ಭಾನುವಾರ, ಮೇ 9, 2021
27 °C
ಶಸ್ತ್ರಚಿಕಿತ್ಸೆಗೆ ಬೇಕಿದೆ ₹ 5 ಲಕ್ಷ; ಸಹೃದಯಿಗಳ ನೆರವಿಗೆ ತಾಯಿಯ ಮೊರೆ

ಮಗನಿಗೆ ಕಿಡ್ನಿ ಕೊಡಲು ಮುಂದಾದ ತಾಯಿ: ನೆರವಿಗೆ ಕೋರಿಕೆ

ರವಿಕುಮಾರ್ Updated:

ಅಕ್ಷರ ಗಾತ್ರ : | |

Prajavani

ಹಂಪಾಪುರ: ಮನೆಗೆ ಆಧಾರವಾಗಿದ್ದ ಮಗ ವರ್ಷದಿಂದ ಹಾಸಿಗೆ ಹಿಡಿದಿದ್ದಾನೆ. ಆತನ ಆರೋಗ್ಯ ಚೇತರಿಕೆಗಾಗಿ ತನ್ನ ಕಿಡ್ನಿಯನ್ನೇ ತಾಯಿ ಕೊಡಲು ಮುಂದಾದರೂ; ಶಸ್ತ್ರಚಿಕಿತ್ಸೆಗೆ ಅವಶ್ಯವಿರುವ ಹಣ ಹೊಂದಿಸುವುದು ಕಷ್ಟಕರವಾಗಿದೆ.

ಸಂಕಷ್ಟದಿಂದ ಪಾರಾಗಲು ತಾಯಿ–ಮಗ ಪರದಾಡುತ್ತಿದ್ದರೂ; ಸಮಸ್ಯೆ ಬಗೆಹರಿದಿಲ್ಲ. ಸಹೃದಯಿಗಳ ನೆರವಿನತ್ತ ಇದೀಗ ಚಿತ್ತ ಹರಿಸಿದ್ದಾರೆ ಎಚ್.ಡಿ.ಕೋಟೆ ತಾಲ್ಲೂಕಿನ ಚಿಕ್ಕೆರೆಯೂರು ಗ್ರಾಮದ ಪುಟ್ಟತಾಯಮ್ಮ–ನಾಗೇಶ್.

ಪುಟ್ಟತಾಯಮ್ಮ ಪುತ್ರ ನಾಗೇಶ್ (28) ವರ್ಷದಿಂದಲೂ ಕಿಡ್ನಿ ವೈಫಲ್ಯದಿಂದ ಹಾಸಿಗೆ ಹಿಡಿದಿದ್ದಾರೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲು ಹಣಕಾಸಿನ ತೊಂದರೆಯಾಗಿದ್ದರಿಂದ ಮಧ್ಯದಲ್ಲೇ ಮನೆಗೆ ಮರಳಿದ್ದಾರೆ.

ಮಗನ ಕಿಡ್ನಿ ಕಸಿಗೆ, ತಾಯಿ ಪುಟ್ಟತಾಯಮ್ಮನೇ ತಮ್ಮ ಕಿಡ್ನಿ ಕೊಡಲು ಮುಂದಾಗಿದ್ದಾರೆ. ಆದರೆ ಈ ಶಸ್ತ್ರಚಿಕಿತ್ಸೆಗೆ ಬೇಕಿರುವ ₹ 5 ಲಕ್ಷ ಹೊಂದಿಸಲು ನಿತ್ಯವೂ ಹೆಣಗಾಡುತ್ತಿದ್ದಾರೆ ಕೂಲಿ ಮಾಡುವ ನಾಗೇಶನ ಅಮ್ಮ.

ಎರಡು ವರ್ಷದ ಹಿಂದಷ್ಟೇ ಪುಟ್ಟತಾಯಮ್ಮ ಪತಿ ನಾಗೇಗೌಡ ಸಹ ಕಿಡ್ನಿ ವೈಫಲ್ಯದಿಂದ ಚೇತರಿಸಿಕೊಳ್ಳದೆ ಮೃತಪಟ್ಟಿದ್ದಾರೆ. ಮಗನಿಗೂ ಅದೇ ಪರಿಸ್ಥಿತಿ ಬರಬಾರದು ಎಂದು ಉಳಿಸಿಕೊಳ್ಳಲು ಶತ ಪ್ರಯತ್ನ ನಡೆಸಿದ್ದಾರೆ. ಆದರೆ ಯಶಸ್ಸು ದೊರಕದಾಗಿದೆ.

ಅಂತಿಮವಾಗಿ ಸಹೃದಯಿಗಳ ಮೊರೆಯೊಕ್ಕಿದ್ದಾರೆ. ‘ನನ್ನ ಮಗ ನಾಗೇಶ್ ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದಾನೆ. ನಾನೇ ಕಿಡ್ನಿ ಕೊಡುವೆ. ಆದರೆ ಶಸ್ತ್ರಚಿಕಿತ್ಸೆಗೆ ಬೇಕಿರುವ ಹಣ ನನ್ನಲ್ಲಿಲ್ಲ. ಹೃದಯವಂತರು ನೆರವು ನೀಡಿ’ ಎಂದು ಮನವಿ ಮಾಡಿಕೊಂಡಿದ್ದಾರೆ.

‘ತಾಯಿಯ ತ್ಯಾಗ ದೊಡ್ಡದು. ವೈಯಕ್ತಿಕವಾಗಿ ₹ 10 ಸಾವಿರ ನೆರವು ನೀಡಿರುವೆ. ದಾನಿಗಳು ಕೈ ಜೋಡಿಸಿದರೆ ತಾಯಿ–ಮಗನಿಗೆ ಅನುಕೂಲವಾಗಲಿದೆ’ ಎಂದು ಗ್ರಾಮದ ಮುಖಂಡ ಕೆಂಡಗಣ್ಣೇಗೌಡ ‘ಪ್ರಜಾವಾಣಿ’ಗೆ ತಿಳಿಸಿದರು.

ಬ್ಯಾಂಕ್‌ ಖಾತೆಯ ವಿವರ: ಇಸಾಫ್‌ (ESAF) ಸಣ್ಣ ಫೈನಾನ್ಸ್ ಬ್ಯಾಂಕ್‌, ಎಚ್‌.ಡಿ.ಕೋಟೆ, ಖಾತೆ ಸಂಖ್ಯೆ 53210000332491, ಐಎಫ್‌ಎಸ್‌ಸಿ ಕೋಡ್‌–ಇಎಸ್‌ಎಂಎಫ್‌0001296, ಫೋನ್‌ ಪೇ ನಂಬರ್‌–9108089989.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು