ಸೋಮವಾರ, ಮಾರ್ಚ್ 30, 2020
19 °C
ಮೈ ಕ್ಲೀನ್‌ ಸಿಟಿ ಆ್ಯಪ್‌ ಹೊಸ ಆವೃತ್ತಿ ಬಿಡುಗಡೆ, ಸುಧಾರಿತ ತಂತ್ರಜ್ಞಾನ, ನಿಗದಿತ ಕಾಲಮಿತಿಯಲ್ಲಿ ಪರಿಹಾರ

ಬಡಾವಣೆ ಸಮಸ್ಯೆಗಳಿಗೆ 6 ಗಂಟೆ ಒಳಗೆ ಪರಿಹಾರ ಕಂಡುಕೊಳ್ಳಿ...

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮೈಸೂರು: ನಿಮ್ಮ ಬಡಾವಣೆಯಲ್ಲಿ ಕಸ ವಿಲೇವಾರಿ, ಒಳಚರಂಡಿ, ರಸ್ತೆ, ಬೀದಿದೀಪ, ಉದ್ಯಾನಗಳ ಅಸಮರ್ಪಕ ನಿರ್ವಹಣೆ ಸೇರಿದಂತೆ ವಿವಿಧ ಸಮಸ್ಯೆಗಳಿವೆಯೇ?

ಹಾಗಿದ್ದರೆ ಮೈಸೂರು ಮಹಾನಗರ ಪಾಲಿಕೆ ಹೊರತಂದಿರುವ ‘ಮೈ ಕ್ಲೀನ್‌ ಸಿಟಿ– ಮೈಸೂರು’ ಆ್ಯಪ್‌ನ ಹೊಸ ಆವೃತ್ತಿಯನ್ನು ಡೌನ್‌ಲೋಡ್‌ ಮಾಡಿಕೊಳ್ಳಿ. ನಿಮ್ಮ ಬಡಾವಣೆಯಲ್ಲಿರುವ ಸಮಸ್ಯೆಗಳ ಫೋಟೊ ತೆಗೆದು ಅಪ್‌ಲೋಡ್‌ ಮಾಡಿ. 6 ಗಂಟೆಯಿಂದ 24 ಗಂಟೆಯೊಳಗೆ ಸಮಸ್ಯೆಗಳಿಗೆ ಪರಿಹಾರವನ್ನು ಕಂಡುಕೊಳ್ಳಿ.

ಜನರ ಸಮಸ್ಯೆಗಳಿಗೆ ತ್ವರಿತಗತಿಯಲ್ಲಿ ಪರಿಹಾರ ನೀಡುವ ಉದ್ದೇಶದಿಂದ ‘ಮೈ ಕ್ಲೀನ್‌ ಸಿಟಿ’ ಆ್ಯಪ್‌ ಅನ್ನು 2019ರ ಫೆಬ್ರುವರಿಯಲ್ಲಿ ಹೊರತರಲಾಗಿತ್ತು. ಫ್ಯೂಚರ್‌ ಡಿಸೈನ್‌ ಟೆಕ್ನಾಲಜೀಸ್‌ ಸಂಸ್ಥೆಯು ಈ ಆ್ಯಪ್‌ ಅಭಿವೃದ್ಧಿಪಡಿಸಿತ್ತು. ಇದರಲ್ಲಿ ಕೆಲ ತಾಂತ್ರಿಕ ಸಮಸ್ಯೆಗಳಿದ್ದವು. ಜನರಿಗೆ ಬಳಸಲು ತುಸು ಕಷ್ಟವಾಗುತ್ತಿತ್ತು. ಇದನ್ನು ಮನಗಂಡ ಪಾಲಿಕೆಯು, ಈ ಆ್ಯಪ್‌ ಅನ್ನು ಮತ್ತಷ್ಟು ಜನಸ್ನೇಹಿಯನ್ನಾಗಿ ಮಾಡುವ ಉದ್ದೇಶದಿಂದ ಹೊಸ ಆವೃತ್ತಿಯನ್ನು ಹೊರತಂದಿದೆ.

ಪಾಲಿಕೆ ಸಭಾಂಗಣದಲ್ಲಿ ಶುಕ್ರವಾರ ನಡೆದ ಕಾರ್ಯಕ್ರಮದಲ್ಲಿ ಈ ಆ್ಯಪ್‌ ಅನ್ನು ಮೇಯರ್‌ ತಸ್ನೀಂ ಬಿಡುಗಡೆ ಮಾಡಿದರು.

ಪಾಲಿಕೆ ಆಯುಕ್ತ ಗುರುದತ್‌ ಹೆಗಡೆ ಮಾತನಾಡಿ, ‘ಈ ಹಿಂದಿನ ಆವೃತ್ತಿಯಲ್ಲಿ ಗುಂಡಿ ಬಿದ್ದಿರುವ ರಸ್ತೆ, ಘನತ್ಯಾಜ್ಯ ವಿಲೇವಾರಿ, ಬೀದಿದೀಪ ಸಮಸ್ಯೆ, ಒಳಚರಂಡಿ, ಕುಡಿಯುವ ನೀರಿನ ಪೈಪ್‌ಲೈನ್‌ ದುರಸ್ತಿ, ಪಾದಚಾರಿ ಹಾಗೂ ಪಾಲಿಕೆ ಆಸ್ತಿ ಒತ್ತುವರಿ, ಪ್ರಾಣಿಗಳ ಹಾವಳಿ ಕುರಿತ ದೂರುಗಳನ್ನು ನೀಡಬಹುದಿತ್ತು. ಹೊಸ ಆವೃತ್ತಿಯಲ್ಲಿ, ನಿಷೇಧಿತ ಪ್ಲಾಸ್ಟಿಕ್‌ ಬಳಕೆ ಕುರಿತೂ ದೂರುಗಳನ್ನು ಸಲ್ಲಿಸಬಹುದು’ ಎಂದು ತಿಳಿಸಿದರು.

ಪಾಲಿಕೆಯು ಮೈಸೂರನ್ನು ಪ್ಲಾಸ್ಟಿಕ್‌ಮುಕ್ತ ನಗರವನ್ನಾಗಿ ಮಾಡುವ ಗುರಿ ಹೊಂದಲಾಗಿದೆ. ಇದಕ್ಕೆ ಪೂರಕವಾಗಿ ಈ ಆ್ಯಪ್‌ ಅನ್ನು ಪರಿಣಾಮಕಾರಿಯಾಗಿ ಬಳಸಲು ಉದ್ದೇಶಿಸಲಾಗಿದೆ. ನಾಗರಿಕರು ನಿಷೇಧಿತ ಪ್ಲಾಸ್ಟಿಕ್‌ ಬಳಕೆ ಕುರಿತು ದೂರು ನೀಡಿದ ತಕ್ಷಣ ಅಧಿಕಾರಿಗಳು ಸ್ಥಳಕ್ಕೆ ತೆರಳಿ ಪ್ಲಾಸ್ಟಿಕ್‌ ಬಳಕೆದಾರರ ವಿರುದ್ಧ ಕ್ರಮ ಜರುಗಿಸಲಿದ್ದಾರೆ ಎಂದರು.

ಈ ಆ್ಯಪ್‌ಗೆ ನಾಗರಿಕರಿಂದ ಉತ್ತಮ ಪ್ರತಿಕ್ರಿಯೆ ಬಂದರೆ, ಇದನ್ನು ಸೆಸ್ಕ್‌, ಅರಣ್ಯ ಹಾಗೂ ಆರೋಗ್ಯ ಇಲಾಖೆಗಳಿಗೆ ಉಚಿತವಾಗಿ ನೀಡಲು ಉದ್ದೇಶಿಸಲಾಗಿದೆ. ಮುಂದಿನ ದಿನಗಳಲ್ಲಿ, ಸೆಸ್ಕ್‌, ಅರಣ್ಯ ಹಾಗೂ ಆರೋಗ್ಯ ಇಲಾಖೆಗಳನ್ನೂ ಒಂದೇ ವೇದಿಕೆಗೆ ತರುವ ಉದ್ದೇಶವಿದೆ. ಇದರಿಂದ ಈ ಇಲಾಖೆಗಳಿಗೆ ಸಂಬಂಧಿಸಿದ ದೂರುಗಳನ್ನೂ ಪರಿಹರಿಸಲು ಅನುಕೂಲವಾಗಲಿದೆ ಎಂದು ತಿಳಿಸಿದರು.

ಆಸ್ತಿ ತೆರಿಗೆ ಪಾವತಿಸುವ ಆ್ಯಪ್‌ ಅಭಿವೃದ್ಧಿಪಡಿಸಿದ್ದು, ಏಪ್ರಿಲ್‌ 1ರಿಂದ ಜನಬಳಕೆಗೆ ಸಿಗಲಿದೆ. ಮಾರ್ಚ್‌ 20ರಿಂದ ಈ ಆ್ಯಪ್‌ ಅನ್ನು ಪ್ರಾಯೋಗಿಕವಾಗಿ ಜಾರಿಗೊಳಿಸಲಾಗುತ್ತದೆ. ಅಲ್ಲದೆ, ಆಸ್ತಿ ತೆರಿಗೆ ಪಾವತಿಸಲು ‘ಮೈ ಕ್ಲೀನ್‌ ಸಿಟಿ’ ಆ್ಯಪ್‌ನಲ್ಲೂ ಲಿಂಕ್‌ ನೀಡಲಾಗುತ್ತದೆ. ಇದರ ಸಹಾಯದಿಂದ ಆಸ್ತಿ ತೆರಿಗೆ ಪಾವತಿಸಬಹುದು ಎಂದು ವಿವರಿಸಿದರು. ಉಪಮೇಯರ್‌ ಸಿ.ಶ್ರೀಧರ್‌ ಇದ್ದರು.

ಹೊಸ ಆವೃತ್ತಿಯ ಆ್ಯಪ್‌ನ ಕಾರ್ಯನಿರ್ವಹಣೆ

ಈ ಹಿಂದೆ ಇದ್ದ ಆ್ಯಪ್‌ನಲ್ಲಿ ನಾಗರಿಕರು ನೀಡುವ ದೂರುಗಳನ್ನು ಸಂಬಂಧಿಸಿದ ಇಲಾಖೆ, ವಿಭಾಗದ ಅಧಿಕಾರಿಗಳು ಪರಿಶೀಲಿಸಿ ಸೂಕ್ತ ಕ್ರಮಕ್ಕೆ ವಲಯ ಅಧಿಕಾರಿಗೆ ನಿರ್ದೇಶನ ನೀಡುತ್ತಿದ್ದರು. ವಲಯ ಅಧಿಕಾರಿ ವಾರ್ಡ್‌ ಅಧಿಕಾರಿಗೆ ದೂರನ್ನು ವರ್ಗಾಯಿಸುತ್ತಿದ್ದರು. ಆದರೆ, ಹೊಸ ಆವೃತ್ತಿಯಲ್ಲಿ ದೂರು ನೇರವಾಗಿ ವಾರ್ಡ್‌ ಅಧಿಕಾರಿಗೆ ತಲುಪುತ್ತದೆ. ಪ್ರತಿಯೊಂದು ಸಮಸ್ಯೆಯನ್ನು ಪರಿಹರಿಸಲು ಕಾಲಮಿತಿಯನ್ನು ನಿಗದಿಪಡಿಸಲಾಗಿದೆ. ನಿಗದಿತ ಸಮಯದೊಳಗೆ ವಾರ್ಡ್‌ ಅಧಿಕಾರಿಯು ಸಮಸ್ಯೆಯನ್ನು ಬಗೆಹರಿಸಬೇಕು. ಇಲ್ಲವಾದರೆ ವಲಯ ಅಧಿಕಾರಿ ಸೂಕ್ತ ಕ್ರಮ ಕೈಗೊಳ್ಳುತ್ತಾರೆ. ವಲಯ ಅಧಿಕಾರಿ ಹಂತದಲ್ಲೂ ಸಮಸ್ಯೆ ಬಗೆಹರಿಯದಿದ್ದರೆ ಇಲಾಖೆ ಅಧಿಕಾರಿ, ಆಯುಕ್ತರಿಗೆ ಆ ದೂರು ವರ್ಗಾವಣೆಯಾಗುತ್ತದೆ. ಅವರು ಈ ಬಗ್ಗೆ ಕ್ರಮ ಕೈಗೊಳ್ಳುತ್ತಾರೆ.

ಒಳಚರಂಡಿ, ಕಸ ವಿಲೇವಾರಿ ಸೇರಿದಂತೆ ತುರ್ತಾಗಿರುವ ಸಮಸ್ಯೆಗಳನ್ನು 6 ಗಂಟೆ ಒಳಗೆ ಪರಿಹರಿಸಬೇಕು. ಉದ್ಯಾನ ನಿರ್ವಹಣೆ, ಅದರಲ್ಲಿ ಕಸ ಹಾಕಿರುವುದು ಸೇರಿದಂತೆ ಕೆಲ ಸಮಸ್ಯೆಗಳನ್ನು 24 ಗಂಟೆ ಒಳಗೆ ಬಗೆಹರಿಸಬೇಕು ಎಂದು ಗುರುದತ್‌ ಹೆಗಡೆ ತಿಳಿಸಿದರು.

ಯಾವ ವಾರ್ಡ್‌ನಲ್ಲಿ ಅಧಿಕಾರಿಗಳು ಜನರ ಸಮಸ್ಯೆಗಳಿಗೆ ಸ್ಪಂದಿಸುತ್ತಿದ್ದಾರೆ ಎಂಬ ಮಾಹಿತಿಯೂ ಸಿಗಲಿದೆ. ಯಾವ ವಾರ್ಡ್‌ನಲ್ಲಿ ಹೆಚ್ಚಿನ ಸಮಸ್ಯೆಗಳಿದೆ ಇದೆ ಎಂಬ ಮಾಹಿತಿ ತಿಳಿಯುವುದರಿಂದ ಆ ವಾರ್ಡ್‌ಗಳಿಗೆ ಹೆಚ್ಚಿನ ಅನುದಾನ ನೀಡಲೂ ಅನುಕೂಲವಾಗಲಿದೆ ಎಂದರು.

ಸಮಸ್ಯೆ ಪರಿಹಾರವಾದರೆ ಎಸ್‌ಎಂಎಸ್‌

ಈ ಆ್ಯಪ್‌ನಲ್ಲಿ ದೂರು ನೀಡಿದವರಿಗೆ ಪ್ರಗತಿಯ ಕುರಿತು ಎಸ್‌ಎಂಎಸ್‌ ಮೂಲಕ ಮಾಹಿತಿ ದೊರೆಯುತ್ತದೆ. ದೂರುದಾರರು ನೀಡಿದ ಸಮಸ್ಯೆಯನ್ನು ವಾರ್ಡ್‌ ಅಧಿಕಾರಿ ಪರಿಶೀಲಿಸುತ್ತಿದ್ದಂತೆಯೇ ದೂರುದಾರರಿಗೆ ಎಸ್‌ಎಂಎಸ್‌ ಮೂಲಕ ಮಾಹಿತಿ ನೀಡಲಾಗುತ್ತದೆ. ಕಾಮಗಾರಿ ಕೈಗೆತ್ತಿಕೊಂಡ ಸಂದರ್ಭ, ಕಾಮಗಾರಿ ಪೂರ್ಣಗೊಂಡ ನಂತರವೂ ಮಾಹಿತಿ ನೀಡಲಾಗುತ್ತದೆ. ಆದಾಗ್ಯೂ ಸಮಸ್ಯೆ ಬಗೆಹರಿಯದಿದ್ದರೆ ಈ ಬಗ್ಗೆ ದೂರು ನೀಡಬಹುದು. ಹೆಸರು ಬಹಿರಂಗಪಡಿಸಲು ಇಷ್ಟ ಇಲ್ಲದವರು ಅನಾಮಧೇಯವಾಗಿಯೂ ದೂರು ನೀಡಲು ಅವಕಾಶವಿದೆ ಎಂದು ಗುರುದತ್‌ ಹೆಗಡೆ ತಿಳಿಸಿದರು.

ಜಿಯೋಫೆನ್ಸಿಂಗ್‌ ತಂತ್ರಜ್ಞಾನ

ಮೈಸೂರು ನಗರದ ಜಿಪಿಎಸ್‌ ಅನ್ನು ಸಂಪೂರ್ಣವಾಗಿ ಜಿಯೋ ಫೆನ್ಸಿಂಗ್‌ ತಂತ್ರಜ್ಞಾನದೊಂದಿಗೆ ಎಂಬೆಡ್‌ ಮಾಡಲಾಗಿದೆ. ಈ ತಂತ್ರಜ್ಞಾನದ ಮೂಲಕ ನಗರ ಪಾಲಿಕೆಯ ಗಡಿ, 9 ವಲಯಗಳು ಹಾಗೂ 65 ವಾರ್ಡ್‌ಗಳ ಗಡಿಯನ್ನು ಗುರುತಿಸಲಾಗಿದೆ. ಇದರಿಂದ ಆಯಾ ವಾರ್ಡ್‌ ಅಧಿಕಾರಿಗಳಿಗೆ ವಾರ್ಡ್‌ನ ಸಮಸ್ಯೆಯನ್ನು ನೇರವಾಗಿ ರವಾನಿಸಲು ಸಾಧ್ಯವಾಗಲಿದೆ.

ವಾರ್ಡ್‌ ಮರುವಿಂಗಡಣೆಯಿಂದ ಸಾಕಷ್ಟು ಜನರಿಗೆ, ತಾವು ಯಾವ ವಾರ್ಡ್‌ನಲ್ಲಿ ಇದ್ದೇವೆ ಎಂಬ ಗೊಂದಲ ಸೃಷ್ಟಿಯಾಗಿದೆ. ಈ ಆ್ಯಪ್‌ನಲ್ಲಿ ನೀವು ಯಾವ ವಾರ್ಡ್‌ನಲ್ಲಿ ಇದ್ದೀರಿ ಎಂಬ ಮಾಹಿತಿ ಸಿಗುತ್ತದೆ.

***

ಈ ಆ್ಯಪ್‌ ಸ್ವಯಂಚಾಲಿತ ವರ್ಚುವಲ್‌ ಕಂಟ್ರೋಲ್‌ ರೂಂ ಮಾದರಿಯಲ್ಲಿ ಕಾರ್ಯನಿರ್ವಹಿಸಲಿದೆ. ರಾಜ್ಯದ ಯಾವುದೇ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಈ ವ್ಯವಸ್ಥೆ ಇಲ್ಲ.
–ಗುರುದತ್‌ ಹೆಗಡೆ, ಪಾಲಿಕೆ ಆಯುಕ್ತ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು