ಗುರುವಾರ , ಆಗಸ್ಟ್ 11, 2022
26 °C

ಮೈಸೂರು ಅಭಿವೃದ್ಧಿ ಕುರಿತ ಚರ್ಚೆ: ಸಂಸದರ‌ ಕಚೇರಿಗೆ ಕಾಂಗ್ರೆಸ್ ಮೆರವಣಿಗೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

PV Photo

ಮೈಸೂರು:  ಮೈಸೂರು ಅಭಿವೃದ್ಧಿಗೆ ಪ್ರತಾಪಸಿಂಹ ಕೊಡುಗೆ ಕುರಿತು ಸಂಸದರ ಕಚೇರಿಗೆ ಮೈಸೂರು ಜಿಲ್ಲಾ ಕಾಂಗ್ರೆಸ್ ಘಟಕದ ಕಾರ್ಯಕರ್ತರು ಹಂದಿ,‌ಕತ್ತೆಗಳ ಮೆರವಣಿಗೆ ಮೂಲಕ ತೆರಳಿ ಮಂಗಳವಾರ ವಿಭಿನ್ನವಾಗಿ ಪ್ರತಿಭಟಿಸಲು ಮುಂದಾದರು.

ಈ ವೇಳೆ ಮಾತನಾಡಿದ ಕೆಪಿಸಿಸಿ ವಕ್ತಾರ ಲಕ್ಷ್ಮಣ್, 'ಮೈಸೂರು ಬೆಂಗಳೂರು ದಶಪಥ ಹೆದ್ದಾರಿ,  ಜಿಲ್ಲಾಸ್ಪತ್ರೆ ಸೇರಿದಂತೆ ಹತ್ತು ಹಲವು ಯೋಜನೆಗಳನ್ನು  ಸಿದ್ದರಾಮಯ್ಯ ಅವಧಿಯಲ್ಲಿ ಜಾರಿಗೊಳಿಸಲಾಗಿದೆ. ಆದರೆ, ಸಂಸದರು ತಾವೇ ಕೆಲಸ ಮಾಡಿದ್ದೆಂದು ಮಾಧ್ಯಮಗಳ ಮುಂದೆ ಬಿಂಬಿಸಿಕೊಳ್ಳುತ್ತಿದ್ದಾರೆ. ಈ ಬಗ್ಗೆ‌ ಬಹಿರಂಗ ಚರ್ಚೆಗೆ ಆಹ್ವಾನಿಸಿದ್ದೆವು. ಆದರೆ, ಕತ್ತೆ, ಹಂದಿ‌ಗಳ ಜೊತೆಗೆ ಚರ್ಚೆ ನಡೆಸುವುದಿಲ್ಲ ಎಂದು ಪ್ರತಾಪಸಿಂಹ ತಿಳಿಸಿದ್ದರು. ಈ ಕಾರಣದಿಂದ ಕತ್ತೆ, ಹಂದಿ ಮೂಲಕ ಮೆರವಣಿಗೆಯಲ್ಲಿ ಸಾಗಿ ಅವರ ಕಚೇರಿಯಲ್ಲಿ ಸಂವಾದ ನಡೆಸಲಿದ್ದೇವೆ' ಎಂದು ಅವರು ತಿಳಿಸಿದರು.

ಮೆರವಣಿಗೆ ಮೂಲಕ ಕಾಂಗ್ರೆಸ್ ಕಾರ್ಯಕರ್ತರು ಸಿ.ದಾಸಪ್ಪ ವೃತ್ತಕ್ಕೆ‌ ಬರುತ್ತಿದ್ದಂತೆಯೇ,  ಪೊಲೀಸರು ತಡೆದರು. ಈ ವೇಳೆ‌ ಪೊಲೀಸರು, ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ನಡೆಯಿತು.

ಅಂತಿಮವಾಗಿ ಲಕ್ಷ್ಮಣ್ ಅವರನ್ನು ಕರೆದೊಯ್ಯುವುದಾಗಿ ತಿಳಿಸಿ ಪೊಲೀಸರು ವಶಕ್ಕೆ ಪಡೆದರು. 

ಸಮುದಾಯದ ನಿಂದನೆ: ಹಂದಿ ವಿಜಯನಗರ ಸಾಮ್ರಾಜ್ಯದ ಲಾಂಛನ. ಕತ್ತೆ ಮಡಿವಾಳ ಸಮುದಾಯದವರ ಜೀವನಾಡಿ. ಈ ಪ್ರಾಣಿಗಳ ವಿರುದ್ಧ  ಕೇವಲವಾಗಿ ಮಾತನಾಡಿ, ಸಮುದಾಯಗಳಿಗೆ ಸಂಸದರು ಅವಮಾನ ಮಾಡಿದ್ದಾರೆ. ಸಾಂಕೇತಿಕವಾಗಿ ಕತ್ತೆ, ಹಂದಿಗಳ ಮೂಲಕ ಸಂಸದರ ಕಚೇರಿಗೆ ಮೆರವಣಿಗೆ ನಡೆಸಿದ್ದೇವೆ. ರೌಡಿ ಶೀಟರ್ ಗಳ ಮೂಲಕ ಪ್ರತಾಪ ಸಿಂಹ ಅವರು ಬೆಂಬಲಿಗರ ಹೆಸರಿನಲ್ಲಿ ಪ್ರತಿಭಟನೆ ನಡೆಸಿದ್ದಾರೆ ಎಂದು‌ ಈ ವೇಳೆ ಲಕ್ಷ್ಮಣ್ ಆಕ್ರೋಶ ವ್ಯಕ್ತಪಡಿಸಿದರು.

ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ‌ಬಿ.ಜೆ. ವಿಜಯಕುಮಾರ್, ನಗರ ಘಟಕದ‌ ಅಧ್ಯಕ್ಷ ‌ಮೂರ್ತಿ ಇದ್ದರು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು