ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಸರಾ; ಅರಮನೆ ಅಂಗಳದಲ್ಲಿ ಸಂಗೀತ– ನೃತ್ಯದ ಅಲೆ!

ಬಿಸಿಲಿಗೆ ಬಸವಳಿಯದೆ ಉತ್ಸಾಹ ತೋರಿದ ಕಲಾವಿದರು: ತಂಪೆರೆದ ವರುಣ
Last Updated 11 ಅಕ್ಟೋಬರ್ 2021, 7:24 IST
ಅಕ್ಷರ ಗಾತ್ರ

ಮೈಸೂರು: ಅರಮನೆ ಆವರಣದಲ್ಲಿ ಭಾನುವಾರದ ಬೆಳಗು ಬರೀ ಬೆಳಗಾಗಿರಲಿಲ್ಲ. ಶ್ವೇತವಸ್ತ್ರಧಾರಿಗಳಾಗಿ ಬಂದಿದ್ದ ನಾದಸ್ವರ ಕಲಾವಿದರು ಹರಿಸಿದ ಸಂಗೀತ ಸುಧೆ, ಸೂರ್ಯನಿಗೆ ಉದಯ ರಾಗದ ಸ್ವಾಗತ ನೀಡಿತು. ಸೂರ್ಯಾಸ್ತದವರೆಗೂ ಅರಮನೆ ವೇದಿಕೆಯಲ್ಲಿ ಹೊಮ್ಮಿದ ಸಂಗೀತ– ನಾಟ್ಯದ ಹೊನಲು ವರ್ಷಧಾರೆಯನ್ನೇ ತರಿಸಿತು!

ದಸರಾ ಮಹೋತ್ಸವದ ಪ್ರಯುಕ್ತ ಅರಮನೆ ವೇದಿಕೆಯಲ್ಲಿ ಬೆಳಿಗ್ಗೆ 6.10ಕ್ಕೆ ಕರ್ನಾಟಕ ಕಲಾಶ್ರೀ ಪುರಸ್ಕೃತ ರಂಗಸ್ವಾಮಿ ಹಾಗೂ ತವಿಲ್‌ ವಾದಕ ಆರ್‌.ಚಂದ್ರು ನೇತೃತ್ವದಲ್ಲಿ ಮೈಸೂರು, ಚಾಮರಾಜನಗರ, ಹಾಸನ, ಮಂಡ್ಯದ 108 ಕಲಾವಿದರು ಅಷ್ಟೋತ್ತರ ಶತ ನಾದಸ್ವರ ವಾದನವನ್ನು ಪ್ರಸ್ತುತಪಡಿಸಿದರು. ಮುತ್ತುಸ್ವಾಮಿ ದೀಕ್ಷಿತರ ಹಂಸಧ್ವನಿ ರಾಗದ ‘ವಾತಾಪಿ ಗಣಪತಿಂ ಭಜೇ’ ಮೂಲಕ ಸೂರ್ಯಾಸ್ತದವರೆಗಿನ ಸಾಂಸ್ಕೃತಿಕ ಕಾರ್ಯಕ್ರಮಗಳು ಆರಂಭವಾದವು. ನಂತರ ಬಿಲಹರಿ ರಾಗದಲ್ಲಿ ಜಯಚಾಮರಾಜೇಂದ್ರ ಒಡೆಯರ್‌ ಅವರ ಕೃತಿ ‘ಶ್ರೀ ಚಾಮುಂಡೇಶ್ವರಿ’ ಹಾಗೂ ‘‌ಐಗಿರಿ ನಂದಿನಿ’ ಕೃತಿಯನ್ನು ಭೈರವಿ ರಾಗದಲ್ಲಿ ನುಡಿಸಿ ಸೂರ್ಯನನ್ನು ಸ್ವಾಗತಿಸಿದರು.

ರಾಗಾಲಯ ಸಂಗೀತ ಬಳಗದ ರಾಘವೇಂದ್ರ ಅವರು ಜಯಚಾಮರಾಜೇಂದ್ರ ಒಡೆಯರ್‌ ಅವರ ಕೃತಿಗಳ ಗಾಯನ ಪ್ರಸ್ತುತಪಡಿಸಿದರು. ಹಿಂದೋಳ ರಾಗದಲ್ಲಿ ‘ಚಿಂತಯಾಮಿ ಜಗದಂಬಾ’ ಕೃತಿಯು ಕೂಡ ಸೇರಿತ್ತು. ಕೃಷ್ಣ ಪ್ರಸಾದ್‌ ನೇತೃತ್ವದಲ್ಲಿ ಬಾಲ ಪ್ರತಿಭೋತ್ಸವ ವಿಶೇಷ ಸಂಗೀತ ಕಛೇರಿ ಗಮನ ಸೆಳೆಯಿತು. ಕೊಳಲು– ವಯೊಲಿನ್‌ ಜಂಟಿ ವರಸೆಯಲ್ಲಿ ಮೃದಂಗ ಮತ್ತು ಘಟಂನ ಸಾಥ್‌ ಮೋಡಿ ಮಾಡಿತು. ಬೆಳಿಗ್ಗೆಯೇ ಸಂಗೀತ ಕಛೇರಿಯನ್ನು ಆಲಿಸಲು ಬಂದಿದ್ದ ನೂರಾರು ಸಂಗೀತ ಪ್ರೇಮಿಗಳು ಚಪ್ಪಾಳೆಯ ಪ್ರೋತ್ಸಾಹ ನೀಡಿದರು. ‌

ಬಾಗಲಕೋಟೆಯ ಶ್ರೇಯಾ ಪ್ರಹ್ಲಾದ್‌ ಕುಲಕರ್ಣಿ ಅವರು ಭರತನಾಟ್ಯ, ಶಿವಮೊಗ್ಗದ ದೀಪಿಕಾ ಶ್ರೀಕಾಂತ ಸುಗಮ ಸಂಗೀತ ಹೊನಲನ್ನು ಹರಿಸಿದರು. ಕುವೆಂಪು ಅವರ ‘ಇಳಿದು ಬಾ ತಾಯಿ ಇಳಿದು’ ಗೀತೆ ಭಾವ ಪರವಶರಾಗಿಸಿತು. ‘ಎಲ್ಲಿ ಕಾಣೆಲ್ಲಿ ಕಾಣೆನೇ’ ಎಲ್ಲಮ್ಮನ ಪದವನ್ನು ಹಾಡಿದರು. ಜಾನಪದ– ಭಾವಗೀತೆಗಳು ಕಿವಿಗಿಂಪಾಗಿದ್ದವು. ನಂತರ ಉಡುಪಿಯ ಪೂರ್ಣಿಮಾ ಸುರೇಶ್‌ ಅವರ ಏಕವ್ಯಕ್ತಿ ರಂಗ ಪ್ರಯೋಗ ಗಮನಸೆಳೆಯಿತು, ಕೇಳುಗರಿಗೆ ನವರಸ ಭಾವವನ್ನು ಮೂಡಿಸಿತು. ಚಿನ್ಮಯ್‌ ಆತ್ರೇಯಾಸ್‌ ಮತ್ತು ತಂಡ ಕುವೆಂಪು ಅವರ ‘ಕನ್ನಡವೇ ಸತ್ಯ, ಕನ್ನಡವೇ ನಿತ್ಯ’, ಕೆಎಸ್‌ನ ಅವರ ‘ಬಳೆಗಾರ ಚೆನ್ನಯ್ಯ’, ಜಿ.ಎಸ್‌.ಶಿವರುದ್ರಪ್ಪ ಅವರ ‘ಕಾಣದ ಕಡಲಿಗೆ’ ಭಾವಗೀತೆಗಳನ್ನು ಪ್ರಸ್ತುತ‍ಪಡಿಸಿತು.

ಬೆಂಗಳೂರಿನ ಸಮಯ ಫೌಂಡೇಷನ್‌ ಕಲಾವಿದರು ‘ಜಗದೋದ್ಧಾರನ ಆಡಿಸಿದಳ್‌ ಯಶೋದೆ’ ಸೇರಿದಂತೆ ಭಕ್ತಿಗೀತೆ, ದಾಸರ ಪದಗಳನ್ನು ಪ್ರಸ್ತುತಪಡಿಸಿದರು. ಫ್ಯೂಷನ್‌ ಸಂಗೀತ ಸಹೃದಯರಿಗೆ ಕರ್ಣಾನಂದ ಉಂಟು ಮಾಡಿತು. ಮೈಸೂರಿನ ಸಂಗೀತಾ ಮತ್ತು ತಂಡ ರಂಗ ಗೀತೆ, ಶ್ರೀನಾಥ್‌ ಮತ್ತು ತಂಡ ಕರ್ನಾಟಕ ಶಾಸ್ತ್ರೀಯ ಸಂಗೀತ, ಜಹೀದುಲ್ಲಾ ಖಾನ್‌ ಮತ್ತು ತಂಡ ಸೂಫಿ ಗಾಯನ ಸುಧೆ ಹರಿಸಿದರೆ, ಬೆಂಗಳೂರಿನ ಸವಿಗಾನ ಲಹರಿ ತಂಡ ನಾಡಹಬ್ಬದ ಗೀತೆಗಳನ್ನು
ಹಾಡಿತು.

ಕಾರ್ಯಕ್ರಮಕ್ಕೆ ಶಾಸಕ ಎಸ್‌.ಎ.ರಾಮದಾಸ್‌ ಚಾಲನೆ ನೀಡಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಎಚ್‌.ಚನ್ನಪ್ಪ ಇದ್ದರು.

ಗಾಯಕ್ಕೆ ಅಂ‌ಜದ ಕಲಾವಿದರು‌: ಸೂರ್ಯನ ಪ್ರಖರ ಬಿಸಿಲಿಗೆ ಕಲಾವಿದರು ಅಂಜಲಿಲ್ಲ. ಮಳೆ– ಬಿಸಿಲಿನಿಂದ ಕಾರ್ಯಕ್ರಮಗಳು ನಿಲ್ಲಬಾರದು ಎನ್ನುವ ದೃಷ್ಟಿಯಿಂದ ಅರಮನೆ ವೇದಿಕೆಯ ಪಕ್ಕದಲ್ಲೇ ಮತ್ತೊಂದು ಚಾವಣಿಯಿರುವ ವೇದಿಕೆಯನ್ನು ನಿರ್ಮಿಸಲಾಗಿತ್ತು. ಬಿಸಿಲೇರುತ್ತಿದ್ದಂತೆ ನೆರಳಿನ ವೇದಿಕೆಯಲ್ಲಿ ಕಾರ್ಯಕ್ರಮ ನೀಡುವಂತೆ ಆಯೋಜಕರು ಸಲಹೆ ನೀಡಿದರು. ಆದರೂ, ಕಲಾವಿದರು ಬಿಸಿಲಿನಲ್ಲೇ ಉತ್ಸಾಹದಿಂದ ಪ್ರತಿಭೆಯನ್ನು ಅನಾವರಣಗೊಳಿಸಿದರು. ‌

ಬೆಂಗಳೂರಿನ ನಟನಂ ಚಾರಿಟಬಲ್ ಟ್ರಸ್ಟ್‌ನ ಕಲಾವಿದರು ಅರಮನೆ ವೇದಿಕೆಯಲ್ಲಿ ಭರತನಾಟ್ಯ ಪ್ರಸ್ತುತಪಡಿಸುವಾಗ ವೇದಿಕೆಯು ಬಿಸಿಲಿಗೆ ಕಾವೇರಿತ್ತು. ಭರತನಾಟ್ಯದ ಬಿಗಿ ಹೆಜ್ಜೆಗಳಿಗೆ ಕಲಾವಿದೆಯೊಬ್ಬರ ಪಾದಕ್ಕೆ ಗಾಯವಾಯಿತು. ರಕ್ತ ಸುರಿಯುತ್ತಿದ್ದರೂ ಹಾಡು ಮುಗಿಯುವವರೆಗೆ ನೃತ್ಯವನ್ನು ನಿಲ್ಲಿಸಲಿಲ್ಲ. ನಂತರ ನೆರಳಿನ ವೇದಿಕೆಗೆ ತೆರಳಿದರು. ಸೂರ್ಯಾಸ್ತದವರೆಗೂ ಕಾರ್ಯಕ್ರಮ ಇಲ್ಲಿ ಸಾಗಿತ್ತು. ನಡುವೆ ಜೋರಾಗಿ ಮಳೆಯೂ ಸುರಿಯಿತು.

‘ಅರಮನೆ ವೇದಿಕೆಯಲ್ಲಿ ಕಾರ್ಯಕ್ರಮ ನೀಡುವುದು ಪ್ರತಿಯೊಬ್ಬ ಕಲಾವಿದನ ಕನಸು. ಹೀಗಾಗಿಯೇ ಬಿಸಿಲಿದೆ ನೆರಳಿನ ವೇದಿಕೆಗೆ ತೆರಳಿ ಎಂದರೂ ಕಲಾವಿದರು ಒಪ್ಪಲಿಲ್ಲ. ನಮಗೂ ಅವರನ್ನು ಮನವೊಲಿಸುವುದು ಕಷ್ಟವಾಯಿತು’ ಎಂದು ಕಾರ್ಯಕ್ರಮ ನಿರೂಪಕ, ಕರ್ನಾಟಕ ನಾಟಕ ಅಕಾಡೆಮಿ ಸದಸ್ಯ ಶ್ರೀವತ್ಸ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT