ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ; ಪೆಟ್ರೋಲ್‌ನಿಂದ ದಹನ

ಮೈಸೂರು ಜಿಲ್ಲೆಯ ವಿವಿಧೆಡೆ ಪ್ರತ್ಯೇಕ ಅಪಘಾತ: ಮೂವರ ಸಾವು
Last Updated 7 ಮಾರ್ಚ್ 2020, 10:08 IST
ಅಕ್ಷರ ಗಾತ್ರ

ನಂಜನಗೂಡು: ತಾಲ್ಲೂಕಿನ ಕಲ್ಕುಂದ ಗ್ರಾಮದ ಬಳಿ ಅಪರಿಚಿತ ಯುವಕರಿಬ್ಬರು ಮಾರಕಾಸ್ತ್ರಗಳಿಂದ ಯುವಕನೊಬ್ಬನನ್ನು ಕೊಚ್ಚಿ ಕೊಲೆಗೈದು, ತಗಡೂರಿನ ರಾಮಚಂದ್ರ ನಾಲೆಗೆ ಎಸೆದಿದ್ದಾರೆ.

ತಾಲ್ಲೂಕಿನ ತಗಡೂರು ಗ್ರಾಮದ ಮರಿಸ್ವಾಮಿ ಎಂಬುವವರ ಪುತ್ರ ಮನೋಜ್‍ಕುಮಾರ್(20) ಮೃತ ದುರ್ದೈವಿ.

ತಗಡೂರು ಗ್ರಾಮದ ಮನೋಜ್ ಮತ್ತು ವಿಜಯ್ ಇಬ್ಬರು ಸ್ನೇಹಿತರು. ಗುರುವಾರ ರಾತ್ರಿ ಮದ್ಯಪಾನ ಮಾಡುವ ಸಲುವಾಗಿ ಬಿಳಿಗೆರೆ ಗ್ರಾಮದ ಬಾರ್‌ನಲ್ಲಿ ಮದ್ಯ ಖರೀದಿಸಿ, ಕಲ್ಕುಂದ ಗ್ರಾಮದಿಂದ ಜಿ.ಮರಹಳ್ಳಿಗೆ ಹೋಗುವ ಅಡ್ಡರಸ್ತೆಯ ಕಾಲುವೆ ದಡದಲ್ಲಿ ಮದ್ಯ ಸೇವಿಸುತ್ತಾ ಕುಳಿತಿದ್ದರು ಎನ್ನಲಾಗಿದೆ.

ಇಲ್ಲಿಗೆ ಬೈಕ್‌ನಲ್ಲೇ ಬಂದ ತಮಿಳುನಾಡಿನ ಇಬ್ಬರು ಅಪರಿಚಿತ ಯುವಕರು ವಿಶ್ವಾಸದಿಂದ ಮಾತನಾಡಿ, ಸ್ನೇಹಿತರಾಗೋಣ ಎಂದು ಹೇಳಿ ಎಲ್ಲರೂ ಸೇರಿ ಒಟ್ಟಾಗಿ ಮದ್ಯ ಕುಡಿದಿದ್ದಾರೆ. ಕುಡಿತದ ಮತ್ತಿನಲ್ಲಿ ಮಾತಿಗೆ ಮಾತು ಬೆಳೆದು, ಮನೋಜ್‍ನನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆಗೈದು ತಗಡೂರು ರಾಮಚಂದ್ರ ನಾಲೆಗೆ ಎಸೆದು ಪರಾರಿಯಾಗಿದ್ದಾರೆ.

