ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೈಸೂರಿಗೂ ವ್ಯಾಪಿಸಿದ ‘ಸ್ಕಿಮ್ಮಿಂಗ್’ ಜಾಲ

ಒಂದೇ ವಾರದಲ್ಲಿ ಹಣ ಕಳೆದುಕೊಂಡ ಐದು ಮಂದಿ
Last Updated 10 ಜೂನ್ 2020, 10:20 IST
ಅಕ್ಷರ ಗಾತ್ರ

ಮೈಸೂರು: ಎಟಿಎಂ ಯಂತ್ರಗಳಿಗೆ ‘ಸ್ಕಿಮ್ಮರ್‌’ಗಳನ್ನು ಅಳವಡಿಸಿ, ಹಣ ದೋಚುವ ಜಾಲ ಕಳೆದೊಂದು ವಾರ ದಿಂದ ನಗರದಲ್ಲಿ ಸಕ್ರಿಯ ವಾಗಿದ್ದು, ಐವರು ಹಣ ಕಳೆದುಕೊಂಡಿದ್ದಾರೆ.

ಜಿಲ್ಲಾ ಸೈಬರ್ ಅಪರಾಧ, ಆರ್ಥಿಕ ಅಪರಾಧಗಳು ಮತ್ತು ಮಾದಕ ವಸ್ತು ನಿಯಂತ್ರಣ ವಿಶೇಷ ಠಾಣೆಯಲ್ಲಿ ಈಗಾಗಲೇ ಪ್ರಕರಣವೊಂದು ದಾಖಲಾಗಿದೆ. ನಗರ ಸೈಬರ್ ಠಾಣೆಗೂ ದೂರುಗಳು ಬಂದಿದ್ದು, ದಾಖಲೆಗಳ ಪರಿಶೀಲನೆಯಲ್ಲಿ ಪೊಲೀಸರು ತೊಡಗಿದ್ದಾರೆ.

‘ಹಣ ಕಳೆದುಕೊಂಡವರಲ್ಲಿ ನಾಲ್ವರು ರಾಮಾನುಜ ರಸ್ತೆಯ ಎಟಿಎಂವೊಂದರಿಂದ ಮೇ 25ರಂದು ಕೊನೆಯದಾಗಿ ಹಣ ಡ್ರಾ ಮಾಡಿಕೊಂಡಿದ್ದರು. ಇವರ ಖಾತೆಯಿಂದ ಬೆಂಗಳೂರಿನ ಎಟಿಎಂವೊಂದರಿಂದ ತಲಾ ₹ 40 ಸಾವಿರ ಹಣ ಡ್ರಾ ಮಾಡಿಕೊಳ್ಳಲಾಗಿದೆ. ಈ ಎಟಿಎಂನಲ್ಲೇ ‘ಸ್ಕಿಮ್ಮರ್‌’ ಅಳವಡಿಸಿರಬಹುದು ಎಂಬ ಅನುಮಾನ ಇದೆ’ ಎಂದು ದೂರು ನೀಡಿದ ವ್ಯಕ್ತಿಯೊಬ್ಬರು ತಿಳಿಸಿದರು.

‘ಜನವರಿಯಿಂದ ಇಲ್ಲಿಯವರೆಗೆ 9 ಪ್ರಕರಣಗಳು ದಾಖಲಾಗಿವೆ. ಒಂದೇ ವಾರದ ಅವಧಿಯಲ್ಲಿ ಮೂರು ದೂರುಗಳು ಬಂದಿದ್ದು, ಅದನ್ನು ದಾಖಲು ಮಾಡಿಕೊಳ್ಳಲು ದಾಖಲಾತಿಗಳ ಪರಿಶೀಲನಾ ಕಾರ್ಯ ನಡೆದಿದೆ’ ಎಂದು ನಗರ ಸೈಬರ್ ಅಪರಾಧಗಳ ಠಾಣೆಯ ಮೂಲಗಳು ಹೇಳಿವೆ.

ಈ ಜಾಲ ಇದುವರೆಗೂ ಬೆಂಗಳೂರು, ರಾಮನಗರ, ಚನ್ನಪಟ್ಟಣಕ್ಕಷ್ಟೇ ಸೀಮಿತವಾಗಿತ್ತು. ಮೈಸೂರಿನಲ್ಲಿ ಅಪರೂಪಕ್ಕೆ ಎಂಬಂತೆ ನಡೆಯುತ್ತಿದ್ದ ‘ಸ್ಕಿಮ್ಮಿಂಗ್’ ಈಗ ಒಂದೇ ವಾರದಲ್ಲಿ ಹಲವರಿಗೆ ವಂಚಿಸಿರುವುದು ಆತಂಕ ಮೂಡಿಸಿದೆ.

ಏನಿದು ‘ಸ್ಕಿಮ್ಮಿಂಗ್‌’?: ಎಟಿಎಂ ಯಂತ್ರಗಳ ಕಾರ್ಡ್‌ ಹಾಕುವ ಜಾಗ ಹಾಗೂ ಕೀಪ್ಯಾಡ್‌ನ ಮೇಲೆ ಅದನ್ನೇ ಹೋಲುವ ಸ್ಕಿಮ್ಮಿಂಗ್ ಯಂತ್ರಗಳನ್ನು ಕಳ್ಳರು ಅಳವಡಿಸಿರುತ್ತಾರೆ. ಕಾರ್ಡ್‌ನಲ್ಲಿನ ದತ್ತಾಂಶ ಹಾಗೂ ಕೀಪ್ಯಾಡ್‌ನ ಮೇಲೆ ನಮೂದಿಸುವ ಪಾಸ್‌ವರ್ಡ್‌ಗಳು ಸ್ಕಿಮ್ಮಿಂಗ್‌ನಲ್ಲಿ ದಾಖಲಾಗುತ್ತವೆ. ನಂತರ, ವಂಚಕರು ನಕಲಿ ಎಟಿಎಂ ಕಾರ್ಡ್‌ ತಯಾರಿಸಿ, ಹಣ ಡ್ರಾ ಮಾಡಿಕೊಳ್ಳುತ್ತಾರೆ.

ಮುನ್ನೆಚ್ಚರಿಕೆಗಳೇನು?

* ಭದ್ರತಾ ಸಿಬ್ಬಂದಿ ಇರದ ಎಟಿಎಂಗಳಲ್ಲಿ ಹಣ ಡ್ರಾ ಮಾಡಬಾರದು

* ಸಿಸಿಟಿವಿ ಕ್ಯಾಮೆರಾಗಳು ಇವೆಯೇ ಎಂಬುದನ್ನು ಖಚಿತಪಡಿಸಿ ಎಟಿಎಂ ಪ್ರವೇಶಿಸಬೇಕು

* ಎಟಿಎಂ ಕಾರ್ಡ್‌ ಹಾಕುವ ಜಾಗ ಹಾಗೂ ಕೀಪ್ಯಾಡ್‌ನ್ನು ಸೂಕ್ಷ್ಮವಾಗಿ ಗಮನಿಸಿ, ಅದರ ಮೇಲೆ ಅದೇ ತರಹದ ಸಾಧನ ಅಳವಡಿಸಿಲ್ಲ ಎಂಬುದನ್ನು ಖಚಿತಪಡಿಸಿಕೊಳ್ಳಿ

* ಅನುಮಾನ ಬಂದರೆ ಪೊಲೀಸರಿಗೆ ಮಾಹಿತಿ ನೀಡಬೇಕು

‘ಸ್ಕಿಮ್ಮಿಂಗ್’ ಕುರಿತ ಪ್ರಕರಣಗಳನ್ನು ಪರಿಶೀಲಿಸಲಾಗುವುದು. ಸಾರ್ವಜನಿಕರು ಎಚ್ಚರಿಕೆಯಿಂದ ಎಟಿಎಂಗಳಲ್ಲಿ ಹಣ ಪಡೆಯಬೇಕು. ಕಾರ್ಡ್‌ ಹಾಕುವ ಜಾಗ ಮತ್ತು ಕೀಪ್ಯಾಡ್‌ಗಳನ್ನು ಸ್ವಲ್ಪವೇ ವ್ಯತ್ಯಾಸ ಕಂಡು ಬಂದರೂ ಮಾಹಿತಿ ನೀಡಬೇಕು

ಎಂ.ಎಸ್.ಗೀತಾ, ಡಿಸಿಪಿ, ನಗರ ಅಪರಾಧ ಮತ್ತು ಸಂಚಾರ ವಿಭಾಗ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT