ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆರೆಗಳ ಅಭಿವೃದ್ಧಿಗೆ ಮಾಸ್ಟರ್‌ ಪ್ಲಾನ್

₹ 6.26 ಕೋಟಿ ಅನುದಾನದಲ್ಲಿ ಅಭಿವೃದ್ಧಿಪಡಿಸಲು ತೀರ್ಮಾನ
Last Updated 10 ಡಿಸೆಂಬರ್ 2018, 11:32 IST
ಅಕ್ಷರ ಗಾತ್ರ

ಮೈಸೂರು: ನಗರದ ಕಾರಂಜಿ ಕೆರೆ, ಕುಕ್ಕರಹಳ್ಳಿ ಹಾಗೂ ಲಿಂಗಾಂಬುದಿ ಕೆರೆಗಳನ್ನು ಪ್ರವಾಸೋದ್ಯಮ ಇಲಾಖೆ ವತಿಯಿಂದ ಒಟ್ಟು ₹ 6.26 ಕೋಟಿ ಅನುದಾನದಲ್ಲಿ ಅಭಿವೃದ್ಧಿಪಡಿಸಲು ತೀರ್ಮಾನಿಸಲಾಗಿದೆ.

ಕಾರಂಜಿ ಕೆರೆ, ಕುಕ್ಕರಹಳ್ಳಿ ಕೆರೆ, ಲಿಂಗಾಬುದಿ ಕೆರೆಗಳಿಗೆ ಭಾನುವಾರ ಭೇಟಿ ನೀಡಿದ ಪ್ರವಸೋದ್ಯಮ ಮತ್ತು ರೇಷ್ಮೆ ಸಚಿವ ಸಾ.ರಾ.ಮಹೇಶ್, ಪರಿಶೀಲನೆ ನಡೆಸಿದರು.

ಬಳಿಕ ಮಾತನಾಡಿದ ಅವರು, ‘ನಗರದ ಮೂರು ಪ್ರಮುಖ ಕೆರೆಗಳನ್ನು ಅಭಿವೃದ್ಧಿಪಡಿಸಲು ತೀರ್ಮಾನಿಸಲಾಗಿದೆ. ಈ ಕೆರೆಗಳನ್ನು ಸುಸ್ಥಿತಿಯಲ್ಲಿಡುವುದು ನಮ್ಮ ಕರ್ತವ್ಯವಾಗಿದೆ. ಈ ನಿಟ್ಟಿನಲ್ಲಿ ಜಿಲ್ಲಾಧಿಕಾರಿ ಅಭಿರಾಮ್‌ ಜಿ.ಶಂಕರ್ ಅವರ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಿದ್ದು, ಸಭೆ ನಡೆಸಲಾಗಿದೆ. ಇದರಂತೆ ಮೊದಲ ಹಂತದಲ್ಲಿ ಕುಕ್ಕರಹಳ್ಳಿ ಕೆರೆಯನ್ನು ₹ 4.2 ಕೋಟಿ ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗುವುದು. ಕೆರೆ ಭಾಗದಲ್ಲಿ ವಾಸನೆ ಬಾರದಂತೆ ತಡೆಗಟ್ಟಲು ಹೂಳು ತೆಗೆಯುವುದು ಸೇರಿದಂತೆ ಇತರ ಅಭಿವೃದ್ಧಿಕಾರ್ಯಗಳನ್ನು ಕೈಗೆತ್ತಿಕೊಳ್ಳಲಾಗುವುದು’ ಎಂದು ತಿಳಿಸಿದರು.

ಕಾರಂಜಿ ಕೆರೆಯ ಅಭಿವೃದ್ಧಿ

ಅಂತೆಯೇ, ಕಾರಂಜಿ ಕೆರೆಯ ಅಭಿವೃದ್ಧಿಗೂ ಕ್ರಮ ವಹಿಸಲಾಗಿದೆ. ಒಟ್ಟು ₹ 2.6 ಕೋಟಿ ವೆಚ್ಚದಲ್ಲಿ ಕೆರೆಯ ನೀರು ಹೆಚ್ಚಳಕ್ಕೆ ಕ್ರಮ ವಹಿಸಲಾಗುತ್ತಿದೆ. ಚಾಮುಂಡಿಬೆಟ್ಟದಿಂದ ನೀರು ಹರಿದುಬರಲು ಇರುವ ಪೋಷಕ ಕಾಲುವೆ ದುರಸ್ತಿಪಡಿಸಲು ಯೋಜನೆ ಸಿದ್ಧಪಡಿಸುವಂತೆ ಎಂಜಿನಿಯರುಗಳಿಗೆ ಸೂಚನೆ ನೀಡಲಾಗಿದೆ. ಯೋಜನೆಯನ್ನು ಗಮನಿಸಿ ಅಗತ್ಯ ಅನುದಾನವನ್ನು ಬಿಡುಗಡೆಗೊಳಿಸಲಾಗುವುದು. ಅಂತೆಯೇ, ಕೆರೆಯಲ್ಲಿ ಚಿಟ್ಟೆ ಉದ್ಯಾನದ ಅಭಿವೃದ್ಧಿಗೂ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ ಎಂದು ಹೇಳಿದರು.

‘ಲಿಂಗಾಂಬುದಿ ಕೆರೆಯಲ್ಲಿ ಒಳಚರಂಡಿ ನೀರು ಸೇರುತ್ತಿರುವ ವಿಚಾರ ನಮ್ಮ ಗಮನದಲ್ಲಿದೆ. ಕೆರೆಗೆ ಭೇಟಿ ನೀಡಿ ಅಗತ್ಯ ಕಾರ್ಯಗಳ ಪಟ್ಟಿ ಮಾಡಲಾಗಿದೆ. ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರು ಈ ಕುರಿತು ಸೂಚನೆ ನೀಡಿದ್ದು, ನೀರಿನ ಮೂಲಗಳನ್ನು ಸಂರಕ್ಷಿಸಲಾಗುತ್ತಿದೆ’ ಎಂದರು.

ಜತೆಗೆ, ಕೆರೆಗಳ ಒತ್ತುವರಿ ತೆರವಿಗೂ ಗಮನಹರಿಸಲಾಗಿದೆ. ರೇಸ್ ಕೋರ್ಸ್‌ನಲ್ಲಿರುವ ಅನಧಿಕೃತ ಕಟ್ಟಡ ತೆರವುಗೊಳಿಸಲಾಗುವುದು. ಈ ಬಗ್ಗೆ ಈಗಾಗಲೇ ರೇಸ್ ಕೋರ್ಸ್ ಅಧ್ಯಕ್ಷರಿಗೆ ಸೂಚನೆ ನೀಡಲಾಗಿದೆ ಎಂದು ಮಾಹಿತಿ ನೀಡಿದರು.

ರೇಸ್ ಕೋರ್ಸ್‌ನಲ್ಲಿ ಕುದುರೆಗಳನ್ನು ಓಡಿಸಲು ಮಾತ್ರ ಅವಕಾಶವಿದೆ. ಕುದುರೆಗಳನ್ನು ಸಾಕುವಂತಿಲ್ಲ. ಆದರೂ, ಇಲ್ಲಿ ಅಕ್ರಮವಾಗಿ ಶೆಡ್ ನಿರ್ಮಿಸಿಕೊಂಡು ಕುದುರೆ ಸಾಕಲಾಗುತ್ತಿದೆ. ಅನೇಕರು ಇಲ್ಲಿ ಅಕ್ರಮವಾಗಿ ವಾಸಿಸುತ್ತಿದ್ದಾರೆ. ಇವೆಲ್ಲವನ್ನೂ ತೆರವುಗೊಳಿಸಲಾಗುವುದು ಎಂದರು.

₹ 1.74 ಕೋಟಿ ವೆಚ್ಚದಲ್ಲಿ ತಿಮ್ಮಕ್ಕ ಉದ್ಯಾನ ಅಭಿವೃದ್ಧಿ

ಲಿಂಗಾಂಬುದಿ ನಗರದಲ್ಲಿ ನಿರ್ಮಿಸಿರುವ ಸಾಲುಮರದ ತಿಮ್ಮಕ್ಕ ವೃಕ್ಷೋದ್ಯಾನವನ್ನು ಭಾನುವಾರ ಸಂಸದ ಪ್ರತಾಪ ಸಿಂಹ ಉದ್ಘಾಟಿಸಿದರು.

ಒಟ್ಟು ₹ 1.75 ಕೋಟಿ ವೆಚ್ಚದಲ್ಲಿ ಉದ್ಯಾನದ ಅಭಿವೃದ್ಧಿಯಾಗಿದೆ. ವಾಯುವಿಹಾರ ರಸ್ತೆಗಳು, ವಿಶ್ರಾಂತಿ ಆಸನಗಳು, ಸಸ್ಯ ಸಂಗ್ರಹಾಲಯ, ವ್ಯಾಯಾಮ ಸಲಕರಣೆಗಳು, ಧ್ಯಾನಕ್ಕಾಗಿ ಆಸನ, ಪಕ್ಷಿವೀಕ್ಷಣೆಗೆ ಅವಕಾಶ, ಸೂಚನಾಫಲಕಗಳು, ಮಕ್ಕಳ ಆಟಿಕೆ ಮೈದಾನ, ಕುಡಿಯುವ ನೀರಿನ ಘಟಕ, ಶೌಚಾಲಯ ನಿರ್ಮಿಸಲಾಗಿದೆ. ಒಟ್ಟು 422 ಹಣ್ಣುಬಿಡುವ ಗಿಡಗಳು, ಬೃಹದಾಕಾರವಾಗಿ ಬೆಳೆಯುವ ರುದ್ರಾಕ್ಷಿ, ಎಬೋನಿ, ದೇವದಾರು ಸೇರಿದಂತೆ ಅಪರೂಪದ 25 ಜಾತಿಯ ಗಿಡಗಳನ್ನು ನೆಟ್ಟು ಸಸ್ಯ ಸಂಗ್ರಹಾಲಯ ಮಾಡಲಾಗಿದೆ.

ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡ, ಮೇಯರ್‌ ಪುಷ್ಪಲತಾ ಜಗನ್ನಾಥ್, ನಗರಪಾಲಿಕೆ ಆಯುಕ್ತ ಕೆ.ಎಚ್.ಜಗದೀಶ್, ಶಾಸಕ ಎಸ್.ಎ.ರಾಮದಾಸ್, ಹೆಚ್ಚುವರಿ ಪ್ರಧಾನ ಅರಣ್ಯ ಸಂರಕ್ಷಣಾಧಿಕಾರಿ ಬಿ.ಪಿ.ರವಿ ಇದ್ದರು.

ಕಾರಂಜಿ ಕೆರೆ, ಹಣ ಬಳಕೆ ಹೀಗೆ (ರೂಪಾಯಿಗಳಲ್ಲಿ)

20 ಲಕ್ಷ – ಕೆರೆ ಸ್ವಚ್ಛಗೊಳಿಸಲು ಹಾಗೂ ಹೂಳೆತ್ತಲು

10 ಲಕ್ಷ – ಕೆರೆಯ ಮುಂಭಾಗದ ಅಭಿವೃದ್ಧಿಗೆ

5 ಲಕ್ಷ – ಪ್ರವಾಸಿಗರು ಕುಳಿತುಕೊಳ್ಳಲು ಕಲ್ಲಿನ ಬೆಂಚ್ ನಿರ್ಮಾಣಕ್ಕೆ

20 ಲಕ್ಷ – ಹೊಸ ಬೋಟ್ ಖರೀದಿಗೆ ಹಾಗೂ ಹಾಲಿ ಇರುವ ಬೋಟ್‌ಗಳ ದುರಸ್ಥಿಗೆ

1 ಲಕ್ಷ – ಡಸ್ಟ್‌ಬಿನ್ ಅಳವಡಿಕೆಗೆ

25 ಲಕ್ಷ – ಹೈಟೆಕ್ ಶೌಚಾಲಯ ನಿರ್ಮಾಣಕ್ಕೆ

20 ಲಕ್ಷ – ಚಿಟ್ಟೆ ಉದ್ಯಾನವನ ನಿರ್ಮಾಣ, ಪಾಥ್‌ವೇ ಹಾಗೂ ಬ್ಯಾರಿಕೇಡ್ ನಿರ್ಮಾಣಕ್ಕೆ

30 ಲಕ್ಷ – ಬ್ಯಾಟರಿ ಚಾಲಿತ ವಾಹನ ಖರೀದಿಗೆ

20 ಲಕ್ಷ– ಚಿಟ್ಟೆಗಳ ಉದ್ಯಾನದಿಂದ ಥಂಡಿ ಸಡಕ್ ರಸ್ತೆವರೆಗೆ 300 ಮೀಟರ್ ಪಾಥ್‌ವೇ ವಿಸ್ತರಣೆಗೆ

ಕುಕ್ಕರಹಳ್ಳಿ ಕೆರೆ, ಹಣ ಬಳಕೆ ಹೀಗೆ (ರೂಪಾಯಿಗಳಲ್ಲಿ)

30 ಲಕ್ಷ – ಜಾಗಿಂಗ್ ಟ್ರ್ಯಾಕ್ ಅಭಿವೃದ್ಧಿಗೆ

25 ಲಕ್ಷ – ವಾಹನ ನಿಲುಗಡೆ ವ್ಯವಸ್ಥೆಗೆ

50 ಲಕ್ಷ – ಕೆರೆ ಹೂಳೆತ್ತಲು ಹಾಗೂ ಸ್ವಚ್ಛಗೊಳಿಸಲು

10 ಲಕ್ಷ – ಬೆಂಚ್ ಅಳವಡಿಸಲು

10 ಲಕ್ಷ – ವ್ಯೂವ್ ಪಾಯಿಂಟ್ ಮೇಲ್ದರ್ಜೆಗೇರಿಸಲು

30 ಲಕ್ಷ – ಶೌಚಾಲಯ ನಿರ್ಮಾಣಕ್ಕೆ

50 ಲಕ್ಷ– ಬೋಟ್ ವ್ಯವಸ್ಥೆಗೆ

50 ಲಕ್ಷ– ಓಪನ್ ಜಿಮ್ ವ್ಯವಸ್ಥೆಗೆ

20 ಲಕ್ಷ– ಮಕ್ಕಳ ಆಟದ ಮೈದಾನದ ಅಭಿವೃದ್ಧಿಗೆ

4.20 ಲಕ್ಷ – ಇತರೆ ಅಭಿವೃದ್ಧಿ ಕಾರ್ಯಕ್ಕೆ

80 ಸಾವಿರ– ಡಸ್ಟ್‌ಬಿನ್ ಅಳವಡಿಕೆಗೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT