ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೈಸೂರು | ಮೆಕ್ಕೆಜೋಳಕ್ಕೆ ಸೈನಿಕ ಹುಳು ಬಾಧೆ

ಪೂರ್ವ ಮುಂಗಾರು: ವಾಡಿಕೆಯ ಮಳೆ; ಶೇ 41ರಷ್ಟು ಬಿತ್ತನೆ
Last Updated 1 ಜೂನ್ 2020, 19:45 IST
ಅಕ್ಷರ ಗಾತ್ರ

ಮೈಸೂರು: ಜಿಲ್ಲೆಗೆ ಮುಂಗಾರು ಪ್ರವೇಶ ಸನ್ನಿಹಿತವಾಗಿದೆ. ಪೂರ್ವ ಮುಂಗಾರು ವಾಡಿಕೆಗಿಂತ ಕೊಂಚ ಕಡಿಮೆ ಸುರಿದಿದೆ. ಶೇ 41ರಷ್ಟು ಬಿತ್ತನೆ ಪೂರ್ಣಗೊಂಡಿದ್ದು, ಕೆಲವು ಬೆಳೆಗಳು ಬೆಳವಣಿಗೆ ಹಂತದಲ್ಲಿದ್ದರೆ, ಹೆಸರು, ಉದ್ದು ಬೆಳೆಗಳು ವಾರ ಅಥವಾ ಎರಡು ವಾರದಲ್ಲಿ ಕೊಯ್ಲಾಗಲಿವೆ.

ರಾಗಿ, ಮೆಕ್ಕೆಜೋಳದ ಬಿತ್ತನೆ ನಡೆದಿದೆ. ಪೈರು ಸಹ ಬೆಳವಣಿಗೆ ಹಂತದಲ್ಲಿದೆ. ವಾಣಿಜ್ಯ ಬೆಳೆಗಳಾದ ಹತ್ತಿ, ತಂಬಾಕಿನ ನಾಟಿ ಬಿರುಸಿನಿಂದ ನಡೆದಿದೆ. ಪೈರಿನ ಬೆಳವಣಿಗೆಯೂ ಉತ್ತಮವಾಗಿದೆ.

ಎಚ್‌.ಡಿ.ಕೋಟೆ ತಾಲ್ಲೂಕಿನಲ್ಲಿ ಈಗಾಗಲೇ ಬೆಳವಣಿಗೆ ಹಂತದಲ್ಲಿರುವ ಮೆಕ್ಕೆಜೋಳಕ್ಕೆ ಸೈನಿಕ ಹುಳು ಬಾಧೆ ಹೆಚ್ಚಿದೆ. ಕೃಷಿ ಇಲಾಖೆಯ ಸೂಚನೆಯಂತೆ ಕೃಷಿಕರು ಔಷಧಿ ಸಿಂಪಡಿಸಿದರೂ, ಹುಳು ಬಾಧೆ ಸಂಪೂರ್ಣ ನಿಯಂತ್ರಣಕ್ಕೆ ಬಂದಿಲ್ಲ. ಇದು ಬೆಳೆ ಹಾಗೂ ಇಳುವರಿ ಮೇಲೆ ದುಷ್ಪರಿಣಾಮ ಬೀರಲಿದೆ.

‘ಎರಡು ಎಕರೆ ಭೂಮಿಯಲ್ಲಿ ಹಂತ ಹಂತವಾಗಿ ಮೆಕ್ಕೆಜೋಳ ಬಿತ್ತಿದ್ದೆ. ಒಂದು ಎಕರೆಯಲ್ಲಿನ ಫಸಲು ಹೂವಿನ ಹಂತದಲ್ಲಿದೆ. ಇನ್ನೊಂದು ಎಕರೆಯಲ್ಲಿ ಮೊಳಕಾಲುದ್ದ ಪೈರಿದೆ. ಎರಡೂ ಹೊಲಕ್ಕೂ ಸೈನಿಕ ಹುಳು ಬಾಧೆ ತೀವ್ರವಾಗಿದೆ. ಕೃಷಿ ಇಲಾಖೆಯಲ್ಲಿ ಸಬ್ಸಿಡಿಯಲ್ಲಿ ದೊರೆಯುವ ಔಷಧಿಯನ್ನು ಸಿಂಪಡಿಸಿರುವೆ. ಆದರೂ ಹುಳು ಬಾಧೆ ನಿಯಂತ್ರಣಕ್ಕೆ ಬರುತ್ತಿಲ್ಲ. ಈಗಿನ ಲೆಕ್ಕಾಚಾರವನ್ನೇ ಗಮನಿಸಿದರೆ, ಅರ್ಧ ಎಕರೆಯಲ್ಲಿನ ಫಸಲು ನಾಶವಾಗಲಿದೆ’ ಎಂದು ಬೆಳಗನಹಳ್ಳಿಯ ರೈತ ಬಸವರಾಜು ಅಳಲು ತೋಡಿಕೊಂಡರು.

‘ಎಚ್‌.ಡಿ.ಕೋಟೆ ತಾಲ್ಲೂಕಿನ ವಿವಿಧ ಭಾಗದಲ್ಲಿ ಮೆಕ್ಕೆಜೋಳಕ್ಕೆ ಸೈನಿಕ ಹುಳುವಿನ ಬಾಧೆ ಗೋಚರಿಸಿದೆ. ಇಲಾಖೆಯ ಅಧಿಕಾರಿಗಳು ರೈತರ ಹೊಲಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕೃಷಿ ವಿಜ್ಞಾನಿಗಳು ಭೇಟಿ ನೀಡಿದ್ದಾರೆ. ಹುಳು ನಿಯಂತ್ರಣಕ್ಕೆ ಔಷಧಿ ಸಿಂಪಡಿಸುವಂತೆ ಸೂಚಿಸಿದ್ದಾರೆ. ರೈತ ಸಂಪರ್ಕ ಕೇಂದ್ರಗಳಲ್ಲಿ ಸಬ್ಸಿಡಿ ದರದಲ್ಲಿ ಕೀಟನಾಶಕವನ್ನು ವಿತರಿಸುತ್ತಿದ್ದೇವೆ’ ಎಂದು ಕೃಷಿ ಇಲಾಖೆಯ ಜಂಟಿ ಕೃಷಿ ನಿರ್ದೇಶಕ ಡಾ.ಎಂ.ಮಹಾಂತೇಶಪ್ಪ ‘ಪ್ರಜಾವಾಣಿ’ಗೆ ತಿಳಿಸಿದರು.

ಮೈಸೂರು, ನರಸೀಪುರದಲ್ಲಿ ಹೆಚ್ಚು ಮಳೆ
ಜೂನ್‌ 1ರವರೆಗಿನ ವಾಡಿಕೆ ಮಳೆ ಜಿಲ್ಲೆಯಲ್ಲಿ ಸುರಿದಿದ್ದು, ಶೇ 2ರಷ್ಟು ಮಾತ್ರ ಕೊರತೆಯಾಗಿದೆ. ಹಿಂದಿನ ವರ್ಷ ಇದೇ ವೇಳೆಗೆ ಹೆಚ್ಚಿನ ಪ್ರಮಾಣದಲ್ಲಿ ವರ್ಷಧಾರೆಯಾಗಿತ್ತು.

ಮೈಸೂರಿನಲ್ಲಿ ಶೇ 39ರಷ್ಟು ಮಳೆ ಹೆಚ್ಚಾಗಿ ಸುರಿದಿದ್ದರೆ, ತಿ.ನರಸೀಪುರದಲ್ಲಿ ಶೇ 22ರಷ್ಟು ಹೆಚ್ಚಿನ ವರ್ಷಧಾರೆಯಾಗಿದೆ. ಉಳಿದಂತೆ ಎಚ್‌.ಡಿ.ಕೋಟೆ, ಹುಣಸೂರು, ಪಿರಿಯಾಪಟ್ಟಣ ತಾಲ್ಲೂಕುಗಳಲ್ಲಿ ಶೇ 12ರಷ್ಟು ಮಳೆಯ ಕೊರತೆಯಾಗಿದೆ. ನಂಜನಗೂಡಿನಲ್ಲಿ ಶೇ 7, ಕೆ.ಆರ್‌.ನಗರದಲ್ಲಿ ಶೇ 4ರಷ್ಟು ಮಳೆ ವಾಡಿಕೆಗಿಂತ ಕಡಿಮೆ ಬಿದ್ದಿದೆ ಎಂದು ಕೃಷಿ ಇಲಾಖೆಯ ತಾಂತ್ರಿಕ ಅಧಿಕಾರಿ ಗೌರಮ್ಮ ಅಗಸಿಬಾಗಿಲ ತಿಳಿಸಿದರು.

ನರಸೀಪುರದಲ್ಲಿ ಬಿತ್ತನೆ ಕುಂಠಿತ
ತಿ.ನರಸೀಪುರದಲ್ಲಿ ವಾಡಿಕೆಗಿಂತ ಹೆಚ್ಚು ಮಳೆಯಾಗಿದ್ದರೂ, ಬಿತ್ತನೆ ಶೇ 16ರಷ್ಟು ಮಾತ್ರ ನಡೆದಿದೆ. 39,404 ಹೆಕ್ಟೇರ್‌ ಪ್ರದೇಶದಲ್ಲಿ 6164 ಹೆಕ್ಟೇರ್‌ನಲ್ಲಿ ಮಾತ್ರ ಬಿತ್ತನೆಯಾಗಿದೆ ಎಂಬುದನ್ನು ಕೃಷಿ ಇಲಾಖೆಯ ಅಂಕಿ–ಅಂಶ ದೃಢಪಡಿಸಿವೆ.

ಎಚ್‌.ಡಿ.ಕೋಟೆ ತಾಲ್ಲೂಕಿನಲ್ಲಿ ಶೇ 54ರಷ್ಟು ಬಿತ್ತನೆಯಾಗಿದ್ದರೆ, ಹುಣಸೂರು–38, ಮೈಸೂರು–44, ಕೆ.ಆರ್.ನಗರ–24, ನಂಜನಗೂಡು–43, ಪಿರಿಯಾಪಟ್ಟಣ ತಾಲ್ಲೂಕಿನಲ್ಲಿ ಶೇ 65ರಷ್ಟು ಬಿತ್ತನೆ ಮುಗಿದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT