ಗುರುವಾರ , ಡಿಸೆಂಬರ್ 3, 2020
23 °C
ನಂದಿನಿ ಸಿಹಿ ತಿನಿಸಿಗೆ ಭಾರಿ ಬೇಡಿಕೆ: ನಷ್ಟ ಸರಿದೂಗಿಸಿಕೊಳ್ಳುವತ್ತ ಆಡಳಿತದ ಚಿತ್ತ

ಮೈಸೂರು: ಆರ್ಥಿಕ ಚೇತರಿಕೆ ಹಾದಿಯಲ್ಲಿ ಮೈಮುಲ್‌

ಡಿ.ಬಿ.ನಾಗರಾಜ Updated:

ಅಕ್ಷರ ಗಾತ್ರ : | |

Prajavani

ಮೈಸೂರು: ಆರ್ಥಿಕ ವರ್ಷದ ಆರಂಭದಲ್ಲೇ ಕೋವಿಡ್‌–19 ಹೊಡೆತದಿಂದ ನಷ್ಟಕ್ಕೀಡಾಗಿದ್ದ ಮೈಸೂರು ಜಿಲ್ಲಾ ಹಾಲು ಉತ್ಪಾದಕರ ಸಹಕಾರ ಒಕ್ಕೂಟ (ಮೈಮುಲ್‌) ಇದೀಗ ಚೇತರಿಕೆಯ ಹಾದಿಗೆ ಮರಳಿದೆ.

2020–21ನೇ ಸಾಲಿನಲ್ಲಿ ಕೋಟಿ, ಕೋಟಿ ನಿವ್ವಳ ಲಾಭ ಗಳಿಸದಿದ್ದರೂ ನಷ್ಟಕ್ಕೀಡಾಗಲ್ಲ ಎಂಬ ಮಾಹಿತಿಯನ್ನು ಮೈಮುಲ್‌ ಮೂಲಗಳು ‘ಪ್ರಜಾವಾಣಿ’ಗೆ ಖಚಿತಪಡಿಸಿವೆ. ಇದು ಜಿಲ್ಲೆಯ ಹೈನುಗಾರರು, ರೈತರಲ್ಲಿ ಆಶಾಭಾವ ಮೂಡಿಸಿದೆ.

ನವೆಂಬರ್‌ ಆರಂಭ ಗೊಳ್ಳುತ್ತಿದ್ದಂತೆ ಒಕ್ಕೂಟ ಸಂಗ್ರಹಿಸುವ ಹಾಲಿನ ಶೇಖರಣೆಯೂ ಕೊಂಚ ಇಳಿಮುಖವಾಗಿದೆ. ಈ ಮುನ್ನ ನಿತ್ಯ 6.30 ಲಕ್ಷ ಲೀಟರ್‌ನಿಂದ 6.50 ಲಕ್ಷ ಲೀಟರ್ ಹಾಲು ಸಂಗ್ರಹಗೊಳ್ಳುತ್ತಿತ್ತು. ಪ್ರಸ್ತುತ ಈ ಪ್ರಮಾಣ 6 ಲಕ್ಷ ಲೀಟರ್‌ಗಿಳಿದಿದೆ. ಜನವರಿಯಿಂದ ಇನ್ನೂ 50 ಸಾವಿರ ಲೀಟರ್ ಹಾಲಿನ ಶೇಖರಣೆ ಕಡಿಮೆಯಾಗಬಹುದು ಎಂಬುದು ಗೊತ್ತಾಗಿದೆ.

ಹೈನುಗಾರರಿಂದ ಸಂಗ್ರಹಿಸುವ ಹಾಲಿನ ಪ್ರಮಾಣ ಒಂದೆಡೆ ಇಳಿಮುಖವಾಗಿದ್ದರೆ ಮತ್ತೊಂದೆಡೆ ದಸರಾದಿಂದ ಹಾಲು–ಮೊಸರಿನ ಮಾರಾಟದಲ್ಲಿ ಹೆಚ್ಚಳವಾಗಿದೆ. ದಸರಾಗೂ ಮುನ್ನ ನಿತ್ಯ 2.25 ಲಕ್ಷ ಲೀಟರ್ ಹಾಲು, 32 ಸಾವಿರ ಲೀಟರ್ ಮೊಸರು ಮಾರಾಟವಾಗುತ್ತಿತ್ತು. ಪ್ರಸ್ತುತ 2.40 ಲಕ್ಷ ಲೀಟರ್ ಹಾಲು, 44 ಸಾವಿರ ಲೀಟರ್ ಮೊಸರು ಮಾರಾಟವಾಗುತ್ತಿದೆ ಎಂದು ಹೆಸರು ಬಹಿರಂಗಗೊಳಿಸಲು ಇಚ್ಛಿಸದ ಮೈಮುಲ್‌ನ ಮಾರುಕಟ್ಟೆ ವಿಭಾಗದ ಅಧಿಕಾರಿಯೊಬ್ಬರು
ಮಾಹಿತಿ ನೀಡಿದರು.

‘ಒಕ್ಕೂಟಕ್ಕೆ ನಿತ್ಯ 3 ಲಕ್ಷ ಲೀಟರ್ ಹಾಲು ಬೇಕಿದೆ. 1 ಲಕ್ಷ ಲೀಟರ್ ಹಾಲನ್ನು ಸಗಟು ಮಾರುಕಟ್ಟೆ ಮೂಲಕ ವಿವಿಧ ಒಕ್ಕೂಟಕ್ಕೆ ಮಾರಾಟ ಮಾಡುತ್ತೇವೆ. ಉಳಿಯುವ ಎರಡು ಲಕ್ಷ ಲೀಟರ್ ಹಾಲನ್ನು ಪೌಡರ್ ಮಾಡಲು ಬಳಸುತ್ತೇವೆ’ ಎಂದು ಮೈಮುಲ್‌ನ ವ್ಯವಸ್ಥಾಪಕ ನಿರ್ದೇಶಕ ಡಿ.ಅಶೋಕ್ ಮಾಹಿತಿ ನೀಡಿದರು.

‘ನಮ್ಮಲ್ಲಿ 2200 ಟನ್‌ ಹಾಲಿನ ಪೌಡರ್ ದಾಸ್ತಾನಿದೆ. ಉತ್ತರ ಭಾರತದಿಂದ ಈಗಾಗಲೇ ಬೇಡಿಕೆ ಬರಲಾರಂಭಿಸಿದೆ. ಒಂದೆರಡು ತಿಂಗಳು ಕಳೆದರೆ ಐಸ್‌ಕ್ರೀಂ ಘಟಕಗಳ ಕಾರ್ಯಾಚರಣೆ ಬಿರುಸುಗೊಳ್ಳಲಿದೆ. ಆ ಹೊತ್ತಿನಲ್ಲಿ ಈ ದಾಸ್ತಾನು ಸಂಪೂರ್ಣ ಖಾಲಿಯಾಗಲಿದೆ’ ಎಂಬ ವಿಶ್ವಾಸ ವ್ಯಕ್ತಪಡಿಸಿದರು.

ಹಾಲಿನ ದರ ₹ 1 ಇಳಿಕೆ

ಮೈಮುಲ್‌ ರೈತರಿಂದ ಖರೀದಿಸುವ ಪ್ರತಿ ಲೀಟರ್‌ ಹಾಲಿನ ದರವನ್ನು ₹ 1 ಇಳಿಕೆ ಮಾಡಿದೆ. ಪ್ರಸ್ತುತ ರೈತರಿಗೆ ಒಂದು ಲೀಟರ್ ಹಾಲಿಗೆ ₹ 24 ಸಿಗುತ್ತಿದೆ. ಅ.16ರಿಂದ ಹಾಲಿನ ದರ ಇಳಿಕೆಯಾಗಿರುವುದಕ್ಕೆ ರೈತ ಸಮೂಹದಿಂದ ಆಕ್ಷೇಪ ವ್ಯಕ್ತವಾಗಿದೆ. ಕೋವಿಡ್ ಸಂಕಷ್ಟದ ಹೊತ್ತಲ್ಲಿ ಹಾಲಿನ ದರವನ್ನು ಇಳಿಕೆ ಮಾಡಬಾರದಿತ್ತು ಎಂಬ ಮಾತು ಹೈನುಗಾರರದ್ದಾಗಿದೆ.

‘ದಕ್ಷಿಣ ಕನ್ನಡ ಹಾಲು ಒಕ್ಕೂಟ ಹೊರತುಪಡಿಸಿದರೆ, ಹೈನುಗಾರರಿಗೆ ಹೆಚ್ಚಿನ ದರ ನೀಡುತ್ತಿರುವುದು ಮೈಮುಲ್. ಉಳಿದ ಒಕ್ಕೂಟಗಳು ಕೋವಿಡ್‌–19 ಆರಂಭದ ಕಾಲಘಟ್ಟದಲ್ಲೇ ದರ ಇಳಿಸಿದ್ದವು. ನಾವು ರೈತರಿಗೆ ಸಂಕಷ್ಟದ ಹೊತ್ತಲ್ಲಿ ಮತ್ತಷ್ಟು ಬರೆ ಎಳೆಯಬಾರದು ಎಂದು ದರ ಪರಿಷ್ಕರಿಸಿರಲಿಲ್ಲ. ಇದೀಗ ಪರಿಸ್ಥಿತಿ ಕೊಂಚ ಸುಧಾರಿಸುತ್ತಿರುವುದರಿಂದ, ಒಕ್ಕೂಟದ ಹಿತವನ್ನು ಗಮನದಲ್ಲಿಟ್ಟುಕೊಂಡು ಈ ನಿರ್ಧಾರ ತೆಗೆದುಕೊಳ್ಳಲಾಗಿದೆ’ ಎಂದು ಡಿ.ಅಶೋಕ್‌ ದರ ಇಳಿಕೆಯನ್ನು ಸಮರ್ಥಿಸಿಕೊಂಡರು.

30 ಟನ್‌ ಸಿಹಿ ತಿನಿಸು ಮಾರಾಟ

‘ದಸರಾ ಅವಧಿಯಲ್ಲಿ ಮೈಮುಲ್‌ 30 ಟನ್‌ ವಿವಿಧ ಸಿಹಿ ತಿನಿಸು ಮಾರಾಟ ಮಾಡಿದೆ. ಒಟ್ಟು ₹ 1.20 ಕೋಟಿ ಮೊತ್ತದ ವಹಿವಾಟು ನಡೆಸಿದೆ’ ಎಂದು ಡಿ.ಅಶೋಕ್‌ ತಿಳಿಸಿದರು.

‘ದೀಪಾವಳಿ ಸಮೀಪಿಸಿದೆ. ಸಿಹಿ ತಿನಿಸಿನ ತಯಾರಿಕೆಯೂ ಭರದಿಂದ ನಡೆದಿದೆ. ಕನಿಷ್ಠ 10 ಟನ್ ಮಾರಾಟ ಮಾಡುವ ಮೂಲಕ ₹ 40 ಲಕ್ಷ ವಹಿವಾಟು ನಡೆಸುವ ಗುರಿಯನ್ನು ಒಕ್ಕೂಟ ಹೊಂದಿದೆ.

ಮೈಸೂರಿನಲ್ಲಿ ಕೈಗಾರಿಕೆಗಳ ಸಂಖ್ಯೆ ಹೆಚ್ಚಿದೆ. ಲಕ್ಷ್ಮೀ ಪೂಜೆಯನ್ನು ಅದ್ಧೂರಿಯಾಗಿ ಆಚರಿಸುವವರು ಇದ್ದಾರೆ. ಕೈಗಾರಿಕೆಗಳ ಬಾಗಿಲಿಗೆ ಸಿಹಿ ತಿನಿಸನ್ನು ತಲುಪಿಸುವ ಯೋಜನೆಯೊಂದನ್ನು ಮೈಮುಲ್‌ನ ಮಾರುಕಟ್ಟೆ ವಿಭಾಗ ರೂಪಿಸಿಕೊಂಡಿದೆ’ ಎಂದು ಅವರು ಮಾಹಿತಿ ನೀಡಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು