ಆಶ್ರಮ ಶಾಲೆ: ಆರಂಭವಾಗದ ದಾಖಲಾತಿ ಪ್ರಕ್ರಿಯೆ

ಹುಣಸೂರು: ಕೋವಿಡ್ 2ನೇ ಅಲೆ ಕಡಿಮೆ ಆಗುತ್ತಿದ್ದಂತೆ, ಶಾಲೆಗಳಲ್ಲಿ ವಿದ್ಯಾರ್ಥಿಗಳ ದಾಖಲಾತಿ ಪ್ರಕ್ರಿಯೆಗೆ ಚಾಲನೆ ಸಿಕ್ಕಿದೆ. ಆದರೆ, ಗಿರಿಜನ ಮಕ್ಕಳಿಗಾಗಿ ಜಿಲ್ಲೆಯಲ್ಲಿ ಸ್ಥಾಪಿಸಿರುವ ‘ಗಿರಿಜನ ಆಶ್ರಮ ಶಾಲೆ’ಗಳ ದಾಖಲಾತಿಗೆ ಮಂಕು ಕವಿದಿದೆ.
ಜಿಲ್ಲೆಯ ಎಚ್.ಡಿ.ಕೋಟೆ, ಹುಣಸೂರು ಕ್ಷೇತ್ರದಲ್ಲಿ ಅಧಿಕ ಸಂಖ್ಯೆಯಲ್ಲಿ ಗಿರಿಜನ ವಾಸವಿದ್ದಾರೆ. ಈ ಸಮುದಾಯದ ಕುಡಿಗಳ ಶೈಕ್ಷಣಿಕ ಅಭಿವೃದ್ಧಿಗಾಗಿ ಸಮಾಜ ಕಲ್ಯಾಣ ಇಲಾಖೆಯು ಐದು ದಶಕಗಳ ಹಿಂದೆ ಆಶ್ರಮ ಶಾಲೆಗಳನ್ನು ಆರಂಭಿಸಿ ಅಕ್ಷರ ಜ್ಞಾನ ನೀಡುತ್ತಿದೆ.
ಜಿಲ್ಲೆಯಲ್ಲಿ 21 ಆಶ್ರಮ ಶಾಲೆಗಳಿದ್ದು, ಒಟ್ಟು 3,175 ವಿದ್ಯಾರ್ಥಿಗಳಿದ್ದಾರೆ. ಈ ಪೈಕಿ 2,341 ವಿದ್ಯಾರ್ಥಿಗಳು 2020–21ನೇ ಸಾಲಿನಲ್ಲಿ ದಾಖಲಾಗಿದ್ದರು. ಪ್ರಸಕ್ತ ಸಾಲಿನ ದಾಖಲಾತಿ ಪ್ರಕ್ರಿಯೆ ಆರಂಭವಾಗದ ಕಾರಣ ಈ ಮಕ್ಕಳು ಅತಂತ್ರ ಸ್ಥಿತಿಯಲ್ಲಿದ್ದಾರೆ.
‘ಆಶ್ರಮ ಶಾಲೆಗಳಲ್ಲಿ ದಾಖಲಾತಿ ಪ್ರಕ್ರಿಯೆ ನಡೆಸಲು ಜಿಲ್ಲಾ ಸಮಾಜ ಕಲ್ಯಾಣ ಇಲಾಖೆಗೆ ಎರಡು ಬಾರಿ ಮನವಿ ಮಾಡಲಾಗಿದೆ. ಸರ್ಕಾರಿ ಶಾಲೆಗಳಿಗೆ ಅನುಮತಿ ನೀಡಿದ ಮಾದರಿಯಲ್ಲೇ ಗಿರಿಜನ ಆಶ್ರಮ ಶಾಲೆಗೂ ಅನುಮತಿ ನೀಡಿದರೆ, ಕೂಡಲೇ ದಾಖಲಾತಿ ಆರಂಭಿಸುತ್ತೇವೆ’ ಎಂದು ತಾಲ್ಲೂಕು ಪರಿಶಿಷ್ಟ ಪಂಗಡ ಇಲಾಖೆ ಅಧಿಕಾರಿ ಬಸವರಾಜ್ ‘ಪ್ರಜಾವಾಣಿ’ಗೆ ತಿಳಿಸಿದರು.
ಶಿಕ್ಷಕರ ನೇಮಕಾತಿ ಇಲ್ಲ: ಜಿಲ್ಲೆಯ 21 ಆಶ್ರಮ ಶಾಲೆಗಳಲ್ಲಿ ಹೊರಗುತ್ತಿಗೆ ಆಧಾರದ ಮೇರೆಗೆ 105 ಶಿಕ್ಷಕರು ಕಾರ್ಯ ನಿರ್ವಹಿಸುತ್ತಿದ್ದರು. ಆದರೆ, ಪ್ರಸಕ್ತ ಸಾಲಿನಲ್ಲಿ ಶಿಕ್ಷಕರ ನೇಮಕಾತಿ ನಡೆದಿಲ್ಲ. ಇದರಿಂದ ಈ ಶಿಕ್ಷಕರು ಅತಂತ್ರ ಸ್ಥಿತಿಯಲ್ಲಿದ್ದಾರೆ.
ಕಡಿಮೆ ವೇತನ: ಹೊರಗುತ್ತಿಗೆ ಶಿಕ್ಷಕರಿಗೆ ₹8,500 ನೀಡಲಾಗುತ್ತಿದೆ. ಇಲ್ಲಿ ಕೆಲಸ ಮಾಡುವ ಬಿಸಿಯೂಟ ಸಿಬ್ಬಂದಿಗೆ ₹10 ಸಾವಿರ, ಪಾತ್ರೆ ತೊಳೆಯುವವರಿಗೆ ₹8 ಸಾವಿರ ವೇತನ ನೀಡಲಾಗುತ್ತಿದೆ.
‘ವಿದ್ಯಾರ್ಹತೆಗೆ ತಕ್ಕಂತೆ ವೇತನ ನೀಡಬೇಕು. ಆದರೆ, ಹೊರಗುತ್ತಿಗೆ ಶಿಕ್ಷಕರಿಗೆ ಬಿಸಿಯೂಟ ಸಿಬ್ಬಂದಿಗಿಂತ ಕಡಿಮೆ ವೇತನ ನೀಡಲಾಗುತ್ತಿದೆ. ಇದರಿಂದ ನಾವು ಜೀವನ ನಡೆಸುವುದೇ ದುಸ್ತರವಾಗಿದೆ’ ಎಂದು ವೀರನ ಹೊಸಹಳ್ಳಿ ಆಶ್ರಮ ಶಾಲೆಯ ಶಿಕ್ಷಕ ಕೆ.ಕೆ.ಸ್ವಾಮಿ ಅಳಲು ತೋಡಿಕೊಂಡರು.
‘ಕಳೆದ 15 ವರ್ಷದಿಂದ ಕೆಲಸ ಮಾಡುತ್ತಿದ್ದೇನೆ. ನಮಗೆ ಯಾವುದೇ ಸವಲತ್ತು ಇಲ್ಲ. ಶಾಲೆ ನಡೆದರೆ ಸಂಬಳ. ಇಲ್ಲವಾದರೆ ಬೀದಿಯಲ್ಲಿ ಭಿಕ್ಷೆ ಮಾಡುವ ಪರಿಸ್ಥಿತಿ ಎದುರಾಗುತ್ತದೆ’ ಎಂದು ನೆಲ್ಲೂರುಪಾಲ ಆಶ್ರಮ ಶಾಲಾ ಶಿಕ್ಷಕ ಶೇಖರ್ ನೋವು ತೋಡಿಕೊಂಡರು.
ಆಶ್ರಮ ಶಾಲೆಗಳಿಗೆ ಕಾಯಂ ಶಿಕ್ಷಕರನ್ನು ನೇಮಿಸಬೇಕು ಎಂದು ಶೆಟ್ಟಹಳ್ಳಿ ಹಾಡಿ ಆಶ್ರಮ ಶಾಲೆ ಶಿಕ್ಷಕ ರಾಜು ಆಗ್ರಹಿಸಿದರು.
ಹೊರಗುತ್ತಿಗೆ ಶಿಕ್ಷಕರು ಕಳೆದ 18 ತಿಂಗಳಿಂದ ಸಂಬಳವಿಲ್ಲದೆ ಸಂಕಷ್ಟ ದಲ್ಲಿದ್ದಾರೆ ಎಂದು ನಾಗಾಪುರ ಆಶ್ರಮ ಶಾಲಾ ಶಿಕ್ಷಕ ಜಲೇಂದ್ರ ಅಳಲು ತೋಡಿಕೊಂಡರು.
***
ಜಿಲ್ಲೆಯ ಆಶ್ರಮ ಶಾಲೆಗಳಿಗೆ 136 ಶಿಕ್ಷಕರ ಅಗತ್ಯವಿದೆ. 105 ಹೊರಗುತ್ತಿಗೆ ಶಿಕ್ಷಕರು ಸೇವೆ ಸಲ್ಲಿಸುತ್ತಿದ್ದಾರೆ. ಕಾಯಂ ಶಿಕ್ಷಕರ ನೇಮಕಾತಿಗೆ ಮನವಿ ಮಾಡಿದ್ದೇವೆ
–ಬಸವರಾಜ್, ತಾಲ್ಲೂಕು ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ
***
ರಾಜ್ಯದಲ್ಲಿ 116 ಆಶ್ರಮ ಶಾಲೆಗಳಿದ್ದು, ಕನಿಷ್ಠ 500 ಕಾಯಂ ಶಿಕ್ಷಕರ ಅಗತ್ಯವಿದೆ. ಬಹುತೇಕ ಆಶ್ರಮ ಶಾಲೆಗಳು ಭೋಜನ ಕೇಂದ್ರವಾಗಿವೆ
–ಶ್ರೀಕಾಂತ್, ಡೀಡ್ ಸಂಸ್ಥೆ ನಿರ್ದೇಶಕ
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.