲಿ ಮಾದರಿಯಾಗಿದೆ. ಮುಂದಿನ ಬಾರಿ ಪ್ರಶಸ್ತಿ ನೀಡುವಾಗ ಮಹಿಳೆಯರನ್ನು ಪರಿಗಣಿಸಿ’ ಎಂಬ ಕಿವಿಮಾತನ್ನು ಸಂಘಟಕರಿಗೆ ಹೇಳಿದರು.

ಹಿರಿಯ ರಂಗಕರ್ಮಿ ಡಾ.ಎಚ್.ಕೆ.ರಾಮನಾಥ್, ರಂಗತಜ್ಞ ಪ್ರೊ.ಸಿ.ವಿ.ಶ್ರೀಧರಮೂರ್ತಿ, ಕಲಾ ಸುರುಚಿ ಸಂಚಾಲಕ ಶಶಿಧರ ಡೊಂಗ್ರೆ, ಕದಂಬ ರಂಗವೇದಿಕೆ ಅಧ್ಯಕ್ಷ ರಾಜಶೇಖರ ಕದಂಬ, ರಂಗ ಪೋಷಕಿ ವಿಜಯಾ ಸಿಂಧುವಳ್ಳಿ ಉಪಸ್ಥಿತರಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.