ವಿಜಯ್ ತಪ್ಪಿಸಿಕೊಂಡು ಗ್ರಾಮಕ್ಕೆ ಬಂದು ವಿಷಯ ಮುಟ್ಟಿಸಿದ್ದಾನೆ. ಪೊಲೀಸರ ಜೊತೆಗೂಡಿ ಗುರುವಾರ ರಾತ್ರಿಯೆಲ್ಲಾ ಶವಕ್ಕಾಗಿ ಶೋಧ ನಡೆಸಲಾಯಿತು. ಮನೋಜ್‍ನ ಶವ ತಗಡೂರು ರಾಮಚಂದ್ರ ನಾಲೆಯಲ್ಲಿ ಶುಕ್ರವಾರ ಪತ್ತೆಯಾಗಿದೆ ಎಂದು ಬಿಳಿಗೆರೆ ಪೊಲೀಸರು ತಿಳಿಸಿದ್ದಾರೆ.

ಡಿವೈಎಸ್‌ಪಿ ಪ್ರಭಾಕರರಾವ್ ಸಿಂಧೆ, ಸಿಪಿಐ ರಾಜಶೇಖರ್, ಪಿಎಸ್ಐ ಗೋಪಾಲ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಕೊಲೆಗಾರರ ಪತ್ತೆಗೆ ಜಾಲ ಬೀಸಿದ್ದಾರೆ.

ಪೆಟ್ರೋಲ್‌ನಿಂದ ವ್ಯಕ್ತಿ ದಹನ

ಹಂಪಾಪುರ: ಇಲ್ಲಿಗೆ ಸಮೀಪದ ಚಾಮಲಾಪುರ ಮಾರ್ಗದಲ್ಲಿ ಪೆಟ್ರೋಲ್‌ನಿಂದ ವ್ಯಕ್ತಿಯೊಬ್ಬನನ್ನು ದಹಿಸಿ, ಪೊದೆಯೊಳಗೆ ಎಸೆಯಲಾಗಿದೆ.

ಕೊಲೆಯಾದ ವ್ಯಕ್ತಿ ಯಾರು ಎಂಬುದು ತಿಳಿದು ಬಂದಿಲ್ಲ.

ವ್ಯಕ್ತಿಯ ದಹನದ ವಿಷಯ ತಿಳಿಯುತ್ತಿದ್ದಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ.ರಿಷ್ಯಂತ್‌, ಡಿವೈಎಸ್‌ಪಿ ಸುಂದರರಾಜ್, ಆರಕ್ಷಕ ವೃತ್ತ ನಿರೀಕ್ಷಕ ಪುಟ್ಟಸ್ವಾಮಿ, ಉಪ ನಿರೀಕ್ಷಕ ಎಂ.ನಾಯಕ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಮೇಲ್ನೋಟಕ್ಕೆ ಇದು ಕೊಲೆ ಎಂದು ಕಾಣುತ್ತಿದೆ. ಆಸ್ತಿ ವಿಚಾರವಾಗಿ ಘಟನೆ ನಡೆದಿರಬಹುದು ಎಂದು ಪೊಲೀಸ್ ಇಲಾಖೆ ಅನುಮಾನ ಪಟ್ಟಿದೆ. ಸುತ್ತಮುತ್ತಲ ಗ್ರಾಮಗಳಲ್ಲಿ ಯಾರೊಬ್ಬರೂ ಅನುಮಾನಾಸ್ಪದವಾಗಿ ಕಾಣೆಯಾದ ಬಗ್ಗೆ ಯಾವುದೇ ಮಾಹಿತಿ ಇಲ್ಲ ಎಂದು ಪೊಲೀಸ್ ಇಲಾಖೆ ದೃಢಪಡಿಸಿದೆ.

ಮೃತದೇಹವಿದ್ದ ಸ್ಥಳಕ್ಕೆ ಶ್ವಾನದಳವೂ ಭೇಟಿ ನೀಡಿ ಪರಿಶೀಲನೆ ನಡೆಸಿದೆ. ಆದರೂ ಸಹ, ಯಾವೊಂದು ಮಾಹಿತಿ ಲಭ್ಯವಾಗಿಲ್ಲ. ಮೈಸೂರಿನ ಕೆ.ಆರ್.ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆದಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಬೈಕ್‌ಗಳ ಮುಖಾಮುಖಿ; ಇಬ್ಬರ ಸಾವು

‌ಎಚ್.ಡಿ.ಕೋಟೆ: ತಾಲ್ಲೂಕಿನ ಭೀಮನಹಳ್ಳಿಯ ಸಮೀಪ ಗುರುವಾರ ತಡರಾತ್ರಿ ಎರಡು ಬೈಕ್‌ಗಳ ನಡುವೆ ಮುಖಾಮುಖಿ ಡಿಕ್ಕಿ ನಡೆದಿದ್ದು, ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಕೇರಳ ಮೂಲದ ಉಬೈದ್ (24), ಹಾಸನದ ಕಾಂತರಾಜ್ (28) ಮೃತಪಟ್ಟಿದ್ದು, ಬೈಕ್‌ನಲ್ಲಿದ್ದ ಹಾಸನದ ಹಿಂಬದಿ ಸವಾರ ದಿವಾಕರ ಅವರ ಕಾಲು ಮುರಿದಿದ್ದು, ತೀವ್ರ ಗಾಯಗಳಿಂದ ಬೆಂಗಳೂರಿನ ನಿಮ್ಹಾನ್ಸ್ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಪಿ.ವಿ.ಸ್ನೇಹಾ, ಡಿವೈಎಸ್‌ಪಿ ಸುಂದರರಾಜ್, ವೃತ್ತ ನಿರೀಕ್ಷಕ ಪುಟ್ಟಸ್ವಾಮಿ, ಪಿಎಸ್ಐ ಎಂ.ನಾಯಕ್ ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದರು.

ಬೈಕ್ ಸವಾರ ಸಾವು

ಪಿರಿಯಾಪಟ್ಟಣ: ಪಟ್ಟಣದ ತಾತನಹಳ್ಳಿ ಗೇಟ್ ಬಳಿಯ ಬಿ.ಎಂ.ರಸ್ತೆಯಲ್ಲಿ ಬೈಕ್ ಸವಾರರೊಬ್ಬರು ನಿಯಂತ್ರಣ ತಪ್ಪಿ ಅಪಘಾತಕ್ಕೀಡಾಗಿ, ಕೆ.ಆರ್.ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಸ್ಪಂದಿಸದೆ ಶುಕ್ರವಾರ ಮೃತಪಟ್ಟಿದ್ದಾರೆ.

ಕೆ.ಆರ್.ನಗರ ತಾಲ್ಲೂಕಿನ ಕುಪ್ಪೆ ಗ್ರಾಮದ ಪುಟ್ಟರಾಜ್ (35) ಮೃತಪಟ್ಟ ಬೈಕ್ ಸವಾರ.

ಗುರುವಾರ ತಾಲ್ಲೂಕಿನ ಬೆಟ್ಟದಪುರದಲ್ಲಿ ನಡೆದ ಸ್ನೇಹಿತನ ಮದುವೆಗೆಂದು ತನ್ನ ಬೈಕ್‌ನಲ್ಲೇ ಬಂದು, ಗ್ರಾಮಕ್ಕೆ ಹಿಂತಿರುಗುತ್ತಿದ್ದ ಸಂದರ್ಭ, ಸಂಜೆ 5 ಗಂಟೆ ಸಮಯದಲ್ಲಿ ಆಯ ತಪ್ಪಿ ಕೆಳಗೆ ಬಿದ್ದು ತಲೆಗೆ ಪೆಟ್ಟು ಬಿದ್ದಿದೆ.

ಪಟ್ಟಣದ ಪೊಲೀಸರು ಕೂಡಲೇ ಗಾಯಾಳುವಿಗೆ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ, ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಕೆ.ಆರ್.ಆಸ್ಪತ್ರೆಗೆ ದಾಖಲಿಸಿದ್ದಾರೆ. ಚಿಕಿತ್ಸೆಗೆ ಸ್ಪಂದಿಸದೆ ಪುಟ್ಟರಾಜ್ ಮೃತಪಟ್ಟಿದ್ದಾರೆ ಎಂದು ಪಟ್ಟಣ ಪೊಲೀಸರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT