ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಆಧುನಿಕ ಋಷಿ ಹರ್ಷಾನಂದಜೀ ಮಹಾರಾಜ್‌’

ಶಿಸ್ತು, ಸನ್ಯಾಸಿಗಳ ಜೀವನಕ್ಕೆ ಆದರ್ಶ ತೋರಿದ ಸಂತ: ಒಡನಾಡಿಗಳ ಬಣ್ಣನೆ
Last Updated 22 ಜನವರಿ 2021, 4:03 IST
ಅಕ್ಷರ ಗಾತ್ರ

ಮೈಸೂರು: ‘ಸದಾ ಲವಲವಿಕೆಯಿಂದ ಇರುತ್ತಿದ್ದ ಸ್ವಾಮಿ ಹರ್ಷಾನಂದಜೀ ಮಹಾರಾಜರು ಸಂತರ ಜೀವನದ ಮೇರು ಸಾಧನೆಗಳ ಮೂಲಕ ಕಳಶಪ್ರಾಯರಾಗಿದ್ದರು. ಅವರ ಶಿಸ್ತು, ಆಧ್ಯಾತ್ಮಿಕ ಜೀವನದ ಪಾಠ ಎಲ್ಲರಿಗೂ ಆದರ್ಶಪ್ರಾಯ’ ಎಂದು ರಾಮಕೃಷ್ಣ ಆಶ್ರಮದ ಹಲವು ಸ್ವಾಮೀಜಿಗಳು ಅಭಿಪ್ರಾಯ ವ್ಯಕ್ತಪಡಿಸಿದರು.

ನಗರದ ಯಾದವಗಿರಿ ರಾಮಕೃಷ್ಣ ಆಶ್ರಮದ ರಿಮ್ಸೆ (ರಾಮಕೃಷ್ಣ ನೈತಿಕ, ಆಧ್ಯಾತ್ಮಿಕ ಶಿಕ್ಷಣ ಸಂಸ್ಥೆ)ಯ ಯಾಜ್ಞವಲ್ಕ್ಯ ಸಭಾಂಗಣದಲ್ಲಿ ಗುರುವಾರ ಬೆಂಗಳೂರು ರಾಮಕೃಷ್ಣ ಆಶ್ರಮದ ಅಧ್ಯಕ್ಷರಾಗಿದ್ದ ಹರ್ಷಾನಂದಜೀ ಮಹಾರಾಜ್‌ ಅವರ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಅನುಭವ ಹಂಚಿಕೊಂಡರು.

‘ಹರ್ಷಾನಂದಜೀ ಅವರ ಜ್ಞಾನ, ಬರಹ ನೋಡಿದರೆ ಋಷಿಮುನಿಗಳನ್ನು ಕಂಡಂತೆ ಆಗುತ್ತಿತ್ತು. ಅವರೊಬ್ಬ ಆಧುನಿಕ ಋಷಿ’ ಎಂದು ಊಟಿ ರಾಮಕೃಷ್ಣ ಮಠದ ಅಧ್ಯಕ್ಷ ರಾಘವೇಶಾ ನಂದಜೀ ಮಹಾರಾಜ್‌ ಹೇಳಿದರು.

ವಿಶ್ವಕೋಶ ರಚಿಸಬೇಕಾದರೆ ಹಲವು ಪಂಡಿತರಿಗೆ ವಿಷಯ ನೀಡಿ ಗೋಷ್ಠಿಗಳನ್ನು ನಡೆಸಿ, ಟಿಪ್ಪಣಿ ತಯಾರಿಸಲಾಗುತ್ತದೆ. ಆದರೆ ಹರ್ಷಾನಂದಜೀ ಮೂರು ದಶಕಕ್ಕೂ ಹೆಚ್ಚು ಕಾಲ ತಪಸ್ಸಿನಂತೆ ನಿರಂತರ ಅಧ್ಯಯನದ ಮಾಡಿ ‘ಎನ್‌ಸೈಕ್ಲೋಪಿಡಿಯಾ ಆಫ್‌ ಹಿಂದೂಯಿಸಂ’ (ಹಿಂದೂ ಧರ್ಮದ ವಿಶ್ವಕೋಶ) ಮೇರುಕೃತಿಯನ್ನು ರಚಿಸಿದ್ದಾರೆ’ ಇದು ಶ್ರೀಗಳಿಗೆ ಇರುವ ವಿಶೇಷ ಶಕ್ತಿ ಎಂದು ಬಣ್ಣಿಸಿದರು.

‘ಜಗನ್ಮಾತೆ ಶಾರದಾದೇವಿಯ ಕೃಪಾಶೀರ್ವಾದ ಆಧ್ಯಾತ್ಮಿಕ ಕ್ಷೇತ್ರದ ಸಾರ್ಥಕ ಬದುಕಿಗೆ ಕಾರಣವೆಂದು ಅವರೇ ಹೇಳಿದ್ದರು ಎಂದು’ ರಾಘವೇಶಾನಂದಜೀ ನೆನಪಿಸಿಕೊಂಡರು.

ಸಂತರ ದಿನಚರಿ ಹೇಗಿರಬೇಕೆಂಬು ದಕ್ಕೆ ಹರ್ಷಾನಂದಜೀ ಸಾಕ್ಷಿ. ಸನ್ಯಾಸದ ಆದರ್ಶ, ಗಾಂಭೀರ್ಯವನ್ನು ಅರಿಯಲು ಅವರೇ ಆದರ್ಶಪ್ರಾಯರು’ ಎಂದು ಚಂಡೀಗಡ ರಾಮಕೃಷ್ಣ ಆಶ್ರಮದ ಕಾರ್ಯದರ್ಶಿ ಆತ್ಮಸ್ಥಾನಂದಜೀ ಮಹಾರಾಜ್‌ ಅಭಿಪ್ರಾಯಪಟ್ಟರು.

‘ಕಷ್ಟ ಬಂದರೆ ಭಗವಂತನಲ್ಲಿ ಶರಣಾಗತರಾಗಿ ಧೈರ್ಯದಿಂದ ಎದುರಿಸುವಂತೆ ಹೇಳುತ್ತಿದ್ದರು’ ಎಂದು ಪೊನ್ನಂಪೇಟೆಯ ಬೋಧಸ್ವರೂಪಾನಂದಜೀ ಮಹಾ ರಾಜ್‌ ನೆನಪಿಸಿಕೊಂಡರು.

‘ನಮ್ಮ ಸಂಸ್ಕೃತಿ, ಪರಂಪರೆ ತಿಳಿಸಲು ವಿದೇಶಕ್ಕೆ ಹೋಗುವವರು, ಗ್ರಹಸ್ಥರು, ವಿದ್ಯಾರ್ಥಿಗಳು, ಗ್ರಾಮೀಣ ಯುವಕರಿಗೆ ಕಡಿಮೆ ಸಮಯದ ಸಣ್ಣ ಕೋರ್ಸ್‌ಗಳನ್ನು ಇಲ್ಲಿ ಆರಂಭಿಸಿ ಎಂದು ಹೇಳುತ್ತಿದ್ದರು. ಆ ನಿಟ್ಟಿನಲ್ಲಿ ಕೆಲಸ ಆರಂಭಿಸಲಾಗಿದೆ’ ಎಂದು ಮೈಸೂರು ರಾಮಕೃಷ್ಣ ಆಶ್ರಮದ ಅಧ್ಯಕ್ಷ ಮುಕ್ತಿದಾನಂದಜೀ ಮಹಾರಾಜ್‌ ಹೇಳಿದರು.

ಸುಖಾತ್ಮಾನಂದಜೀ ಮಹಾರಾಜ್, ಬೇಲೂರು ಮಠದ ಸಹಾಯಕ ಪ್ರಧಾನ ಕಾರ್ಯದರ್ಶಿ ಸತ್ಯಾತ್ಮಾನಂದಜೀ ಮಹಾರಾಜ್, ಗೋವಾ ಪೊಂಡಾದ ರಾಮಕೃಷ್ಣ ಮಿಷನ್ ಕಾರ್ಯದರ್ಶಿ ಮಹೇಶಾನಂದಜೀ ಮಹಾರಾಜ್, ಡಾ.ಸೀತಾರಾಮ, ಕೀರ್ತಿಕುಮಾರ್, ಲೇಖಕಿ ಮಂಗಳಮ್ಮ, ಡಾ.ಪ್ರಭು ಪ್ರಸಾದ್, ಡಾ.ಶ್ರೀಧರ್, ಧನಂಜಯ, ಡಾ.ಸರಸ್ವತಿ, ಮಾಜಿ ಎಂಎಲ್‌ಸಿ ಮಾದೇಗೌಡ, ಕೆ.ಪಿ. ಅನಂತಪದ್ಮನಾಭ, ಪ್ರೊ.ಕೃಷ್ಣ, ರಾಮಚಂದ್ರ ಅನುಭವಗಳನ್ನು ಹಂಚಿಕೊಂಡರು.

ಸ್ವಾಮಿ ಯುಕ್ತೇಶಾನಂದಜೀ ಮಹಾರಾಜ್‌ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT